ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಟಗಾರಿಕೆ ಇಲಾಖೆ ಗುತ್ತಿಗೆ ನೌಕರ ಬಂಧನ

ಮುಖ್ಯಮಂತ್ರಿ ಕಾರ್ಯದರ್ಶಿ ಹೆಸರಿನಲ್ಲಿ ನಕಲಿ ಶಿಫಾರಸು ಪತ್ರ
Last Updated 10 ಫೆಬ್ರುವರಿ 2020, 20:33 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಆಗಿರುವ ಶಾಸಕ ಎಸ್.ಆರ್.ವಿಶ್ವನಾಥ್ ಅವರ ನಕಲಿ ಸಹಿ ಮಾಡಿ ಶಿಫಾರಸು ಪತ್ರ ಸೃಷ್ಟಿಸಿದ್ದ ಆರೋಪದಡಿ ಬಿ. ಬಸವಲಿಂಗಯ್ಯ (45) ಎಂಬಾತನನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ.

‘ಸ್ಥಳೀಯ ನಿವಾಸಿ ಬಸವಲಿಂಗಯ್ಯ, ತೋಟಗಾರಿಕೆ ಇಲಾಖೆಯಲ್ಲಿ ಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದ. ಹಣದ ಆಸೆಗಾಗಿ ಕೃತ್ಯ ಎಸಗಿರುವುದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ’ ಎಂದು ಪೊಲೀಸರು ಹೇಳಿದರು.

’ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿಯಲ್ಲಿ ಸಹಾಯಕ ಕಾರ್ಯದರ್ಶಿ ಆಗಿದ್ದ ಬಿ.ಕೆ.ಚಂದ್ರಕಾಂತ್ ಅವರನ್ನು ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಸಹಾಯಕ ಯೋಜನಾಧಿಕಾರಿ ಆಗಿರುವ ವಿಠ್ಠಲ್ ಕಾವಳೆ ಅವರ ಜಾಗಕ್ಕೆ ವರ್ಗಾವಣೆ ಮಾಡಿಸುವ ಸಲುವಾಗಿ ವಿಶ್ವನಾಥ್‌ ಹೆಸರಿನಲ್ಲಿ ಆರೋಪಿ ನಕಲಿ ಶಿಫಾರಸು ಪತ್ರ ಸಿದ್ಧಪಡಿಸಿದ್ದ’

‘ನಕಲಿ ಶಿಫಾರಸು ಪತ್ರವನ್ನೇ ಮುಖ್ಯಮಂತ್ರಿ ಕಚೇರಿಗೆ ಕಳುಹಿಸಿದ್ದ. ಪತ್ರ ಅಸಲಿ ಎಂದು ತಿಳಿದಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವರ್ಗಾವಣೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮುಖ್ಯ ಕಾರ್ಯದರ್ಶಿಗೂ ಕಳುಹಿಸಿದ್ದರು. ಆ ವಿಷಯ ವಿಶ್ವನಾಥ್ ಅವರಿಗೆ ಗೊತ್ತಾಗಿತ್ತು. ಪತ್ರ ಪರಿಶೀಲಿಸಿದಾಗ ಸಹಿ ನಕಲಿ ಎಂಬುದು ತಿಳಿಯಿತು. ಅವರೇ ಠಾಣೆಗೆ ದೂರು ನೀಡಿದ್ದರು’ ಎಂದು ಪೊಲೀಸರು ಹೇಳಿದರು.

‘ಚಂದ್ರಕಾಂತ್ ಅವರು ವರ್ಗಾವಣೆಗೆ ಪ್ರಯತ್ನಿಸುತ್ತಿದ್ದರು. ಸ್ನೇಹಿತರೊಬ್ಬರ ಬಳಿ ಹೇಳಿಕೊಂಡಿದ್ದರು. ಅದನ್ನು ತಿಳಿದುಕೊಂಡ ಆರೋಪಿ ನಕಲಿ ಶಿಫಾರಸು ಪತ್ರ ಸೃಷ್ಟಿಸಿ ವರ್ಗಾವಣೆ ಮಾಡಿಸಲು ಮುಂದಾಗಿದ್ದ. ವರ್ಗಾವಣೆ ಆದ ನಂತರ ತಾನೇ ಮಾಡಿಸಿರುವುದಾಗಿ ಹೇಳಿ ಹಣ ಪಡೆಯುವುದು ಆತನ ಉದ್ದೇಶವಾಗಿತ್ತು. ನಕಲಿ ಪತ್ರ ಸೃಷ್ಟಿಸಿದ್ದ ಸಂಗತಿ ಚಂದ್ರಕಾಂತ್ ಅವರಿಗೆ ಗೊತ್ತಿರಲಿಲ್ಲ’ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT