ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರ ಹಣ ದುರ್ಬಳಕೆ: ತನಿಖೆಗೆ ಆಗ್ರಹ; ಸಾವಿರಾರು ಕಾರ್ಮಿಕರಿಂದ ಪ್ರತಿಭಟನೆ

Last Updated 20 ಸೆಪ್ಟೆಂಬರ್ 2021, 16:23 IST
ಅಕ್ಷರ ಗಾತ್ರ

ಬೆಂಗಳೂರು: ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಹಣ ದುರುಪಯೋಗದ ಬಗ್ಗೆ ತನಿಖೆಗೆ ಆಗ್ರಹಿಸಿ ಕಟ್ಟಡ ಕಾರ್ಮಿಕರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಸಾವಿರಾರು ಕಾರ್ಮಿಕರು ಪಾಲ್ಗೊಂಡಿದ್ದರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್‌) ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದ ತನಕ ಮೆರವಣಿಗೆ ನಡೆಸಿದರು. ಉ‌ದ್ಯಾನದ ಪಕ್ಕದ ರಸ್ತೆಯಲ್ಲಿ ಧರಣಿ ಸತ್ಯಾತ್ರಹ ನಡೆಸಿದರು.

‘ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ನೀಡಲೆಂದು ರಚನೆಯಾದ ಕಾರ್ಮಿಕ ಕಲ್ಯಾಣ ಮಂಡಳಿಯು ಮಂತ್ರಿಗಳು ಮತ್ತು ಅಧಿಕಾರಿಗಳ ಕಪಿಮುಷ್ಟಿಗೆ ಸಿಲುಕಿ ಉದ್ದೇಶವೇ ಮಣ್ಣು ಪಾಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕಾರ್ಮಿಕರಿಗೆ ನೇರ ನಗದು ವರ್ಗಾವಣೆ ಸವಲತ್ತು ನೀಡಲು ಕಾನೂನಿನ ನೂರೆಂಟುಅಡ್ಡಿಗಳನ್ನು ಒಡ್ಡಲಾಗುತ್ತಿದೆ. ಆದರೆ, ಕಾರ್ಮಿಕರಿಗೆ ಅಗತ್ಯವಿಲ್ಲದ ಟೆಂಡರ್ ಆಧಾರಿತ ಕಾರ್ಯಕ್ರಮಗಳನ್ನು ನಿಯಮ ಮೀರಿ ಜಾರಿಗೆ ತರಲಾಗುತ್ತಿದೆ. ಇದರಿಂದ ಮಂಡಳಿಯ ಹಣ ಕಾರ್ಮಿಕರಿಗೆ ಸಿಗುವ ಬದಲು ಮಂತ್ರಿಗಳು, ಅಧಿಕಾರಿಗಳ ಬಂಗಲೆ ಸೇರುತ್ತಿದೆ’ ಎಂದು ದೂರಿದರು.

‘21 ಲಕ್ಷ ಕಳಪೆ ದಿನಸಿ ಕಿಟ್‌, ಸುರಕ್ಷತಾ ಕಿಟ್, ಬೂಸ್ಟಪ್‌ ಕಿಟ್‌, ಆಂಬುಲೆನ್ಸ್‌, ಕಾರುಗಳ ಖರೀದಿ, ಕಂಪ್ಯೂಟರ್ ಮತ್ತು ಟಿ.ವಿ ಖರೀದಿ, ಕ್ಯಾಲೆಂಡರ್ ಮುದ್ರಣದ ಬಗ್ಗೆ ಸದನ ಸಮಿತಿಯಿಂದ ತನಿಖೆ ನಡೆಸಬೇಕು. ವಲಸಿಗರ ಹೆಸರಿನಲ್ಲಿ ಭವ್ಯ ಸೌಧ ಕಟ್ಟುವ ಪ್ರಸ್ತಾಪ ಕೈಬಿಡಬೇಕು’ ಎಂದು ಒತ್ತಾಯಿಸಿದರು.

‘ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನಕ್ಕೆ ಅರ್ಜಿ ಸ್ವೀಕಾರ ಕಾರ್ಯವನ್ನು ಕೂಡಲೇ ಆರಂಭಿಸಬೇಕು. ಕೋವಿಡ್‌ನಿಂದ ಮೃತಪಟ್ಟ ಕಾರ್ಮಿಕರಿಗೆ ₹2 ಲಕ್ಷ ಪರಿಹಾರ ನೀಡಬೇಕು. ಹೆಚ್ಚಿಸಲಾದ ಪಿಂಚಣಿ ಮತ್ತು ಮದುವೆ ಧನ ಸಹಾಯ ಜಾರಿಯಾಗಬೇಕು’ ಎಂದು ಆಗ್ರಹಿಸಿದರು.

‘ಅರೆ ಕಾಸಿನ ವೈದ್ಯಕೀಯ ಸಹಾಯಧನ ಕೈಬಿಟ್ಟು ₹5 ಲಕ್ಷ ವೈದ್ಯಕೀಯ ನೆರವು ಜಾರಿ ಮಾಡಬೇಕು. ಹೆರಿಗೆ ಭತ್ಯೆಯನ್ನು ಪುರುಷ ಫಲಾನುಭವಿಯ ಪತ್ನಿಗೂ ವಿಸ್ತರಿಸಬೇಕು. ಮನೆ ನಿರ್ಮಾಣಕ್ಕೆ ₹5 ಲಕ್ಷ ಸಹಾಯಧನ ನೀಡಬೇಕು. ಪ್ರಕಟಿಸಿರುವ 19 ಸೌಲಭ್ಯಗಳನ್ನು ಜಾರಿಗೆ ತರಬೇಕು’ ಎಂದು ಸಮಿತಿಯ ಸಂಚಾಲಕ ಕೆ. ಮಹಾಂತೇಶ್ ಮನವಿ ಮಾಡಿದರು.

ಕಾರ್ಮಿಕ ಮುಖಂಡರಾದ ‌‌‌ಎನ್‌.ಪಿ. ಸ್ವಾಮಿ, ಶಿವಣ್ಣ, ಬಿ. ಉಮೇಶ್, ವೆಂಕಟೇಶ್, ವನಜಾ ಕುಮಾರ್, ಷಣ್ಮುಗಂ, ಪ್ರಭಾಕರ್, ಎಚ್.ಟಿ. ಉಮೇಶ್, ಧನಶೇಖರ್, ಶಾಮಣ್ಣರೆಡ್ಡಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT