ಸೋಮವಾರ, ಜೂನ್ 27, 2022
28 °C
ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್‌ ಅಭಿಮತ

‘ನ್ಯಾಯಾಂಗದ ಮೇಲಿನ ಟೀಕೆ ರಚನಾತ್ಮಕವಾಗಿರಲಿ’- ಎಚ್.ಎನ್. ನಾಗಮೋಹನದಾಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ನ್ಯಾಯಾಂಗವನ್ನು ಟೀಕಿಸುವ ಹಕ್ಕನ್ನು ನಮ್ಮ ಸಂವಿಧಾನವೂ ಪ್ರತಿಯೊಬ್ಬರಿಗೂ ನೀಡಿದೆ. ‌ಆದರೆ, ಈ ಟೀಕೆ ಅಥವಾ ವಿಮರ್ಶೆಯು ರಚನಾತ್ಮಕವಾಗಿರಬೇಕೇ ವಿನಾ ನಮ್ಮ ಹಿರಿಯರು ಕಟ್ಟಿದ ನ್ಯಾಯಾಂಗ ವ್ಯವಸ್ಥೆಯನ್ನು ಹಾಳು ಮಾಡುವಂತಿರಬಾರದು’ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್‌ ಸಲಹೆ ನೀಡಿದರು.

ಬೆಂಗಳೂರು ನಗರ ಮತ್ತು ಮೈಸೂರು ವಿಶ್ವವಿದ್ಯಾಲಯಗಳ ಪತ್ರಿಕೋದ್ಯಮ ವಿಭಾಗದ ವತಿಯಿಂದ ‘ದೇಶದ್ರೋಹದ ಕಾನೂನು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ’ ಕುರಿತು ಸೋಮವಾರ ಆನ್‌ಲೈನ್‌ನಲ್ಲಿ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

’ಕೇರಳದ ಶಾಲೆಯಲ್ಲಿ ರಾಷ್ಟ್ರಗೀತೆ ಹಾಡುವಾಗ ಕೆಲವು ಮಕ್ಕಳು ಮೌನವಾಗಿ ನಿಂತಿದ್ದರು. ರಾಷ್ಟ್ರಗೀತೆ ಹಾಡಲಿಲ್ಲ. ಇದನ್ನು ಗಮನಿಸಿದ ಆ ಶಾಲೆಯ ಮುಖ್ಯಶಿಕ್ಷಕ ಆ ಮಕ್ಕಳನ್ನು ಶಾಲೆಯಿಂದ ಅಮಾನತುಗೊಳಿಸಿದರು. ಕೇರಳ ಹೈಕೋರ್ಟ್‌ ಕೂಡ ಮುಖ್ಯಶಿಕ್ಷಕರ ಕ್ರಮ ಸರಿ ಎಂದು ಹೇಳಿತು. ಪ್ರಕರಣ ಸುಪ್ರೀಂಕೋರ್ಟ್‌ವರೆಗೂ ಹೋಯಿತು. ನ್ಯಾಯಮೂರ್ತಿ ಚಿನ್ನಪ್ಪರೆಡ್ಡಿ ಪೀಠವು ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡಿತು. ಮಕ್ಕಳು ಅವರ ಧಾರ್ಮಿಕ ನಂಬಿಕೆಗೆ ಅನುಗುಣವಾಗಿ ಮೌನವಾಗಿದ್ದರು. ಅವರು ಮೌನವಾಗಿರುವುದೂ ಅಭಿವ್ಯಕ್ತಿ ಸ್ವಾತಂತ್ರ್ಯ. ರಾಷ್ಟ್ರದ್ರೋಹದ ಪ್ರಶ್ನೆ ಇಲ್ಲಿ ಉದ್ಭವಿಸುವುದಿಲ್ಲ. ಮಕ್ಕಳನ್ನು ಅಮಾನತುಗೊಳಿಸಿದರೆ ಸಂವಿಧಾನದ ಮೇಲಿನ ಗೌರವವನ್ನು ನಾವೇ ಕಡಿಮೆಗೊಳಿಸಿದಂತಾಗುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿತ್ತು’ ಎಂದು ಅವರು ಉದಾಹರಿಸಿದರು.

‘ನಮ್ಮ ಸಂಸ್ಕೃತಿಯು ಸಹನೆಯೇ ಮುಖ್ಯ ಎನ್ನುತ್ತದೆ, ನಮ್ಮ ತತ್ವಶಾಸ್ತ್ರಗಳು ಸಹನೆ, ತಾಳ್ಮೆಯನ್ನೇ ಉಲ್ಲೇಖಿಸುತ್ತವೆ. ಅದರಂತೆ ನಮ್ಮ ಸಂವಿಧಾನವು ಸಹನೆ, ತಾಳ್ಮೆಯ ಗುಣವನ್ನು ಪಾಲಿಸುತ್ತದೆ. ನ್ಯಾಯಾಂಗವನ್ನು ಟೀಕಿಸುವ ಹಕ್ಕನ್ನು ಸಂವಿಧಾನ ಕೊಟ್ಟಿದ್ದರೂ ಅದನ್ನು ವಿವೇಚನೆಯಿಂದ ಬಳಸಬೇಕು. ನಮ್ಮ ವಿಮರ್ಶೆಗಳು, ಟೀಕೆಗಳನ್ನು ಈ ವ್ಯವಸ್ಥೆಯನ್ನು ವಿಸ್ತರಿಸುವಂತಿರಬೇಕು, ಹಾಳು ಮಾಡುವಂತಿರಬಾರದು’ ಎಂದು ಪುನರುಚ್ಚರಿಸಿದರು.

‘ಇತ್ತೀಚೆಗಿನ ಕೆಲವು ಬೆಳವಣಿಗೆಗಳನ್ನು ನೋಡಿದಾಗ, ರಾಜದ್ರೋಹ ಅಥವಾ ದೇಶದ್ರೋಹದ ಕಾನೂನಿನ ಅನುಷ್ಠಾನದಲ್ಲಿ ನಾವು ಎಡವಿದ್ದೇವೇನೋ ಎನಿಸುತ್ತದೆ. ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕಲು ಬ್ರಿಟಿಷ್‌ ಸರ್ಕಾರವು ಇಂತಹ ದಮನಕಾರಿ ಕಾನೂನುಗಳನ್ನು ರೂಪಿಸಿತ್ತು. ಆದರೆ, ಸ್ವಾತಂತ್ರ್ಯ ಬಂದ ನಂತರವೂ ನಮ್ಮ ಸರ್ಕಾರಗಳು ಈ ಕಾನೂನುಗಳನ್ನು ಮುಂದುವರಿಸಿರುವುದು ದುರದೃಷ್ಟಕರ’ ಎಂದು  ಅಭಿಪ್ರಾಯಪಟ್ಟರು.

ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ. ನಿರಂಜನ ವಾನಳ್ಳಿ, ಬೆಂಗಳೂರು ನಗರ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಎನ್. ನರಸಿಂಹಮೂರ್ತಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು