ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷಮುಕ್ತ ಮಾವು ಸವಿಯಲು ಬೇಡ ಭಯ

Last Updated 20 ಜೂನ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು ಮಾರುಕಟ್ಟೆಗಳಲ್ಲಿ ಸಿಗುಗುತ್ತಿರುವ ಮಾವಿನ ಹಣ್ಣುಗಳು ಅಗ್ನಿ ಪರೀಕ್ಷೆಯಲ್ಲಿ ಗೆದ್ದು ಬಂದಿವೆ. ಮಾವಿನ ಹಣ್ಣುಗಳು ಅಪರಂಜಿ ಚಿನ್ನದಷ್ಟೇ ಶುದ್ಧವಾಗಿದ್ದು,ಸೇವಿಸಲು ಸುರಕ್ಷಿತವಾಗಿವೆ. ಅವುಗಳಲ್ಲಿ ಯಾವುದೇ ರಾಸಾಯನಿಕ ಅಥವಾ ಕೀಟನಾಶಕ ಕಂಡು ಬಂದಿಲ್ಲ ಎಂಬ ಸಮಾಧಾನಕರ ವಿಷಯ ‘ಡೆಕ್ಕನ್‌ ಹೆರಾಲ್ಡ್‌–ಪ್ರಜಾವಾಣಿ’ ಅವಳಿ ಪತ್ರಿಕೆಗಳ ‘ಮೆಟ್ರೊ’ ವಿಭಾಗ ನಡೆಸಿದ ರಿಯಾಲ್ಟಿ ಚೆಕ್‌ಯಲ್ಲಿ ಬೆಳಕಿಗೆ ಬಂದಿದೆ.

ಸೂಪರ್‌ ಮಾರ್ಕೆಟ್‌, ಗಾಂಧಿ ಬಜಾರ್‌, ಹಾಪ್‌ಕಾಮ್ಸ್‌, ಬನಶಂಕರಿ, ಬೀದಿ ಬದಿಯ ವರ್ತಕರು, ಸಾವಯವ ಮಳಿಗೆ, ಲಾಲ್‌ಬಾಗ್‌ ಮಾವು ಮೇಳಗಳಿಂದ ಖರೀದಿಸಿ ತರಲಾಗಿದ್ದ ಮಾವುಗಳನ್ನು ಬನಶಂಕರಿಯಲ್ಲಿರುವ ಕೃಷಿ ಇಲಾಖೆಯ ಕೃಷಿ ಸಂಕಿರಣ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು.

ಅದಾದ ವಾರದ ನಂತರ ಕೈಸೇರಿದ ವರದಿ ಮಾವು ಪ್ರಿಯರಿಗೆ ಪ್ರಿಯವಾಗುವಸುದ್ದಿಯನ್ನು ಹೊತ್ತು ತಂದಿತ್ತು. ಪರೀಕ್ಷೆಗೆ ಒಳಪಡಿಸಿದ ಯಾವ ಮಾವಿನಲ್ಲೂ ಕೀಟನಾಶಕದ ವಿಷಕಾರಿ ಮತ್ತು ಅಪಾಯಕಾರಿಅಂಶ ಪತ್ತೆಯಾಗಿಲ್ಲ ಎಂದು ವರದಿ ಹೇಳಿದೆ.

ಪ್ರಯೋಗಾಲಯಕ್ಕೆ ಕಳಿಸಿದ ಎಲ್ಲ ಮಾವುಗಳ ತಿರಳನ್ನು ತೆರೆದು ಪರೀಕ್ಷೆಗೆ ಒಳಪಡಿಸಲಾಗಿತ್ತು. ಪ್ರಯೋಗಾಲಯಗಳಲ್ಲಿ ಸಾಮಾನ್ಯವಾಗಿ ಅನುಸರಿಸುವ ಮೂರು ಮಾನದಂಡಗಳನ್ನು ಒರೆಗೆ ಹಚ್ಚಿದಾಗ ಪ್ರಮಾಣ ಮೂರರ ಗಡಿ ದಾಟಬಾರದು. ಆದರೆ, ಬೆಂಗಳೂರು ಮಾರುಕಟ್ಟೆಗಳಲ್ಲಿಯ ಮಾವುಗಳಲ್ಲಿಪ್ರಮಾಣ ಒಂದನ್ನೂ ದಾಟಿಲ್ಲ. ಇದೇನೂ ಅಪಾಯಕಾರಿ ಅಲ್ಲ ಎನ್ನುತ್ತವೆ ಪ್ರಯೋಗಾಲಯ ವರದಿಗಳು.

ಯಾವುದೇ ಹಣ್ಣುಗಳಲ್ಲಿ ಕೀಟನಾಶಕ ಪ್ರಮಾಣ 1–100 ಪಿಪಿಬಿ (ಪಾರ್ಟ್ಸ್‌ ಪರ್‌ ಬಿಲಿಯನ್) ಇದ್ದರೂ ಅಪಾಯವಿಲ್ಲ. ಈ ಮಟ್ಟವನ್ನು ಮೀರಿದರೆ ಮಾತ್ರ ಗಂಡಾಂತರ ಗ್ಯಾರಂಟಿ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ನಿಗದಿಪಡಿಸಿದ ರಾಸಾಯನಿಕ ಅಂಶ ಮಿತಿಯನ್ನೂ (ಎಂಆರ್‌ಎಲ್‌–ಮ್ಯಾಕ್ಸಿಮಮ್‌ ರೆಸಿಡ್ಯೂ ಲಿಮಿಟ್) ಈ ಪರೀಕ್ಷೆಯ ಫಲಿತಾಂಶ ದಾಟಿಲ್ಲ ಎನ್ನುವುದು ಸಮಾಧಾನದ ಸಂಗತಿ.

ಹಣ್ಣುಗಳಲ್ಲಿ ಕೀಟನಾಶಕ ಅಂಶ ಉಸಿರಾಟ ತೊಂದರೆ, ಕಿಡ್ನಿ ಸಮಸ್ಯೆ, ಕ್ಯಾನ್ಸರ್‌ನಂತಹ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಬೆಂಗಳೂರು ಮಾರುಕಟ್ಟೆ ಪ್ರವೇಶಿಸುವ ಬಗೆ, ಬಗೆಯ ಮಾವು

ನೆರೆಯ ತಮಿಳುನಾಡು, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಗುಜರಾತ್‌ಗಳಿಂದ ವಿವಿಧ ಬಗೆಯ ಮಾವಿನ ಹಣ್ಣುಗಳು ಬೆಂಗಳೂರು ಮಾರುಕಟ್ಟೆಗೆ

ರಾಮನಗರ, ಬಾಗೇಪಲ್ಲಿ, ಕೋಲಾರ, ಚಿಕ್ಕಬಳ್ಳಾಪುರ, ಚನ್ನಪಟ್ಟಣ, ಹಾಸನ, ಹುಬ್ಬಳ್ಳಿ– ಧಾರವಾಡ, ಬೆಳಗಾವಿಯಲ್ಲಿ ಬೆಳೆದ ಮಾವು ಬೆಂಗಳೂರು ಮಾರುಕಟ್ಟೆ ಪ್ರವೇಶಿಸುತ್ತವೆ.

ಕೃತಕವಾಗಿ ಮಾಗಿದ ಹಣ್ಣು ಹೇಗಿರುತ್ತವೆ?

* ಹೆಚ್ಚು ಮೃದುವಾಗಿರುತ್ತವೆ

* ಕೆಲವು ದಿನಗಳಲ್ಲಿಯೇ ಕೊಳೆಯುತ್ತವೆ

* ಭಾರಿ ಆಕರ್ಷಕ ಬಣ್ಣ ಮತ್ತು ಗಾಢ ಬಣ್ಣಗಳಿಂದ ಕಂಗೊಳಿಸುತ್ತವೆ

* ಹೊರಗಡೆ ಮಾಗಿದಂತೆ ಕಂಡರೂ ಒಳಗಡೆಯಿಂದ ಇನ್ನೂ ಕಾಯಿಯಾಗಿರುತ್ತವೆ

* ಅಷ್ಟೊಂದು ವಾಸನೆ, ರುಚಿ ಇರುವುದಿಲ್ಲ.

* ಹಣ್ಣುಗಳ ಗುಣಮಟ್ಟ ಕಳಪೆಯಾಗಿರುತ್ತದೆ

* ನಿರ್ಲಕ್ಷಿಸಿದರೆ ಜೀವಕ್ಕೆ ಅಪಾಯ

* ಹಣ್ಣುಗಳನ್ನು ಬೇಗ ಮಾಗಿಸುವ ಕಾಲ್ಸಿಯಂ ಕಾರ್ಬೈಡ್‌, ಅರ್ಸೆನಿಕ್‌, ಫಾಸ್ಫರಸ್‌ ರಾಸಾಯನಿಕಗಳು ಅತ್ಯಂತ ವಿಷಕಾರಿ

* ಶ್ವಾಸಕೋಶಗಳಲ್ಲಿ ಕಫ, ದ್ರವ ಸಂಗ್ರಹ

* ಜಠರ, ಕರಳು ಸೇರಿದಂತೆ ಜೀರ್ಣ ಕ್ರಿಯೆ ಏರುಪೇರು

* ನರಸಂಬಂಧಿ ಸಮಸ್ಯೆಗಳು ಉಲ್ಬಣ

* ಮೂತ್ರಕೋಶ, ಮೂತ್ರಪಿಂಡಗಳಿಗೆ ತೀವ್ರ ಹಾನಿ

* ದೀರ್ಘಕಾಲಿಕ ಸೇವನೆಯಿಂದ ಕ್ಯಾನ್ಸರ್‌

* ಹಣ್ಣು ಸೇವಿಸುವ ಮುನ್ನ ಕಡ್ಡಾಯವಾಗಿ ಅನುಸರಿಸಿ

* ಮಾರುಕಟ್ಟೆಯಿಂದ ತಂದ ಹಣ್ಣುಗಳನ್ನು ನೇರವಾಗಿ ಸೇವಿಸುವ ಮುನ್ನ ಜೋರಾಗಿ ನೀರು ಸುರಿಯುವ ನಲ್ಲಿಯ ಕೆಳಗೆ ಚೆನ್ನಾಗಿ ತೊಳೆಯಬೇಕು

* ಹಣ್ಣುಗಳ ಮೇಲಿನ ರಾಸಾಯನಿಕ ಕೊಚ್ಚಿ ಹೋಗುವಂತೆ ಎಚ್ಚರಿಕೆ ವಹಿಸಬೇಕು

*ಸ್ವಚ್ಛವಾದ ಬಟ್ಟೆಯಿಂದ ಚೆನ್ನಾಗಿ ಒರೆಸಿದ ನಂತರ ತೊಗಟೆಯನ್ನು ಸುಲಿದ ನಂತರ ಸೇವಿಸಿದರೆ ಸುರಕ್ಷಿತ

ಮನೆಯಲ್ಲಿ ಪರೀಕ್ಷಿಸುವುದು ಸುಲಭ

ಕೃತಕವಾಗಿ ಮಾಗಿದ ಮಾವು ಎಲ್ಲೆಡೆ ಹಳದಿ ಬಣ್ಣ ಹೊಂದಿರುತ್ತವೆ. ಸುವಾಸನೆ ಕೂಡ ಭಿನ್ನವಾಗಿರುತ್ತದೆ. ಹೊರಗೆ ಮೆತ್ತಗೆ ಮಾಗಿದಂತೆ ಕಂಡರೂ, ಒಳಗಿನ ತಿರುಳು ಗಟ್ಟಿಯಾಗಿರುತ್ತದೆ ಎಂದು ಸಲಹೆ ನೀಡುತ್ತಾರೆ ತೋಟಗಾರಿಕಾ ಇಲಾಖೆಯ ಹೆಚ್ಚುವರಿ ನಿರ್ದೇಶಕ (ಹಣ್ಣು ಮತ್ತು ಹೂವು) ಪರಶಿವಮೂರ್ತಿ.

ಕೃತಕವಾಗಿ ಮಾಗಿಸುವುದು ಹೇಗೆ?

ಪ್ರತಿ ಸಾರಿ ಮಾವಿನ ಹಣ್ಣುಗಳ ಋತು ಆರಂಭವಾಯಿತೆಂದರೆ ಸಾಕು ಕೃತಕವಾಗಿ ಹಣ್ಣುಗಳನ್ನು ಮಾಗಿಸುವ ಮಾತುಗಳು ಕೇಳಿ ಬರುತ್ತವೆ.

ಹಣ್ಣುಗಳನ್ನು ನೈಸರ್ಗಿಕವಾಗಿ ಮಾಗಿಸಲು ಸಮಯ ಹಿಡಿಯುತ್ತದೆ. ಸಾಮಾನ್ಯವಾಗಿ ಕೋಣೆಯಲ್ಲಿ ಹುಲ್ಲು ಹಾಕಿ ಹಣ್ಣುಗಳನ್ನು ಮಾಗಿಸಲಾಗುತ್ತದೆ. ಆದರೆ, ಕೃತಕವಾಗಿ ಹಣ್ಣು ಮಾಗಿಸಲು ಹೆಚ್ಚಿನ ಸಮಯ ಬೇಕಾಗುವುದಿಲ್ಲ.

ಮಾರುಕಟ್ಟೆಯಲ್ಲಿ ಅಗ್ಗವಾಗಿದೊರೆಯುವ ಅತ್ಯಂತ ಅಪಾಯಕಾರಿ ರಾಸಾಯನಿಕಗಳಾದ ಕ್ಯಾಲ್ಸಿಯಂ ಕಾರ್ಬೈಡ್‌, ಅರ್ಸೆನಿಕ್‌, ಫಾಸ್ಪರಸ್‌ಗಳನ್ನು ಹಣ್ಣುಗಳನ್ನು ಕೃತಕವಾಗಿ ಮಾಗಿಸಲು ಬಳಸಲಾಗುತ್ತದೆ. ಅತ್ಯಂತ ತ್ವರಿತವಾಗಿ ಹಣ್ಣುಗಳು ಮಾಗಿದಂತೆ ಕಾಣುತ್ತವೆ.

ಅವಧಿಗೂ ಮುನ್ನವೇ ಮಾವಿನ ಕಾಯಿಗಳನ್ನು ಗಿಡದಿಂದ ಕಿತ್ತು ಹಣ್ಣುಗಳ ರಾಶಿಗಳ ಮಧ್ಯೆಕ್ಯಾಲ್ಸಿಯಂ ಕಾರ್ಬೈಡ್‌ ಪೊಟ್ಟಣಗಳನ್ನು ಇಡಲಾಗುತ್ತದೆ.

ಏನಿದು ಕ್ಯಾಲ್ಸಿಯಂ ಕಾರ್ಬೈಡ್‌?

ಕೃತಕವಾಗಿ ಹಣ್ಣುಗಳನ್ನು ಮಾಗಿಸಲು ಬಳಸುವಕ್ಯಾಲ್ಸಿಯಂ ಕಾರ್ಬೈಡ್‌ನಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ ಅರ್ಸೆನಿಕ್‌ ರಾಸಾಯನಿಕ ಅಂಶವಿರುತ್ತದೆ.

ಆಹಾರ ಕಲಬೆರೆಕೆ ನಿಯಂತ್ರಣ ಕಾಯ್ದೆ (ಪಿಎಫ್‌ಎ)–1954 ಅನ್ವಯಕ್ಯಾಲ್ಸಿಯಂ ಕಾರ್ಬೈಡ್‌ ಬಳಕೆಯನ್ನು ಭಾರತದಲ್ಲಿ ನಿಷೇಧಿಸಲಾಗಿದೆ.

ಈ ಕಾಯ್ದೆಯಅನ್ವಯ ಯಾವುದೇ ಹಣ್ಣುಗಳನ್ನು ಕೃತಕವಾಗಿ ಮಾಗಿಸಲು ಕ್ಯಾಲ್ಸಿಯಂ ಕಾರ್ಬೈಡ್‌ ಬಳಸುವಂತಿಲ್ಲ. ಮಾರುಕಟ್ಟೆಯಲ್ಲಿ ಅತ್ಯಂತ ಅಗ್ಗ ಮತ್ತು ಸುಲಭವಾಗಿ ದೊರೆಯುವುದರಿಂದ ವರ್ತಕರು ಈ ರಾಸಾಯನಿಕವನ್ನು ಹೆಚ್ಚಾಗಿ ಬಳಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT