ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತಾಗಾರದ ಎದುರು ಕೋವಿಡ್ ಶವಗಳ ಸಾಲು

ನಿಗದಿತ ಪ್ರಮಾಣದಲ್ಲಿ ಪಿಪಿಇ ಕಿಟ್‌ ಪೂರೈಸುತ್ತಿಲ್ಲ– ಸಿಬ್ಬಂದಿ ಅಳಲು
Last Updated 14 ಏಪ್ರಿಲ್ 2021, 21:25 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಸೋಂಕು ಪ್ರಕರಣಗಳ ಸಂಖ್ಯೆ ಏರುತ್ತಿದ್ದಂತೆ, ನಗರದಲ್ಲಿ ಸಾವುಗಳ ಸಂಖ್ಯೆಯೂ ಹೆಚ್ಚಾಗಿದೆ. ರಾಜಧಾನಿಯಲ್ಲಿಯೇ ದಿನಕ್ಕೆ 50ರಿಂದ 60 ಜನ ಮೃತಪಡುತ್ತಿದ್ದು, ವಿದ್ಯುತ್‌ ಚಿತಾಗಾರಗಳ ಮುಂದೆ ಶವಗಳ ವಾಹನ ಸಾಲುಗಟ್ಟಿ ನಿಂತಿವೆ.

‘ನಗರದಲ್ಲಿ 12 ವಿದ್ಯುತ್‌ ಚಿತಾಗಾರಗಳ ಪೈಕಿ 5ರಲ್ಲಿ ಕೋವಿಡ್‌ ಶವಗಳ ಅಂತ್ಯಕ್ರಿಯೆ ಮಾಡಲಾಗುತ್ತಿದೆ. ಒಂದೊಂದು ದಿನ ಒಂದೊಂದು ಚಿತಾಗಾರದಲ್ಲಿ 20ಕ್ಕೂ ಹೆಚ್ಚು ಶವಗಳು ಬರುತ್ತವೆ. ಒಂದು ಶವ ಸಂಪೂರ್ಣವಾಗಿ ದಹನವಾಗಲು ಒಂದು ತಾಸು ಬೇಕಾಗುತ್ತದೆ’ ಎಂದು ಅಂಬೇಡ್ಕರ್‌ ದಲಿತ ಸಂಘರ್ಷ ಸಮಿತಿಯ ರುದ್ರಭೂಮಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ರಾಜು ಕಲ್ಪಳ್ಳಿ ಹೇಳಿದರು.

ನಗರದ ಜಾಲಹಳ್ಳಿ ಬಳಿಯ ಲಕ್ಷ್ಮೀಪುರ ಕ್ರಾಸ್‌, ಸುಮನಹಳ್ಳಿ, ಕೆಂಗೇರಿ, ಬೊಮ್ಮನಹಳ್ಳಿ ಹಾಗೂ ಪೆನತ್ತೂರು ಚಿತಾಗಾರಗಳಲ್ಲಿ ಮಾತ್ರ ಕೋವಿಡ್‌ ಶವಸಂಸ್ಕಾರ ಮಾಡಲಾಗುತ್ತಿದೆ.

ಪಿಪಿಇ ಕಿಟ್ ಸಾಕಾಗುತ್ತಿಲ್ಲ:‘ಒಂದು ಶವ ಸಂಸ್ಕಾರ ಮುಗಿಯುತ್ತಿದ್ದಂತೆ ಬೇರೆ ಪಿಪಿಇ ಕಿಟ್‌ ಧರಿಸಬೇಕು. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ಈ ಕಿಟ್‌ಗಳನ್ನು ಪೂರೈಸುತ್ತಿಲ್ಲ. ಒಂದೇ ಕಿಟ್‌ ಧರಿಸಿಯೇ ಎರಡು–ಮೂರು ಶವಗಳ ಸಂಸ್ಕಾರ ಮಾಡಬೇಕಾಗಿದೆ’ ಎಂದು ರಾಜು ಹೇಳಿದರು.

‘ಸ್ಯಾನಿಟೈಸರ್‌, ಮಾಸ್ಕ್‌, ಗ್ಲೌಸ್‌ ಎಲ್ಲವೂ ಬೇಕಾಗುತ್ತವೆ. ಅವುಗಳನ್ನೂ ಸರಿಯಾಗಿ ಪೂರೈಕೆ ಮಾಡುತ್ತಿಲ್ಲ’ ಎಂದು ನೌಕರರೊಬ್ಬರು ಹೇಳಿದರು.

‘ಪ್ರತಿ ಚಿತಾಗಾರದಲ್ಲಿ ಎರಡು ಶವ ದಹನ ಯಂತ್ರಗಳಿವೆ. ಪೆನತ್ತೂರು ಚಿತಾಗಾರದಲ್ಲಿ ಒಂದೇ ಯಂತ್ರವಿದ್ದು, ಇನ್ನೊಂದು ಸ್ಥಗಿತಗೊಂಡಿದೆ. ಕೆಂಗೇರಿ ಚಿತಾಗಾರದ ಯಂತ್ರ ಎರಡು ದಿನಗಳಿಂದೀಚೆಗೆ ಪ್ರಾರಂಭವಾಗಿದೆ. ಕೋವಿಡ್‌ ಶವಗಳನ್ನು ತಂದವರು ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ’ ಎಂದು ಸಂಘದ ಅಧ್ಯಕ್ಷ ಎ. ಸುರೇಶ್‌ ಹೇಳಿದರು.

‘ಲಕ್ಷ್ಮೀಪುರ ಕ್ರಾಸ್‌ ಬಳಿಯ ಚಿತಾಗಾರದಲ್ಲಿ ಒಬ್ಬರು ಸಿಬ್ಬಂದಿಗೆ ಕೋವಿಡ್‌ ತಗುಲಿದೆ. ಚಿತಾಗಾರದ ನೌಕರರ ಸುರಕ್ಷತೆಗೆ ಬಿಬಿಎಂಪಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

‘ಕಳೆದ ವರ್ಷ ಕೋವಿಡ್‌ ಶವಗಳ ಸಂಸ್ಕಾರಕ್ಕೆ ಹೆಚ್ಚು ಜನ ಇರುತ್ತಿರಲಿಲ್ಲ. ಸಂಬಂಧಿಕರೇ ಹೆದರಿಕೊಂಡು ದೂರ ಇರುತ್ತಿದ್ದರು. ಈ ಬಾರಿ ಹೆಚ್ಚು ಜನರು ಬರುತ್ತಿದ್ದಾರೆ. ಶವಗಳು ಬಂದಾಗ ಒಂದು ಚಟ್ಟಕ್ಕೆ ₹900, ಮಡಿಕೆಗೆ ₹100 ಖರ್ಚಾಗುತ್ತದೆ. ಕೆಲವೊಮ್ಮೆ ನಾವೇ ಅದನ್ನು ತಂದಿರುತ್ತೇವೆ. ಒಂದು ಶವ ಸಂಸ್ಕಾರಕ್ಕೆ ಬಿಬಿಎಂಪಿಯಿಂದ ₹500 ಕೊಡುತ್ತೇವೆ ಎಂದು ಹೇಳಿದ್ದರು. ಆ ಹಣವನ್ನೂ ಕೊಟ್ಟಿಲ್ಲ’ ಎಂದು ರಾಜು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT