ಭಾನುವಾರ, ಮಾರ್ಚ್ 29, 2020
19 °C
ಸದ್ಯ ಚಿಕಿತ್ಸೆ ಪಡೆಯುತ್ತಿರುವ ಒಳರೋಗಿಗಳ ಸ್ಥಳಾಂತರಕ್ಕೆ ಕೋವಿಡ್‌–19 ಕಾರ್ಯಪಡೆ ತೀರ್ಮಾನ

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೊರೊನಾ ಸೋಂಕಿತರು ಹಾಗೂ ಸೋಂಕು ಶಂಕಿತರಿಗೆ ಚಿಕಿತ್ಸೆ ನೀಡಲು ವಿಕ್ಟೋರಿಯಾ ಆಸ್ಪತ್ರೆಯನ್ನು ಮೀಸಲಿಡುವುದಾಗಿ  ಕೋವಿಡ್‌–19 ಕಾರ್ಯಪಡೆ ತೀರ್ಮಾನ ತೆಗೆದುಕೊಂಡಿದೆ. 

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್, ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ನಾರಾಯಣ ಹೃದಯಾಲಯದ ಡಾ. ದೇವಿ ಶೆಟ್ಟಿ ಮುಂತಾದವರು ಇರುವ ಕಾರ್ಯಪಡೆಯ ಜೊತೆ ಭಾನುವಾರ ತುರ್ತು ಸಭೆ ನಡೆಸಿ, ಈ ನಿರ್ಧಾರ ಪ್ರಕಟಿಸಿದ್ದಾರೆ. 

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ಸದ್ಯ ಸೋಂಕಿತರು ಹಾಗೂ ಸೊಂಕು ಶಂಕಿತರಿಗೆ ರಾಜೀವ್‌
ಗಾಂಧಿ ಎದೆರೋಗಗಳ ಆಸ್ಪತ್ರೆ, ಜಯನಗರದ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್‌ಗಳನ್ನು ನಿರ್ಮಿಸಿ, ಚಿಕಿತ್ಸೆ ನೀಡುತ್ತಿದ್ದೇವೆ. ಈ ರೀತಿ ವಿವಿಧ ಆಸ್ಪತ್ರೆಗಳಲ್ಲಿ ಅವರನ್ನು ದಾಖಲಿಸಿಕೊಂಡಲ್ಲಿ ಚಿಕಿತ್ಸೆಗೆ ಸಮಸ್ಯೆಯಾಗುವ ಸಾಧ್ಯತೆಯಿದೆ. 1,700 ಹಾಸಿಗೆಗಳ ಸಾಮರ್ಥ್ಯ ಹೊಂದಿರುವ ವಿಕ್ಟೋರಿಯಾ ಆಸ್ಪತ್ರೆಯನ್ನು ಕೋವಿಡ್‌ ರೋಗಿಗಳಿಗಾಗಿಯೇ ವಿಶೇಷ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗುವುದು’ ಎಂದರು. 

ವಿಕ್ಟೋರಿಯಾದಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿರುವರನ್ನು ಕೆ.ಸಿ.ಜನರಲ್, ಜಯನಗರ ಸಾರ್ವಜನಿಕ ಆಸ್ಪತ್ರೆ, ಕಿಮ್ಸ್‌ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ವರ್ಗಾಯಿಸಲು ನಿರ್ಧರಿಸಲಾಗಿದೆ. ಅದೇ ರೀತಿ, ಈಗಾಗಲೇ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿರುವವರನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲು ಸೂಚಿಸಿದ್ದೇವೆ. ತುರ್ತು ಚಿಕಿತ್ಸೆ ಅಗತ್ಯ ಇಲ್ಲದವರನ್ನು ದಾಖಲಿಸಿಕೊಳ್ಳದಂತೆ ಸರ್ಕಾರ ಆಸ್ಪತ್ರೆಗಳಿಗೆ ಸೂಚಿಸಿದೆ. 

ತಪಾಸಣೆ: ಸೋಂಕು ಹರಡದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ರಾಜ್ಯದ ಗಡಿ ಪ್ರದೇಶಗಳನ್ನು ಬಂದ್ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇಷ್ಟು ದಿನ ಸೋಂಕು ಪ್ರಕರಣ ವರದಿಯಾದ ದೇಶಗಳಿಂದ ಬಂದ ಪ್ರಯಾಣಿಕರನ್ನು ಥರ್ಮಲ್‌ ಸ್ಕ್ಯಾನಿಂಗ್‌ಗೆ ಒಳಪಡಿ
ಸಲಾಗುತ್ತಿತ್ತು. ಈಗ ಅಂತರರಾಷ್ಟ್ರೀಯ ವಿಮಾನಯಾನ ಸಂಚಾರವನ್ನು ರದ್ದು ಮಾಡಲಾಗಿದೆ. ಸ್ಥಳೀಯ ವಿಮಾನದ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ಖಾಸಗಿ ಪ್ರಯೋಗಾಲಯಗಳಿಗೂ ಅವಕಾಶ

ಸೋಂಕು ಹರಡದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಪ್ರತಿ ಹತ್ತು ಲಕ್ಷ ಜನಸಂಖ್ಯೆಗೆ ಕನಿಷ್ಠ 200 ಜನರನ್ನು ಪರೀಕ್ಷೆ ಮಾಡುವಂತಹ ಸೌಕರ್ಯಗಳನ್ನು ಸಜ್ಜುಗೊಳಿಸಬೇಕು ಎಂದು ಕಾರ್ಯಪಡೆಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಈ ಸಂಬಂಧ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಹಾಗೂ ರಾಷ್ಟ್ರೀಯ ರೋಗಸೂಕ್ಷ್ಮಾಣು ಅಧ್ಯಯನ ಸಂಸ್ಥೆಯ (ಎನ್‌ಐವಿ) ಸಹಕಾರದೊಂದಿಗೆ ಆದಷ್ಟು ಸರ್ಕಾರ ಹಾಗೂ ಸರ್ಕಾರೇತರ ಪ್ರಯೋಗಾಲಯಗಳಿಗೆ ಮಾದರಿಗಳ ಪರೀಕ್ಷೆಗೆ ಪರವಾನಗಿ ನೀಡುಲಾಗುತ್ತದೆ. 

ಕೊರೊನಾ ಸೋಂಕು ಭೀತಿ ನಡುವೆಯೇ ಸೋಂಕು ಶಂಕಿತರ ಸಂಖ್ಯೆ ಹೆಚ್ಚುತ್ತಿದೆ. ಹಾಗಾಗಿ ಸರ್ಕಾರ ಖಾಸಗಿ ಪ್ರಯೋಗಾಲಯಗಳಿಗೂ ಕೋವಿಡ್-19 ಪತ್ತೆ ಪರೀಕ್ಷೆಗೆ ಅವಕಾಶ ನೀಡಿದೆ. ಪರೀಕ್ಷೆಗೆ ಗರಿಷ್ಠ ₹ 4,500 ದರ ವಿಧಿಸಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಈ ಕುರಿತು ಮಾರ್ಗಸೂಚಿಯನ್ನು ಹೊರಡಿಸಿದ್ದು, ಸೋಂಕು ಶಂಕೆ ವ್ಯಕ್ತಿಯ ತಪಾಸಣೆಗೆ ₹ 1,500 ಹಾಗೂ ನಂತರ ಧೃಢೀಕರಣ ಪರೀಕ್ಷೆಗೆ ₹ 3,000 ವಿಧಿಸಬಹುದು. ವೈದ್ಯರ ಶಿಫಾರಸು ಮೇರೆಗೆ ಮಾತ್ರ ಪರೀಕ್ಷೆ ಮಾಡಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು