ಶುಕ್ರವಾರ, ಫೆಬ್ರವರಿ 3, 2023
18 °C
ಕರ್ನಾಟಕ ಚಿತ್ರಕಲಾ ಪರಿಷತ್ತಿನಿಂದ ಇದೇ ಭಾನುವಾರ ಆಯೋಜನೆ

ಚಿತ್ರಸಂತೆ: ಕಲಾವಿದರ ಪ್ರತಿಭೆಗೆ ವೇದಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕಲಾವಿದರ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸುವ ಹಾಗೂ ಅವರು ರಚಿಸಿದ ಕಲಾಕೃತಿಗಳ ಮಾರಾಟಕ್ಕೆ ಅವಕಾಶ ಒದಗಿಸುವ ‘ಚಿತ್ರಸಂತೆ’ಯನ್ನು ಕರ್ನಾಟಕ ಚಿತ್ರಕಲಾ ಪರಿಷತ್ತು ಇದೇ ಭಾನುವಾರ (ಜ.8) ಕುಮಾರಕೃಪಾ ರಸ್ತೆಯಲ್ಲಿ ಹಮ್ಮಿಕೊಂಡಿದೆ.

ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಿಷತ್ತಿನ ಅಧ್ಯಕ್ಷ ಬಿ.ಎಲ್. ಶಂಕರ್, ‘20ನೇ ಚಿತ್ರಸಂತೆಯನ್ನು ಬೆಳಿಗ್ಗೆ 10.30ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಕಲಾ ಪ್ರದರ್ಶನಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಚಾಲನೆ ನೀಡಲಿದ್ದಾರೆ. ಪರಿಷತ್ತಿನ ಕಲಾ ಗ್ಯಾಲರಿಗಳಲ್ಲಿ ಮೈಸೂರು ಸಾಂಪ್ರದಾಯಿಕ ಶೈಲಿಯ ಕಲಾಕೃತಿಗಳು, ತೊಗಲು ಬೊಂಬೆ ಕಲಾಕೃತಿಗಳು ಹಾಗೂ ಪ್ರಶಸ್ತಿಗೆ ಭಾಜನರಾದ ಕಲಾವಿದರ ಕಲಾಕೃತಿಗಳು ಪ್ರದರ್ಶನ ಕಾಣಲಿವೆ. ಚಿತ್ರಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಚಿತ್ರಸಂತೆ ನಡೆಯುವ ಸ್ಥಳದಲ್ಲಿ ದಿನವಿಡೀ ಕಲಾ ಪ್ರದರ್ಶನ ನೀಡಲಿದ್ದಾರೆ’ ಎಂದು ತಿಳಿಸಿದರು. 

‘ದೇಶದ ವಿವಿಧ ಭಾಗಗಳಿಂದ 1,500 ಕಲಾವಿದರು ಚಿತ್ರಸಂತೆಯಲ್ಲಿ ಭಾಗವಹಿಸಿ, ಕಲಾಕೃತಿಗಳನ್ನು ಪ್ರದರ್ಶಿಸಲಿದ್ದಾರೆ. ಕರ್ನಾಟಕದ ಜತೆಗೆ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರ, ಪಂಜಾಬ್, ಪಶ್ಚಿಮ ಬಂಗಾಳ, ಒಡಿಶಾ ಸೇರಿ ವಿವಿಧ ರಾಜ್ಯಗಳ ಕಲಾವಿದರು ಪಾಲ್ಗೊಳ್ಳುತ್ತಿದ್ದಾರೆ’ ಎಂದು ಹೇಳಿದರು.‌

ನೇರ ಖರೀದಿಗೆ ಅವಕಾಶ: ‘ಹಿರಿಯ ಕಲಾವಿದರು ಹಾಗೂ ಅಂಗವಿಕಲರಿಗೆ ಪರಿಷತ್ತಿನ ಆವರಣದಲ್ಲಿಯೇ ಕಲಾಕೃತಿಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಈ ಚಿತ್ರಸಂತೆಯಲ್ಲಿ ₹ 100 ರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಕಲಾಕೃತಿಗಳು ಇರಲಿವೆ. ಕಲಾವಿದರಿಂದ ನೇರವಾಗಿ ಕಲಾಕೃತಿಗಳನ್ನು ಖರೀದಿಸಬಹುದು’ ಎಂದು ಬಿ.ಎಲ್. ಶಂಕರ್ ವಿವರಿಸಿದರು. 

‘ಹೊರಗಿನಿಂದ ಬರುವ 400ಕ್ಕೂ ಅಧಿಕ ಕಲಾವಿದರಿಗೆ ಉಚಿತ ವಸತಿ ವ್ಯವಸ್ಥೆ ಮಾಡಲಾಗಿದೆ. ಆವರಣದ ಹೊರಗೆ ಕೆನರಾ ಬ್ಯಾಂಕ್ ಹಾಗೂ ಎಸ್‌ಬಿಐ ಬ್ಯಾಂಕ್‌ನ ಸಂಚಾರಿ ಎಟಿಎಂ ಮತ್ತು ಸ್ವೈಪಿಂಗ್ ಯಂತ್ರಗಳ ವ್ಯವಸ್ಥೆ ಮಾಡಲಾಗುವುದು’ ಎಂದು ಹೇಳಿದರು.

5 ಲಕ್ಷ ಜನ ಭೇಟಿ ನಿರೀಕ್ಷೆ

‘19ನೇ ಚಿತ್ರಸಂತೆಗೆ 4 ಲಕ್ಷಕ್ಕೂ ಅಧಿಕ ಜನರು ಭೇಟಿ ನೀಡಿದ್ದರು. ₹ 3 ಕೋಟಿಗೂ ಅಧಿಕ ಮೊತ್ತದ ಕಲಾಕೃತಿಗಳು ಮಾರಾಟವಾಗಿದ್ದವು. ಈ ಬಾರಿ 5 ಲಕ್ಷ ಜನ ಭೇಟಿ ನೀಡುವ ನಿರೀಕ್ಷೆ ಇದೆ. ಚಿತ್ರಸಂತೆಯಲ್ಲಿ ಸಾಮಾನ್ಯವಾಗಿ ಮೈಸೂರು ಸಾಂಪ್ರದಾಯಿಕ ಶೈಲಿ, ರಾಜಸ್ಥಾನಿ ಶೈಲಿ, ಮಧುಬನಿಯ ಶೈಲಿ, ತೈಲ ಮತ್ತು ಜಲವರ್ಣದ ಕಲಾಕೃತಿಗಳು ಲಭ್ಯವಿರುತ್ತವೆ. ಇವಲ್ಲದೆ, ಅಕ್ರಲಿಕ್, ಕೊಲಾಜ್, ಲಿಥೋಗ್ರಾಫ್ ಮೊದಲಾದ ಪ್ರಕಾರಗಳ ಕಲಾಕೃತಿಗಳು ದೊರೆಯುತ್ತವೆ’ ಎಂದು ಬಿ.ಎಲ್. ಶಂಕರ್ ಹೇಳಿದರು.

‘ವ್ಯಂಗ್ಯಚಿತ್ರಗಳ ಪ್ರದರ್ಶನಕ್ಕೂ ಅವಕಾಶ ಇರುತ್ತದೆ. ಕುಂಚ ಹಾಗೂ ಪೆನ್ಸಿಲ್‌ಗಳಿಂದ ಕಲಾರಸಿಕರ ಭಾವಚಿತ್ರಗಳನ್ನು ಸ್ಥಳದಲ್ಲೇ ರಚಿಸಿ ಕೊಡುವ ಕಲಾವಿದರು ಇರುತ್ತಾರೆ’ ಎಂದು ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು