ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾವೇರಿ 5 ಹಂತ: ಕಾಮಗಾರಿ ಪರಿಶೀಲನೆ

ದಾಸರಹಳ್ಳಿ: ವಿವಿಧ ಬಡಾವಣೆ ನಿವಾಸಿಗಳಿಂದ ದೂರು: ನೀರಿನ ಸಮಸ್ಯೆ ಆಲಿಸಿದ ಜಲಮಂಡಳಿ ಅಧ್ಯಕ್ಷ
Published 17 ಫೆಬ್ರುವರಿ 2024, 16:06 IST
Last Updated 17 ಫೆಬ್ರುವರಿ 2024, 16:06 IST
ಅಕ್ಷರ ಗಾತ್ರ

ಪೀಣ್ಯ ದಾಸರಹಳ್ಳಿ: ಎತ್ತರದ ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ಪೂರೈಕೆ ಸಮಸ್ಯೆ, ಕೊಳವೆ ಬಾವಿಯಲ್ಲಿ ನೀರು ಕಡಿಮೆಯಾಗುತ್ತಿರುವುದು, ವಾಟರ್‌ಮ್ಯಾನ್‌ ಮಾಡುವ ತಾರತಮ್ಯ, ಸಮಯಕ್ಕೆ ಸರಿಯಾಗಿ ನೀರು ಬಿಡದೇ ಇರುವುದೂ ಸೇರಿದಂತೆ ಅನೇಕ ಸಮಸ್ಯೆಗಳು ಇಲ್ಲಿ ಅನಾವರಣಗೊಂಡವು.

ಬಾಗಲಗುಂಟೆಯ ಜಲ ಮಂಡಳಿ ಕಚೇರಿಯಲ್ಲಿ ನೀರಿನ ಸಮಸ್ಯೆ ಆಲಿಸಲು, ಕುಂದು ಕೊರತೆ ಬಗೆಹರಿಸಲು ಶಾಸಕ ಎಸ್. ಮುನಿರಾಜು ನೇತೃತ್ವದಲ್ಲಿ ನಡೆದ ಸಾರ್ವಜನಿಕ ಸಭೆ ಇದಕ್ಕೆ ವೇದಿಕೆಯಾಯಿತು. 

ಬೆಂಗಳೂರು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಮಾತನಾಡಿ, ‘ಕಾವೇರಿ ನೀರು ಪೂರೈಕೆ ಕಡಿಮೆಯಾಗಿಲ್ಲ. ಖಾಸಗಿ ಮತ್ತು ಬಿಬಿಎಂಪಿಯ ಕೊಳವೆಬಾವಿಗಳಿಗೆ 600 ಎಂಎಲ್‌ಡಿ ನೀರನ್ನು ಪೂರೈಸಲಾಗುತ್ತಿತ್ತು. ಮಳೆ ಕೊರತೆಯಿಂದ ಜಲಮಟ್ಟ ಕುಸಿದ ಪರಿಣಾಮ ಹಲವು ಕೊಳವೆಬಾವಿಗಳು ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ನೀರಿನ ಅಭಾವ ಉಂಟಾಗಿದೆ’ ಎಂದು ವಿವರಿಸಿದರು.

ಕೆಆರ್‌ಎಸ್ ಮತ್ತು ಕಬಿನಿಯಲ್ಲಿ ನೀರು ಕಾಯ್ದಿರಿಸಲು ಪತ್ರ ಬರೆದಿದ್ದೇವೆ. ಉಪಮುಖ್ಯಮಂತ್ರಿ ಸಹ ಸಂಬಂಧ ಪಟ್ಟ ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಿದ್ದಾರೆ ಎಂದರು.

ಕಾವೇರಿ ನೀರನ್ನು ಕುಡಿಯಲು ಮಾತ್ರ ಬಳಸಬೇಕು. ಕಾರು ತೊಳೆಯಲು, ಉದ್ಯಾನಕ್ಕೆ ಹಾಯಿಸಲು ಬಳಸಬಾರದು ಎಂದು ಸಲಹೆ ನೀಡಿದರು.

ಎಲ್ಲಿ ಕೊಳವೆ ಬಾವಿ ತೋಡಿದರೆ ನೀರು ಬರಬಹುದು ಎಂದು ತಾಂತ್ರಿಕ ಸಿಬ್ಬಂದಿಯಿಂದ ಮಾಹಿತಿ ಪಡೆದು ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಸರಿಯಾಗಿ ಇಂಗುಗುಂಡಿಗಳನ್ನು ಮಾಡಿಕೊಂಡು ಮಳೆ ನೀರನ್ನು ಅದಕ್ಕೆ ಬಿಡಬೇಕು. ಆ ಮೂಲಕ ಅಂತರ್ಜಲ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಮಳೆ ನೀರು ಚರಂಡಿಗಳಿಗೆ ಹರಿದು ಹೋಗಬಾರದು ಎಂದು ಹೇಳಿದರು.

ಕಾವೇರಿ ಯೋಜನೆ ಮುಖ್ಯ ಎಂಜಿನಿಯರ್ ಮಹೇಶ್, ಎಂಜಿನಿಯರ್ ರಾಜೀವ್, ಬೆಂಗಳೂರು ಜಲ ಮಂಡಳಿ ಮುಖ್ಯ ಎಂಜಿನಿಯರ್ ಪರಮೇಶ್ವರಪ್ಪ, ಬಿಬಿಎಂಪಿ ಜಂಟಿ ಆಯುಕ್ತ ಬಾಲಶೇಖರ್, ಎಂಜಿನಿಯರ್ ನಾಗರಾಜು ಭಾಗವಹಿಸಿದ್ದರು.

ಜನರು ಹೇಳಿದ್ದೇನು?

ಎಂಟು ದಿನಕ್ಕೆ ಒಮ್ಮೆ ನೀರು ಬಿಡುತ್ತಿದ್ದಾರೆ. ಅದು ಕೂಡ ಎರಡರಿಂದ ಮೂರು ಗಂಟೆಗಳು ಮಾತ್ರ. ಇದರಿಂದ ಸಂಪು ತುಂಬುವುದಿಲ್ಲ. ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಿದರೂ ಸಾಕಾಗುತ್ತಿಲ್ಲ.

ಬಿ. ಕೃಷ್ಣಮೂರ್ತಿ, ಅಧ್ಯಕ್ಷ, ಡಿಫೆನ್ಸ್ ಕಾಲೊನಿ ಕ್ಷೇಮಾಭಿವೃದ್ಧಿ ಸಂಘ

ಎರಡು ತಿಂಗಳಿನಿಂದ ನೀರು ಸಮರ್ಪಕವಾಗಿ ಪೂರೈಕೆ ಆಗುತ್ತಿಲ್ಲ. ವಾರಕ್ಕೆ 500 ಲೀಟರ್ ನೀರು ಕೂಡಾ ಬಿಡುತ್ತಿಲ್ಲ. ಕಾವೇರಿ ನೀರಿಗೂ ಹಣ ಕಟ್ಟಿಸಿಕೊಂಡಿದ್ದಾರೆ. ನಮ್ಮ ಕೊಳವೆಬಾವಿಯೂ ಬತ್ತಿದೆ. ಅನಿವಾರ್ಯವಾಗಿ ಟ್ಯಾಂಕರ್‌ ನೀರಿನ ಮೊರೆ ಹೋಗಿದ್ದೇವೆ.

ರಾಜು, ಸಿದ್ದೇಶ್ವರ ಬಡಾವಣೆ

ಮಂಜುನಾಥ ನಗರದಲ್ಲಿ ನೀರಿಗಾಗಿ ಪೈಪೋಟಿ ಇದೆ. ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವ ಕಾರ್ಮಿಕರೇ ಇಲ್ಲಿನ ನಿವಾಸಿಗಳಾಗಿದ್ದಾರೆ. ಡ್ರಮ್‌ಗಳಲ್ಲಿ ನೀರು ಶೇಖರಿಸಲು ಆಗುತ್ತಿಲ್ಲ. ಅಲ್ಲಿ ತಮಿಳುನಾಡಿಗೆ ನೀರು ಬಿಡುತ್ತಾರೆ. ಇಲ್ಲಿ ನೀರಿಗಾಗಿ ಜಗಳವಾಗುತ್ತಿದೆ.

ವನಜಾಕ್ಷಿ, ಮಂಜುನಾಥ ನಗರ

ಸರಿಯಾದ ಸಮಯಕ್ಕೆ ನೀರು ಬರುತ್ತಿಲ್ಲ. ರಾತ್ರಿ ವೇಳೆ ಯಾವಾಗಲೂ ಬಿಡುತ್ತಾರೆ. ಅದು ನಮಗೆ ಗೊತ್ತೇ ಆಗುವುದಿಲ್ಲ. ಸಂಪು ತುಂಬುವುದಿಲ್ಲ, ನೀರಿನ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು.

ವೀರಯ್ಯ ವಸ್ತ್ರದ, ಕಿರ್ಲೋಸ್ಕರ್ ಕಾಲೊನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT