ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಆತಿಥ್ಯ ಕೇಂದ್ರದಲ್ಲಿ ಆರೈಕೆಗೆ ನಿರಾಸಕ್ತಿ

ಆಸ್ಪತ್ರೆಗಳಲ್ಲಿ ಶೇ 90ಕ್ಕೂ ಅಧಿಕ ಹಾಸಿಗೆಗಳು ಖಾಲಿ l ಹೋಟೆಲ್‌ಗಳಲ್ಲಿ ಆರೈಕೆಗೆ ಅವಕಾಶ ನೀಡಿದ್ದ ಸರ್ಕಾರ
Last Updated 20 ಜನವರಿ 2022, 19:52 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾದರೂ ಆಸ್ಪತ್ರೆ ದಾಖಲಾತಿ ಕಡಿಮೆಯಿದೆ. ಹೀಗಾಗಿ, ಖಾಸಗಿ ಆಸ್ಪತ್ರೆಗಳು ಹೋಟೆಲ್‌ಗಳನ್ನು ಆರೈಕೆ ಕೇಂದ್ರಗಳನ್ನಾಗಿ ಪರಿವರ್ತಿಸಲು ಈ ಬಾರಿ ನಿರಾಸಕ್ತಿ ತಾಳಿವೆ.

ಕೋವಿಡ್ ಚಿಕಿತ್ಸೆಗೆ ನಗರದ ಆಸ್ಪತ್ರೆಗಳಲ್ಲಿ ಗುರುತಿಸಲಾದ ಹಾಸಿಗೆಗಳಲ್ಲಿ ಶೇ 90.30ರಷ್ಟು ಹಾಸಿಗೆಗಳು ಖಾಲಿ ಉಳಿದಿವೆ. ಸೋಂಕಿನ ತೀವ್ರತೆ ಕಡಿಮೆಯಿರುವುದರಿಂದ ಶೇ 7 ರಷ್ಟು ಮಂದಿ ಮಾತ್ರ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಸಾವಿರಕ್ಕೂ ಅಧಿಕ ಹಾಸಿಗೆಗಳು ಸದ್ಯ ಲಭ್ಯವಿವೆ. ಹೀಗಾಗಿ, ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸು ಆಧಾರದಲ್ಲಿ ಹಾಗೂ ನೇರವಾಗಿ ದಾಖಲಾಗುವವರ ಸಂಖ್ಯೆ ಬೆರಳಣಿಕೆಯಷ್ಟು ಇದೆ. ಆದ್ದರಿಂದ ಖಾಸಗಿ ಆಸ್ಪತ್ರೆಗಳು ಹೋಟೆಲ್‌ ಆರೈಕೆ ಕೇಂದ್ರಗಳನ್ನ ಪ್ರಾರಂಭಿಸಲು ಹಿಂದೇಟು ಹಾಕಿವೆ.

ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಸರ್ಕಾರವುಕೆಪಿಎಂಇ ಕಾಯ್ದೆಯಡಿ ಆರೈಕೆ ಕೇಂದ್ರಗಳನ್ನು ನಡೆಸಲು ಖಾಸಗಿ ಆಸ್ಪತ್ರೆಗಳಿಗೆ ಅವಕಾಶ ನೀಡಿದೆ.ಸಾಮಾನ್ಯಹೋಟೆಲ್‌ಗೆ ದಿನವೊಂದಕ್ಕೆ ಗರಿಷ್ಠ ₹ 4 ಸಾವಿರ, ಮೂರು ಸ್ಟಾರ್‌ಹೋಟೆಲ್‌ಗೆ ಗರಿಷ್ಠ ₹ 8 ಸಾವಿರ ಹಾಗೂ ಪಂಚತಾರಾಹೋಟೆಲ್‌ಗೆ ಗರಿಷ್ಠ ₹ 10 ಸಾವಿರ ನಿಗದಿಪಡಿಸಲಾಗಿದೆ. ತಾರಾ ಹೋಟೆಲ್‌ಗಳು ಆರೈಕೆ ಕೇಂದ್ರಗಳನ್ನು ಪ್ರಾರಂಭಿಸಲು ಆಸಕ್ತಿ ತೋರಿದ್ದವು. ಆಸ್ಪತ್ರೆಗಳಲ್ಲಿ ಶೇ 50 ರಷ್ಟು ಹಾಸಿಗೆಗಳು ಭರ್ತಿಯಾದಲ್ಲಿ ಹೋಟೆಲ್ ಆರೈಕೆ ಪ್ರಾರಂಭಿಸಲು ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು ನಿರ್ಧರಿಸಿದ್ದಾರೆ.

ಮೊದಲೆರಡು ಅಲೆಯಲ್ಲಿ ಆರೈಕೆ: 2021ರ ಮಾರ್ಚ್‌ ಮೂರನೇ ವಾರದ ಬಳಿಕ ಕೋವಿಡ್ ಎರಡನೇ ಅಲೆ ಕಾಣಿಸಿಕೊಂಡಿತ್ತು. ಸೋಂಕಿತರ ಸಂಖ್ಯೆ ಏರುಗತಿ ಪಡೆದು,ಮೇ ತಿಂಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ನಗರದಲ್ಲಿ 4 ಲಕ್ಷದ ಆಸುಪಾಸಿಗೆ ಏರಿಕೆಯಾಗಿತ್ತು. ಆ ವೇಳೆಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿತ್ತು. ಹೀಗಾಗಿ, ಹೋಟೆಲ್‌ಗಳಲ್ಲಿ ಸೌಮ್ಯ ಮತ್ತು ಮಧ್ಯಮ ಸ್ವರೂಪದ ಲಕ್ಷಣಗಳು ಇರುವವರಿಗೆ ಚಿಕಿತ್ಸೆ ಒದಗಿಸಲು ಅವಕಾಶ ನೀಡಲಾಗಿತ್ತು. ಮೊದಲ ಅಲೆಯಲ್ಲಿಯೂ ಹೋಟೆಲ್‌ ಆರೈಕೆ ಒದಗಿಸಲಾಗಿತ್ತು.

ಸುಗುಣ, ಮಣಿಪಾಲ್, ಪೀಪಲ್ ಟ್ರೀ, ಅಪೋಲೊ, ಕೊಲಂಬಿಯಾ ಏಷ್ಯಾ, ಮಲ್ಲಿಗೆ ಸೇರಿದಂತೆ ನಗರದ ಪ್ರಮುಖ 17 ಆಸ್ಪತ್ರೆಗಳು 32 ಹೋಟೆಲ್‌ಗಳನ್ನು ಗುರುತಿಸಿ, 1,281 ಹಾಸಿಗೆಗಳನ್ನು ಸಜ್ಜುಗೊಳಿಸಿದ್ದವು. ಈ ಸೇವೆಯು ಮನೆ ಆರೈಕೆಗೆ ವ್ಯವಸ್ಥೆ ಇಲ್ಲದವರಿಗೆ, ಅನ್ಯ ರಾಜ್ಯಗಳಿಂದ ಬಂದು ಸೋಂಕಿತರಾದವರಿಗೆ, ಆಸ್ಪತ್ರೆ ಚಿಕಿತ್ಸೆ ಅಗತ್ಯ ಇಲ್ಲದವರಿಗೆ ಸಹಕಾರಿಯಾಗಿದ್ದವು. ಸಾವಿರಕ್ಕೂ ಅಧಿಕ ಮಂದಿಗೆ ಅಲ್ಪಾವಧಿಯಲ್ಲಿ ಸೇವೆ ನೀಡಲಾಗಿತ್ತು.‌

‘ಹೋಟೆಲ್‌ಗಳಲ್ಲಿ ಆರೈಕೆ ಕೇಂದ್ರಗಳನ್ನು ಪ್ರಾರಂಭಿಸಲು ಸರ್ಕಾರ ಅವಕಾಶ ನೀಡಿದೆ. ಆದರೆ, ಸದ್ಯ ಸೋಂಕಿತರಲ್ಲಿ ಶೇ 90ಕ್ಕೂ ಅಧಿಕ ಮಂದಿ ಮನೆ ಆರೈಕೆಗೆ ಒಳಗಾಗುತ್ತಿದ್ದಾರೆ. ಆದ್ದರಿಂದ ಖಾಸಗಿ ಆಸ್ಪತ್ರೆಗಳು ಹೋಟೆಲ್‌ಗಳಲ್ಲಿ ಕೋವಿಡ್ ಆರೈಕೆ ಕೇಂದ್ರಗಳನ್ನು ಪ್ರಾರಂಭಿಸಿಲ್ಲ’ ಎಂದುಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ (ಫನಾ) ಅಧ್ಯಕ್ಷಡಾ. ಪ್ರಸನ್ನ ಎಚ್‌.ಎಂ. ತಿಳಿಸಿದರು.

‘ಆರೈಕೆ ಕೇಂದ್ರವಾಗಿ ಪರಿವರ್ತಿಸಿದರೆ ಅವಕಾಶ’

‘ಮೊದಲೆರಡು ಅಲೆಗಳಲ್ಲಿ ಖಾಸಗಿ ಆಸ್ಪತ್ರೆಗಳ ಜತೆಗೆ ಒಪ್ಪಂದ ಮಾಡಿಕೊಂಡು, ಚಿಕಿತ್ಸೆ ಒದಗಿಸಲು ಕೆಲ ತಾರಾ ಹೋಟೆಲ್‌ಗಳನ್ನು ನೀಡಲಾಗಿತ್ತು.‌ ಈಗ ಆಸ್ಪತ್ರೆಗಳಲ್ಲಿಯೇ ಬಹಳಷ್ಟು ಹಾಸಿಗೆಗಳು ಖಾಲಿ ಉಳಿದಿವೆ. ಕೋವಿಡ್ ಪೀಡಿತರ ಆರೈಕೆಗೆ ಹೋಟೆಲ್‌ಗಳನ್ನು ಒದಗಿಸಲು ಸಿದ್ಧವಿದ್ದೇವೆ. ಆದರೆ, ಹೋಟೆಲ್‌ಗಳಲ್ಲಿ ಒಂದೆರಡು ಕೊಠಡಿಗಳನ್ನು ನೀಡಲು ಸಾಧ್ಯವಿಲ್ಲ. ಇದರಿಂದ ಉಳಿದವರ ಆತಿಥ್ಯಕ್ಕೆ ಸಮಸ್ಯೆಯಾಗಲಿದೆ. ಪೂರ್ಣ ಪ್ರಮಾಣದಲ್ಲಿ ಆರೈಕೆ ಕೇಂದ್ರಗಳನ್ನಾಗಿ ಪರಿವರ್ತಿಸುವುದಾದರೆ ಹೋಟೆಲ್‌ಗಳನ್ನು ನೀಡಲಾಗುವುದು’ ಎಂದು ಬೃಹತ್ ಬೆಂಗಳೂರು ಹೋಟೆಲ್ ಸಂಘಟನೆಯ ಅಧ್ಯಕ್ಷ ಪಿ.ಸಿ. ರಾವ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT