ಭಾನುವಾರ, ಮಾರ್ಚ್ 29, 2020
19 °C

ಬಿಬಿಎಂಪಿಗೆ 210 ಕೆರೆಗಳ ಅಭಿವೃದ್ಧಿ ಹೊಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ 210 ಕೆರೆಗಳ ಅಭಿವೃದ್ಧಿ ಹಾಗೂ ಮೇಲ್ವಿಚಾರಣೆಯನ್ನು ಬಿಬಿಎಂಪಿಗೆ ವಹಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

32 ಕೆರೆಗಳು ಬಿಡಿಎ ವ್ಯಾಪ್ತಿಯಲ್ಲಿವೆ. ಈ ಪೈಕಿ ಬೆಳ್ಳಂದೂರು, ವರ್ತೂರು ಹಾಗೂ ಹೊಸಕೆರೆಹಳ್ಳಿ ಕೆರೆಗಳನ್ನು ಬಿಟ್ಟು ಉಳಿದ 29 ಕೆರೆಗಳ ಸರ್ವೆ ಕಾರ್ಯ ಪೂರ್ಣಗೊಂಡಿದೆ. ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳ ಒತ್ತುವರಿ ತೆರವು ಕಾರ್ಯ ಮುಗಿದಿದೆ. ಈ ಕೆರೆಗಳ ಅಭಿವೃದ್ಧಿ ಕಾರ್ಯ ಆರಂಭವಾಗಿದೆ. ಉಳಿದ ಕೆರೆಗಳನ್ನು ಬಿಬಿಎಂಪಿಗೆ ಪ್ರಾಧಿಕಾರ ಹಸ್ತಾಂತರಿಸಲಿದೆ. ಕೆಲವು ಕೆರೆಗಳು ಸಣ್ಣ ನೀರಾವರಿ ಇಲಾಖೆ ಹಾಗೂ ಕೆರೆ ಅಭಿವೃದ್ಧಿ ಪ್ರಾಧಿಕಾರದ ಸುಪರ್ದಿಯಲ್ಲಿವೆ.

‘ಪ್ರಜಾವಾಣಿ’ ಕಚೇರಿಯಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ‘ಕೆರೆಗಳನ್ನು ಸಮಗ್ರ ಅಭಿವೃದ್ಧಿಪಡಿಸುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಕೆರೆಗಳ 600 ಎಕರೆಗಳಷ್ಟು ಜಾಗ ಒತ್ತುವರಿಯಾಗಿದೆ. ಅದನ್ನು ತೆರವುಗೊಳಿಸಲಾಗುವುದು. ಒತ್ತುವರಿ ಮಾಡಿಕೊಂಡಿರುವ ಬಡವರಿಗೆ ಪುನರ್‌ವಸತಿ ಕಲ್ಪಿಸಲಾಗುವುದು. ಜತೆಗೆ, ರಾಜಕಾಲುವೆಗಳ ಒತ್ತುವರಿಯನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲಾಗುವುದು’ ಎಂದರು.

‘ಕಾಮಗಾರಿಗಳಲ್ಲಿ ಅಕ್ರಮಗಳಿಗೆ ಕಡಿವಾಣ ಹಾಕುವುದರ ಜೊತೆ ನಗರಕ್ಕೆ ಸಂಬಂಧಿಸಿದ ಇತರ ಮಾಹಿತಿಗಳನ್ನೂ ಸಾರ್ವಜನಿಕರ ಜೊತೆ ಹಂಚಿಕೊಂಡು ಆಡಳಿತದಲ್ಲಿ ಪಾರದರ್ಶಕತೆ ತರುವ ಸಲುವಾಗಿ ರಸ್ತೆ ಇತಿಹಾಸ ತಂತ್ರಾಂಶಕ್ಕೆ ಹೊಸ ರೂಪ ನೀಡಲು ಮುಂದಾಗಿದ್ದೇವೆ’ ಎಂದು ಅವರು ಹೇಳಿದರು.

‘ನಗರದ ಸಂಚಾರ ದಟ್ಟಣೆ ಸಮಸ್ಯೆ ಕಡಿಮೆ ಮಾಡಲು ಸಾರ್ವಜನಿಕ ಸಾರಿಗೆಯನ್ನು ಬಲಪಡಿಸುತ್ತೇವೆ. ಗುಣಮಟ್ಟದ ಹೊಸ ಬಸ್‌ಗಳನ್ನು ಖರೀದಿ ಮಾಡುತ್ತೇವೆ. ಉಪನಗರ ರೈಲು ಯೋಜನೆಯನ್ನು ತ್ವರಿತಗತಿಯಲ್ಲಿ ಅನುಷ್ಠಾನ ಮಾಡುತ್ತೇವೆ. ನಮ್ಮ ಮೆಟ್ರೊ ಕಾಮಗಾರಿಗೆ ಇನ್ನಷ್ಟು ವೇಗ ನೀಡುತ್ತೇವೆ. ನಾಲ್ಕೈದು ವರ್ಷಗಳಲ್ಲಿ ಮೆಟ್ರೊ ಜಾಲ 300 ಕಿ.ಮೀ.ಗೆ ವಿಸ್ತರಣೆಯಾಗಲಿದೆ’ ಎಂದು ಅವರು ಹೇಳಿದರು.

‘ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಮ್ಮ ಮೆಟ್ರೊ ವಿಸ್ತರಣೆ ಮಾಡಲು ತೀರ್ಮಾನಿಸಲಾಗಿದ್ದು, 2021ರ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

‘ಪೆರಿಫೆರಲ್‌ ವರ್ತುಲ ರಸ್ತೆಗೆ ಇದ್ದ ಎಲ್ಲ ಅಡ್ಡಿ ಆತಂಕಗಳನ್ನು ನಿವಾರಣೆ ಮಾಡಲಾಗಿದ್ದು, ಶೀಘ್ರ ಅನುಷ್ಠಾನಗೊಳಿಸಲಾಗುವುದು’ ಎಂದು ಅವರು ಹೇಳಿದರು. ‘ಅಭಿವೃದ್ಧಿ ವಿಚಾರದಲ್ಲಿ ಈವರೆಗೆ ಬಣ್ಣ ಬದಲಾಯಿಸುವ ಕೆಲಸ ಮಾಡಲಾಗಿದೆ. ಇದರಿಂದ ಸಮಸ್ಯೆಗೆ ಪರಿಹಾರ ಕಾಣಲು ಸಾಧ್ಯವಿಲ್ಲ’ ಎಂದೂ ಅವರು ಅಭಿಪ್ರಾಯಪಟ್ಟರು.

‘ನಗರದ ಸಂಚಾರ ದಟ್ಟಣೆ ನಿಯಂತ್ರಣಕ್ಕೆ 12 ಕಾರಿಡಾರ್‌ಗಳನ್ನು ನಿರ್ಮಾಣ ಮಾಡಲಾಗುವುದು. ವ್ಯವಸ್ಥಿತವಾಗಿ ನಗರದ ಅಭಿವೃದ್ಧಿ ಮಾಡಲಾಗುವುದು’ ಎಂದು ಅವರು ಹೇಳಿದರು.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು