ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಂಟಿಸಿಗೆ ವಿದ್ಯುತ್ ಚಾಲಿತ 75 ಬಸ್‌ ಲೋಕಾರ್ಪಣೆ

ಆರ್ಥಿಕ ಸಂಕಷ್ಟದಿಂದ ಪಾರಾಗಿಸುವುದು ನಮ್ಮ ಸಂಕಲ್ಪ– ಸಿ.ಎಂ ಬಸವರಾಜ ಬೊಮ್ಮಾಯಿ
Last Updated 14 ಆಗಸ್ಟ್ 2022, 21:26 IST
ಅಕ್ಷರ ಗಾತ್ರ

ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ವಿಧಾನಸೌಧದ ಮುಂಭಾಗದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಹೊಸ ಮಾದರಿಯ ವಿದ್ಯುತ್ ಚಾಲಿತ (ಎಲೆಕ್ಟ್ರಿಕ್) 75 ಬಸ್‌ಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು ಭಾನುವಾರ ಲೋಕಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ, ‘ಕೋವಿಡ್‌ನಿಂದಾಗಿ ಬಿಎಂಟಿಸಿ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಈ ಸಂಕಷ್ಟದಿಂದ ಪಾರು ಮಾಡುವ ‌ಸಂಕಲ್ಪವನ್ನು ಸರ್ಕಾರ ಹೊಂದಿದೆ’ ಎಂದರು.

‘ಬೆಂಗಳೂರಿ‌ನಲ್ಲಿ 1.25 ಕೋಟಿ ಜನಸಂಖ್ಯೆ ಇದೆ. ಇದಕ್ಕೆ ಸಮಾನವಾಗಿ ವಾಹನಗಳ ಸಂಖ್ಯೆಯೂ ಇದೆ. ಮುಂದಿನ ಮೂರು ವರ್ಷದಲ್ಲಿ ಜನಸಂಖ್ಯೆಗಿಂತ ವಾಹನಗಳ ಸಂಖ್ಯೆಯೇ ಹೆಚ್ಚಾಗಲಿದೆ. ನಗರದ ವಿಸ್ತೀರ್ಣ, ರಸ್ತೆಗಳು ಅಷ್ಟೇ ಇವೆ. ಹೀಗಾಗಿ, ಬೆಂಗಳೂರು ಸಾರಿಗೆಯಲ್ಲಿ ಹೊಸ ಚಿಂತನೆ ಅಗತ್ಯ ಇದೆ’ ಎಂದರು.

‘ಸಾರಿಗೆ ಇಲಾಖೆಗೆ 2022-23ರಲ್ಲಿ ಸರ್ಕಾರ ₹ 800 ಕೋಟಿ ನೆರವು ನೀಡಿದೆ. ಕಳೆದ 2–3 ವರ್ಷಗಳಿಂದ ₹ 3 ಸಾವಿರ ಕೋಟಿ ನೆರವು ನೀಡಲಾಗಿದೆ. ಹಿಂದಿನ ಸರ್ಕಾರಗಳ ಆಡಳಿತ ವೈಖರಿಯಿಂದ ಸಾಕಷ್ಟು ಸಮಸ್ಯೆಗಳು ಸೃಷ್ಟಿಯಾಗಿವೆ. ಈ‌ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವುದು ನಮ್ಮ ಗುರಿ’ ಎಂದರು.

‘ಒಟ್ಟು 300 ಎಲೆಕ್ಟ್ರಿಕ್ ಬಸ್‌ಗಳಿಗೆ ಅನುಮತಿ ನೀಡಲಾಗಿದೆ. ಈ ಪೈಕಿ, 75 ಬಸ್‌ಗಳನ್ನು ಲೋಕಾರ್ಪಣೆ ಮಾಡಿದ್ದೇನೆ. ಮುಂದಿನ ಹಂತಗಳಲ್ಲಿ ಉಳಿದ ಬಸ್‌ಗಳೂ ಬರಲಿವೆ. ಬಿಎಂಟಿಸಿಗೆ ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ 922 ಎಲೆಕ್ಟ್ರಿಕ್‌ ಬಸ್‌ಗಳನ್ನು ಲೀಸ್‌ಗೆ ಕೊಡಲಿದೆ’ ಎಂದು ಮಾಹಿತಿ ನೀಡಿದರು.

ಎಲೆಕ್ಟ್ರಿಕ್‌ ಬಸ್‌ಗಳ ವಿಶೇಷತೆ
12 ಮೀ. ಉದ್ದದ ಈ ಹವಾನಿಯಂತ್ರಿತ ರಹಿತ (ನಾನ್ ಎಸಿ) ಬಸ್‌ಗಳಲ್ಲಿ 40+1 ಆಸನಗಳಿವೆ. ಪ್ರಯಾಣಿಕರ ಸುರಕ್ಷತೆಗೆ ವೆಹಿಕಲ್‌ ಟ್ರ್ಯಾಕಿಂಗ್‌ ಯುನಿಟ್‌, ಸಿಸಿ‌ಟಿವಿ ಕ್ಯಾಮೆರಾ, ತುರ್ತು ಪ್ಯಾನಿಕ್ ಬಟನ್, ಎಲ್ಇಡಿ ಮಾರ್ಗ ಫಲಕ ಅಳವಡಿಸಲಾಗಿದೆ.

ಅಂಗವಿಕಲರ ಅನುಕೂಲಕ್ಕಾಗಿ ಗಾಲಿ ಕುರ್ಚಿ ಯಾಂತ್ರಿಕವಾಗಿ ಕಾರ್ಯನಿರ್ವಹಿಸಬಲ್ಲ ವ್ಯವಸ್ಥೆಯೂ ಇದೆ. ಸ್ವಿಚ್‌ ಮೊಬಿಲಿಟಿ ಆಟೊಮೊಟಿವ್‌ ಕಂಪನಿ ಈ ಬಸ್‌ಗಳನ್ನು 12 ವರ್ಷಗಳ ಅವಧಿಗೆ ನಿವ್ವಳ ವೆಚ್ಚ ಗುತ್ತಿಗೆ ಆಧಾರದಲ್ಲಿ ಕಾರ್ಯಾಚರಣೆ ನಡೆಸಲಿದೆ. ನಿತ್ಯ ಪ್ರತಿ ಬಸ್ಸಿಗೆ 225 ಕಿ.ಮೀ ಕಾರ್ಯಾಚರಣೆಗೆ ಪ್ರತಿ ಕಿ.ಮೀ ವಿದ್ಯುಚ್ಛಕ್ತಿ ಒಳಗೊಂಡಂತೆ ₹ 48.90 ಪಾವತಿಸಲಾಗುವುದು. ಒಂದು ಬಾರಿ ಚಾರ್ಜಿಂಗ್‌ ನಂತರ ಬಸ್‌ 150 ಕಿ.ಮೀ. ಕ್ರಮಿಸುತ್ತವೆ. ಉಳಿದ 75 ಕಿ.ಮೀಗಳನ್ನು ಅವಕಾಶ ಸಿಕ್ಕಾಗ ಚಾರ್ಜ್‌ ಮಾಡಿಕೊಂಡು ಕಾರ್ಯಾಚರಿಸಲಾಗುತ್ತದೆ. ಈ ಬಸ್‌ಗಳು ರಿಚಾರ್ಜ್‌ಗೆ ಮಾರ್ಗದಲ್ಲಿರುವ ನಿಗದಿತ ಬಸ್ ನಿಲ್ದಾಣಗಳಲ್ಲಿ ತ್ವರಿತವಾಗಿ ಚಾರ್ಚ್ ಮಾಡುವ ವ್ಯವಸ್ಥೆ ಇದೆ. ಇದಕ್ಕಾಗಿ, ಕೆಂಪೇಗೌಡ ಬಸ್ ನಿಲ್ದಾಣ (ಘಟಕ- 07), ಯಶವಂತಪುರ (ಘಟಕ- 08), ಕೆಂಗೇರಿ (ಘಟಕ- 12) ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ಬಸ್ ನಿಲ್ದಾಣಗಳನ್ನು ಗುರುತಿಸಲಾಗಿದೆ.

ಎಲೆಕ್ಟ್ರಿಕ್ ಬಸ್‌ಗಳ ಸಂಚಾರ
ಎಲ್ಲಿಂದ, ಎಲ್ಲಿಗೆ; ಎಷ್ಟು ಬಸ್‌ಗಳು
ಮೆಜೆಸ್ಟಿಕ್- ವಿದ್ಯಾರಣ್ಯಪುರ; 10
ಶಿವಾಜಿನಗರ- ಯಲಹಂಕ; 20
ಯಲಹಂಕ- ಕೆಂಗೇರಿ; 10
ಮೆಜೆಸ್ಟಿಕ್- ಯಲಹಂಕ ಉಪನಗರ; 15
ಹೆಬ್ಬಾಳ- ಸೆಂಟ್ರಲ್ ಸಿಲ್ಕ್ ಬೋರ್ಡ್; 20

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT