ಮಂಗಳವಾರ, ಆಗಸ್ಟ್ 16, 2022
29 °C
‘ಪೊಲೀಸ್ ಕಮಿಷನರ್‌’ಗಳಾದ ಐವರು ಪುಟಾಣಿಗಳು * ವಾಕಿಟಾಕಿ, ಪಿಸ್ತೂಲ್ ಹಿಡಿದು ಖಡಕ್‌ ಲುಕ್

‘ಕುಡುಕರಿಗೆ ಜೈಲು, ಕಳ್ಳರಿಗೆ ಶೂಟೌಟ್‌...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪೊಲೀಸ್ ಸಮವಸ್ತ್ರ ಧರಿಸಿ, ಸೊಂಟದಲ್ಲಿ ಪಿಸ್ತೂಲ್‌ ಇಟ್ಟುಕೊಂಡು ಕೈಯಲ್ಲಿ ವಾಕಿಟಾಕಿ ಹಿಡಿದು ಖಡಕ್ ಲುಕ್‌ನಲ್ಲಿ ಆ ಐವರು ಜೀಪಿನಿಂದ ಇಳಿಯುತ್ತಿದ್ದಂತೆ, ಅಧಿಕಾರಿಗಳು ಹಾಗೂ ಸಿಬ್ಬಂದಿ ಸೆಲ್ಯೂಟ್ ಮಾಡಿದರು. ಪೊಲೀಸ್ ಬ್ಯಾಂಡ್‌ ಹಾಗೂ ಸಶಸ್ತ್ರ ಪಡೆ ಸಿಬ್ಬಂದಿ, ಗೌರವ ವಂದನೆಯನ್ನೂ ಸಲ್ಲಿಸಿದರು.

ಸ್ವತಃ ಕಮಿಷನರ್‌ ಭಾಸ್ಕರ್‌ ರಾವ್ ಅವರೇ ಸ್ಥಳಕ್ಕೆ ದೌಡಾಯಿಸಿ, ‍‘ಕಮಿಷನರ್‌’ಗಳಾಗಿ ಅಧಿಕಾರ ವಹಿಸಿಕೊಳ್ಳಲು ಬಂದವರಿಗೆ ಹೂಗುಚ್ಛ ನೀಡಿ ಬರಮಾಡಿಕೊಂಡರು.

ಈ ದೃಶ್ಯ ಕಂಡುಬಂದಿದ್ದು ನಗರದ ಇನ್ಫೆಂಟ್ರಿ ರಸ್ತೆಯಲ್ಲಿರುವ ಪೊಲೀಸ್ ಕಮಿಷನರ್ ಕಚೇರಿಯಲ್ಲಿ. ಈ ಐವರು ನಿಜ ಪೊಲೀಸ್‌ ಕಮಿಷನರ್‌ಗಳಲ್ಲ!

ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಐವರು ಮಕ್ಕಳ ಬಯಕೆ ಈಡೇರಿಸಲು ಅವರಿಗೂ ಸುಮಾರು ಅರ್ಧದಿನ ‘ನಗರ ಪೊಲೀಸ್ ಕಮಿಷನರ್’ಗಳಂತೆ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲಾಯಿತು. ಇನ್ನು ಕೆಲವೇ ದಿನಗಳಲ್ಲಿ ತಮ್ಮಿಂದ ದೂರವಾಗುವ ಮಕ್ಕಳು, ಕಮಿಷನರ್‌ ಆದ ಕ್ಷಣವನ್ನು ಕಂಡು ಪೋಷಕರು ಭಾವುಕರಾದರು.

ಕಮಿಷನರ್ ಕುರ್ಚಿಯಲ್ಲಿ ಆಸೀನ: ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳು, ಪೊಲೀಸ್ ಕಮಿಷನರ್ ಆಗಬೇಕೆಂಬ ತಮ್ಮ ಬಯಕೆಯನ್ನು ‘ಮೇಕ್ ಎ ವಿಷ್‌’ ಸರ್ಕಾರೇತರ ಸಂಸ್ಥೆಯ ಪ್ರತಿನಿಧಿ ಬಳಿ ಹೇಳಿಕೊಂಡಿದ್ದರು. ಅದನ್ನು ತಿಳಿದ ಕಮಿಷನರ್ ಭಾಸ್ಕರ್ ರಾವ್, ಮಕ್ಕಳ ಆಸೆ ಈಡೇರಿಸಲು ಸಹಕರಿಸಿದರು.

ಬೆಳಿಗ್ಗೆ 10.45ಕ್ಕೆ ಕಚೇರಿಗೆ ಬಂದ ಐವರು ಪುಟಾಣಿಗಳು, ಗೌರವ ವಂದನೆ ಸ್ವೀಕರಿಸಿ ಪೊಲೀಸ್‌ ಗತ್ತಿನಲ್ಲೇ ಕಮಿಷನರ್ ಕೊಠಡಿಗೆ ಹೋದರು. ಭಾಸ್ಕರ್ ರಾವ್, ತಮ್ಮ ಕುರ್ಚಿಯಲ್ಲಿ ಮಕ್ಕಳನ್ನು ಕೂರಿಸಿ ಅಧಿಕಾರ ಚಲಾಯಿಸುವ ಬಗ್ಗೆ ಮಾರ್ಗದರ್ಶನ ಮಾಡಿದರು. ಖುಷಿಗೊಂಡ ಮಕ್ಕಳು ಮುಗುಳ್ನಗುತ್ತಲೇ ಫೋಟೊಗೆ ಫೋಸ್ ನೀಡಿದರು. ತಮ್ಮ ಅಧೀನದ ಅಧಿಕಾರಿಗಳಿಗೆ ಕಮಿಷನರ್ ಹೇಗೆ ಆದೇಶ ನೀಡುತ್ತಾರೆ ಎಂಬುದನ್ನು ತಿಳಿದುಕೊಂಡರು.

ಇಡೀ ಕಚೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ, ಒಬ್ಬೊಬ್ಬರಾಗಿಯೇ ಬಂದು ನೂತನ ಕಮಿಷನರ್‌ ಅವರಿಗೆ ಸೆಲ್ಯೂಟ್ ಮಾಡಿ ಅಭಿನಂದನೆ ಸಲ್ಲಿಸಿದರು. ಮಕ್ಕಳು ಸಹ ಶಿಸ್ತುಬದ್ಧವಾಗಿಯೇ ಪ್ರತಿ ಸೆಲ್ಯೂಟ್ ಸಹ ಮಾಡಿದರು. ನಿಯಂತ್ರಣ ಕೊಠಡಿ, ಆಡಳಿತ ಕಚೇರಿಗೆ ತೆರಳಿ ಅಲ್ಲಿಯ ಕಾರ್ಯವೈಖರಿ ಬಗ್ಗೆ ಮಾಹಿತಿ ಪಡೆದರು. ಶ್ವಾನದಳದ
ಕಾರ್ಯನಿರ್ವಹಣೆಯ ಬಗ್ಗೆಯೂ ಮಾಹಿತಿ ಪಡೆದರು.

ಕುಡುಕರ ಕಾಟ ಹೆಚ್ಚು: ಕಮಿಷನರ್ ದಿರಿಸಿನಲ್ಲಿದ್ದ ಬಾಲಕ ಮಂಡ್ಯದ ಸೈಯದ್ ಇಮಾದ್, ‘ನಮ್ಮೂರಿನಲ್ಲಿ ಹಾಗೂ ಟಿ.ವಿಯಲ್ಲಿ ಪೊಲೀಸರನ್ನು ನೋಡಿದ್ದೇನೆ. ಅವರಂತೆಯೇ ಆಗಿ, ನಮ್ಮ ಮನೆ ಬಳಿ ಜಗಳ ಮಾಡುವ ಕುಡುಕರನ್ನು ಜೈಲಿಗಟ್ಟಬೇಕು ಎಂಬ ಆಸೆ ಇದೆ’ ಎಂದು ಹೇಳಿದ.

‘ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು. ಎಲ್ಲರೂ ಒಳ್ಳೆಯ ಪ್ರಜೆಗಳಾಗಬೇಕು. ಯಾರಾದರೂ ಕಳವು ಮಾಡಿದರೆ, ಅವರ ಕಾಲಿಗೆ ಶೂಟ್ ಮಾಡುತ್ತೇನೆ’ ಎಂದು ಆತ ಹೇಳಿದಾಗ, ಪಕ್ಕದಲ್ಲಿದ್ದ ತಾಯಿ ತನ್ಶಿಯಾ ಬಾನು ಅವರಿಗೆ ಕಣ್ಣೀರು ತಡೆಯಲಾಗಲಿಲ್ಲ.

ಇನ್ನೊಬ್ಬ ಬಾಲಕ ರುತನ್ ಕುಮಾರ್, ‘ಚೆನ್ನಾಗಿ ಓದಿ ಪೊಲೀಸ್ ಆಗುತ್ತೇನೆಂದು ಅಕ್ಕನಿಗೆ ಯಾವಾಗಲೂ ಹೇಳುತ್ತಿರುತ್ತೇನೆ. ಇಂದು ನಾನು ಕಮಿಷನರ್ ಆಗಿದ್ದು, ಮನೆಗೆ ಹೋದ ಕೂಡಲೇ ನನಗೆ ಸೆಲ್ಯೂಟ್ ಮಾಡುವಂತೆ ಅಕ್ಕನಿಗೆ ಹೇಳುತ್ತೇನೆ’ ಎಂದು ಮುಗುಳ್ನಕ್ಕ.

‘ಮಗನಿಗೆ ಕಿಡ್ನಿ ಸಮಸ್ಯೆ’

ಮಗನಿಗೆ ಒಂದೂವರೆ ವರ್ಷದಿಂದ ಕಿಡ್ನಿ ಸಮಸ್ಯೆ ಇದ್ದು, ಬದುಕುವುದು ಕಷ್ಟವೆಂದು ವೈದ್ಯರು ಹೇಳುತ್ತಿದ್ದಾರೆ. ಮನೆಯಲ್ಲೂ ಆತ ಪೊಲೀಸ್ ರೀತಿಯಲ್ಲಿ ನಟನೆ ಮಾಡುತ್ತಿದ್ದ. ಕಮಿಷನರ್ ಆದ ಆತನನ್ನು ನೋಡಿ ಖುಷಿಯಾಗುತ್ತಿದೆ.
-ಕವಿತಾ, ರುತನ್ ಕುಮಾರ್ ತಾಯಿ

**
‘ಮಗನ ನಗು ಕಂಡು ಸಂತಸವಾಯಿತು’
ಶಾಲೆಯಲ್ಲಿ ಜಾಣನಾಗಿರುವ ನನ್ನ ಮಗ ಎಷ್ಟು ದಿನ ನಮ್ಮೊಂದಿಗೆ ಇರುತ್ತಾನೋ ಗೊತ್ತಿಲ್ಲ. ಇದ್ದಷ್ಟು ದಿನ ಆತನನ್ನು ಖುಷಿಯಾಗಿಡಲು ನಾನು ಹಾಗೂ ಪೇಂಟರ್ ಆಗಿರುವ ಪತಿ ಪ್ರಯತ್ನಿಸುತ್ತಿದ್ದೇವೆ. ಕಮಿಷನರ್ ಆದ ಆತನ ಮುಖದಲ್ಲಿ ನಗು ನೋಡಿ ನಮಗೂ ಸಂತೋಷವಾಯಿತು.
-ತನ್ಶಿಯಾಬಾನು, ಸೈಯದ್ ಇಮಾದ್ ತಾಯಿ

**
ಮಕ್ಕಳ ಆಸೆ ಈಡೇರಿಸಲು ಈ ಕ್ರಮ
ಅನಾರೋಗ್ಯದಿಂದ ಬಳಲುತ್ತಿರುವ ಹಲವು ಮಕ್ಕಳು ಪೊಲೀಸ್, ವೈದ್ಯ, ಎಂಜಿನಿಯರ್ ಆಗಬೇಕೆಂಬ ಆಸೆ ಇಟ್ಟುಕೊಂಡಿದ್ದಾರೆ. ಸದ್ಯ ಕೆಲ ಮಕ್ಕಳ ಆಸೆ ಈಡೇರಿದೆ. ಉಳಿದ ಮಕ್ಕಳ ಆಸೆ ಈಡೇರಿಸಲು ಪ್ರಯತ್ನಿಸುತ್ತಿದ್ದೇವೆ.
-ಅರುಣ್‌ಕುಮಾರ್, ಸಹಾಯಕ ಕಾರ್ಯಕ್ರಮ ಸಂಯೋಜಕ, ‘ಮೇಕ್ ಎ ವಿಷ್’

**

ಕಮಿಷನರ್ ಆಗುವ ಅವಕಾಶ ನೀಡಿದ ನಮ್ಮ ಕೆಲಸ ಅಲ್ಪ ಮಾತ್ರ. ಪೋಷಕರಿಗೆ ವಂದನೆ ಹೇಳಲು ಇಷ್ಟಪಡುತ್ತೇನೆ. ಇವರಿಂದ ನಾವು ಮಾನವೀಯ ಗುಣ ಕಲಿಯಬಹುದು.
-ಭಾಸ್ಕರ್ ರಾವ್,ನಗರ ಪೊಲೀಸ್ ಕಮಿಷನರ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು