ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವೈದ್ಯರಿಗೆ ₹6.20 ಕೋಟಿ ವಂಚನೆ: ದೂರು ದಾಖಲು

ಐಶಾರಾಮಿ ಕಾರು ಕೊಡಿಸುವುದಾಗಿ ನಂಬಿಸಿದ್ದ ಮಹಿಳೆ
Published 7 ಫೆಬ್ರುವರಿ 2024, 16:24 IST
Last Updated 7 ಫೆಬ್ರುವರಿ 2024, 16:24 IST
ಅಕ್ಷರ ಗಾತ್ರ

ಬೆಂಗಳೂರು: ಸೌಂದರ್ಯ ವರ್ಧಕ ಚಿಕಿತ್ಸೆಗೆ ಬಂದಿದ್ದ ವೇಳೆ ಪರಿಚಿತವಾಗಿದ್ದ ಮಹಿಳೆಯೊಬ್ಬರು ಕಾರು ಕೊಡಿಸುವುದಾಗಿ ವೈದ್ಯರಿಗೆ ನಂಬಿಸಿ ಕೋಟ್ಯಂತರ ರೂಪಾಯಿ ವಂಚಿಸಿದ್ದು, ಈ ಸಂಬಂಧ ವಿಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯನಗರದ ನಿವಾಸಿ ಡಾ.ಗಿರೀಶ್ ಅವರಿಗೆ ಐಶ್ವರ್ಯ ಗೌಡ ಎಂಬುವವರು ಬರೋಬ್ಬರಿ ₹ 6.20 ಕೋಟಿ ಪಡೆದು ವಂಚಿಸಿರುವ ಆರೋಪದ ಅಡಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

‘2022ರ ಮಾರ್ಚ್‌ನಲ್ಲಿ ಗಿರೀಶ್ ಅವರ ಆಸ್ಪತ್ರೆಗೆ ರಾಜರಾಜೇಶ್ವರಿ ನಗರದ ನಿವಾಸಿ ಐಶ್ವರ್ಯ ಗೌಡ ಅವರು ಚಿಕಿತ್ಸೆಗೆ ಬಂದಿದ್ದರು. ಆಗ ವೈದ್ಯರಿಗೆ ಮಹಿಳೆಯ ಪರಿಚಯವಾಗಿತ್ತು. ತಾನು ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸುತ್ತಿದ್ದು, ಸೆಕೆಂಡ್ ಹ್ಯಾಂಡ್‌ ಕಾರುಗಳ ಮಾರಾಟವನ್ನೂ ನಡೆಸುತ್ತಿರುವುದಾಗಿ ಮಹಿಳೆ ಹೇಳಿಕೊಂಡಿದ್ದರು‘ ಎಂದು ಪೊಲೀಸರು ಹೇಳಿದರು.

‘ಐಶಾರಾಮಿ ಕಾರು ಖರೀದಿಸುವ ಆಲೋಚನೆಯಲ್ಲಿದ್ದ ಗಿರೀಶ್‌ ಅವರು ಐಶ್ವರ್ಯ ಅವರನ್ನು ಸಂಪರ್ಕಿಸಿದ್ದರು. ಒಳ್ಳೆಯ ಕಾರು ಕೊಡಿಸುವುದಾಗಿ ನಂಬಿಸಿ ಹಂತ ಹಂತವಾಗಿ ಮಹಿಳೆ ಹಣ ಪಡೆದುಕೊಂಡಿದ್ದರು’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

‘₹2.75 ಕೋಟಿಯನ್ನು ಆರ್‌ಟಿಜಿಎಸ್ ಮೂಲಕ, ₹3.25 ಕೋಟಿಯನ್ನು ನಗದು ರೂಪದಲ್ಲಿ ಪಡೆದುಕೊಂಡಿದ್ದರು. ಆದರೆ, ಕಾರು ಕೊಡಿಸಿರಲಿಲ್ಲ. ಹಣ ವಾಪಸ್ ಕೊಡುವಂತೆ ಕೇಳಿದಾಗ ಸಬೂಬು ಹೇಳಿಕೊಂಡು ತಪ್ಪಿಸಿಕೊಂಡಿದ್ದರು’ ಎಂದು ದೂರಲಾಗಿದೆ.

‘ಡಿಸೆಂಬರ್‌ನಲ್ಲಿ ಹಣ ಹಿಂದಿರುಗಿಸುವಂತೆ ಕೇಳಿದಾಗ ವಿಜಯನಗರ ಕ್ಲಬ್ ಹತ್ತಿರ ಬರಲು ಸೂಚಿಸಿದ್ದರು. ಅದರಂತೆ ಗಿರೀಶ್ ಮತ್ತು ಅವರ ಪತ್ನಿ ಕ್ಲಬ್ ಹತ್ತಿರ ಹೋದಾಗ, ಅವಾಚ್ಯವಾಗಿ ನಿಂದಿಸಿದ್ದರು. ಹಣ ವಾಪಸ್‌ ಕೇಳಿದರೆ ಅತ್ಯಾಚಾರದ ದೂರು ನೀಡಲಾಗುವುದು ಎಂದು ಮಹಿಳೆ ಬೆದರಿಕೆ ಹಾಕಿದ್ದರು’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT