ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ: ರೋಗಿಗಳಿಗೂ ನಿರ್ಬಂಧ

ವಿವಿಧ ಚಿಕಿತ್ಸೆಗಳನ್ನು ಮುಂದೂಡಲು ಮನವಿ l ಸೋಂಕು ಶಂಕಿತರ ಸಂಖ್ಯೆ ಹೆಚ್ಚಳ
Last Updated 17 ಮಾರ್ಚ್ 2020, 21:40 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ಜಯದೇವ, ಕಿದ್ವಾಯಿ ಸೇರಿದಂತೆ ವಿವಿಧ ಸ್ವಾಯತ್ತ ಸಂಸ್ಥೆಗಳಲ್ಲಿ ರೋಗಿಗಳ ದಟ್ಟಣೆ ಕಡಿಮೆ ಮಾಡಲು ತುರ್ತು ಚಿಕಿತ್ಸೆಗಳು ಅಗತ್ಯ ಇರುವವರನ್ನು ಮಾತ್ರ ದಾಖಲಿಸಿಕೊಳ್ಳಲಾಗುತ್ತದೆ. ದಂತ ಸೇರಿದಂತೆ ವಿವಿಧ ಅಗತ್ಯವಲ್ಲದ ಚಿಕಿತ್ಸೆಗಳನ್ನು ಮುಂದೂಡುವಂತೆ ಸರ್ಕಾರ ಮನವಿ ಮಾಡಿದೆ.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ‘15 ಸ್ವಾಯತ್ತ ಸಂಸ್ಥೆಗಳ ನಿರ್ದೇಶಕರ ಜತೆಗೂ ಸಭೆ ನಡೆಸಲಾಗಿದೆ. ಚಿಕಿತ್ಸೆ ತುರ್ತಾಗಿ ಅಗತ್ಯ ಇರುವ ಪ್ರಕರಣಗಳನ್ನು ಮಾತ್ರ ದಾಖಲಿಸುವಂತೆ ಸೂಚಿಸಲಾಗಿದೆ. ಜಯದೇವ ಹೃದ್ರೋಗ ಸಂಸ್ಥೆ ಒಂದಕ್ಕೇ ನಿತ್ಯ 1,500 ಹೊರ ರೋಗಿಗಳು ಬರುತ್ತಾರೆ. ಅವರ ಜತೆಗೆ 2ರಿಂದ 3 ಸಾವಿರ ಮಂದಿ ಇರುತ್ತಾರೆ. ಇದರಿಂದ ಆಸ್ಪತ್ರೆಗಳಲ್ಲಿ ಜನದಟ್ಟಣೆ ಉಂಟಾಗಿ, ಸೋಂಕು ಹರಡುವ ಸಾಧ್ಯತೆಯಿದೆ. ಎಲ್ಲರಿಗೂ ರೋಗಿಗಳನ್ನು ಭೇಟಿ ಮಾಡುವ ಅವಕಾಶ ನಿರಾಕರಿಸಲಾಗುವುದು. ಆಸ್ಪತ್ರೆಗಳಿಗೂ ಈ ಬಗ್ಗೆ ಸೂಚನೆ ನೀಡಲಾಗುವುದು. ಇದರಿಂದ ಸೋಂಕು ಹರಡುವಿಕೆ ತಡೆಯಲು ಸಾಧ್ಯ. ಎಲ್ಲ ನಿಯಮ ಹಾಗೂ ಸೂಚನೆಗಳು ಮಾ.31ರವರೆಗೆ ಅನ್ವಯವಾಗಲಿದೆ’ ಎಂದರು.

‘ಜನತೆ ಕೂಡ ಈ ತೀರ್ಮಾನಕ್ಕೆ ಸಹಕರಿಸಬೇಕು. ತುರ್ತು ಚಿಕಿತ್ಸೆ ಅಗತ್ಯ ಇದ್ದಲ್ಲಿ ಮಾತ್ರ ಆಸ್ಪತ್ರೆಗಳಿಗೆ ತೆರಳಬೇಕು’ ಎಂದರು.

‘ಇನ್ಫೊಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರು ಸರ್ಕಾರದ ಜತೆಗೆ ಕೈಜೋಡಿಸುವುದಾಗಿ ತಿಳಿಸಿದ್ದಾರೆ. ಹಾಗಾಗಿ 200 ಹಾಸಿಗೆಯ ಬಿಬಿಎಂಪಿ ಆಸ್ಪತ್ರೆಯನ್ನು ನಮ್ಮ ವ್ಯಾಪ್ತಿಗೆ ಪಡೆದು, ಅದನ್ನು ಪ್ರತಿಷ್ಠಾನಕ್ಕೆ ಹಸ್ತಾಂತರಿಸಲಾಗುತ್ತದೆ. ಆ ಆಸ್ಪತ್ರೆಯ ಹಾಸಿಗೆ ಸಾಮರ್ಥ್ಯವನ್ನು 400ಕ್ಕೆ ಏರಿಕೆ ಮಾಡಲಾಗುತ್ತದೆ. ಅಲ್ಲಿ ವೆಂಟಿಲೇಟರ್ ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸಲಾಗುವುದು’ ಎಂದು ತಿಳಿಸಿದರು.‌

‘ಬೇರೆ ದೇಶಗಳು ಮೊದಲ ಮತ್ತು ಎರಡನೇ ಹಂತದಲ್ಲಿ ಎಚ್ಚೆತ್ತುಕೊಳ್ಳದ ಪರಿಣಾಮ ಸಾವಿರಾರು ಮಂದಿಗೆ ಸೋಂಕು ಹರಡಿದೆ. ಇಲ್ಲಿ ಈ ಪರಿಸ್ಥಿತಿ ನಿರ್ಮಾಣವಾಗಬಾರದು. ಆ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಸೋಂಕಿಗೆ ಯಾರೂ ಕೂಡ ಡೆಡ್ಲಿ ವೈರಸ್‌, ಕಿಲ್ಲರ್ ವೈರಸ್‌ ಪದಗಳನ್ನು ಬಳಸಬಾರದು. ಈ ರೀತಿ ಬಳಕೆ ಮಾಡಿದಲ್ಲಿ ಸೋಂಕು ತಗುಲಿದವರು ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ.ಕೆಲವರಿಗೆ ಚಿಕಿತ್ಸೆ ಇಲ್ಲದೆಯೂ ಈ ರೋಗದಿಂದ ಗುಣ
ಮುಖ ಆಗಬಹುದು’ ಎಂದು ಮನವಿ ಮಾಡಿದರು.ವಿಮಾನ ನಿಲ್ದಾಣದ ಜತೆಗೆವಿಧಾನಸೌಧ, ಹೈಕೋರ್ಟ್‌, ಶಾಸಕರ ಭವನ, ಎಂ.ಎಸ್.ಬಿಲ್ಡಿಂಗ್‌ನಲ್ಲಿಯೂ ಥರ್ಮಲ್ ಸ್ಕ್ಯಾನಿಂಗ್ ನಡೆಸಲಾಯಿತು.

ದೇವಾಲಯಗಳಿಗೆ ಭೇಟಿಗೂ ನಿರ್ಬಂಧ: ಇಸ್ಕಾನ್ ಮಂದಿರದಲ್ಲಿ ಭಕ್ತಾದಿಗಳಿಗೆ ತಾತ್ಕಾಲಿಕವಾಗಿ ಪ್ರವೇಶ ರದ್ದು ಮಾಡಲಾಗಿದೆ. ಮಾ.18ರಮುಂಜಾನೆಯಿಂದ ಮುಂದಿನ ಸೂಚನೆ ನೀಡುವವರೆಗೂ ಸಾರ್ವಜನಿಕರಿಗೆ ತಾತ್ಕಾಲಿಕವಾಗಿ ಪ್ರವೇಶ ರದ್ದು ಮಾಡಲಾಗಿದೆ.

‘ಸೋಂಕು ಪತ್ತೆ ಹಚ್ಚುವ ಯಂತ್ರ ಬಳಸಿ’

ಹೋಟೆಲ್ ಹಾಗೂ ರೆಸಾರ್ಟ್‍ಗಳಲ್ಲಿಯೂ ವೈರಸ್ ಸೋಂಕು ಪತ್ತೆ ಹಚ್ಚುವ ಯಂತ್ರ ಅಳವಡಿಸಿಕೊಳ್ಳಬೇಕು ಎಂದು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ಸುತ್ತೋಲೆ ಹೊರಡಿಸಿದ್ದಾರೆ.

ಹೋಟೆಲ್‍ಗಳು ಹಾಗೂ ರೆಸಾರ್ಟ್‌ಗಳಿಗೆ ಬಂದು ಹೋಗುವ ದೇಶೀಯ, ವಿದೇಶಿಯ ಪ್ರವಾಸಿಗರು, ಸಾರ್ವಜನಿಕರನ್ನು ತಪಾಸಣೆಗೆ ಒಳಪಡಿಸಿ, ಸೋಂಕಿತ ವ್ಯಕ್ತಿಗಳನ್ನು ಪತ್ತೆಹಚ್ಚಬೇಕು. ಈ ನಿಟ್ಟಿನಲ್ಲಿ ಕಡ್ಡಾಯವಾಗಿಇನ್ಫ್ರಾರೆಡ್ ಥರ್ಮೋಮೀಟರ್ ಯಂತ್ರ ಅಳವಡಿಕೆ ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆ.

ಸೋಂಕಿತರ ಸಂಖ್ಯೆ ಹೆಚ್ಚಳ

ಕೊರೊನಾ ಸೋಂಕು ಶಂಕೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಒಂದೇ ಸಮನೆ ಹೆಚ್ಚಳವಾಗುತ್ತಿದೆ. ಮಂಗಳವಾರ 32 ಮಂದಿಯನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕಿಸಿ, ಚಿಕಿತ್ಸೆ ನೀಡಲಾಗಿದೆ. 48 ಮಂದಿಯ ರಕ್ತ ಹಾಗೂ ಗಂಟಲಿನ ದ್ರವದ ಮಾದರಿಗಳನ್ನು ಸಂಗ್ರಹಿಸಲಾಗಿದೆ. 71 ಮಂದಿಯ ವರದಿ ಬಂದಿದ್ದು, ಒಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. 113 ಮಂದಿ 28 ದಿನಗಳ ಅವಲೋಕನವನ್ನು ಪೂರೈಸಿದರು.

ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವವ ಮಹಿಳೆ (ರೋಗಿ 2) ಸರ್ಕಾರಕ್ಕೆ ಪತ್ರ ಬರೆದಿದ್ದು, ‘ಉತ್ತಮವಾಗಿ ವೈದ್ಯಕೀಯ ಸೇವೆಯನ್ನು ನೀಡಲಾಗುತ್ತಿದೆ. ವೈದ್ಯರು ಹಾಗೂ ಸಿಬ್ಬಂದಿ ಉತ್ತಮವಾಗಿ ಆರೈಕೆ ಮಾಡುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಚಿವರ ಪರಿಶೀಲನೆ: ಡಾ.ಕೆ.ಸುಧಾಕರ್ ಅವರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ, ತಪಾಸಣೆಯನ್ನು ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT