ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಫಲಾನುಭವಿಗಳನ್ನು ಹಿಯಾಳಿಸುತ್ತಿರುವ ಬಿಜೆಪಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
Published 4 ಮಾರ್ಚ್ 2024, 23:30 IST
Last Updated 4 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ನೆಲಮಂಗಲ: ‘ರಾಜ್ಯ ಸರ್ಕಾರದ ಯೋಜನೆಗಳ ನಾಲ್ಕೂವರೆ ಕೋಟಿ ಫಲಾನುಭವಿಗಳನ್ನು ಬಿಜೆಪಿ ಹೀಯಾಳಿಸುತ್ತಿದೆ, ಅವಮಾನಿಸುತ್ತಿದೆ‘ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಜಿಲ್ಲೆಗಳಿಗೆ ಸಂಬಂಧಿಸಿದಂತೆ ಸೋಮವಾರ ಸಮೀಪದ ಬೂದಿಹಾಳ ಗ್ರಾಮದಲ್ಲಿ ಆಯೋಜಿಸಿದ್ದ ವೃಷಭಾವತಿ ಏತ ನೀರಾವರಿ ಯೋಜನೆಯ ಶಂಕುಸ್ಥಾಪನೆ, ನೆಲಮಂಗಲ ವಿಧಾನಸಭಾ ಕ್ಷೇತ್ರದ ವಿವಿಧ ಸರ್ಕಾರಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ರಾಜ್ಯದ ಜನರಿಗೆ ಅನ್ನ ಕೊಡಬೇಕು. ಹಾಗಾಗಿ, ಪ್ರತಿ ಕೆಜಿ ಅಕ್ಕಿಗೆ ₹ 34 ಕೊಡ್ತೀವಿ. ನಮಗೆ ಅಕ್ಕಿ ಕೊಡಿ ಎಂದು ಕೇಂದ್ರಕ್ಕೆ ಕೇಳಿದೆವು. ಆದರೆ, ಕೇಂದ್ರ ಸರ್ಕಾರ ಅಕ್ಕಿ ಕೊಡಲು ನಿರಾಕರಿಸಿತು. ಬಡವರಿಗೆ ಅನ್ನ ನಿರಾಕರಿಸುವ ಬಿಜೆಪಿಗೆ ನಾಚಿಕೆ ಕೂಡ ಆಗಲಿಲ್ಲ. ನಾವು ಅಕ್ಕಿ ಬದಲಿಗೆ ಹಣವನ್ನು ಬಡವರ ಖಾತೆಗೆ ಹಾಕಿದರೆ ಆ ಫಲಾನುಭವಿಗಳನ್ನು ಬಿಜೆಪಿ ಅವಮಾನಿಸುತ್ತಿದೆ. ಅದೇ ಬಿಜೆಪಿಗೆ ಚಾಳಿ ಆಗಿಬಿಟ್ಟಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಪಾಠ ಕಲಿಸಿ‘ ಎಂದು ಹೇಳಿದರು.

‘ಕೆ.ಸಿ.ವ್ಯಾಲಿ ಮತ್ತು ಎಚ್‌.ಎನ್.ವ್ಯಾಲಿಗೆ ₹ 3,000 ಕೋಟಿ ಮತ್ತು ವೃಷಭಾವತಿ ವ್ಯಾಲಿ ಯೋಜನೆಗೆ ₹ 2,240 ಕೋಟಿ ವೆಚ್ಚ ಮಾಡುತ್ತಿದ್ದೇವೆ. ಇದರಿಂದ ಬೆಂಗಳೂರು ನಗರ, ಗ್ರಾಮಾಂತರ, ತುಮಕೂರು ಜಿಲ್ಲೆಗಳ ಜನರ ನೀರಿನ ಬವಣೆ ಶಾಶ್ವತವಾಗಿ ಪರಿಹಾರಗೊಳ್ಳಲಿದೆ. ಮೊದಲ ಹಂತದಲ್ಲಿ 70 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದೆ’ ಎಂದು ವಿವರಿಸಿದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮಾತನಾಡಿ, ‘ನಮ್ಮ ಗ್ಯಾರಂಟಿ ಯೋಜನೆಗಳನ್ನು ಕಾರ್ಕಳದ ಶಾಸಕ ಸುನೀಲ್‌ ಕುಮಾರ್‌ ಹೊಗಳಿದರೆ, ತೀರ್ಥಹಳ್ಳಿಯ ಶಾಸಕ ಅರಗ ಜ್ಞಾನೇಂದ್ರ 420 ಯೋಜನೆ ಎಂದು ಲೇವಡಿ ಮಾಡಿದ್ದಾರೆ. ಬಿಜೆಪಿ ಗೊಂದಲದಲ್ಲಿ ಮುಳುಗಿದೆ. ಆರ್‌. ಅಶೋಕ್‌ ಮತ್ತು ಜೆಡಿಎಸ್‌ ತಾಕತ್ತಿದ್ದರೆ ಅವರ ಕಾರ್ಯಕರ್ತರಿಗೆ ಗ್ಯಾರಂಟಿ ತಿರಸ್ಕರಿಸಲು ಕರೆ ನೀಡಲಿ’ ಎಂದು ಸವಾಲು ಹಾಕಿದರು.

‘ಶ್ರೀಮಂತ ದೇವಸ್ಥಾನಗಳಿಂದ ಆದಾಯದ ಶೇ 10 ರಷ್ಟು ಹಣ ಪಡೆದು ಬಡ ದೇವಸ್ಥಾನಗಳಿಗೆ, ಅಲ್ಲಿನ ಅರ್ಚಕರಿಗೆ ಸಹಾಯ ಮಾಡಲು ಹೊರಟರೆ ಬಿಜೆಪಿ ಅಡ್ಡಗಾಲು ಹಾಕಿತು. ಎರಡು ತಿಂಗಳು ಕಳೆದ ಮೇಲೆ ಮತ್ತೊಮ್ಮೆ ಈ ಮಸೂದೆಯನ್ನು ಮಂಡಿಸಿ ಒಪ್ಪಿಗೆ ಪಡೆದು ಅನುಷ್ಠಾನಕ್ಕೆ ತರುತ್ತೇವೆ’ ಎಂದು ತಿಳಿಸಿದರು.

ಆಹಾರ ಮತ್ತು ನಾಗರಿಕ ಸರಬರಾಜು ವ್ಯವಹಾರ ಸಚಿವ ಕೆ.ಎಚ್. ಮುನಿಯಪ್ಪ, ವಸತಿ ಸಚಿವ ಜಮೀರ್ ಅಹಮದ್ ಖಾನ್ , ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜ್, ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಶರತ್ ಬಚ್ಚೇಗೌಡ , ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ಶಾಸಕರಾದ ಎಸ್.ಟಿ.ಸೋಮಶೇಖರ್, ಶಾಸಕ ಎನ್. ಶ್ರೀನಿವಾಸ್  ಉಪಸ್ಥಿತರಿದ್ದರು.

ನಾವು  ದೇವರು-ಧರ್ಮದ ಹೆಸರಲ್ಲಿ ಭಾವನಾತ್ಮಕವಾಗಿ ಕೆರಳಿಸಿ ಅಧಿಕಾರ ನಡೆಸುವುದಿಲ್ಲ. ಅನ್ನ-ಆರೋಗ್ಯ-ಅಕ್ಷರ-ಸೂರು-ನೀರಿಗಾಗಿ ಕಾರ್ಯಕ್ರಮ ಜಾರಿ ಮಾಡಿದ್ದೇವೆ.
– ಸಿದ್ದರಾಮಯ್ಯ, ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT