ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಮಳೆ ನಿಂತ ಮೇಲೆ | ರಾಜಕಾಲುವೆ ಒತ್ತುವರಿ ತೆರವು: ಸಿಎಂ ಸೂಚನೆ

ಮುಖ್ಯ ರಾಜಕಾಲುವೆ ಸಮಗ್ರ ಅಭಿವೃದ್ಧಿಗೆ ಕ್ರಿಯಾಯೋಜನೆ ಸಿದ್ಧಪಡಿಸಲು ಸಲಹೆ
Last Updated 23 ನವೆಂಬರ್ 2021, 20:48 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ರಾಜಕಾಲುವೆ ಒತ್ತುವರಿಗಳನ್ನು ತೆರವುಗೊಳಿಸಬೇಕು ಹಾಗೂ ಹೆಬ್ಬಾಳ ಕಣಿವೆಯ ಮಳೆ ನೀರು ಹರಿಸುವುದಕ್ಕೆ ಮುಖ್ಯ ರಾಜಕಾಲುವೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಕ್ರಿಯಾಯೋಜನೆ ರೂಪಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದರು.

ಭಾರಿ ಮಳೆಯಿಂದ ಪ್ರವಾಹ ಉಂಟಾಗಿರುವ ಯಲಹಂಕ, ಜಕ್ಕೂರು ಹಾಗೂ ಮಾನ್ಯತಾ ಟೆಕ್‌ಪಾರ್ಕ್‌ ಪ್ರದೇಶಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯಮಂತ್ರಿ, ‘ಶ್ರೀಮಂತರು ಮಾಡಿರುವ ರಾಜಕಾಲುವೆ ಹಾಗೂ ಅದರ ಮೀಸಲು ಪ್ರದೇಶಗಳ ಒತ್ತುವರಿಗಳನ್ನು ಮೊದಲ ಹಂತದಲ್ಲಿ ತೆರವುಗೊಳಿಸಲಾಗುತ್ತದೆ. ಬಡವರು ಒತ್ತುವರಿ ಮಾಡಿದ್ದರೆ, ಅವರಿಗೆ ಪರ್ಯಾಯ ನಿವೇಶನಗಳನ್ನು ಒದಗಿಸಿ ನಂತರ ಒತ್ತುವರಿ ತೆರವು ಮಾಡುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದರು.

‘ರಾಜಕಾಲುವೆ ಮೀಸಲು ಪ್ರದೇಶ ಒತ್ತುವರಿ ಮಾಡಿಕೊಂಡು ನಿರ್ಮಾಣವಾಗಿರುವ ಅಪಾರ್ಟ್‌ಮೆಂಟ್‌ ಸಮುಚ್ಚಯಗಳನ್ನು ತೆರವು ಮಾಡುವಂತೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯ ಆದೇಶವೂ ಇದೆ. ಕೆರೆ, ಕಾಲುವೆಗಳ ಮೀಸಲು ಪ್ರದೇಶದಲ್ಲಿ ಅಪಾರ್ಟ್‌ಮೆಂಟ್‌ ಸಮುಚ್ಚಯಗಳಿರುವುದು ದೊಡ್ಡ ಪ್ರಮಾಣದಲ್ಲಿ ಮಳೆಯಾದಾಗ ಬಯಲಿಗೆ ಬರುತ್ತದೆ. ಇಂತಹ ಕಟ್ಟಡಗಳ ಮಾಲೀಕರಿಗೆ ಈಗಾಗಲೇ ನೋಟಿಸ್‌ ನೀಡಲಾಗಿದೆ. ಮಳೆನೀರು ಹರಿವಿಗೆ ವ್ಯವಸ್ಥೆ ಕಲ್ಪಿಸಲು ಅವರು ಜಾಗ ಬಿಟ್ಟುಕೊಡಬೇಕು. ಇಲ್ಲದಿದ್ದರೆ ಅವರಿಗೇ ತೊಂದರೆ. ಈ ಕುರಿತು ಒಂದು ಅಭಿಯಾನ ನಡೆಸುತ್ತೇವೆ’ ಎಂದು ಮುಖ್ಯಮಂತ್ರಿ ತಿಳಿಸಿದರು.

‘ರಾಜಕಾಲುವೆ ಮೇಲೆ ಅಥವಾ ಅದರ ಮೀಸಲು ಪ್ರದೇಶದಲ್ಲಿ ಅಪಾರ್ಮೆಂಟ್‌ ಸಮುಚ್ಚಯ ನಿರ್ಮಿಸಲುಅಧಿಕಾರಿಗಳು ಅನುಮತಿ ನೀಡಿದ್ದರೆ ಅದು ತಪ್ಪು. ಈ ಬಗ್ಗೆ ಮುಖ್ಯ ಆಯುಕ್ತರು ನೋಟಿಸ್‌ ನೀಡಿ ಇಂತಹ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಿದ್ದಾರೆ’ ಎಂದರು.

‘ಪ್ರವಾಹ ಉಂಟಾಗಲು ರಾಜಕಾಲುವೆ ಒತ್ತುವರಿ ಹಾಗೂ ಕೆಲವೆಡೆ ಕಾಲುವೆಗಳು ಮುಚ್ಚಿ ಹೋಗಿರುವುದರ ಜೊತೆ ಇತರ ಕಾರಣಗಳೂ ಇವೆ.ಇಷ್ಟು ವರ್ಷ ಮಳೆಯಿಂದ ಇಷ್ಟೊಂದು ಸಮಸ್ಯೆ ಆಗಿರಲಿಲ್ಲ. ಈ ಬಾರಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲೂ ಭಾರಿ ಮಳೆಯಾಗಿದೆ. ಎರಡೇ ಗಂಟೆಯಲ್ಲಿ 138 ಮಿ.ಮೀ ಮಳೆ ಬಿದ್ದಿದೆ. ಈ ಪ್ರದೇಶದ 11 ಕೆರೆಗಳ ನೀರು ಯಲಹಂಕ ಹಾಗೂ ಜಕ್ಕೂರು ಕೆರೆಗಳನ್ನು ಸೇರುತ್ತದೆ. 11 ಕೆರೆಗಳು ತುಂಬಿ ಹರಿದು ಕೋಡಿ ಹರಿದಿವೆ. ಇಲ್ಲಿನ ರಾಜಕಾಲುವೆಗಳ ಗಾತ್ರ ಕಡಿಮೆ ಇದೆ. ಕೆರೆ ನೀರಿನ ಭಾರಿ ಹೊರ ಹರಿವಿನ ಒತ್ತಡ ತಾಳಲು ಅವುಗಳ ಅಗಲ ಸಾಲುತ್ತಿಲ್ಲ’ ಎಂದು ಮುಖ್ಯಮಂತ್ರಿಯವರು ವಿಶ್ಲೇಷಿಸಿದರು.

ಕ್ರಿಯಾಯೋಜನೆ ಸಿದ್ಧಪಡಿಸಲು ಸೂಚನೆ: ಈ ಪ್ರದೇಶದ 11 ಕೆರೆಗಳು ತುಂಬಿ ಹರಿದಾಗ ನೀರು ಯಲಹಂಕ ಕೆರೆ, ಜಕ್ಕೂರು ಕೆರೆ, ರಾಚೇನಹಳ್ಳಿ ಕೆರೆಗಳನ್ನು ಸೇರುತ್ತದೆ. ಈ ಪ್ರದೇಶದ ಮಳೆ ನೀರು ಮಹಾದೇವಪುರ ನಾಲ್ಕೈದು ಕೆರೆಗಳನ್ನು ದಾಟಿ ಪಿನಾಕಿನಿ ನದಿಯ ಮೂಲಕ ತಮಿಳುನಾಡಿನತ್ತ ಹರಿಯುತ್ತದೆ. ರಾಜಕಾಲುವೆಗಳು ಮುಚ್ಚಿರುವುದನ್ನು ಹಾಗೂ ಅತಿಕ್ರಮಣಗಳನ್ನು ತೆರವುಗೊಳಿಸಿ ಸರಾಗವಾಗಿ ನೀರು ಹರಿಯಲು ವ್ಯವಸ್ಥೆ ಕಲ್ಪಿಸಬೇಕಿದೆ. ಶಾಶ್ವತ ರಾಜಕಾಲುವೆ ನಿರ್ಮಿಸಲು ಕ್ರಿಯಾಯೋಜನೆ ಸಿದ್ಧಪಡಿಸುವಂತೆ ಸೂಚನೆ ನೀಡಿದ್ದೇನೆ’ ಎಂದು ಮುಖ್ಯಮಂತ್ರಿ ತಿಳಿಸಿದರು.

‘ಸದ್ಯ ಇಲ್ಲಿನ ರಾಜಕಾಲುವೆಗಳ ಅಗಲ 8 ಅಡಿಗಳಷ್ಟು ಮಾತ್ರ ಇದೆ. ಅದು 30 ಅಡಿಗಳಷ್ಟಾದರೂ ಆಗಬೇಕು. ಹಾಗಾಗಿ ರಾಜಕಾಲುವೆ ವಿಸ್ತರಿಸಬೇಕಿದೆ. ಕೆಲವು ಕಡೆ ದಿಕ್ಕು ಬದಲಿಸಿ ಪರ್ಯಾಯ ಕಾಲುವೆ ರಚಿಸಬೇಕಿದೆ. ಇದಕ್ಕಾಗಿ ಅಗತ್ಯವಿರುವ ಕಡೆ ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್‌) ಪ್ರಮಾಣ‍ಪತ್ರ ನೀಡುವ ಮೂಲಕ ಭೂಮಿ ಪಡೆದುಕೊಳ್ಳುವಂತೆ ಸೂಚಿಸಿದ್ದೇನೆ. ವಸತಿ ಸಮುಚ್ಚಯಗಳ ಬಳಿ ತುಂಬಿರುವ ನೀರು ಹೊರಹಾಕಲು ಚರಂಡಿ ನಿರ್ಮಿಸುವಂತೆ ಸಲಹೆ ನೀಡಿದ್ದೇನೆ. ಯಲಹಂಕ ಪ್ರದೇಶದ ರಾಜಕಾಲುವೆ ರಾಷ್ಟ್ರೀಯ ಹೆದ್ದಾರಿಯ ಅಡಿಯಿಂದ ಮುಂದಕ್ಕೆ ಹಾದುಹೋಗಬೇಕಿದ್ದು, ಇದಕ್ಕೂ ಕ್ರಮ ಕೈಗೊಳ್ಳಲಿದ್ದೇವೆ’ ಎಂದರು.

‘ರಾಜಕಾಲುವೆಗಳ ಸಮಸ್ಯೆ ಬೆಂಗಳೂರಿನಾದ್ಯಂತ ಇದೆ. ಈ ವರ್ಷ 50 ಕಿ.ಮೀ ಉದ್ದದ ರಾಜಕಾಲುವೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಹೆಚ್ಚುವರಿಯಾಗಿ ಇನ್ನೂ 50 ಕಿ.ಮೀ.ಗಳಷ್ಟು ರಾಜಕಾಲುವೆ ಅಭಿವೃದ್ಧಿಪಡಿಸಲು ಮೊನ್ನೆ ನಡೆದ ಸಭೆಯಲ್ಲಿ ತೀರ್ಮಾನಿಸಿದ್ದೇವೆ’ ಎಂದು ತಿಳಿಸಿದರು.

ವರದಿ ಪಡೆದ ಪ್ರಧಾನಿ

‘ಪ್ರಧಾನಿ ನರೇಂದ್ರ ಮೋದಿಯವರು ದೂರವಾಣಿ ಕರೆ ಮಾಡಿ ರಾಜ್ಯದಲ್ಲಿ ಮಳೆ, ಬೆಳೆಹಾನಿ, ಪ್ರಾಣಹಾನಿ ಹಾಗೂ ಕೈಗೊಂಡ ಪರಿಹಾರ ಕ್ರಮಗಳ ಬಗ್ಗೆ ವಿಚಾರಿಸಿದ್ದಾರೆ. ಬೆಂಗಳೂರು ನಗರದ ಬಗ್ಗೆ ಹೆಚ್ಚಿನ ಕಾಳಜಿ ತೋರಿಸಿ ವಿವರ ಪಡೆದುಕೊಂಡಿದ್ದಾರೆ. ಪರಿಸ್ಥಿತಿಯ ಸುಧಾರಣೆಗೆ ಅಲ್ಪಾವಧಿ ಹಾಗೂ ದೀರ್ಘಾವಧಿ ಕ್ರಮ ಕೈಕೊಳ್ಳಲು ಸೂಚನೆಯನ್ನು ನೀಡಿದ್ದಾರೆ’ ಎಂದು ಮುಖ್ಯಮಂತ್ರಿ ತಿಳಿಸಿದರು.

‘ಮನೆ ಕಳೆದುಕೊಂಡವರಿಗೆ ₹ 5 ಲಕ್ಷ’

‘ಯಲಹಂಕ ಕ್ಷೇತ್ರದಲ್ಲಿ 400 ಮನೆಗಳಿಗೆ ಹಾಗೂ ಬ್ಯಾಟರಾಯನಪುರ ಕ್ಷೇತ್ರದಲ್ಲಿ 600 ಮನೆಗಳಿಗೆ ಹಾನಿ ಉಂಟಾಗಿದೆ’ ಎಂದು ಮುಖ್ಯಮಂತ್ರಿ ತಿಳಿಸಿದರು.

ನೀರು ನುಗ್ಗಿ ಸಾಮಗ್ರಿಗಳು, ಪರಿಕರಗಳು ಹಾನಿಗೊಳಗಾಗಿರುವ ಮನೆ ಮಾಲೀಕರರಿಗೆ ಕೂಡಲೇ ₹ 10 ಸಾವಿರ ಪರಿಹಾರ ಬಿಡುಗಡೆ ಮಾಡಬೇಕು. ಪೂರ್ಣ ಪ್ರಮಾಣದಲ್ಲಿ ಮನೆಯನ್ನು ಕಳೆದುಕೊಂಡವರಿಗೆ ₹ 5 ಲಕ್ಷ ಪರಿಹಾರ ನೀಡಬೇಕು. ಇದರ ಮೊದಲ ಕಂತಿನ ರೂಪದಲ್ಲಿ ₹ 1 ಲಕ್ಷವನ್ನು ತಕ್ಷಣವೇ ನೀಡಬೇಕು. ಕಟ್ಟಡಕ್ಕೆ ಭಾಗಶಃ ಹಾನಿ ಆಗಿದ್ದರೆ ₹ 1 ಲಕ್ಷ ಪರಿಹಾರ ನೀಡಬೇಕು ಎಂದು ಮುಖ್ಯಮಂತ್ರಿಯವರು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಅವರಿಗೆ ಸೂಚನೆ ನೀಡಿದರು.

‘ಹಾನಿಗೊಳಗಾಗಿರುವ ಮೂಲಸೌಕರ್ಯ ದುರಸ್ತಿಗೂ ಅನುದಾನ ಒದಗಿಸುತ್ತೇವೆ. ಇದರ ಅಂದಾಜುಪಟ್ಟಿ ತಯಾರಿಸುವಂತೆ ನಿರ್ದೇಶನ ನಿಡಿದ್ದೇನೆ. ಯಲಹಂಕ ಕ್ಷೇತ್ರದಲ್ಲಿ 10 ಕಿ.ಮೀ ಉದ್ದದಷ್ಟು ಮುಖ್ಯರಸ್ತೆ ಹಾಗೂ 20 ಕಿ.ಮೀ ಉದ್ದದಷ್ಟು ಇತರ ರಸ್ತೆಗಳು ಹಾನಿಗೊಳಾಗಿವೆ. ಬ್ಯಾಟರಾಯನಪುರ ಕ್ಷೇತ್ರದಲ್ಲಿ 45 ಕಿ.ಮೀ ಉದ್ದದ ರಸ್ತೆಗಳಿಗೆ ಹಾನಿ ಆಗಿದೆ. ಅವುಗಳ ದುರಸ್ತಿಗೆ ಕ್ರಮ ಕೈಗೊಳ್ಳುತ್ತೇವೆ’ ಎಂದರು.

‘ಮಾನ್ಯತಾ ಟೆಕ್‌ಪಾರ್ಕ್‌ ಸಮಸ್ಯೆ ನೀಗಿಸಲು ಕ್ರಮ‘

‘ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ ಆಂತರಿಕ ಚರಂಡಿ ವ್ಯವಸ್ಥೆಯಿಂದ ನೀರು ವಾಪಸ್‌ ಬಂದು ಸಮಸ್ಯೆ ಸೃಷ್ಟಿಯಾಗುತ್ತಿದೆ. ಟೆಕ್‌ಪಾರ್ಕ್‌ನ ಆಂತರಿಕ ಚರಂಡಿ ವ್ಯವಸ್ಥೆಯ ಲೋಪ ಹಾಗೂ ಹೊರಗಿನ ರಾಜಕಾಲುವೆ ಸಮಸ್ಯೆ ಬಗ್ಗೆ ಅಧಿಕಾರಿಗಳು ಹಾಗೂ ಟೆಕ್‌ಪಾರ್ಕ್‌ನವರು ಪರಸ್ಪರ ಸಮಾಲೋಚಿಸಿ ಸರಿಪಡಿಸಲಿದ್ದಾರೆ. ಇಲ್ಲಿ ಕೆಲಸ ಮಾಡುವ ನೌಕರರಿಗೆ ತೊಂದರೆಯಾಗದಂತೆ ಶೀಘ್ರವೇ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇವೆ’ ಎಂದು ಮುಖ್ಯಮಂತ್ರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT