ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಆರೈಕೆ ಕೇಂದ್ರ | ಹಾಸಿಗೆ ಸಾಮರ್ಥ್ಯ 30 ಸಾವಿರಕ್ಕೆ ಹೆಚ್ಚಳ ಪ್ರಸ್ತಾವ

Last Updated 12 ಜುಲೈ 2020, 20:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕೋರೊನಾ ಸೋಂಕಿನ ಪ್ರಮಾಣ ದಿನೇ ದಿನೇ ಹೆಚ್ಚುತ್ತಲೇ ಇರುವ ಹಿನ್ನೆಲೆಯಲ್ಲಿ ಈ ರೋಗದ ವಿರುದ್ಧದ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ಸರ್ಕಾರ ಮುಂದಾಗಿದೆ. ಅಗತ್ಯ ಬಿದ್ದರೆ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿನ ಹಾಸಿಗೆಗಳ ಸಾಮರ್ಥ್ಯವನ್ನು 30 ಸಾವಿರಕ್ಕೆ ಹೆಚ್ಚಿಸುವ ಬಗ್ಗೆಯೂ ಚಿಂತನೆ ನಡೆದಿದೆ.

30 ಸಾವಿರ ಮಂದಿಗೆ ಆರೈಕೆಗೆ 1,800 ವೈದ್ಯರು, 3,600 ಶುಶ್ರೂಷಕಿಯರ ಅಗತ್ಯವಿದೆ. ಸದ್ಯಕ್ಕೆ 1,700 ವೈದ್ಯಕೀಯ ಸಿಬ್ಬಂದಿಯ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಇವರ ಗೌರವಧನ ಪಾವತಿಗೆ ₹ 21.42 ಕೋಟಿ ತಗುಲಬಹುದು ಎಂದು ಅಂದಾಜಿಸಲಾಗಿದೆ.

ಕೋವಿಡ್‌ ಪರೀಕ್ಷೆಯ ಪ್ರಮಾಣವನ್ನೂ ಹೆಚ್ಚಿಸುವುದಕ್ಕೂ ಸರ್ಕಾರ ಮುಂದಾಗಿದೆ. ಮನೆಯಲ್ಲೇ ಚಿಕಿತ್ಸೆಗೆ ಒಳಗಾಗುವಂತೆ ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಬೆಂಗಳೂರಿನಲ್ಲಿ ಒಂದೇ ಕೊಠಡಿಯಲ್ಲಿ ಐದಾರು ಮಂದಿ ವಾಸಿಸುವವರೂ ಇದ್ದಾರೆ. ಅಂತಹವರಿಗೆ ಮನೆಯಲ್ಲೇ ಚಿಕಿತ್ಸೆ ಕಷ್ಟಸಾಧ್ಯ. ಹಾಗಾಗಿ ಸೋಂಕಿನ ಲಕ್ಷಣ ಇಲ್ಲದವರಿಗಾಗಿ ಇನ್ನಷ್ಟು ಆರೈಕೆ ಕೇಂದ್ರಗಳನ್ನು ಆರಂಭಿಸಬೇಕಾಗಬಹುದು ಎಂಬುದು ಸರ್ಕಾರದ ಲೆಕ್ಕಾಚಾರ.

‘ಸದ್ಯಕ್ಕೆ ನಾವು 20 ಸಾವಿರ ಹಾಸಿಗೆಗಳನ್ನು ವ್ಯವಸ್ಥೆಗೊಳಿಸುವುದಕ್ಕೆ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೇವೆ. ಅಗತ್ಯ ಬಿದ್ದರೆ ಇನ್ನೂ ಹೆಚ್ಚು ಹಾಸಿಗೆ ಸೌಲಭ್ಯ ಒದಗಿಸುವ ಬಗ್ಗೆಯೂ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಪಾಲಿಕೆ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಸ್ತುತ ಆರೈಕೆ ಕೇಂದ್ರಗಳಲ್ಲಿ ಸುಮಾರು 20 ಸಾವಿರ ಹಾಸಿಗೆ ವ್ಯವಸ್ಥೆ ಕಲ್ಪಿಸಲು ಬಿಬಿಎಂಪಿ ಶ್ರಮಿಸುತ್ತಿದೆ. ಇದುವರೆಗೆ ಹಜ್‌ಭವನ, ಜಿಕೆವಿಕೆ ಪ್ರಾಂಗಣದ ಕೃಷಿ ವಿಶ್ವವಿದ್ಯಾಲಯ, ಜಿಕೆವಿಕೆ ಪ್ರಾಂಗಣದ ತೋಟಗಾರಿಕಾ ಕಾಲೇಜು ಹಾಸ್ಟೆಲ್‌, ಕೋರಮಂಗಲದ ಒಳಾಂಗಣ ಕ್ರೀಡಾಂಗಣ, ಶ್ರೀಶ್ರೀ ಆಯುರ್ವೇದ ಆಸ್ಪತ್ರೆ, ಮೆಜಸ್ಟಿಕ್‌ ಬಳಿಯ ಸರ್ಕಾರಿ ಆಯುರ್ವೇದ ಕಾಲೇಜು ಹಾಸ್ಟೆಲ್‌ಗಳಲ್ಲಿ ಒಟ್ಟು 1,971 ಹಾಸಿಗೆಗಳಷ್ಟು ಸೌಲಭ್ಯ ಸದ್ಯಕ್ಕೆ ಸಜ್ಜಾಗಿದೆ.

ಈ ಆರೈಕೆ ಕೇಂದ್ರಗಳಲ್ಲಿನ ಸೇವೆಗಾಗಿ 503 ಎಂಬಿಬಿಎಸ್‌ ವೈದ್ಯರು, 167 ಆಯುಷ್‌ ವೈದ್ಯರು, 128 ಶುಶ್ರೂಷಕಿಯರು ಹಾಗೂ ಅರೆವೈದ್ಯಕೀಯ ಸಿಬ್ಬಂದಿಯ ತಂಡವನ್ನು ಸಜ್ಜುಗೊಳಿಸಲಾಗುತ್ತಿದೆ. ಜತೆಗೆ ನರ್ಸಿಂಗ್‌ ಇಂಟರ್ನಿಗಳ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುವ ಬಗ್ಗೆಯೂ ಚಿಂತನೆ ನಡೆದಿದೆ.

ತುಮಕೂರು ರಸ್ತೆ ಬಳಿಯ ಬೆಂಗಳೂರು ಅಂತರ ರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರವೊಂದರಲ್ಲೇ (ಬಿಐಇಸಿ) 10,100 ಹಾಸಿಗೆಗಳ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಸೋಂಕಿತರನ್ನು ಸ್ಥಳಾಂತರಿಸುವ ಕಾರ್ಯ ಇನ್ನಷ್ಟೇ ಆರಂಭವಾಗಬೇಕಿದೆ. ಕಂಠೀರವ ಒಳಾಂಗಣ ಕ್ರೀಡಾಂಗಣ, ಬೆಂಗಳೂರು ವಿಶ್ವವಿದ್ಯಾಲಯದ ಹಾಸ್ಟೆಲ್‌ಗಳು, ಕೆಂಗೇರಿಯ ಮೆಡ್‌ಸೋಲ್‌ ಆಸ್ಪತ್ರೆಗಳಲ್ಲೂ ಆರೈಕೆ ಕೇಂದ್ರ ಆರಂಭಿಸುವ ಚಿಂತನೆಯನ್ನು ಪಾಲಿಕೆ ಹೊಂದಿದೆ.

ಪ್ರಯೋಗಾಲಯಗಳಿಗೆ ತಂತ್ರಜ್ಞರು ಹಾಗೂ ಡೇಟಾ ಎಂಟ್ರಿ ಸಿಬ್ಬಂದಿ ಸೇರಿ 380 ಮಂದಿಯನ್ನು ಆರು ತಿಂಗಳ ಮಟ್ಟಿಗೆ ನೇಮಿಸಿಕೊಳ್ಳಲಾಗುತ್ತಿದೆ. 637 ವೈದ್ಯಕೀಯ ಸಿಬ್ಬಂದಿ ನೇಮಕಕ್ಕೆ ಸಿದ್ಧತೆ ನಡೆದಿದೆ. ಅಗತ್ಯ ಬಿದ್ದರೆ ಬಳಸಿಕೊಳ್ಳುವುದಕ್ಕೆ 25,000 ನರ್ಸಿಂಗ್‌ ಪದವಿಧರರನ್ನು ಗುರುತಿಸಲಾಗಿದೆ. 3,231 ಇಂಟರ್ನಿಗಳು ಹಾಗೂ ಸ್ನಾತಕೋತ್ತರ ವಿದ್ಯಾಭ್ಯಾಸ ಮುಂದುವರಿಸುತ್ತಿರುವ 1,613 ವಿದ್ಯಾರ್ಥಿಗಳು ಪ್ರಸ್ತುತ ನಗರದಲ್ಲೇ ಲಭ್ಯ ಇದ್ದಾರೆ ಎಂದು ಆರೋಗ್ಯ ಇಲಾಖೆ ಅಂದಾಜಿಸಿದೆ.

ಎಲ್ಲಿ ಎಷ್ಟು ಮಂದಿಗೆ ಆರೈಕೆ?

ಕೇಂದ್ರ ಹಾಸಿಗೆ ಸಾಮರ್ಥ್ಯ ಆರೈಕೆ ಪಡೆಯುತ್ತಿರುವವರು ಲಭ್ಯತೆ
ಹಜ್‌ಭವನ 384 377 7
ಜಿಕೆವಿಕೆ ಕೃಷಿ ವಿ.ವಿ 716 604 112
ಜಿಕೆವಿಕೆ ತೋಟಗಾರಿಕೆ 200 47 153
ಕೋರಮಂಗಲ ಒಳಾಂಗಣ ಕ್ರೀಡಾಂಗಣ 245 99 146
ಶ್ರೀಶ್ರೀ ಆಯುರ್ವೇದ ಆಸ್ಪತ್ರೆ 176 169 7
ಸರ್ಕಾರಿ ಆಯುರ್ವೇದ ಕಾಲೇಜು 250 236 14

ಅಂಕಿ ಅಂಶ
1,971:
ಸಜ್ಜಾಗಿರುವ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಹಾಸಿಗೆ ಸಾಮರ್ಥ್ಯ
150: ಭಾನುವಾರ ದಾಖಲಾದವರು
132:ಭಾನುವಾರ ಬಿಡುಗಡೆಗೊಂಡವರು
1,532: ಭರ್ತಿಯಾಗಿರುವ ಹಾಸಿಗೆಗಳು
439: ಲಭ್ಯ ಇರುವ ಹಾಸಿಗೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT