ಶುಕ್ರವಾರ, ಮೇ 20, 2022
26 °C
ಏಳು ವಾರ್ಡ್‌ಗಳಲ್ಲಿ ದಿನವೂ 200ಕ್ಕೂ ಅಧಿಕ ಮಂದಿಯಲ್ಲಿ ಸೋಂಕು ದೃಢ

ಬೆಳ್ಳಂದೂರು ವಾರ್ಡ್‌: ಪ್ರತಿದಿನ 400ಕ್ಕೂ ಅಧಿಕ ಮಂದಿಗೆ ಕೋವಿಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿಯ ಬೆಳ್ಳಂದೂರು ವಾರ್ಡ್‌ನಲ್ಲಿ ಕೋವಿಡ್‌ ಹರಡುವಿಕೆ ಪ್ರಮಾಣ ಗರಿಷ್ಠ ಮಟ್ಟದಲ್ಲಿದೆ. ಇಲ್ಲಿ ನಿತ್ಯವೂ 400ಕ್ಕೂ ಅಧಿಕ ಮಂದಿಯಲ್ಲಿ ಕೋವಿಡ್‌ ಕಾಣಿಸಿಕೊಳ್ಳುತ್ತಿದೆ. ಒಟ್ಟು ಏಳು ವಾರ್ಡ್‌ಗಳಲ್ಲಿ ದೈನಂದಿನ ಸೋಂಕು ಪತ್ತೆ ಪ್ರಮಾಣ 200ರ ಗಡಿ ದಾಟಿದೆ. 

ಮಹದೇವಪುರ ವಲಯದಲ್ಲಿ, ಅಪಾರ್ಟ್‌ಮೆಂಟ್‌ ಸಮುಚ್ಚಯಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಬೆಳ್ಳಂದೂರು ವಾರ್ಡ್‌ನಲ್ಲಿ ನಿತ್ಯ ಸರಾಸರಿ 403 ಮಂದಿ ಕೊರೊನಾ ಸೊಂಕಿಗೆ ಒಳಗಾಗುತ್ತಿದ್ದಾರೆ. ಇದೇ ವಲಯದ ಹೊರಮಾವು, ದೊಡ್ಡ ನೆಕ್ಕುಂದಿ, ಬೊಮ್ಮನಹಳ್ಳಿ ವಲಯದ ಬೇಗೂರು, ಎಚ್‌ಎಸ್‌ಆರ್‌ ಬಡಾವಣೆ, ಪೂರ್ವ ವಲಯದ ಹೊಸ ತಿಪ್ಪಸಂದ್ರ, ರಾಜರಾಜೇಶ್ವರಿನಗರ ವಲಯದ ರಾಜರಾಜೇಶ್ವರಿನಗರ ವಾರ್ಡ್‌ಗಳಲ್ಲಿ ನಿತ್ಯ ಸರಾಸರಿ 200ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿವೆ.

ಪೂರ್ವವಲಯದ ಕೋರಮಂಗಲ ವಾರ್ಡ್‌ನಲ್ಲಿ ಹಾಗೂ ಆರ್‌.ಆರ್‌.ನಗರ ವಲಯದ ಹೆಮ್ಮಿಗೆಪುರ ವಾರ್ಡ್‌ನಲ್ಲಿ ನಿತ್ಯ ಸರಾಸರಿ 198 ಪ್ರಕರಣಗಳು ವರದಿಯಾಗುತ್ತಿವೆ. ಬೊಮ್ಮನಹಳ್ಳಿ ವಲಯದ ವಸಂತಪುರ ವಾರ್ಡ್‌ನಲ್ಲಿ ಸರಾಸರಿ 194 ಕೋವಿಡ್‌ ಪ್ರಕರಣಗಳು ಕಂಡು ಬರುತ್ತಿವೆ. 

ಕೋವಿಡ್‌ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣವೂ ನಿಧಾನಗತಿಯಲ್ಲಿ ಹೆಚ್ಚುತ್ತಿದೆ. ಬಿಬಿಎಂಪಿ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರವಾರದ ಹಿಂದೆ ಪ್ರತಿ ಮೂರು ದಿನಗಳಲ್ಲಿ ಸರಾಸರಿ 23 ಮಂದಿ ಕೋವಿಡ್‌ ಚಿಕಿತ್ಸೆಗೆ ದಾಖಲಾಗುತ್ತಿದ್ದರು. ಈಗ ಈ ಪ್ರಮಾಣವು 100ಕ್ಕೆ ಹೆಚ್ಚಳವಾಗಿದೆ.

ನಗರದಲ್ಲಿ ಪ್ರಸ್ತುತ ಸರ್ಕಾರಿ ಕೋಟಾದಡಿ ಕೋವಿಡ್‌ ಚಿಕಿತ್ಸೆಗೆ 7,694 ಹಾಸಿಗೆಗಳನ್ನು ಕಾಯ್ದರಿಸಲಾಗಿದೆ. ಅವುಗಳಲ್ಲಿ 553 ಹಾಸಿಗೆಗಳು ರೋಗಿಗಳ ಬಳಕೆಯಾಗುತ್ತಿದ್ದು, ಒಟ್ಟು 7,141 ಹಾಸಿಗೆಗಳು ಚಿಕಿತ್ಸೆಗಾಗಿ ಲಭ್ಯ ಇವೆ. ತೀವ್ರ ನಿಗಾ ಘಟಕದಲ್ಲಿ (ಐಸಿಯು) ವೆಂಟಿಲೇಟರ್‌ ವ್ಯವಸ್ಥೆ ಹೊಂದಿರುವ 441 ಹಾಸಿಗೆಗಳಲ್ಲಿ 415 ಖಾಲಿ ಇವೆ. ಐಸಿಯುಗಳಲ್ಲಿನ 442 ಸಾಮಾನ್ಯ ಹಾಸಿಗೆಗಳಲ್ಲಿ 385 ಖಾಲಿ ಇವೆ.

ಸೋಂಕು ಪತ್ತೆ ದರ ಹೆಚ್ಚಳ: ದೈನಂದಿನ ಕೋವಿಡ್‌ ಪ್ರಕರಣಗಳ ಸಂಖ್ಯೆ ಶನಿವಾರ ತುಸು ಕಡಿಮೆ ಯಾಗಿದ್ದರೂ ಸೋಂಕು ಪತ್ತೆ ದರ ಶೇ 22.16ಕ್ಕೆ ಹೆಚ್ಚಳವಾಗಿದೆ. ಶುಕ್ರವಾರ 22,284 ಮಂದಿಯಲ್ಲಿ ಕೋವಿಡ್‌ ಕಾಣಿಸಿಕೊಂಡಿತ್ತು. ಶನಿವಾರ 21,071 ಮಂದಿಯಲ್ಲಿ ಕೋವಿಡ್‌ ಕಾಣಿಸಿಕೊಂಡಿದೆ.

ಕೋವಿಡ್‌ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದ್ದರೂ ಈ ಸೋಂಕಿನಿಂದ ಸಾವಿಗೀಡಾಗುವವರ ದರವು ಗಣನೀಯವಾಗಿ ಇಳಿಕೆ ಕಂಡಿದೆ. ಪ್ರಸ್ತುತ ಸೋಂಕಿತರ ಸಾವಿನ ದರವು ಶೇ 0.03ಕ್ಕೆ ಇಳಿದಿದೆ. 2021ರ ಡಿಸೆಂಬರ್‌ ಅಂತ್ಯದಲ್ಲಿ ಈ ದರವು ಶೇ 0.77ರಷ್ಟಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು