ಶನಿವಾರ, ಸೆಪ್ಟೆಂಬರ್ 26, 2020
27 °C

ಕಂಟೈನ್‌ಮೆಂಟ್‌ ಪ್ರದೇಶ: ಸೀಲ್‌ಡೌನ್‌ ವಿಧಾನ ಬದಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ ಪ್ರಕರಣಗಳು ಪತ್ತೆಯಾದ ಕಡೆ ಕಂಟೈನ್‌ಮೆಂಟ್‌ ಪ್ರದೇಶವನ್ನು ಗುರುತಿಸಿ ಸೀಲ್‌ಡೌನ್‌ ಮಾಡುವ ವಿಧಾನದಲ್ಲಿ ಬಿಬಿಎಂಪಿ ಕೆಲವು ಮಾರ್ಪಾಡುಗಳನ್ನು ಮಾಡಿದೆ.

ಶಾಂತಿನಗರ ವಿಧಾನ ಸಭಾ ಕ್ಷೇತ್ರದ ದೊಮ್ಮಲೂರು ವಾರ್ಡ್‌ನ ವ್ಯಾಪ್ತಿಯಲ್ಲಿ ಕೋವಿಡ್‌ ದೃಢಪಟ್ಟ ವ್ಯಕ್ತಿಯೊಬ್ಬರ ಮನೆಯ ಬಾಗಿಲಿಗೆ ಜು. 23ರಂದು ಕಬ್ಬಿಣದ ಶೀಟ್‌ಗಳನ್ನು ಅಳವಡಿಸಿ ಸೀಲ್‌ಡೌನ್‌ ಮಾಡಿದ್ದರು. ಇದು ಅಮಾನವೀಯ ಎಂದು ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದರು. 

‘ಈಗ ಕಂಟೈನ್‌ಮೆಂಟ್‌ ಪ್ರದೇಶವನ್ನು ಗುರುತಿಸುವ ವಿಧಾನ ಬದಲಾಗಿದೆ. ಸೋಂಕು ಪತ್ತೆಯಾದ ಮನೆಯ ಬಾಗಿಲಿಗೆ ಇದು ‘ಕಂಟೈನ್‌ಮೆಂಟ್‌ ಪ್ರದೇಶ. ಈ ಮನೆಗೆ ಹೊರಗಿನವರಿಗೆ ಪ್ರವೇಶವಿಲ್ಲ’ ಎಂಬ ಬರಹವಿರುವ ಸ್ಟಿಕ್ಕರ್‌ಗಳನ್ನು ಮಾತ್ರ ಅಂಟಿಸುತ್ತಿದ್ದೇವೆ. ಅವರ ಅಕ್ಕಪಕ್ಕದ ಮನೆಯವರಿಗೆ ಈ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ನಿರ್ದಿಷ್ಡ ಪ್ರದೇಶದಲ್ಲಿ ಮೂರು ನಾಲ್ಕು ಮನೆಗಳಲ್ಲಿ ಕೋವಿಡ್‌ ಪ್ರಕರಣಗಳು ಕಂಡುಬಂದರೆ ಮಾತ್ರ ಅಲ್ಲಿ ಬ್ಯಾರಿಕೇಡ್‌ ಅಥವಾ ಮರದ ಕಂಬಗಳನ್ನು ಅಡ್ಡವಿಟ್ಟು ಸೀಲ್‌ಡೌನ್‌ ಮಾಡಲಾಗುತ್ತಿದೆ. ಈ ಹಿಂದೆ ಯಾವುದಾದರೂ ಪ್ರದೇಶದಲ್ಲಿ ಒಂದು ಕೋವಿಡ್‌ ಪ್ರಕರಣ ಪತ್ತೆಯಾದರೂ, ಆ ಮನೆಯ ಎದುರಿನ ರಸ್ತೆಯನ್ನು ಸೀಲ್‌ಡೌನ್‌ ಮಾಡಲಾಗುತ್ತಿತ್ತು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೊನಾ ಸೋಂಕು ಪತ್ತೆಯಾದ ಆರಂಭವಾದಂದಿನಿಂದ ಇದುವರೆಗೆ ಪತ್ತೆಯಾದ ಒಟ್ಟು 36,670 ಕಂಟೈನ್‌ಮೆಂಟ್‌ ಪ್ರದೇಶಗಳನ್ನು ಗುರುತಿಸಲಾಗಿದೆ. ಪ್ರಸ್ತುತ 13,281 ಕಂಟೈನ್ಮೆಂಟ್‌ ಪ್ರದೇಶಗಳು ಸಕ್ರಿಯವಾಗಿವೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು