ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು ಸುತ್ತ ವೃತ್ತರೈಲು ಸಂಪರ್ಕಜಾಲ: ರೈಲ್ವೆ ಸಚಿವ ಅಶ್ವಿನಿ ವೈಷ್ಣವ್

Published 27 ನವೆಂಬರ್ 2023, 21:04 IST
Last Updated 27 ನವೆಂಬರ್ 2023, 21:04 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಸುತ್ತಮುತ್ತಲಿನ ಪ್ರಮುಖ ಪಟ್ಟಣಗಳನ್ನು ಸಂಪರ್ಕಿಸುವ ದೇಶದ ಅತಿದೊಡ್ಡ ವೃತ್ತರೈಲು ಸಂಪರ್ಕಜಾಲವನ್ನು (ಸರ್ಕ್ಯುಲರ್‌ ರೈಲ್ವೆ) ನಿರ್ಮಿಸುವ ಯೋಜನೆ ಇದ್ದು, ಅದರ ಕಾರ್ಯಸಾಧ್ಯತೆಯ ಬಗ್ಗೆ ಅಧ್ಯಯನ ನಡೆಸಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರ ಚಿಂತನೆಗಳು ಮುಂದಿನ 40–50 ವರ್ಷಗಳ ಅಭಿವೃದ್ಧಿಯ ಬಗ್ಗೆಯೇ ಇರುತ್ತವೆ. ವೃತ್ತರೈಲು ಯೋಜನೆ ಮುಂದಿನ 20–30 ವರ್ಷಗಳಲ್ಲಿ ಉಂಟಾಗಬಹುದಾದ ವಾಹನ ದಟ್ಟಣೆ, ಜನದಟ್ಟಣೆಯನ್ನು ತಪ್ಪಿಸುವುದು ಆಗಿದೆ’ ಎಂದು ತಿಳಿಸಿದರು.

ಸಂಪರ್ಕ ಜಾಲ: ನಿಡವಂದ–ದೊಡ್ಡಬಳ್ಳಾಪುರ–ದೇವನಹಳ್ಳಿ–ಮಾಲೂರು–ಹೀಲಲಿಗೆ–ಸೋಲೂರು–ನಿಡವಂದ ನಿಲ್ದಾಣಗಳನ್ನು ಸಂಪರ್ಕಿಸುವ ವೃತ್ತರೈಲು ಸಂಪರ್ಕ ಜಾಲ 287 ಕಿ.ಮೀ. ಇರಲಿದೆ. ಈ ಯೋಜನೆಯ ಸಾಧಕ-ಬಾಧಕಗಳನ್ನು ತಿಳಿಯಲು ₹ 7 ಕೋಟಿ ವೆಚ್ಚದಲ್ಲಿ ಸರ್ವೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ನೈರುತ್ಯ ರೈಲ್ವೆಯ ನಿರ್ಮಾಣ ಸಂಸ್ಥೆಗಳಿಂದ ಅಧ್ಯಯನ ನಡೆಯಲಿದ್ದು, ಶೀಘ್ರದಲ್ಲಿ ಟೆಂಡರ್‌ ಕರೆಯಲಾಗುವುದು. 2024ರ ಸೆಪ್ಟೆಂಬರ್‌ ಒಳಗೆ ಸರ್ವೆ ಪೂರ್ಣಗೊಳಿಸಿ, 2025ರಲ್ಲಿ ವಿವರವಾದ ಯೋಜನಾ ವರದಿ (ಡಿಪಿಆರ್‌) ಸಿದ್ದಪಡಿಸಲಾಗುವುದು. ವೃತ್ತರೈಲು ಯೋಜನೆ ಸಿದ್ಧವಾದ ಮೇಲೆ ಪ್ರತಿ ವರ್ಷ 80 ರಿಂದ 90 ಕಿ.ಮೀ. ಕಾಮಗಾರಿ ನಡೆಯಬಹುದು. ವಿದ್ಯುದ್ದೀಕರಣ ಹೊಂದಿರುವ ಕನಿಷ್ಠ ಎರಡು ಮಾರ್ಗಗಳು ಇರಲಿವೆ ಎಂದರು.

ಯಶವಂತಪುರ ಮತ್ತು ಕೆಎಸ್‌ಆರ್‌ ನಿಲ್ದಾಣಗಳ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗುತ್ತಿವೆ. ಹೆಚ್ಚುವರಿಯಾಗಿ ನಾಲ್ಕು ಪ್ಲಾಟ್‌ಫಾರ್ಮ್‌ಗಳನ್ನು ನಿರ್ಮಿಸಲಾಗುವುದು ಎಂದು ವಿವರಿಸಿದರು.

ಸಾರಿಗೆಯಲ್ಲಿ ಶೇ 80ರಷ್ಟು ಆದಾಯ ರೈಲ್ವೆಯಿಂದಲೇ ಬರುತ್ತಿತ್ತು. ಹಿಂದಿನ ಕಾಂಗ್ರೆಸ್‌ ಸರ್ಕಾರದ ತಪ್ಪು ನೀತಿಗಳಿಂದಾಗಿ ಈ ಪ್ರಮಾಣ ಶೇ 27ಕ್ಕೆ ಕುಸಿದಿತ್ತು. ನರೇಂದ್ರ ಮೋದಿ ಅವರು ರೈಲ್ವೆ ಬಜೆಟ್‌ ಅನ್ನು ಮುಖ್ಯ ಬಜೆಟ್‌ನೊಂದಿಗೆ ವಿಲೀನ ಮಾಡುವುದೂ ಸೇರಿದಂತೆ ಅನೇಕ ದಿಟ್ಟ ಕ್ರಮಗಳನ್ನು ಕೈಗೊಳ್ಳುವ ಮೂಲಕ ಮತ್ತೆ ಆದಾಯ ಹೆಚ್ಚಾಗುವಂತೆ ಮಾಡಿದ್ದಾರೆ. ಅಲ್ಲಿವರೆಗೆ ಬಜೆಟ್‌ನಲ್ಲಿ ₹ 35 ಸಾವಿರ ಕೋಟಿ ಅನುದಾನ ಮಾತ್ರ ರೈಲ್ವೆಗೆ ಸಿಗುತ್ತಿತ್ತು. ಈ ಕ್ರಮದಿಂದ ₹ 2.40 ಲಕ್ಷ ಕೋಟಿಗೆ ಏರಿದೆ ಎಂದರು.

ಹಿಂದೆ ರೈಲು ನಿಲ್ದಾಣಗಳ ಅಭಿವೃದ್ಧಿ ಅಂದರೆ ಬಣ್ಣ ಬಳಿಯುವುದು ಆಗಿತ್ತು. ಈಗ ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ವಿಶ್ವದರ್ಜೆಯ ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದೆ. ದೇಶದಲ್ಲಿ 1309 ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಲಾಗಿದ್ದು, ಕರ್ನಾಟಕದ 57 ನಿಲ್ದಾಣಗಳು ಅದರಲ್ಲಿ ಸೇರಿವೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT