ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಲ್‌ ಓಕೆ’ ಸಂದೇಶ ಕಳಿಸಿ ಪ್ರಾಣಬಿಟ್ಟ ಕ್ಯಾಪ್ಟನ್‌ ಪ್ರಾಂಜಲ್‌: ಕಣ್ಣೀರಾದ ತಂದೆ

Published 25 ನವೆಂಬರ್ 2023, 5:46 IST
Last Updated 25 ನವೆಂಬರ್ 2023, 5:46 IST
ಅಕ್ಷರ ಗಾತ್ರ

ಆನೇಕಲ್‌: ‘ಐದು ದಿನದ ಹಿಂದೆ ಕರೆ ಮಾಡಿದ್ದ ಪ್ರಾಂಜಲ್‌ ಇಂಟೆಲಿಜೆನ್ಸ್‌ ಕಾರ್ಯವೊಂದರ ಮೇಲೆ ನಿಯೋಜನೆಗೊಂಡಿದ್ದೇನೆ ಎಂದು ತಿಳಿಸಿದ್ದ. ಆಲ್‌ ಓಕೆ ಎಂಬ ಸಂದೇಶವೂ ಬಂದಿತ್ತು. ಎಲ್ಲವೂ ಸರಿಯಿದೆ ಎಂದು ಹೇಳುತ್ತಲೆ ನನ್ನ ಮಗ ಪ್ರಾಣಬಿಟ್ಟಿದ್ದಾನೆ’ ಎಂದು ಹುತಾತ್ಮರಾದ ಕ್ಯಾಪ್ಟನ್‌ ಪ್ರಾಂಜಲ್‌ ತಂದೆ ವೆಂಕಟೇಶ್‌ ಕಣ್ಣೀರಾದರು.

ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿಯಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಬುಧವಾರ(ನ.22) ನಡೆದ ಗುಂಡಿನ ಚಕಮಕಿಯಲ್ಲಿ ಕ್ಯಾಪ್ಟನ್‌ ಪ್ರಾಂಜಲ್‌ ಸೇರಿದಂತೆ ನಾಲ್ವರು ಹುತಾತ್ಮರಾಗಿದ್ದರು.

‘ಇಂಟೆಲಿಜೆನ್ಸ್‌ ಕಾರ್ಯವೊಂದರ ಮೇಲೆ ನಿಯೋಜನೆಗೊಂಡಿದ್ದೇನೆ ಎಂದು ಹೇಳಿದ್ದ ಪ್ರಾಂಜಲ್‌, ನಿವೇನೂ ಕರೆ ಮಾಡಬೇಡಿ ನಾನೇ ಮೆಸೇಜ್‌ ಅಥವಾ ಕರೆ ಮಾಡುತ್ತೇನೆ ಎಂದಿದ್ದ. ಆಲ್‌ ಓಕೆ ಎಂಬ ಸಂದೇಶ ಬರುತ್ತಿತ್ತು. ಆದರೆ ಅಲ್ಲಿನ ಪರಿಸ್ಥಿತಿಯ ಬಗ್ಗೆ ಅರಿವಿರಲಿಲ್ಲ. ಆಲ್‌ ಓಕೆ ಎಂದು ಹೇಳುತ್ತಲೇ ಕೊನೆಯುಸಿರೆಳೆದಿದ್ದಾನೆ’ ಎಂದು ಮಗನ ಕೊನೆ ಸಂದೇಶವನ್ನು ನೆನಪಿಸಿಕೊಂಡು ತಂದೆ ವೆಂಕಟೇಶ್‌ ಗದ್ಗಿತರಾಗಿದ್ದಾರೆ.

‘ಸಿಇಟಿಯಲ್ಲಿ ಆರ್‌.ವಿ.ಕಾಲೇಜಿನಲ್ಲಿ ಕೆಮಿಕಲ್‌ ಎಂಜಿನಿಯರಿಂಗ್‌ ಸೀಟು ದೊರೆತರೂ ಪ್ರಾಂಜಲ್‌ ಮಿಲಿಟರಿ ಆಯ್ಕೆ ಮಾಡಿಕೊಂಡಿದ್ದ. ಮೂರನೇ ತರಗತಿಯಿಂದಲೂ ಮಿಲಿಟರಿ ಸೇರುವ ಕನಸು ಕಂಡಿದ್ದ. ತನ್ನಾಸೆಯಂತೆಯೇ 2014ರ ಜೂನ್‌ನಲ್ಲಿ ಮಿಲಿಟರಿಗೆ ಸೇರಿದ್ದ’ ಎಂದರು.

‘ಎರಡು ವರ್ಷದ ಹಿಂದೆ ಬೆಂಗಳೂರಿನ ಅದಿತಿಯನ್ನು ಮದುವೆಯಾಗಿದ್ದ. ಚೆನ್ನೈನ ಐಐಟಿಯಲ್ಲಿ ಅದಿತಿ ಪಿಎಚ್‌.ಡಿ ಮಾಡುತ್ತಿದ್ದಾಳೆ. ಒಬ್ಬ ಯೋಧನ ಪತ್ನಿಯಾಗಿ ಪತಿಗೆ ಸದಾ ನೈತಿಕ ಬೆಂಬಲ ನೀಡುತ್ತಿದ್ದಳು. ಪ್ರಾಂಜಲ್‌ ದೇಶಕ್ಕಾಗಿ ಪ್ರಾಣ ಬಿಟ್ಟಿದ್ದಾನೆ ಎಂಬ ತೃಪ್ತಿ ನನಗಿದೆ. ದೇಶಕ್ಕಾಗಿ ಕುಟುಂಬವನ್ನೂ ಲೆಕ್ಕಿಸದೆ ಪ್ರಾಣ ಪಣಕ್ಕಿಟ್ಟು ಸೇವೆ ಸಲ್ಲಿಸುತ್ತಿರುವ ಲಕ್ಷಾಂತರ ಯೋಧರಿದ್ದಾರೆ. ಪ್ರಾಂಜಲ್‌ ಎಲ್ಲರಿಗೂ ಸ್ಫೂರ್ತಿಯಾಗಿದ್ದಾನೆ. ಆತಂಕವಾದಿಗಳನ್ನು ದಮನ ಮಾಡಬೇಕೆಂಬುದು ಪ್ರಾಂಜಲ್‌ನ ಗುರಿಯಾಗಿತ್ತು’ ಎಂದು ನೆನಪಿಸಿಕೊಂಡರು.

ಪ್ರಾಂಜಲ್‌ ಅವರ ಪಾರ್ಥಿವ ಶರೀರವನ್ನು ದೆಹಲಿಯಿಂದ ಶುಕ್ರವಾರ ರಾತ್ರಿ ಬೆಂಗಳೂರು ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ತರಲಾಗಿದ್ದು, ಸಕಲ ಸೇನಾ ಗೌರವದೊಂದಿಗೆ ಪಾರ್ಥಿವ ಶರೀರವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ.

ಜಿಗಣಿಯ ನಂದನವನ ಬಡಾವಣೆಯಲ್ಲಿರುವ ಪ್ರಾಂಜಲ್‌ ಮನೆಯ ಎದುರು ಇಂದು ಬೆಳಗ್ಗೆ 7ರಿಂದ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT