ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶೀಘ್ರವೇ ಹೈಕೋರ್ಟ್ ಬಳಕೆಗೆ ಕಾವೇರಿ ಭವನ: ಸಿಜೆ ಅಂಜಾರಿಯಾ

Published : 15 ಆಗಸ್ಟ್ 2024, 12:23 IST
Last Updated : 15 ಆಗಸ್ಟ್ 2024, 12:23 IST
ಫಾಲೋ ಮಾಡಿ
Comments

ಬೆಂಗಳೂರು: ‘ಬಳಕೆಗೆ ಸಿದ್ಧವಾಗಿರುವ ಕಾವೇರಿ ಭವನದ ಮೂರು ಬ್ಲಾಕ್‌ಗಳನ್ನು ಒಳಗೊಂಡ 1,21,210 ಚದರ ಅಡಿ ವಿಸ್ತೀರ್ಣದ ಕಟ್ಟಡ ಶೀಘ್ರವೇ ಹೈಕೋರ್ಟ್ ಗೆ ಹಸ್ತಾಂತರವಾಗಲಿದೆ’ ಎಂದು ಮುಖ್ಯ ನ್ಯಾಯಮೂರ್ತಿ(ಸಿಜೆ) ಎನ್‌.ವಿ.ಅಂಜಾರಿಯಾ ಸಂತಸ ವ್ಯಕ್ತಪಡಿಸಿದರು.

ಸ್ವಾತಂತ್ರ್ಯೋತ್ಸವದ ಅಂಗವಾಗಿ ಹೈಕೋರ್ಟ್ ಆವರಣದಲ್ಲಿ ಗುರುವಾರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ಸದ್ಯ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ (ಕೆಪಿಟಿಸಿಎಲ್) ಬಳಕೆಯಲ್ಲಿರುವ ಕಾವೇರಿ ಭವನದ ಎ, ಬಿ ಮತ್ತು ಸಿ ಬ್ಲಾಕ್ ಗಳಲ್ಲಿನ 1,21,210 ಚದರ ಅಡಿ ಜಾಗದಲ್ಲಿ ಬಳಕೆಗೆ ಸಿದ್ಧವಿರುವ ಕಚೇರಿಗಳು, ಬೋರ್ಡ್ ರೂಮ್ ಗಳು, ಕಾನ್ಫರೆನ್ಸ್ ಕೊಠಡಿಗಳು, ಆಡಿಟೊರಿಯಂ ಮತ್ತು ಅತಿಥಿ ಗೃಹವನ್ನು ಹೈಕೋರ್ಟ್ ಪಡೆಯಲಿದೆ ಎಂಬುದನ್ನು ಸಂತೃಪ್ತಿಯಿಂದ ಘೋಷಣೆ ಮಾಡುತ್ತಿದ್ದೇನೆ’ ಎಂದು ಅವರು ತಿಳಿಸಿದರು.

‘ಕಾವೇರಿ ಭವನದಲ್ಲಿನ ಸ್ಥಳವನ್ನು ಹೈಕೋರ್ಟ್‌ಗೆ ನೀಡಲು ಕೆಪಿಟಿಎಸ್ಎಲ್ ಅಧಿಕೃತವಾಗಿ ರಾಜ್ಯ ಸರ್ಕಾರಕ್ಕೆ ತಿಳಿಸಿದೆ. ಇದಕ್ಕೆ ಸರ್ಕಾರದ ಪ್ರಾಧಿಕಾರಗಳು ಒಪ್ಪಿಗೆ ಸೂಚಿಸಿವೆ. ರಚನಾತ್ಮಕ ವರದಿ ಲಭ್ಯವಾದ ಕೂಡಲೇ ಔಪಚಾರಿಕವಾಗಿ ಕಾವೇರಿ ಭವನವನ್ನು ವಶಕ್ಕೆ ಪಡೆಯಲಾಗುವುದು’ ಎಂದು ಅವರು ತಿಳಿಸಿದರು.

ಪದೋನ್ನತಿ: ‘ಆಡಳಿತಾತ್ಮಕ ದೃಷ್ಟಿಯಿಂದ 78 ನ್ಯಾಯಾಂಗ ಅಧಿಕಾರಿಗಳಿಗೆ ಜಿಲ್ಲಾ ನ್ಯಾಯಾಧೀಶರಾಗಿ, 84 ಅಧಿಕಾರಿಗಳಿಗೆ ಹಿರಿಯ ಸಿವಿಲ್ ನ್ಯಾಯಾಧೀಶರಾಗಿ ಪದೋನ್ನತಿ ನೀಡಲಾಗಿದೆ’ ಎಂದರು.

ತರಬೇತಿ: 2024ರ ಜುಲೈ 1ರಿಂದ ಜಾರಿಗೆ ಬಂದಿರುವ ‘ಭಾರತೀಯ ನ್ಯಾಯ ಸಂಹಿತ’, ‘ಭಾರತೀಯ ನಾಗರಿಕ ಸುರಕ್ಷಾ ಸಂಹಿತ’ ಮತ್ತು ‘ಭಾರತೀಯ ಸಾಕ್ಷ್ಯ ಅಧಿನಿಯಮ’ದ ಕುರಿತು ರಾಜ್ಯ ನ್ಯಾಯಾಂಗ ಅಕಾಡೆಮಿಯು ನ್ಯಾಯಾಂಗ ಅಧಿಕಾರಿಗಳು, ವಕೀಲರಿಗೆ ಮಾತ್ರವಲ್ಲದೇ ಹೈಕೋರ್ಟ್ ನ್ಯಾಯಮೂರ್ತಿಗಳಿಗೂ ತರಬೇತಿ ಕಾರ್ಯಕ್ರಮ ನಡೆಸಿದೆ’ ಎಂದು ಅಂಜಾರಿಯಾ ತಿಳಿಸಿದರು.

ಡಿಜಿಟಲ್‌ಗೆ ಒತ್ತು: ‘ತಾಂತ್ರಿಕ ಶೋಧನೆ ಮತ್ತು ಅವುಗಳ ಅಪ್ಲಿಕೇಶನ್ ತಂತ್ರಜ್ಞಾನವನ್ನು ನ್ಯಾಯಾಂಗ ಪ್ರಕ್ರಿಯೆಯಲ್ಲೂ ಬಳಕೆ ಮಾಡಿದರೆ ತುರ್ತು ಮತ್ತು ಪಾರದರ್ಶಕ ನ್ಯಾಯದಾನ ಸಲೀಸಾಗಲಿದೆ. ಇ-ಮೂಲ ಸೌಲಭ್ಯ, ಜನಕೇಂದ್ರಿತ ಇ-ಸೇವೆಗಳು, ಇ-ಸೇವಾ ಕೇಂದ್ರ ಇತ್ಯಾದಿಗಳನ್ನು ಹೊಂದುವ ಮೂಲಕ ಮಹತ್ವದ ಕ್ರಮ ಕೈಗೊಂಡಿದ್ದರೂ ಈ ಹಾದಿಯಲ್ಲಿ ಇನ್ನೂ ಬಹುದೂರ ಸಾಗಬೇಕಿದೆ’ ಎಂದು ಅವರು ಹೇಳಿದರು.

‌‘ಪ್ರಕರಣಗಳ ಬಗ್ಗೆ ತಿಳಿದುಕೊಳ್ಳಲು ಡ್ಯಾಷ್ ಬೋರ್ಡ್ ರೂಪದಲ್ಲಿ ಆನ್‌ಲೈನ್ ಡಿಜಿಟಲ್ ಕೇಸ್ ಡೈರಿ ವೇದಿಕೆಯನ್ನು ರೂಪಿಸುವ ಮೂಲಕ ವಕೀಲರು, ದಾವೆದಾರರು ಮತ್ತು ಸರ್ಕಾರಿ ಇಲಾಖೆಗಳಿಗೆ ಕಾಗದ ರಹಿತ ಡೈರಿ ವ್ಯವಸ್ಥೆಯನ್ನು ರಾಜ್ಯದಾದ್ಯಂತ ಹೈಕೋರ್ಟ್ ಜಾರಿಗೊಳಿಸಿದೆ. ಮುಂದಿನ ದಿನಗಳಲ್ಲಿ ಇ-ಫೈಲಿಂಗ್, ನ್ಯಾಯಾಲಯದ ದಾಖಲೆಗಳ ಡಿಜಿಟಲೀಕರಣ ಇತರೆ ತಂತ್ರಜ್ಞಾನ ಕೇಂದ್ರಿತ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಬೆಂಗಳೂರು ಪ್ರಧಾನ ಪೀಠ, ಧಾರವಾಡ ಮತ್ತು ಕಲಬುರಗಿ ಪೀಠಗಳಲ್ಲಿನ ಬಾಕಿ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡಲು ಹೈಕೋರ್ಟ್ ಎಲ್ಲಾ ಕ್ರಮ ಕೈಗೊಳ್ಳುತ್ತಿದೆ. ಲೋಕ್ ಅದಾಲತ್‌ನಲ್ಲಿ ಹೈಕೋರ್ಟ್ ಸಾಧನೆ ಅತ್ಯಂತ ಸಮಾಧಾನಕರವಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT