ಬೆಂಗಳೂರು: ‘ವಾಣಿಜ್ಯ ಕಟ್ಟಡದವರು ಪಾರ್ಕಿಂಗ್ ಶುಲ್ಕವನ್ನು ಕಡಿಮೆ ಮಾಡಬೇಕೆಂದು ಎಂದು ಮನವಿ ಮಾಡಿದ್ದರು. ಅದರಂತೆ ಶುಲ್ಕವನ್ನು ಪರಿಷ್ಕರಿಸಲಾಗಿದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.

‘ಕಚೇರಿ ಪ್ರದೇಶವಿದೆ, ಅದರಲ್ಲಿ ಪಾರ್ಕಿಂಗ್ಗೆ ಹೆಚ್ಚು ತೆರಿಗೆ ಹಾಕುತ್ತಿದ್ದೀರಿ ಎಂದು ಆಕ್ಷೇಪಣೆ ಮಾಡಿದ್ದರು. ಅದನ್ನು ಪರಿಗಣಿಸಿ ಅವರಿಗೆ ಶುಲ್ಕವನ್ನು ಕಡಿಮೆ ಮಾಡಲಾಗಿದೆ. ವಸತಿಯವರಿಗೆ ಶುಲ್ಕ ಹೆಚ್ಚಾಗಿದೆ ಎಂದು ಎನ್ನಿಸಿದ್ದರೆ ಆಕ್ಷೇಪಣೆ ಸಲ್ಲಿಸಲಿ, ಅದನ್ನು ಪರಿಶೀಲಿಸುತ್ತೇವೆ’ ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ಹೇಳಿದರು.

‘ಎಲ್ಲರಿಗೂ ಏಕರೂಪದಲ್ಲಿ ಪಾರ್ಕಿಂಗ್ ಶುಲ್ಕ ಇರಬೇಕು ಎಂಬ ದೃಷ್ಟಿಯಿಂದ ಕಡಿಮೆ ಮಾಡಿದ್ದೇವೆ. ಕಳೆದ ವರ್ಷ ಪಾರ್ಕಿಂಗ್ ಶುಲ್ಕ ₹221 ಕೋಟಿ ಸಂಗ್ರಹವಾಗಿತ್ತು. ಈ ಕಡಿತದಿಂದ ₹40 ಕೋಟಿ ಕಡಿಮೆಯಾಗಲಿದೆ. ವಸತಿಯೇತರ ಅಥವಾ ವಾಣಿಜ್ಯ ಕಟ್ಟಡಗಳಿಂದಲೇ ಸುಮಾರು ₹35 ಕೋಟಿ ಕಡಿಮೆಯಾಗಲಿದೆ’ ಎಂದು ಮಾಹಿತಿ ನೀಡಿದರು.

‘ಒಂದೇ ರೀತಿಯ ಶುಲ್ಕವನ್ನು ಜಾರಿಗೆ ತಂದಿರುವುದರಿಂದ ವಸತಿ ಪ್ರದೇಶದವರಿಗೆ ಹೆಚ್ಚಾಗುತ್ತದೆ ಎಂಬುದಾದರೆ ಅವರು ಆಕ್ಷೇಪಣೆ ಸಲ್ಲಿಸಲಿ. ಯಾರಿಗೂ ಹೆಚ್ಚಾಗುವುದಿಲ್ಲ ಎಂಬುದು ನಮ್ಮ ಭಾವನೆ. ಎಲ್ಲವೂ ಸರಿ ಇದೆ ಎಂದೇನೂ ಹೇಳುವುದಿಲ್ಲ. ನಮ್ಮ ಮೇಲೆ ಸರ್ಕಾರ ಇದೆ, ಮುಖ್ಯಮಂತ್ರಿ ಇದ್ದಾರೆ, ಉಪ ಮುಖ್ಯಮಂತ್ರಿ ಇದ್ದಾರೆ, ನಗರಾಭಿವೃದ್ಧಿ ಇಲಾಖೆ ಇದೆ. ಅವರು ಕ್ರಮ ಕೈಗೊಳ್ಳಲಿದ್ದಾರೆ’ ಎಂದರು.

‘ವಲಯ ವರ್ಗೀಕರಣದ ಆಧಾರದಲ್ಲಿ ಈವರೆಗೆ ಯುನಿಟ್ ದರದಲ್ಲಿ ಪ್ರತಿ ಚದರಡಿಗೆ ಶೇ 50ರಷ್ಟು ಪಾರ್ಕಿಂಗ್ ಶುಲ್ಕವನ್ನು ಆಸ್ತಿ ತೆರಿಗೆಯಲ್ಲಿ ಸಂಗ್ರಹಿಸಲಾಗುತ್ತಿದೆ. ವಸತಿ ಪ್ರದೇಶದಲ್ಲಿ ಎಲ್ಲರಿಗೂ ಚದರ ಅಡಿಗೆ ₹2 ಮಾಡಲಾಗಿದೆ. ಸಿ ಅಥವಾ ಡಿ ವಲಯ ವರ್ಗೀಕರಣದವರಿಗೆ ಹಳೆಯ ಲೆಕ್ಕಾಚಾರದಂತೆ ಚದರಡಿಗೆ ₹1.20 ಅಥವಾ ₹1.50 ಆಗುತ್ತದೆ ಎಂದು ಇದೀಗ ಹೇಳುತ್ತಿದ್ದಾರೆ. ಇದನ್ನೆಲ್ಲ ಪರಿಶೀಲಿಸಿ, ಸರಿಪಡಿಸುತ್ತೇವೆ’ ಎಂದು ಹೇಳಿದರು.

‘ವಸತಿ ಪ್ರದೇಶದಲ್ಲಿ ಹಲವರು ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಅವರು ವಸತಿ ಪ್ರದೇಶದ ಪ್ರಕಾರ ಆಸ್ತಿ ತೆರಿಗೆ ಪಾವತಿಸುತ್ತಿರುವುದು ಕಾನೂನು ಉಲ್ಲಂಘನೆ ಅಲ್ಲವೇ? ಪಾರ್ಕಿಂಗ್ ಶುಲ್ಕ ಒಂದೇ ರೀತಿ ಇರಬೇಕು ಎಂದು ನಾವು ಶುಲ್ಕ ನಿಗದಿ ಮಾಡಿ, ಹಿಂದಿನ ದರಕ್ಕಿಂತ ಕಡಿಮೆ ಮಾಡಿದ್ದೇವೆ. ಸರಾಸರಿ ತೆಗೆದುಕೊಂಡಿರುವುದರಿಂದ ಕೆಳಗಿರುವ ಜನರಿಗೆ ಹೆಚ್ಚಾಗಬಹುದು, ಮೇಲಿನವರಿಗೆ ಕಡಿಮೆಯಾಗಬಹುದು. ಆಕ್ಷೇಪಣೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ’ ಎಂದರು.

ಮಾಲ್ಗೆ ಹೋಗಬೇಡಿ: ತುಷಾರ್

‘ನಗರದ ಮಾಲ್ಗಳಲ್ಲಿ ಪಾರ್ಕಿಂಗ್ ಶುಲ್ಕ ಹೆಚ್ಚಿದೆ ಎಂದರೆ ಅಲ್ಲಿಗೆ ಹೋಗಬೇಡಿ. ಚಿಕ್ಕಪೇಟೆ ಗಾಂಧಿನಗರದ ಮಾರುಕಟ್ಟೆಗಳಿಗೆ ಜನರು ಹೋಗಲಿ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು. ‘ಮಾಲ್ಗಳಲ್ಲಿ ಪಾರ್ಕಿಂಗ್ ಶುಲ್ಕ ಹೆಚ್ಚಿದೆಯಲ್ಲಾ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳುತ್ತೀರಾ’ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ತುಷಾರ್ ‘ಹೆಚ್ಚು ನಿಯಮ ಮಾಡಿದರೆ ಅನುಷ್ಠಾನ ಕಷ್ಟಸಾಧ್ಯ. ಮಾರುಕಟ್ಟೆ ಮುಕ್ತ ಪ್ರದೇಶ. ಅವರು ಹೆಚ್ಚು ಶುಲ್ಕ ಹಾಕುತ್ತಿದ್ದಾರೆ ಮೋಸ ಮಾಡುತ್ತಿದ್ದಾರೆ ಎಂದರೆ ಅಲ್ಲಿಗೆ ಹೋಗಬೇಡಿ. ಬೇರೆ ಕಡೆಗೆ ಹೋಗಿ’ ಎಂದು ಸಲಹೆ ನೀಡಿದರು.

‘ವಾಣಿಜ್ಯ ಕಟ್ಟಡಗಳಿಗೆ ಕಷ್ಟವಾಗಿದೆ’ ‘ವಸತಿಯೇತರರಿಗೆ ಹೆಚ್ಚು ಆಸ್ತಿ ತೆರಿಗೆ ಹಾಕುತ್ತಿದ್ದೇವೆ. ಅವರಿಗೆ ಪಾರ್ಕಿಂಗ್ ಶುಲ್ಕವೂ ಹೆಚ್ಚಾಗಿ ಕಷ್ಟವಾಗಿದೆ. ಆದ್ದರಿಂದ ಅವರಿಗೆ ಪಾರ್ಕಿಂಗ್ ಶುಲ್ಕದಲ್ಲಿ ಹೆಚ್ಚು ಕಡಿಮೆ ಮಾಡಲಾಗಿದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು. ‘ವಾಣಿಜ್ಯ ಕಟ್ಟಡಗಳಿಗಿಂತ ವಸತಿ ಕಟ್ಟಡಗಳಲ್ಲಿ ಹೆಚ್ಚು ನಿಯಮ ಉಲ್ಲಂಘನೆಯಾಗುತ್ತಿದೆ. ವಸತಿ ಪ್ರದೇಶದಲ್ಲೇ ನಿಯಮ ಪಾಲನೆಯಾಗುತ್ತಿಲ್ಲ. ವಾಣಿಜ್ಯ ಪ್ರದೇಶದಲ್ಲಿ ಉಲ್ಲಂಘನೆ ತುಂಬಾ ಕಡಿಮೆ’ ಎಂದರು.

‘ಕಾಯ್ದೆಯಂತೆ ಕಸ ನಿರ್ವಹಣೆ ಸೇವಾ ಶುಲ್ಕ’

‘2016ರ ಪರಿಸರ ಕಾಯ್ದೆಯಂತೆ 2020ರಲ್ಲಿ ಬಿಬಿಎಂಪಿ ಬೈಲಾ ಮಾಡಲಾಗಿದೆ. ಅದರಂತೆ ಕಸ ನಿರ್ವಹಣೆ ಸೇವಾ ಶುಲ್ಕ ವಿಧಿಸಲಾಗಿದೆ. 2020ರಲ್ಲಿ ಕೌನ್ಸಿಲ್ ಇದ್ದಾಗಲೇ ಶುಲ್ಕ ವಿಧಿಸಲು ನಿರ್ಧಾರ ಮಾಡಲಾಗಿತ್ತು. ಆಗ ನಿರ್ಧರಿಸಿದ್ದ ಶುಲ್ಕಕ್ಕಿಂತ ಅರ್ಧದಷ್ಟು ಮಾತ್ರ ಇದೀಗ ಜಾರಿ ಮಾಡಲಾಗಿದೆ’ ಎಂದು ತುಷಾರ್ ಗಿರಿನಾಥ್ ಹೇಳಿದರು. ‘2020ರಲ್ಲಿ ನಿಯಮವಾಗಿದ್ದರೂ ಅದನ್ನು ಜಾರಿಗೆ ತರದಿರುವುದು ಅಪರಾಧ. ಅದನ್ನು ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. ಹೀಗಾಗಿ ಕಸ ನಿರ್ವಹಣೆ ಸೇವಾ ಶುಲ್ಕವನ್ನು ಈ ವರ್ಷದಿಂದಲೇ ಹಾಕಲಾಗುತ್ತಿದೆ. ₹683 ಕೋಟಿ ಸಂಗ್ರಹವಾಗಬಹುದೆಂಬ ನಿರೀಕ್ಷೆಯಿದ್ದು ವಸತಿ ಪ್ರದೇಶಗಳಿಂದ ₹230 ಕೋಟಿ ಸಂಗ್ರಹವಾಗಬಹುದು. ರಾಜ್ಯ ಇತರೆ ನಗರಗಳು ಹಾಗೂ ಮುಂಬೈ ಪುಣೆ ನಗರಗಳಲ್ಲೂ ಈ ಶುಲ್ಕ ಜಾರಿಯಲ್ಲಿದೆ’ ಎಂದರು. ‘ಕಸ ನಿರ್ವಹಣೆ ಸೇವಾ ಶುಲ್ಕದಿಂದ ನಿತ್ಯದ ಕಾರ್ಯಾಚರಣೆ ನಡೆಸಬಹುದು. ಸಂಸ್ಕರಣೆಗೆ ನಾವು ಇನ್ನೂ ಹೆಚ್ಚು ಬಂಡವಾಳ ಹೂಡಿಕೆ ಮಾಡಬೇಕಿದೆ. ಶುಲ್ಕ ಪಾವತಿಸುವುದರಿಂದ ನಾಗರಿಕರಿಗೆ ಜವಾಬ್ದಾರಿ ಬರುತ್ತದೆ. ಏನೂ ಕೊಡದೆ ಪಾಲಿಕೆಯಿಂದ ಸೇವೆ ಕೇಳುವುದು ಸರಿಯಲ್ಲ. ಶುಲ್ಕ ಕೊಟ್ಟು ಸೇವೆ ಕೇಳಬೇಕು. ಗಾಡಿ ಬಂದಿಲ್ಲ ಕಸ ಹೋಗಿಲ್ಲ ಕಸ ಎಲ್ಲಿ ಹಾಕುತ್ತಿದ್ದಾರೆ ಎಂದು ಪ್ರಶ್ನಿಸಬೇಕು. ನಿತ್ಯ ₹2 ₹3 ಕೊಟ್ಟರೆ ಈ ಪ್ರಶ್ನೆ ಕೇಳುತ್ತಾರೆ ಎಂಬ ಭಾವನೆ ನಮ್ಮದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.