ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಾಯಕಾರಿ ಮರಗಳ ತೆರವು: ಮಾರ್ಗಸೂಚಿ ಪಾಲನೆ–ಬಿಬಿಎಂಪಿ

ಬಿಬಿಎಂಪಿ ಹೈಕೋರ್ಟ್‌ಗೆ ತಿಳಿಸಿದ
Published 12 ಡಿಸೆಂಬರ್ 2023, 20:00 IST
Last Updated 12 ಡಿಸೆಂಬರ್ 2023, 20:00 IST
ಅಕ್ಷರ ಗಾತ್ರ

ಬೆಂಗಳೂರು: ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಪ್ರಮಾಣಿತ ಕಾರ್ಯಾಚರಣೆ ವಿಧಾನದಡಿಯಲ್ಲಿ (ಎಸ್‌ಒಪಿ) ಮಾರ್ಗಸೂಚಿಗಳನ್ನು ರೂಪಿಸಲಾಗಿದ್ದು, ಅಧಿಕಾರಿಗಳು ಅವುಗಳನ್ನು ಪಾಲನೆ ಮಾಡುತ್ತಿದ್ದಾರೆ‘ ಎಂದು ಬಿಬಿಎಂಪಿ ಹೈಕೋರ್ಟ್‌ಗೆ ತಿಳಿಸಿದೆ.

‘ನಮ್ಮ ಮನೆಯ ಬಳಿ ಇರುವ ಮರ ಯಾವುದೇ ಸಮಯದಲ್ಲಾದರೂ ಬೀಳುವಂತಹ ಸ್ಥಿತಿಯಲ್ಲಿದೆ. ಆದರೂ, ಅಧಿಕಾರಿಗಳು ಅದನ್ನು ತೆರವುಗೊಳಿಸುತ್ತಿಲ್ಲ‘ ಎಂದು ಆಕ್ಷೇಪಿಸಿ ನಗರದ ಡಾ.ವಿ.ಎಲ್‌. ನಂದೀಶ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು, ‘ಎಲ್ಲಾ ವೃಕ್ಷ ಅಧಿಕಾರಿಗಳು ಮತ್ತು ಡಿಸಿಎಫ್‌ಗಳು ಈ ಮಾರ್ಗಸೂಚಿಯನ್ನು ಪಾಲನೆ ಮಾಡುತ್ತಿದ್ದಾರೆ. ಸ್ಥಳ ಪರಿಶೀಲನೆ ನಡೆಸಿ, ಮರವನ್ನು ತೆರವುಗೊಳಿಸಲಾಗಿದೆ. ತೆರವು ಕಾರ್ಯಾಚರಣೆಗೆ ತಗುಲಿದ್ದ ವೆಚ್ಚವನ್ನು ಮರ ಇದ್ದ ನಿವೇಶನದ ಮಾಲೀಕರಿಂದ ವಸೂಲು ಮಾಡಲಾಗಿದೆ‘ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಇದನ್ನು ದಾಖಲಿಸಿಕೊಂಡ ನ್ಯಾಯಪೀಠ ’ಈ ವ್ಯಾಜ್ಯದ ಮೂಲ ಕಾರಣ ಅಪಾಯಕಾರಿ ಮರ. ಈಗಾಗಲೇ ಪಾಲಿಕೆ ನ್ಯಾಯಾಲಯದ ಸೂಚನೆಯಂತೆ ಆ ಮರವನ್ನು ತೆರವುಗೊಳಿಸಿದೆ. ಆದ್ದರಿಂದ, ಅರ್ಜಿ ವಿಚಾರಣೆ ಮುಂದುವರಿಸುವ ಅಗತ್ಯವಿಲ್ಲ‘ ಎಂಬ ಅಭಿಪ್ರಾಯ ವ್ಯಕ್ತಪಡಿಸಿ ವಿಲೇವಾರಿ ಮಾಡಿತು.

ಅರ್ಜಿಯಲ್ಲಿ ಏನಿತ್ತು?

‘ನಮ್ಮ ನೆರೆ ಮನೆಯ ನಿವೇಶನದಲ್ಲಿ ಮರವೊಂದಿದೆ. ಅದು ಅಪಾಯಕಾರಿ ಸ್ಥಿತಿಯಲ್ಲಿದ್ದು, ಅದನ್ನು ತೆರವುಗೊಳಿಸಬೇಕಾಗಿದೆ. ಈ ಬಗ್ಗೆ ನಿವೇಶನದ ಮಾಲೀಕರಿಗೆ ಮನವಿ ಸಲ್ಲಿಸಿದ್ದರೂ ಏನೂ ಪ್ರಯೋಜನವಾಗಿಲ್ಲ. ಮರದಿಂದ ಜೀವ ಹಾನಿಯಾಗುವ ಸಾಧ್ಯತೆ ಇದೆ. ಹಾಗಾಗಿ, ಮರವನ್ನು ತೆರವುಗೊಳಿಸಲು ಅನುಮತಿ ನೀಡಬೇಕು. ಇಲ್ಲವೇ ಮರವನ್ನು ತೆರವುಗೊಳಿಸಲು ನೆರೆ ಮನೆಯವರಿಗೆ ನಿರ್ದೇಶಿಸಬೇಕು‘ ಎಂದು ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT