ಸೋಮವಾರ, ಜೂನ್ 21, 2021
21 °C

ಶುಶ್ರೂಷಕರ ಅಂತರಂಗ: ರೋಗಿಗಳ ಸೇವೆಗೆ ಹೊಂದಾಣಿಕೆ ಅನಿವಾರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕೋವಿಡ್‌ ಪೀಡಿತರ ಆರೈಕೆಯಲ್ಲಿ ತೊಡಗಿಕೊಂಡ ಬಳಿಕ ಜೀವನದಲ್ಲಿ ಕೆಲವೊಂದು ಹೊಂದಾಣಿಕೆ ಮಾಡಿಕೊಂಡು ಸಾಗಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಮೊದಲ ಅಲೆಯ ಅವಧಿಯಲ್ಲಿ 5 ತಿಂಗಳು ಕುಟುಂಬದಿಂದ ಅಂತರ ಕಾಯ್ದುಕೊಂಡಿದ್ದೆ. ಈಗ, ಪತ್ನಿ ಹಾಗೂ ಮಕ್ಕಳ ಮುಖ ನೋಡದೆಯೇ ತಿಂಗಳು ಉರುಳಿದೆ.’

ಇದು ಕೋವಿಡ್‌ ಸೇವೆಯಲ್ಲಿ ನಿರತರಾಗಿರುವ ವಿಕ್ಟೋರಿಯಾ ಆಸ್ಪತ್ರೆಯ ಶುಶ್ರೂಷಾಧಿಕಾರಿ ಕೇಶವಮೂರ್ತಿ ಅವರ ಮನದಾಳದ ಮಾತುಗಳು. ಆಸ್ಪತ್ರೆಯ ತೀವ್ರ ನಿಗಾ ಘಟಕ ಮತ್ತು ಸಾಮಾನ್ಯ ವಾರ್ಡ್‌ಗಳಲ್ಲಿ ಸೇವೆ ನೀಡುತ್ತಿರುವ ಅವರು, ಸುರಕ್ಷತೆಯ ದೃಷ್ಟಿಯಿಂದ ಕುಟುಂಬದ ಸದಸ್ಯರನ್ನು ಊರಿಗೆ ಕಳುಹಿಸಿದ್ದಾರೆ.

‘ಮೊದಲ ಅಲೆ ಕಾಣಿಸಿಕೊಂಡ ವೇಳೆ ನಾನು ಸಂಯೋಜಕನಾಗಿ ಕಾರ್ಯನಿರ್ವಹಿಸಿದೆ. ವಾರ್ಡ್‌ಗಳಲ್ಲಿ ಸೇವೆ ಒದಗಿಸುತ್ತಿರುವವರಿಗೆ ಔಷಧ ಸೇರಿದಂತೆ ಅಗತ್ಯ ಪರಿಕರಗಳು ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತಿದೆ. ಎರಡನೇ ಅಲೆ ಕಾಣಿಸಿಕೊಂಡ ಬಳಿಕ ವಾರ್ಡ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಮೊದಲನೇ ಅಲೆಯ ವೇಳೆ ಸೋಂಕಿತರಿಗೆ ವಿಶೇಷ ಚಿಕಿತ್ಸೆಗಳು ಬೇಕಾ
ಗಿರಲಿಲ್ಲ. ಆದರೆ, ಎರಡನೇ ಅಲೆಯಲ್ಲಿ ಸೋಂಕಿತರು ಗಂಭೀರವಾಗಿ ಅಸ್ವಸ್ಥರಾಗುತ್ತಿದ್ದು, ಬಹುತೇಕರಿಗೆ ಹಾಸಿಗೆಯಿಂದ ಎದ್ದು ಓಡಾಡಲು ಸಾಧ್ಯವಾಗುವುದಿಲ್ಲ. ಪ್ರತಿಯೊಂದಕ್ಕೂ ನಮ್ಮನ್ನೇ ಅವರು ಅವಲಂಬಿಸಿರುತ್ತಾರೆ’ ಎಂದು ತಿಳಿಸಿದರು.

‘ಈಗಾಗಲೇ ಕೋವಿಡ್ ಲಸಿಕೆಯ ಎರಡೂ ಡೋಸ್‌ ಅನ್ನು ಪಡೆದುಕೊಂಡಿದ್ದೇನೆ. ಆಸ್ಪತ್ರೆಯ ಒಳಗಡೆ ಕಾಲಿಡುವಾಗ ಭಯಕ್ಕೆ ಒಳಗಾಗಬಾರದು. ಆದರೂ ಮುನ್ನೆಚ್ಚರಿಕೆಗಳನ್ನು ವಹಿಸಬೇಕಾಗುತ್ತದೆ. ವೈಯಕ್ತಿಕ ಸುರಕ್ಷಾ ಸಾಧನಗಳನ್ನು ಧರಿಸಿ 6 ಗಂಟೆಗಳು ಸೇವೆ ನೀಡಬೇಕಾಗುತ್ತದೆ. ಆ ವೇಳೆ ನೀರು ಕುಡಿಯಲು, ತಿಂಡಿ–ಊಟ ಸೇವಿಸಲು ಸಾಧ್ಯವಾಗುವುದಿಲ್ಲ. ಮೂತ್ರ ವಿಸರ್ಜನೆಗೆ ಕೂಡ ಅವಕಾಶ ಇರುವುದಿಲ್ಲ. ರೋಗಿಗಳ ಸೇವೆ ಹೊರತುಪಡಿಸಿ ಬೇರೆಯ ವಿಚಾರಗಳು ನಮ್ಮಲ್ಲಿ ಮೂಡುವುದಿಲ್ಲ’ ಎಂದರು.

‘ಕೋವಿಡ್ ಪೀಡಿತರು ಆತಂಕ, ಭಯಕ್ಕೆ ಒಳಗಾಗಿರುತ್ತಾರೆ. ಅವರಿಗೆ ಧೈರ್ಯ ತುಂಬಬೇಕಾಗುತ್ತದೆ. ಈಗ ಆಸ್ಪತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ಇರುವುದರಿಂದ ಅವರ ಎಲ್ಲ ಬೇಕು ಬೇಡಗಳನ್ನು ಈಡೇರಿಸುವುದು ಕೆಲವು ವೇಳೆ ಸಾಧ್ಯವಾಗುವುದಿಲ್ಲ. ಎಷ್ಟೋ ರೋಗಿಗಳಿಗೆ ನಾನೇ ಊಟ ಮಾಡಿಸಿದ್ದೇನೆ’ ಎಂದು ವಿವರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು