ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಲಾಕ್‌ಡೌನ್‌ ಮುಖ್ಯಮಂತ್ರಿ ವಿವೇಚನೆಗೆ: ಸಚಿವ ಡಾ.ಕೆ.ಸುಧಾಕರ್‌

ಕೊರೊನಾ ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಳ
Last Updated 11 ಜುಲೈ 2020, 14:28 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಪ್ರಕರಣ ತೀವ್ರಗತಿಯಲ್ಲಿ ಹೆಚ್ಚುತ್ತಿರುವುದರಿಂದ ಬೆಂಗಳೂರು ನಗರದಲ್ಲಿ ಮತ್ತೆ ಲಾಕ್‌ಡೌನ್‌ ಮಾಡಬೇಕು ಎಂದು ಎಂಟೂ ವಲಯಗಳ ಜವಾಬ್ದಾರಿ ಹೊತ್ತಿರುವ ಸಚಿವರು ಸಲಹೆ ನೀಡಿದ್ದಾರೆ. ಮುಖ್ಯಮಂತ್ರಿ ಅವರು ಇನ್ನೂ ಕೆಲವು ತಜ್ಞರ ಜತೆಗೆ ಸಮಾಲೋಚನೆ ನಡೆಸಿ ಎರಡು, ಮೂರು ದಿನಗಳಲ್ಲಿ ನಿರ್ಧಾರಕ್ಕೆ ಬರುವ ನಿರೀಕ್ಷೆ ಇದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇದುವೇ ಕೋವಿಡ್‌ನ ಗರಿಷ್ಠ ಹಂತ ಎಂದು ಹೇಳಲಾಗದು. ಹವಾಮಾನ ಬದಲಾವಣೆಯೂ ಪ್ರಕರಣ ಹೆಚ್ಚಳಕ್ಕೆ ಕಾರಣಗಳಲ್ಲಿ ಒಂದು. ಜನ ಸ್ವಯಂ ನಿಯಂತ್ರಣ ಮಾಡದೆ ಬೇರೆ ದಾರಿಯೇ ಇಲ್ಲ’ ಎಂದರು.

‘ಶನಿವಾರ 20 ಸಾವಿರಕ್ಕೂ ಅಧಿಕ ಪರೀಕ್ಷೆ ಮಾಡಿರುವುದರಿಂದ ಕೋವಿಡ್‌ ದೃಢಪಟ್ಟಿರುವವರ ಸಂಖ್ಯೆಯೂ ಹೆಚ್ಚಿದೆ. ಇದೀಗ ಆ್ಯಂಟಿಜೆನ್‌ ಪರೀಕ್ಷೆ ಸಹ ಆರಂಭವಾಗಿದ್ದು, ಭಾನುವಾರದಿಂದ ಪರೀಕ್ಷೆಯ ಸಂಖ್ಯೆ, ವರದಿ ಪ್ರಮಾಣವೂ ಅಧಿಕವಾಗಲಿದೆ. ಅದರ ಶೇ 85ಕ್ಕಿಂತ ಅಧಿಕ ಸೋಂಕಿತರು ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುವ ಅಗತ್ಯವೇ ಇಲ್ಲ. ಜಟಿಲ ಆರೋಗ್ಯ ಸಮಸ್ಯೆ ಇಲ್ಲದವರು ಇದನ್ನು ತಿಳಿದುಕೊಂಡು ಸಹಕರಿಸಬೇಕು’ ಎಂದು ಸಚಿವರು ಮನವಿ ಮಾಡಿದರು.

ಖಾಸಗಿ ಆಸ್ಪತ್ರೆಗಳ ಅಸಹಕಾರ?: ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿನ ಹಾಸಿಗೆಗಳ ಲಭ್ಯತೆ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಕೊನೆಯ ಕ್ಷಣದವರೆಗೂ ನೀಡದೆ ಇರುವುದಕ್ಕೆ ಸಚಿವರು ಬೇಸರ ವ್ಯಕ್ತಪಡಿಸಿದರು.‘ಶನಿವಾರ ಸಂಜೆಯೊಳಗೆ ಅವರು ವಿವರ ನೀಡಬೇಕಿತ್ತು. ರಾತ್ರಿಯೊಳಗಾದರೂ ನೀಡುತ್ತಾರೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಹೀಗೆ ಮಾಡಿದರೆ ಭಾನುವಾರದಿಂದ ಕೇಂದ್ರೀಕೃತ ವ್ಯವಸ್ಥೆಯಲ್ಲಿ ಹಾಸಿಗೆ ಲಭ್ಯತೆ ಬಗ್ಗೆ ಮಾಹಿತಿ ನೀಡುವುದು ಸಾಧ್ಯವಾಗಬಹುದು’ ಎಂದು ಸಚಿವ ಸುಧಾಕರ್ ಹೇಳಿದರು.

ಕಾಮಾಲೆ ಕಣ್ಣು: ‘ಕೋವಿಡ್‌ ಚಿಕಿತ್ಸಾ ಉಪಕರಣ ಖರೀದಿಯಲ್ಲಿ ಅಕ್ರಮ ಆಗಿದೆ ಎಂದು ಕೆಲವು ರಾಜಕೀಯ ಪಕ್ಷದವರು ಆರೋಪಿಸುತ್ತಿದ್ದಾರೆ. ಕಾಮಾಲೆ ಕಣ್ಣಿನವರಿಗೆ ಎಲ್ಲವೂ ಹಾಗೆಯೇ ಕಾಣಿಸುತ್ತದೆ. ಇಡೀ ದೇಶದಲ್ಲಿ ಇಂತಹ ಆರೋಪ ಕೇಳಿಬಂದಿರುವುದು ರಾಜ್ಯದಲ್ಲಿ ಮಾತ್ರ.ಇದು ಲೆಕ್ಕ ಕೇಳುವ ಸಮಯವೇ? ಸೋಂಕು ನಿಯಂತ್ರಣ ಮಾಡಿದ ಬಳಿಕ ಎಲ್ಲಾ ಲೆಕ್ಕವನ್ನೂ ಸರ್ಕಾರ ಕೊಡುತ್ತದೆ. ತಪ್ಪಿದ್ದರೆ ನೇಣಿಗೆ ಹಾಕಲಿ’ ಎಂದು ಸುಧಾಕರ್ ಬೇಸರದಿಂದ ನುಡಿದರು.‌

‘ಜನ ರಸ್ತೆಯಲ್ಲಿ ಸಾಯುತ್ತಿದ್ದಾರೆ. ಹೀಗೆ ಆರೋಪ ಮಾಡುತ್ತಿರುವವರು ಆಂಬುಲೆನ್ಸ್‌ ವ್ಯವಸ್ಥೆ ಮಾಡಿದ್ದಾರೆಯೇ. ಕಾರ್ಯಪಡೆ ರಚಿಸಿ ಪಾಸಿಟಿವ್ ಬಂದಿರುವವರನ್ನು ಆಸ್ಪತ್ರೆಗೆ ಕರೆತರುವ ವ್ಯವಸ್ಥೆ ಮಾಡಿದ್ದಾರೆಯೇ? ಈ ಹಿಂದೆ ರೈಲು ನಿಲ್ದಾಣ, ಬಸ್‌ ನಿಲ್ದಾಣಗಳಿಗೆ ತೆರಳಿ ನಾಟಕ ಮಾಡಿದವರಿಗೆ ಈ ಆಲೋಚನೆ ಬಂದಿಲ್ಲವೇ? ಇಲ್ಲಿ ತಮಗೆ ರಾಜಕೀಯ ಲಾಭ ಇಲ್ಲ ಎಂಬುದು ಗೊತ್ತಿದೆ. ಕೋವಿಡ್ ಹೆಸರಲ್ಲೂ ರಾಜಕೀಯ ಮಾಡಿದರೆ ನೀವು ರಾಜಕೀಯವಾಗಿ ಪಾತಾಳಕ್ಕೆ ಹೋಗುತ್ತೀರಿ’ ಎಂದು ಎಚ್ಚರಿಸಿದರು.

ಸಿ.ಟಿ.ರವಿಗೆ ಕೋವಿಡ್‌–ದ್ವಂದ್ವ: ಸಚಿವ ಸಿ.ಟಿ.ರವಿ ಅವರಿಗೂ ಕೋವಿಡ್‌ ದೃಢಪಟ್ಟಿದೆ. ಹೀಗಾಗಿ ಅವರು ಮನೆ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಸಚಿವ ಸುಧಾಕರ್ ಹೇಳಿದರು. ಇದಕ್ಕೆ ತಿರುಗೇಟು ನೀಡಿದ ರವಿ, ‘ನಾನು ಚೆನ್ನಾಗಿದ್ದೇನೆ, ಕೊರೊನಾ ಲಕ್ಷಣ ಇಲ್ಲ,ಮನೆಯಲ್ಲಿ ವಾಕ್ ಮಾಡುತ್ತಿದ್ದೇನೆ’ ಎಂದು ಟ್ವೀಟ್‌ ಮಾಡಿದ್ದರು. ಇದರ ಬಗ್ಗೆ ಸಚಿವರನ್ನು ಕೇಳಿದಾಗ, ‘ನನಗೆ ದೊರೆತಿರುವ ಮಾಹಿತಿಯಂತೆ ರವಿ ಅವರಿಗೆ ಎ ಸಿಮ್ಟಮ್ಯಾಟಿಕ್‌ ಇದೆ. ಅದಕ್ಕಾಗಿ ಮನೆ ಕ್ವಾರಂಟೈನ್‌ನಲ್ಲಿದ್ದಾರೆ’ ಎಂದರು.

ಬೆಂಗಳೂರು ಬಹಳ ಸೂಕ್ಷ್ಮ

ಬೆಂಗಳೂರಿನಲ್ಲಿ ಕೋವಿಡ್‌ ಹರಡದಂತೆ ನಿಯಂತ್ರಣ ಮಾಡುವುದು ಬಹಳ ಮುಖ್ಯ. ಸೋಂಕಿತರು ತಮ್ಮ ಪ್ರದೇಶ ಬಿಟ್ಟು ಬೇರೆಡೆಗೆ ಹೋದರೆ ಅಲ್ಲೆಲ್ಲಾ ಹಬ್ಬಿಸುವ ಅಪಾಯ ಇರುತ್ತದೆ. ಹೀಗಾಗಿ ಸೋಂಕಿತರು ಕಟ್ಟುನಿಟ್ಟಾಗಿ ಕ್ವಾರಂಟೈನ್ ನಿಯಮ ಪಾಲಿಸಬೇಕು’ ಎಂದು ರಾಜ್ಯದ ಕೋವಿಡ್‌ ನೋಡಲ್‌ ಅಧಿಕಾರಿ ಹಾಗೂ ಬಿಎಂಸಿಯ ಶ್ವಾಸಕೋಶ ತಜ್ಞ ಡಾ.ಶಶಿಭೂಷಣ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT