ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ವರದಿಗಾಗಿ ಅಲೆದಾಡಿದ ತುಂಬು ಗರ್ಭಿಣಿ

ಆಂಬುಲೆನ್ಸ್‌ಗಾಗಿ ಕಾದ ವೃದ್ಧ
Last Updated 1 ಆಗಸ್ಟ್ 2020, 16:19 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌–19 ಪರೀಕ್ಷಾ ವರದಿಗಾಗಿ ಗರ್ಭಿಣಿಯೊಬ್ಬರು ಮೂರುಗಳಿಂದ ನಿತ್ಯ 60 ಕಿ.ಮೀ. ದೂರದಿಂದ ಅಲೆದಾಡಿದ್ದಾರೆ.

ಹೊಸಕೋಟೆಯ ನಿವಾಸಿಯಾಗಿರುವ ಮಹಿಳೆ, ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕಳೆದ ಬುಧವಾರ ಕೋವಿಡ್‌–19 ಪರೀಕ್ಷೆ ಮಾಡಿಸಿದ್ದರು. ವಾಣಿವಿಲಾಸ ಆಸ್ಪತ್ರೆಯವರು ಶನಿವಾರ ಹೆರಿಗೆಗೆ ದಿನಾಂಕ ನೀಡಿದ್ದರು. ಆದರೆ, ಹೆರಿಗೆಗೂ ಮುನ್ನ ಕೋವಿಡ್‌–19 ವರದಿ ನೀಡಬೇಕು ಎಂದು ಆಸ್ಪತ್ರೆಯವರು ಹೇಳಿದ್ದರಿಂದ ಮೂರು ದಿನ ಅವರು ಹೊಸಕೋಟೆಯಿಂದ ನಗರಕ್ಕೆ ಅಲೆದಿದ್ದಾರೆ.

‘ಪತ್ನಿಗೆ ಹೆರಿಗೆ ದಿನಾಂಕ ಸಮೀಪಿಸುತ್ತಿತ್ತು. ಕೋವಿಡ್ ಪರೀಕ್ಷೆಯ ವರದಿ ಇಲ್ಲದೆ ಆಸ್ಪತ್ರೆಗೆ ದಾಖಲಿಸಿಕೊಳ್ಳುವುದಿಲ್ಲ ಎಂದಿದ್ದರಿಂದ ಓಡಾಡಬೇಕಾಯಿತು. ವಿಕ್ಟೋರಿಯಾ ಆಸ್ಪತ್ರೆಗೆ ಹೋದಾಗ, ನಾಳೆ ಬನ್ನಿ, ನಾಡಿದ್ದು ಬನ್ನಿ ಎನ್ನುತ್ತಿದ್ದರು. ಮತ್ತೊಮ್ಮೆ, ಫೈಲ್‌ ಕಳೆದಿದೆ ಎಂದಿದ್ದರು’ ಎಂದು ಮಹಿಳೆಯ ಪತಿ ಚೇತನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮಗೆ ಆಗುತ್ತಿದ್ದ ಸಮಸ್ಯೆಯನ್ನು ಮಾಧ್ಯಮದವರ ಬಳಿ ಹೇಳಿಕೊಂಡ ನಂತರ, ಎಚ್ಚೆತ್ತುಕೊಂಡ ವಿಕ್ಟೋರಿಯಾ ಆಸ್ಪತ್ರೆಯವರು ಶನಿವಾರ ಬೆಳಿಗ್ಗೆ ಕೊರೊನಾ ವರದಿ ನೀಡಿದರು. ನಂತರ, ವಾಣಿವಿಲಾಸ ಆಸ್ಪತ್ರೆಗೆ ದಾಖಲಿಸಿದೆವು. ಬೆಳಿಗ್ಗೆ 11ಕ್ಕೆ ಹೆರಿಗೆಯಾಯಿತು’ ಎಂದು ತಿಳಿಸಿದರು.

ಆಂಬುಲೆನ್ಸ್‌ಗಾಗಿ 2 ದಿನ ಕಾದ ವೃದ್ಧ:ಮಾರಪ್ಪನಪಾಳ್ಯ ವಾರ್ಡ್‌ನ ನಿವಾಸಿ 80 ವರ್ಷದ ವೃದ್ಧರೊಬ್ಬರಿಗೆ ಕೊರೊನಾ ಸೋಂಕು ತಗುಲಿದ್ದು, ಆಂಬುಲೆನ್ಸ್‌ಗಾಗಿ ದಿನವಿಡೀ ಕಾದಿದ್ದಾರೆ.

‘ನಮ್ಮ ಮಾವನವರಿಗೆ ಬಿದ್ದು ಏಟಾಗಿತ್ತು. ಅವರಿಗೆ ಚಿಕಿತ್ಸೆ ಕೊಡಿಸುವ ಸಲುವಾಗಿ ನಾರಾಯಣ ನೇತ್ರಾಲಯದಲ್ಲಿ ಕೋವಿಡ್‌ ಪರೀಕ್ಷೆ ಮಾಡಿಸಿದ್ದೆವು. ಕೊರೊನಾ ದೃಢಪಟ್ಟಿದೆ ಎಂದು ಶುಕ್ರವಾರ ಮಾಹಿತಿ ನೀಡಿದ್ದರು. ಬಿಬಿಎಂಪಿಯವರು ಕರೆ ಮಾಡಿ ಆಂಬುಲೆನ್ಸ್‌ ಕಳುಹಿಸುತ್ತೇವೆ ಎಂದು ತಿಳಿಸಿದ್ದರು. ಆದರೆ, ಶನಿವಾರ ಮಧ್ಯಾಹ್ನದವರೆಗೂ ಆಂಬುಲೆನ್ಸ್‌ ಬರಲಿಲ್ಲ’ ಎಂದು ಸೊಸೆ ಶಾರದಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮ ಮನೆ ಚಿಕ್ಕದು. ಚಿಕ್ಕಮಕ್ಕಳೂ ಇದ್ದಾರೆ. ಮಾವನವರಿಗೆ ಸೋಂಕು ದೃಢಪಟ್ಟಿದ್ದರಿಂದ, ಅವರನ್ನು ಮನೆಯಲ್ಲಿ ಬಿಟ್ಟು ಮಕ್ಕಳ ಜೊತೆ ನಾವೂ ಮನೆಯಿಂದ ಹೊರಗೇ ಉಳಿದುಕೊಂಡಿದ್ದೇವೆ. ಆಂಬುಲೆನ್ಸ್‌ ಬಾರದಿರುವ ಬಗ್ಗೆ ಪಾಲಿಕೆ ಸದಸ್ಯ ಶಿವರಾಜ್‌ ಅವರಿಗೆ ಕರೆ ಮಾಡಿ ತಿಳಿಸಿದ್ದೆವು. ಅವರು ಮನೆಗೇ ಬಂದು ವಿಚಾರಿಸಿ, ಆಂಬುಲೆನ್ಸ್‌ ಕರೆಸಿದರು. ಎಲ್ಲರಿಗೂ ಮುಖಗವಸು ಮತ್ತು ಕೈಗವಸುಗಳನ್ನು ತಂದುಕೊಟ್ಟರು. ಈಗ ಮಾವನವರನ್ನು ಸೇಂಟ್‌ ಮಾರ್ಥಾಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT