ಶನಿವಾರ, ಜೂನ್ 19, 2021
22 °C

ದುನಿಯಾ ವಿಜಯ್‌ ವಿರುದ್ಧ ಠಾಣೆ ಮೆಟ್ಟಿಲೇರಿದ ಮಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನನ್ನ ತಂದೆ ಹಾಗೂ ಆತನ ಜೊತೆಗಿದ್ದವರು, ನನ್ನ ಮೇಲೆ ಹಲ್ಲೆ ಮಾಡಿದ್ದಾರೆ’ ಎಂದು ನಟ ದುನಿಯಾ ವಿಜಯ್ ವಿರುದ್ಧ ಆರೋಪ ಮಾಡಿರುವ ಮಗಳು ಮೋನಿಕಾ, ಗಿರಿನಗರ ಠಾಣೆ ಮೆಟ್ಟಿಲೇರಿದ್ದಾಳೆ.

‘ವೈಯಕ್ತಿಕ ಕೆಲವು ವಸ್ತುಗಳು ಹಾಗೂ ಕಾರಿನ ದಾಖಲೆಗಳನ್ನು ತರಲು ತಂದೆಯ ಮನೆಗೆ ಹೋಗಿದ್ದೆ. ಅದೇ ವೇಳೆಯೇ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ’ ಎಂದು 18 ವರ್ಷದ ಮೋನಿಕಾ, ಠಾಣೆಗೆ ದೂರು ನೀಡಿದ್ದಾಳೆ.

ಅವಳ ಆರೋಪವನ್ನು ನಿರಾಕರಿಸಿರುವ ದುನಿಯಾ ವಿಜಯ್‌, ‘ಮಗಳೇ ಮನೆಗೆ ಬಂದು ಗಲಾಟೆ ಮಾಡಿ ಹೋಗಿದ್ದಾಳೆ. ಏನಾಗಿದೆ ಎಂಬುದನ್ನು ಮೂರೇ ದಿನಗಳಲ್ಲಿ ನಿಮ್ಮ ಮುಂದಿಡುತ್ತೇನೆ’ ಎಂದು ತಿಳಿಸಿದ್ದಾರೆ.

ಆಗಿದ್ದೇನು: ದುನಿಯಾ ವಿಜಯ್ ಅವರ ಮೊದಲ ಪತ್ನಿ ನಾಗರತ್ನ, ಮಗಳ ಜೊತೆಯಲ್ಲಿ ಪ್ರತ್ಯೇಕವಾಗಿ ವಾಸವಿದ್ದಾರೆ. ಸದ್ಯ ಎರಡನೇ ಪತ್ನಿ ಕೀರ್ತಿಗೌಡ ಜೊತೆಯಲ್ಲಿ ಹೊಸಕೆರೆಹಳ್ಳಿಯ 2ನೇ ಅಡ್ಡರಸ್ತೆಯಲ್ಲಿರುವ ಮನೆಯಲ್ಲಿ ವಿಜಯ್ ಉಳಿದುಕೊಂಡಿದ್ದಾರೆ. ಅದೇ ಮನೆಯಲ್ಲೇ ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದರು.

‘ಸೋಮವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ತಂದೆ ವಿಜಯ್‌ ಮನೆಗೆ ಹೋಗಿದ್ದೆ. ನನ್ನನ್ನು ಮನೆಯೊಳಗೆ ಬಿಡದೇ ತಡೆದಿದ್ದ ವಿಜಯ್, ಕೀರ್ತಿಗೌಡ, ಹೇಮಂತ್, ವಿನೋದ್ ಹಾಗೂ ಕಾರು ಚಾಲಕ ಮಹಮ್ಮದ್ ಅವಾಚ್ಯ ಶಬ್ದಗಳಿಂದ ಬೈದರು. ಕಾಲಿನಿಂದ ಒದ್ದರು. ಕೆಲವು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ನನ್ನ ತಲೆಯನ್ನು ಗೋಡೆಗೆ ಹೊಡೆಸಿದರು’ ಎಂದು ದೂರಿನಲ್ಲಿ ಮೋನಿಕಾ ತಿಳಿಸಿರುವುದಾಗಿ ಗಿರಿನಗರ ಪೊಲೀಸರು ಹೇಳಿದರು.

‘ಹಣೆ ಮತ್ತು ಬಲಗೈಗೆ ಗಾಯವಾಗಿದ್ದರಿಂದ ಮೀನಾಕ್ಷಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡಿದ್ದೇನೆ. ನನ್ನ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಿ. ಕಾರಿನ ಕೀ ಹಾಗೂ ದಾಖಲಾತಿಗಳನ್ನು ಕೊಡಿಸಿ’ ಎಂದು ಸಹ ಮೋನಿಕಾ ಹೇಳಿದ್ದಾಳೆ. ಅವಳ ದೂರಿನನ್ವಯ ಐವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ' ಎಂದು ಪೊಲೀಸರು ವಿವರಿಸಿದರು. 

ಬಾಗಿಲಿಗೆ ಒದ್ದು, ಕಲ್ಲಿನಿಂದ ಹೊಡೆದಳು: ವಿಜಯ್ ಮನೆಗೆ ಹೋಗಿದ್ದ ಮೋನಿಕಾಳೇ ಗಲಾಟೆ ಮಾಡಿದ್ದಾಳೆ ಎನ್ನಲಾಗಿದ್ದು, ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಮಂಗಳವಾರ ಹರಿದಾಡಿತು.

‘ಬೆಳಿಗ್ಗೆ ಮನೆ ಎದುರು ಓಡಾಡಿದ್ದ ಮೋನಿಕಾ, ಬಾಗಿಲು ತೆರೆಯುವಂತೆ ಹೇಳಿದ್ದಳು. ಯಾರೊಬ್ಬರೂ ಬಾಗಿಲು ತೆಗೆಯದಿದ್ದಾಗ ಒದ್ದಿದ್ದಳು. ಕಲ್ಲಿನಿಂದ ಬಾಗಿಲಿನ ಬೀಗಕ್ಕೆ ಹೊಡೆದಿದ್ದಳು. ಈ ದೃಶ್ಯವನ್ನು ಮನೆಯೊಳಗಿದ್ದವರು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದರು. ಅದನ್ನೇ ಮಾಧ್ಯಮಗಳು ಹಾಗೂ ನಮಗೆ ಕೊಟ್ಟಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಇದು ಮಗಳು ಹಾಗೂ ತಂದೆ ನಡುವಿನ ಜಗಳ. ಯಾರೂ ಯಾರ ಮೇಲೆ ಹಲ್ಲೆ ಮಾಡಿದರೂ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿ ಗೊತ್ತಾಗಿಲ್ಲ. ಪರಸ್ಪರ ವಿಚಾರಣೆ ನಡೆಸಬೇಕಿದೆ’ ಎಂದರು.

ಜಿಮ್ ತರಬೇತುದಾರ ಮಾರುತಿ ಗೌಡ ಮೇಲೆ ಹಲ್ಲೆ ಮಾಡಿದ ಆರೋಪದಡಿ ಜೈಲು ಸೇರಿದ್ದ ವಿಜಯ್‌, ಜಾಮೀನು ಮೇಲೆ ಹೊರಬಂದಿದ್ದರು. ಈಗ ಮಗಳೇ ಅವರ ವಿರುದ್ಧ ತಿರುಗಿಬಿದ್ದಿದ್ದು, ಮತ್ತೊಂದು ಸಂಕಷ್ಟ ಎದುರಿಸುವಂತಾಗಿದೆ.

ಇನ್ನಷ್ಟು ಓದು

ವಿಚಾರಣೆಗೆ ಹಾಜರಾದ ದುನಿಯಾ ವಿಜಯ್

ಪೊಲೀಸರೆದುರೇ ವಿಜಯ್ ಮುಖಕ್ಕೆ ಗುದ್ದಿದ ಕಿಟ್ಟಿ!

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು