ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಬ್ಬಾಳ ಎಸ್‌ಟಿಪಿ ತಿಂಗಳೊಳಗೆ ಕಾರ್ಯಾರಂಭ

ಚಾವಣಿ ಕುಸಿದು ಮೂವರ ಸಾವಿಗೆ ಕಾರಣವಾಗಿದ್ದ ಘಟಕ * ದುರ್ಘಟನೆ ಬಳಿಕ ಕೆಲ ಕಾಲ ಸ್ಥಗಿತಗೊಂಡಿದ್ದ ಕಾಮಗಾರಿ
Last Updated 26 ಡಿಸೆಂಬರ್ 2020, 19:32 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಹೆಬ್ಬಾಳದಲ್ಲಿನ ತ್ಯಾಜ್ಯ ನೀರು ಸಂಸ್ಕರಣಾ ಘಟಕದ (ಎಸ್‌ಟಿಪಿ) ಕಾಮಗಾರಿ ಭರದಿಂದ ಸಾಗಿದ್ದು, 2021ರ ಜನವರಿ ಅಂತ್ಯದೊಳಗೆ ಕಾರ್ಯಾಚರಣೆಗೆ ಸಿದ್ಧವಾಗುವ ನಿರೀಕ್ಷೆ ಇದೆ. ಒಂದೂವರೆ ವರ್ಷದ ಹಿಂದೆ ಇದೇ ಎಸ್‌ಟಿಪಿಯ ಟ್ಯಾಂಕ್‌ನ ಚಾವಣಿ ಕುಸಿದು ಮೂರು ಮಂದಿ ಸಾವಿಗೀಡಾಗಿದ್ದರು. ಆ ಘಟನೆಗೆ ಕಾರಣ ಏನು, ಕಾಮಗಾರಿಯ ಗುಣಮಟ್ಟ ಹೇಗಿದೆ ಎಂಬುದು ಈವರೆಗೂ ಸ್ಪಷ್ಟವಾಗಿಲ್ಲ !

ಹೆಬ್ಬಾಳ ಸುತ್ತಮುತ್ತಲ ಪ್ರದೇಶಗಳಲ್ಲಿ ಸಂಗ್ರಹವಾಗುವ ಕೊಳಚೆ ನೀರನ್ನು ಶುದ್ಧೀಕರಿಸಿ ನಾಲೆಗಳ ಮೂಲಕ ಪಕ್ಕದ ಜಿಲ್ಲೆಗಳ ಕೆರೆಗಳಿಗೆ ಹರಿಸುವ ಉದ್ದೇಶದಿಂದ ಈ ಎಸ್‌ಟಿಪಿ ನಿರ್ಮಿಸಲಾಗುತ್ತಿದೆ. ಮೆಗಾ ಸಿಟಿ ಆಪತ್‌ ನಿಧಿ ಹಾಗೂ ಅಮೃತ್‌ ಯೋಜನೆಯಡಿ ಹೊರವರ್ತುಲ ರಸ್ತೆ ಬಳಿ ತಲೆ ಎತ್ತುತ್ತಿರುವ ಈ ಎಸ್‌ಟಿಪಿಯ ಕಾಮಗಾರಿ 2017ರಲ್ಲೇ ಪ್ರಾರಂಭವಾಗಿತ್ತು.

2019ರ ಜು.17ರಂದು ಈ ಘಟಕದ ನಾಲ್ಕು ತೊಟ್ಟಿಗಳಲ್ಲಿ ಒಂದರ ಚಾವಣಿ ಕುಸಿದು ಮೂವರು ಸಾವಿಗೀಡಾಗಿದ್ದರು. 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಕೂಡಲೇ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದ ಸರ್ಕಾರ, ಗುಣಮಟ್ಟವನ್ನು ಮರುಪರಿಶೀಲನೆ ನಡೆಸುವಂತೆ ಜಲಮಂಡಳಿಗೆ ಸೂಚನೆ ನೀಡಿತ್ತು.

ಕಾಮಗಾರಿಯ ಗುಣಮಟ್ಟದ ಪರಿಶೀಲನೆ ತಟಸ್ಥ ಸಂಸ್ಥೆಯಿಂದ ನಡೆಯಬೇಕು ಎಂಬ ಉದ್ದೇಶದಿಂದ ಜಲಮಂಡಳಿಯು ಚೆನ್ನೈನ ಸಿಎಸ್‌ಐಆರ್‌ ಕೇಂದ್ರಕ್ಕೆ ಈ ಜವಾಬ್ದಾರಿ ವಹಿಸಿ ತನಿಖಾ ವರದಿ ನೀಡುವಂತೆ ಸೂಚಿಸಿತ್ತು. ಇದಕ್ಕಾಗಿ ₹30 ಲಕ್ಷ ಶುಲ್ಕವನ್ನೂ ಮಂಡಳಿಯು ಪಾವತಿಸಿತ್ತು. ಒಂದು ತಿಂಗಳ ಹಿಂದೆಯೇ ಸಿಎಸ್‌ಐಆರ್‌ ವರದಿ ನೀಡಿದೆ. ವರದಿಯ ಅಂಶಗಳನ್ನು ಜಲಮಂಡಳಿಯು ಈವರೆಗೂ ಬಹಿರಂಗ ಪಡಿಸಿಲ್ಲ.

ಯೋಜನೆ ವಿಳಂಬ ನೆಪ:‘ಕಾಮಗಾರಿ ಪ್ರಾರಂಭವಾಗಿ ಮೂರು ವರ್ಷಗಳೇ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ತನಿಖಾ ವರದಿ ಬರುವವರೆಗೂ ಕಾಯುತ್ತಾ ಕುಳಿತರೆ ಇನ್ನೂ ತಡವಾಗುತ್ತದೆ ಎಂಬ ಉದ್ದೇಶದಿಂದ ಕಾಮಗಾರಿ ಪುನರಾರಂಭಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

‘ಸದ್ಯ ಘಟಕದಲ್ಲಿ ನಾಲ್ಕು ತೊಟ್ಟಿಗಳನ್ನು ನಿರ್ಮಿಸಲಾಗುತ್ತದೆ. ಕುಸಿತಗೊಂಡಿದ್ದು ಡೈಜಸ್ಟರ್‌ ಟ್ಯಾಂಕ್‌. ವಿದ್ಯುತ್‌ ಉತ್ಪಾದನೆ ಉದ್ದೇಶಕ್ಕೆ ಅದನ್ನು ಬಳಸಿಕೊಳ್ಳಲಾಗುತ್ತದೆ. ಈ ಟ್ಯಾಂಕ್‌ ಹೊರತು ಪಡಿಸಿ, ಉಳಿದ ತೊಟ್ಟಿಗಳ ನಿರ್ಮಾಣ ಕಾಮಗಾರಿ ಮುಗಿದಿದೆ’ ಎಂದು ತ್ಯಾಜ್ಯ ನೀರು ನಿರ್ವಹಣಾ ವಿಭಾಗದ ಮುಖ್ಯ ಎಂಜಿನಿಯರ್‌ ಬಿ.ಸಿ. ಗಂಗಾಧರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಿಎಸ್‌ಐಆರ್‌ ವರದಿಯನ್ನು ಮಂಡಳಿಯ ಅಧ್ಯಕ್ಷರಿಗೆ ಸಲ್ಲಿಸಲಾಗಿರುತ್ತದೆ. ಈ ಬಗ್ಗೆ ಅವರ ಬಳಿಯೇ ಕೇಳಿ’ ಎಂದು ಅವರು ಪ್ರತಿಕ್ರಿಯಿಸಿದರು.

‘ಸಿಎಸ್‌ಐಆರ್‌ ವರದಿ ನೀಡಿದೆ. ವರದಿಯನ್ನು ಸಂಪೂರ್ಣವಾಗಿ ಓದಿದ ನಂತರ ಪ್ರತಿಕ್ರಿಯೆ ನೀಡುತ್ತೇನೆ’ ಎಂದು ಮಂಡಳಿಯ ಅಧ್ಯಕ್ಷ ಎನ್. ಜಯರಾಂ ‘ಪ್ರಜಾವಾಣಿ’ಗೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT