ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂತ್ರಜ್ಞಾನ ಯುಗದಲ್ಲಿ ಕಂಪ್ಯೂಟರ್ ಜ್ಞಾನ ಅಗತ್ಯ: ದಯಾಪಾತ್ರ ನವಾಟಿಯಾ

ಮೈಂಡ್‌ಟ್ರೀ ಫೌಂಡೇಷನ್‌ನ ದಯಾಪಾತ್ರ ನವಾಟಿಯಾ ಅಭಿಮತ *ಬಾಲಕಿಯರ ಕಾಲೇಜಿಗೆ 15 ಕಂಪ್ಯೂಟರ್ ದಾನ
Last Updated 4 ಆಗಸ್ಟ್ 2021, 15:22 IST
ಅಕ್ಷರ ಗಾತ್ರ

ಬೆಂಗಳೂರು: ‘ತಂತ್ರಜ್ಞಾನ ಯುಗದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಕಂಪ್ಯೂಟರ್‌ ಜ್ಞಾನ ಹೊಂದಬೇಕು. ಬದಲಾದ ಪರಿಸ್ಥಿತಿಯಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಈ ಜ್ಞಾನವು ಅಗತ್ಯ’ ಎಂದು ಮೈಂಡ್‌ಟ್ರೀ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ದಯಾಪಾತ್ರ ನವಾಟಿಯಾ ತಿಳಿಸಿದರು.

ಬಸವನಗುಡಿಯ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಂಪ್ಯೂಟರ್‌ ಪ್ರಯೋಗಾಲಯವನ್ನು ಉದ್ಘಾಟಿಸಿದರು. ಮೈಂಡ್‌ಟ್ರೀ ಕಂಪನಿಯು ರೈಟ್‌ ಟು ಲಿವ್ ಸರ್ಕಾರೇತರ ಸಂಸ್ಥೆಯ ಸಹಯೋಗದಲ್ಲಿ 15 ಕಂಪ್ಯೂಟರ್‌ಗಳನ್ನು ಕಾಲೇಜಿಗೆ ದಾನವಾಗಿ ನೀಡಿದೆ.

‘ಕೋವಿಡ್‌ನಿಂದ ಒಂದೂವರೆ ವರ್ಷದಿಂದ ಎಲ್ಲ ವರ್ಗದವರೂ ಸಮಸ್ಯೆಗಳನ್ನು ಎದುರಿಸಿದ್ದಾರೆ. ಶಿಕ್ಷಣ ವ್ಯವಸ್ಥೆಯಲ್ಲಿ ಕೂಡ ಸಾಕಷ್ಟು ಬದಲಾವಣೆಯಾಗಿವೆ. ಆನ್‌ಲೈನ್ ಶಿಕ್ಷಣದಿಂದಾಗಿ ಸ್ಮಾರ್ಟ್‌ಫೋನ್ ಹೊಂದಿರದ ಬಡ ವರ್ಗದ ಕೆಲ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಎಲ್ಲರಿಗೂ ಡಿಜಿಟಲ್ ಶಿಕ್ಷಣ ಸಿಗುವಂತಾಗಬೇಕು. ತಂತ್ರಜ್ಞಾನದ ಬಳಕೆಯ ಬಗ್ಗೆಯೂ ವಿದ್ಯಾರ್ಥಿಗಳು ತಿಳಿದಿರಬೇಕು. ಅಂತಹ ಶಿಕ್ಷಣ ನೀಡಬೇಕು’ ಎಂದರು.

ಮೈಂಡ್‌ಟ್ರೀ ಕಂಪನಿಯ ಪ್ರಧಾನ ವ್ಯವಸ್ಥಾಪಕ ಅಬ್ರಾಹಂ ಮೋಸೆಸ್ ಮಾತನಾಡಿ, ‘ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣದ ಜೊತೆಗೆ ಮಕ್ಕಳಿಗೆ ಸುರಕ್ಷತೆಯನ್ನೂ ಒದಗಿಸಬೇಕು. ಸರ್ಕಾರಿ ಶಾಲಾ–ಕಾಲೇಜುಗಳಲ್ಲಿ ಶಿಕ್ಷಣಕ್ಕೆ ಉತ್ತಮ ಪರಿಸರವಿದ್ದರೂ ಅದರ ನಿರ್ವಹಣೆ ಸಮರ್ಪಕವಾಗಿ ಆಗುತ್ತಿಲ್ಲ. ಶಿಕ್ಷಕರು ಮೂಲಸೌಕರ್ಯಕ್ಕಾಗಿ ದಾನಿಗಳನ್ನು ಸಂಪರ್ಕಿಸುವ ಮೊದಲು ಶಾಲೆಯ ಕಟ್ಟಡಕ್ಕೆ ಸುಣ್ಣ ಬಣ್ಣದಂತಹ ಕೆಲಸಗಳನ್ನು ಮಾಡಿಸಬೇಕು. ಆಗ ದಾನಿಗಳು ಕೂಡ ಮುಂದೆಬರುತ್ತಾರೆ’ ಎಂದರು.

ರೈಟ್‌ ಟು ಲಿವ್ ಸರ್ಕಾರೇತರ ಸಂಸ್ಥೆಯ ಸಂಸ್ಥಾಪನಾ ಟ್ರಸ್ಟಿ ರಘುರಾಮ್ ಕೋಟೆ, ‘ವಿದ್ಯಾರ್ಥಿಗಳ ಡಿಜಿಟಲ್ ಕಲಿಕೆಗೆ ಒತ್ತು ನೀಡಲು ಸರ್ಕಾರಿ ಪದವಿಪೂರ್ವ ಕಾಲೇಜು, ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಕಂಪ್ಯೂಟರ್ ಪ್ರಯೋಗಾಲಯಗಳನ್ನು ತೆರೆದು, ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುತ್ತಿದ್ದೇವೆ. ಶೀಘ್ರದಲ್ಲಿಯೇ 10ಕ್ಕೂ ಅಧಿಕ ಕಂಪ್ಯೂಟರ್‌ ಪ್ರಯೋಗಾಲಯಗಳನ್ನು ತೆರೆಯಲಾಗುತ್ತದೆ’ ಎಂದರು.

‘3 ತಿಂಗಳಲ್ಲಿ ಕಾಲೇಜಿಗೆ ಹೊಸ ಸ್ಪರ್ಶ’

‘ಬಸವನಗುಡಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಕಟ್ಟಡವು ಸುಣ್ಣ, ಬಣ್ಣ ಹಾಗೂ ಮೂಲಸೌಲಭ್ಯಕ್ಕೆ ಎದುರು ನೋಡುತ್ತಿದೆ. ಮೂರು ತಿಂಗಳಲ್ಲಿ ಇದಕ್ಕೆ ಹೊಸ ಸ್ಪರ್ಶ ನೀಡಲಾಗುವುದು. ಈ ಕಾರ್ಯಕ್ಕೆ ಸರ್ಕಾರೇತರ ಸಂಸ್ಥೆಯೊಂದು ಮುಂದೆ ಬಂದಿದೆ’ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ (ಬೆಂಗಳೂರು ದಕ್ಷಿಣ) ಉಪನಿರ್ದೇಶಕ ರಾಜಕುಮಾರ್ ಬಿ.ಎಂ. ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಜಿ. ನಾಗಣ್ಣ, ‘ನಮ್ಮ ಕಾಲೇಜಿನಲ್ಲಿ 700 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಸಂಖ್ಯೆಯನ್ನು ಎರಡು ಸಾವಿರಕ್ಕೆ ಹೆಚ್ಚಳ ಮಾಡುವ ಗುರಿ ಹೊಂದಿದ್ದೇವೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT