ಶುಕ್ರವಾರ, ಏಪ್ರಿಲ್ 23, 2021
31 °C
ನಗರಾಭಿವೃದ್ಧಿ ಇಲಾಖೆಯಿಂದ ಹೊಸ ಜಾಹೀರಾತು ಬೈಲಾ ಕರಡು

ಸಾರ್ವಜನಿಕ ಸ್ಥಳದಲ್ಲಿ ಮತ್ತೆ ಜಾಹೀರಾತು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಸಾರ್ವಜನಿಕ ಪ್ರದೇಶಗಳನ್ನು ಜಾಹೀರಾತು ಮುಕ್ತಗೊಳಿಸುವ ಪ್ರಯತ್ನ ಆರಂಭವಾಗಿ ಆಗಸ್ಟ್‌ 1ಕ್ಕೆ ವರ್ಷ ತುಂಬಲಿದೆ. ಆದರೆ, ವರ್ಷ ಕಳೆಯುವ ಮುನ್ನವೇ ಈ ಪ್ರಯತ್ನಕ್ಕೆ ಹಿನ್ನಡೆ ಉಂಟಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ವಾಣಿಜ್ಯ ಉದ್ದೇಶದ ಹೋರ್ಡಿಂಗ್‌ಗಳನ್ನು ಸಂಪೂರ್ಣ ನಿಷೇಧಿಸುವ ಕುರಿತು ಪಾಲಿಕೆ ಕೈಗೊಂಡಿರುವ ನಿರ್ಣಯವನ್ನು ಬದಿಗೊತ್ತಿರುವ ನಗರಾಭಿವೃದ್ಧಿ ಇಲಾಖೆ, ‘ಬಿಬಿಎಂಪಿ ಜಾಹೀರಾತು ನಿಯಮಗಳು 2019’ರ ಕರಡನ್ನು ಸಿದ್ಧಪಡಿಸಿದೆ. ಅದರ ಪ್ರಕಾರ,  ನಗರದ  ನೆಲದಲ್ಲಿ, ಚಾವಣಿಗಳ ಮೇಲೆ ಖಾಸಗಿ ಹೋರ್ಡಿಂಗ್‌ಗಳಿಗೆ ಹಾಗೂ ಬಿಲ್‌ಬೋರ್ಡ್‌ಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ. 

ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಿದ್ದ ಅನೇಕ ರೀತಿಯ ಜಾಹೀರಾತುಗಳನ್ನು ನಿಷೇಧಿಸಲು ಪಾಲಿಕೆ ನಿರ್ಣಯ ಕೈಗೊಂಡಿತ್ತು. ಇವುಗಳ ನಿಷೇಧದ ಕುರಿತು ನಗರಾಭಿವೃದ್ಧಿ ಇಲಾಖೆ ಪ್ರಕಟಿಸಿರುವ ಕರಡಿನಲ್ಲಿ ಉಲ್ಲೇಖವೇ ಇಲ್ಲ.

ಹಿನ್ನೆಲೆ ಏನು?: ನಗರದಲ್ಲಿ ಫ್ಲೆಕ್ಸ್‌ ಹಾಗೂ ಅನಧಿಕೃತ ಜಾಹೀರಾತು ಹಾವಳಿ ಕುರಿತಂತೆ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್‌ 2018ರ ಆಗಸ್ಟ್‌ 1ರಂದು ವಿಚಾರಣೆಗೆ ಎತ್ತಿಕೊಂಡಿತ್ತು. ನಗರದಲ್ಲಿರುವ ಎಲ್ಲ ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌, ಬಂಟಿಂಗ್ಸ್‌ ಗಳನ್ನು ಅದೇ ದಿನ ಮಧ್ಯಾಹ್ನದೊಳಗೆ ತೆರವುಗೊಳಿಸುವಂತೆ ಹೈಕೋರ್ಟ್‌ನ ಅಂದಿನ ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಾಹೇಶ್ವರಿ ಅವರು ಪಾಲಿಕೆಗೆ ಸೂಚನೆ ನೀಡಿದ್ದರು. ಬಿಬಿಎಂಪಿ ಅಧಿಕಾರಿಗಳು ಸಮರೋಪಾದಿಯಲ್ಲಿ ಫ್ಲೆಕ್ಸ್‌ ತೆರವು ಕಾರ್ಯಾಚರಣೆ ನಡೆಸಿದ್ದರಿಂದ ಒಂದೇ ದಿನದಲ್ಲಿ ನಗರ ಫ್ಲೆಕ್ಸ್‌ ಮುಕ್ತವಾಗಿತ್ತು. ಆ ಬಳಿಕ ಎಲ್ಲ ರೀತಿಯ ಹೋರ್ಡಿಂಗ್‌ ತೆರವಿಗೂ ಹೈಕೋರ್ಟ್‌ ಆದೇಶ ಮಾಡಿತ್ತು.

ಹೈಕೋರ್ಟ್‌ ಸೂಚನೆ ಮೇರೆಗೆ ಪಾಲಿಕೆ ‘ಹೊರಾಂಗಣ ಸೈನೇಜ್‌ ಮತ್ತು ಸಾರ್ವಜನಿಕ ಸಂದೇಶ ನೀತಿ ಹಾಗೂ ಹೊರಾಂಗಣ ಜಾಹೀರಾತು ಮತ್ತು ಸಾರ್ವಜನಿಕ ಸಂದೇಶ ಬೈಲಾ -2018’ ರೂಪಿಸಿತ್ತು. ಪಾಲಿಕೆ ಕೌನ್ಸಿಲ್‌ ಸಭೆ ಆ.28ರಂದು ಅನುಮೋದನೆ ನೀಡಿತ್ತು. ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ಸೆ.11ರಂದು ಅನುಮೋದನೆ ನೀಡಿದ್ದರು.
ಸೆಪ್ಟೆಂಬರ್‌ 25ರಂದು ಬೈಲಾ ಕರಡನ್ನು ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿತ್ತು. ಇದಕ್ಕೆ ಆಕ್ಷೇಪಣೆಗಳು ಹಾಗೂ ಸಲಹೆ ಸೇರಿ 737 ಅರ್ಜಿಗಳು ಸಲ್ಲಿಕೆ ಆಗಿದ್ದವು. ಆ ಬಳಿಕ ಬಿಬಿಎಂಪಿ ಆಯುಕ್ತರು ಅಂತಿಮ ಅನುಮೋದನೆಗಾಗಿ ಬೈಲಾ ಕರಡನ್ನು ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಿದ್ದರು.

ನಗರಾಭಿವೃದ್ಧಿ ಇಲಾಖೆಯು ಈ ಬಗ್ಗೆ ಸಂಸದೀಯ ವ್ಯವಹಾರಗಳ ಇಲಾಖೆಯ ಸಲಹೆ ಕೇಳಿತ್ತು. ಬೈಲಾ ಕರಡು ದೋಷಪೂರಿತವಾಗಿದ್ದು, ಅದನ್ನು ಪರಿಷ್ಕರಿಸಿ ಮತ್ತೊಮ್ಮೆ ಸಾರ್ವಜನಿಕರಿಂದ ಆಕ್ಷೇಪಣೆ ಹಾಗೂ ಸಲಹೆ ಆಹ್ವಾನಿಸಬೇಕು ಎಂದು ಸಂಸದೀಯ ವ್ಯವಹಾರಗಳ ಇಲಾಖೆ ಸಲಹೆ ನೀಡಿತ್ತು. ಪಾಲಿಕೆ ಸಲ್ಲಿಸಿದ್ದ ಕರಡಿನಲ್ಲಿದ್ದ ಪ್ರಮುಖ ಅಂಶಗಳನ್ನೆಲ್ಲಾ ಕೈ ಬಿಟ್ಟಿರುವ ನಗರಾಭಿವೃದ್ಧಿ ಇಲಾಖೆ ಹೊಸತಾಗಿ ‘ಬಿಬಿಎಂಪಿ ಜಾಹೀರಾತು ನೀತಿ 2019’ರ ಕರಡನ್ನು ರೂ‍ಪಿಸಿದೆ.

ಈ ನಿಷೇಧಗಳಿಗೆ ಕೊಕ್‌ ?

* ಯಾವುದೇ ತರಹದ ವಾಣಿಜ್ಯ ಹೋರ್ಡಿಂಗ್

* ಚಾವಣಿಗಳ ಮೇಲಿನ ಸೈನೇಜ್‌ (ರೂಫ್‌ ಸೈನೇಜ್‌)

* ಸಾರ್ವಜನಿಕ ರಸ್ತೆಗಳ ಪಕ್ಕದ ಎಲೆಕ್ಟ್ರಾನಿಕ್ ಡಿಸ್‌ಪ್ಲೇ

* ಹೊರಾಂಗಣ ಜಾಹೀರಾತುಗಳಲ್ಲಿ ಧ್ವನಿ ಬಳಕೆ

* ಸರಣಿ ಸಂದೇಶ ನೀಡುವ ಜಾಹೀರಾತು

* ರಸ್ತೆಗೆ ಅಡ್ಡಲಾಗಿ ಅಳವಡಿಸುವ (ಗ್ಯಾಂಟ್ರಿ) ಜಾಹೀರಾತು 

* ಬಲೂನ್‌ ಅಥವಾ ಗಾಳಿಯಲ್ಲಿ ಹಾರಾಡುವ ಪರಿಕರ

*  ಗೋಡೆಗಳಲ್ಲಿ ವಾಣಿಜ್ಯ ಉದ್ದೇಶದಿಂದ ಅಂಟಿಸುವ ಭಿತ್ತಿಪತ್ರಗಳು, ಪೇಂಟಿಂಗ್‌, ಸಂದೇಶ 

* ಮರಗಳಲ್ಲಿ, ವಿದ್ಯುತ್‌ ಕಂಬ, ಮಾರ್ಗಸೂಚಿ ಕಂಬ, ವಿದ್ಯುತ್‌ ಪರಿವರ್ತಕ, ದೂರವಾಣಿ ಗೋಪುರಗಳಲ್ಲಿನ ಜಾಹೀರಾತು

* ಸಂಚಾರಿ ಜಾಹೀರಾತು

* ವಾಹನಗಳಲ್ಲಿನ ಜಾಹೀರಾತು (ಸೇವೆ/ಉತ್ಪನ್ನ ಪ್ರಚುರ ಪಡಿಸುವಂತಹದ್ದು)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು