ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಷ್ಟದ ಕೂಪದಲ್ಲಿ ದ್ರಾಕ್ಷಿ ಬೆಳೆಗಾರರು

ಕೊರೊನಾ ಹೊಡೆತಕ್ಕೆ ತೋಟಗಳಲ್ಲೇ ಉದುರುತ್ತಿವೆ ದ್ರಾಕ್ಷಿ ಗೊಂಚಲು
Last Updated 29 ಮಾರ್ಚ್ 2020, 20:07 IST
ಅಕ್ಷರ ಗಾತ್ರ

ಬೆಂಗಳೂರು: ಬೇಸಿಗೆ ಸಮೀಪಿಸಿದ ಕಾರಣ ಲಾಭದ ನಿರೀಕ್ಷೆಯಲ್ಲಿದ್ದ ದ್ರಾಕ್ಷಿ ಬೆಳೆಗಾರರು ಕೊರೊನಾ ಹೊಡೆತದಿಂದ ನಲುಗಿದ್ದಾರೆ. ಸೋಂಕು ಭಯದಿಂದ ದ್ರಾಕ್ಷಿ ಕಟಾವು ಮಾಡಲು ಕೆಲಸಗಾರರರು ಬರುತ್ತಿಲ್ಲ. ಮಾರುಕಟ್ಟೆಗೆ ಸಾಗಿಸಲು ಸಾರಿಗೆ ವ್ಯವಸ್ಥೆಯೂ ಇಲ್ಲ. ಬೇಡಿಕೆ ಇದ್ದರೂ ಪೂರೈಸಲಾರದ ತ್ರಿಶಂಕು ಸ್ಥಿತಿಯಲ್ಲಿ ಬೆಳೆಗಾರರು ಸಿಲುಕಿದ್ದಾರೆ.

ಬೆಂಗಳೂರು ನೆರೆಯ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ದ್ರಾಕ್ಷಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಇದು ವರ್ಷಕ್ಕೆ ಎರಡು ಬಾರಿ ಆದಾಯ ನೀಡುವ ಬೆಳೆ. ಇದಕ್ಕಾಗಿ ರೈತರು ಎಕರೆಗೆ ಲಕ್ಷಗಟ್ಟಲೆ ಬಂಡವಾಳ ಹಾಕುತ್ತಾರೆ. ಬೇಸಿಗೆ ಅವಧಿಯಲ್ಲಿ ಬರುವ ಫಸಲು ಹೆಚ್ಚು ಲಾಭ ನೀಡುತ್ತದೆ ಎನ್ನುವುದು ಬೆಳೆಗಾರರ ಸಂತಸದ ಮಾತು.

ಅದೇ ರೀತಿ ಈ ಬೇಸಿಗೆಯಲ್ಲಿ ಹೆಚ್ಚು ಲಾಭ ಪಡೆಯುತ್ತೇವೆ ಎಂಬ ದ್ರಾಕ್ಷಿ ಬೆಳೆಗಾರರ ನಿರೀಕ್ಷೆಗೆ ಕೊರೊನಾ ಸೋಂಕು ತಣ್ಣೀರೆರಚಿದೆ. ಇಡೀ ರಾಜ್ಯ ಲಾಕ್‍ಡೌನ್ ಆಗಿರುವ ಕಾರಣ ರೈತರಿಗೆ ದ್ರಾಕ್ಷಿ ಕಟಾವು ಮಾಡಲು ಕೆಲಸದವರೂ ಸಿಗುತ್ತಿಲ್ಲ. ಬೆಲೆ ಇದ್ದರೂ ಮಾರುಕಟ್ಟೆಗಳಿಗೆ ದ್ರಾಕ್ಷಿ ಪೂರೈಸಲಾರದ ಸಂದಿಗ್ಧ ಸ್ಥಿತಿ ಹೊರಗಿದೆ. ಇಷ್ಟೊತ್ತಿಗೆ ಮಾರುಕಟ್ಟೆಗಳಿಂದ ಗ್ರಾಹಕರ ಕೈಸೇರಬೇಕಿದ್ದ ತಾಜಾ ದ್ರಾಕ್ಷಿ ಗೊಂಚಲುಗಳು ಗಿಡದಲ್ಲೇ ಹಣ್ಣಾಗಿ ಉದುರುತ್ತಿವೆ. ಲಾಭ ಬಾರದಿದ್ದರೂ ಪರವಾಗಿಲ್ಲ. ಕೊನೆಯ ಪಕ್ಷ ಬೆಳೆಗೆ ಹಾಕಿದ ಬಂಡವಾಳವೂ ಕೈಸೇರದ ಸ್ಥಿತಿಯಲ್ಲಿದ್ದೇವೆ ಎಂದು ರೈತರು ಕಣ್ಣೀರು ಹಾಕುತ್ತಿದ್ದಾರೆ.

'ಕಳೆದ ವರ್ಷಕ್ಕಿಂತ ಈ ಬಾರಿ ಫಸಲು ಚೆನ್ನಾಗಿ ಬಂದಿದೆ. ಮಾರುಕಟ್ಟೆಯಲ್ಲಿ ಬೆಲೆಯೂ ಇದೆ, ಹೈದರಾಬಾದ್, ವಿಶಾಖಪಟ್ಟಣ, ವಾರಂಗಲ್ ಸೇರಿ ವಿವಿಧ ಸ್ಥಳಗಳಿಗೆ ದ್ರಾಕ್ಷಿ ಪೂರೈಕೆಯಾಗಬೇಕಿತ್ತು. ಆದರೆ, ಬೆಳೆದ ದ್ರಾಕ್ಷಿಯನ್ನು ಗ್ರಾಹಕರಿಗೆ ಪೂರೈಸಲು‌‌‌ ಸಾಧ್ಯವಾಗುತ್ತಿಲ್ಲ. ಸಾಲ ಮಾಡಿ ದ್ರಾಕ್ಷಿ ಬೆಳೆಗೆ ಬಂಡವಾಳ ಹಾಕಿದ್ದೆ. ಈಗ ಸಾಲ ತೀರಿಸುವುದು ಹೇಗೆ ಎನ್ನುವುದೇ ಯಕ್ಷ ಪ್ರಶ್ನೆ ಎಂದು ಕೋಲಾರದ ದ್ರಾಕ್ಷಿ ಬೆಳೆಗಾರ ವೆಂಕಟೇಶ್ ಬೇಸರ ವ್ಯಕ್ತಪಡಿಸಿದರು.

'ಲಾಕ್‍ಡೌನ್‌ನಿಂದ ವಾಹನ ಸಂಚಾರಕ್ಕೂ ನಿರ್ಬಂಧವಿದೆ. ಈಗಿನ ಪರಿಸ್ಥಿತಿಯಲ್ಲಿ ಪ್ರಾಣ ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಇದರ ನಡುವೆ ದ್ರಾಕ್ಷಿ ಕೊಳ್ಳಲು ಬರಲು ಸಾಧ್ಯವೇ? ಎಂದು ವ್ಯಾಪಾರಿಗಳು ಪ್ರಶ್ನಿಸುತ್ತಾರೆ. ಐದು ಎಕರೆಯಲ್ಲಿ ಬೆಳೆದಿರುವ ದ್ರಾಕ್ಷಿಯನ್ನು ಏನು ಮಾಡಬೇಕು ಎಂಬುದೇ ಗೊತ್ತಾಗುತ್ತಿಲ್ಲ' ಎಂದು ಅಸಹಾಯಕರಾಗಿ ಅವರು ಉತ್ತರಿಸಿದರು.

'12 ಎಕರೆಯಲ್ಲಿ ಬೆಂಗಳೂರು ನೀಲಿ ತಳಿಯ ದ್ರಾಕ್ಷಿ ಬೆಳೆದಿದ್ದೇನೆ. ಬಿಳಿ ದ್ರಾಕ್ಷಿಗೆ ಹೋಲಿಸಿದರೆ ಇದರ ದರ ಕಡಿಮೆ. ಆದರೂ ಲಾಭ ನೀಡುತ್ತದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆದು ಸಿದ್ಧವಾಗಿರುವ ದ್ರಾಕ್ಷಿಯನ್ನು ಕೇಳುವವರು ಯಾರೂ ಇಲ್ಲದಂತಾಗಿದೆ. ಕೊರೊನಾದಿಂದ ವ್ಯಾಪಾರಿಗಳು ಖರೀದಿಗೆ ಮುಂದೆ ಬರುತ್ತಿಲ್ಲ' ಎನ್ನುತ್ತಾರೆ ಶಿಡ್ಲಘಟ್ಟದ ದ್ರಾಕ್ಷಿ ಬೆಳೆಗಾರ ಮುನಿಯಪ್ಪ.

'ಮಾರುಕಟ್ಟೆಗಳಿಗೆ ದ್ರಾಕ್ಷಿ ಸಾಗಿಸಲು ಸರ್ಕಾರವೇ ಪರ್ಯಾಯ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದಲ್ಲಿ ಬೆಳೆಗಾರರಿಗೆ ಎದುರಾಗುವ ನಷ್ಟ ಪರಿಹಾರವನ್ನು ಸರ್ಕಾರ ನೀಡಬೇಕು' ಎಂದು ಮನವಿ‌ ಮಾಡಿದರು.

*
ರಂಜಾನ್ ಹಬ್ಬಕ್ಕೆ ದ್ರಾಕ್ಷಿಗೆ ದಾಖಲೆ ಬೆಲೆ ಸಿಗುತ್ತದೆ. ಕಳೆದ ವರ್ಷ ಲಾಭ ಕೈ ಸೇರಿತ್ತು. ಈ ಬಾರಿ ನಷ್ಟ ತಪ್ಪಿದ್ದಲ್ಲ. ಸರ್ಕಾರವೇ ದ್ರಾಕ್ಷಿ ಬೆಳೆಗಾರರ ಪರ ನಿಲ್ಲಬೇಕು
-ನಾಗೇಶ್, ದ್ರಾಕ್ಷಿ ಬೆಳೆಗಾರ, ಚಿಕ್ಕಬಳ್ಳಾಪುರ

*
ಕಟಾವು ಮಾಡುವವರನ್ನು ಹುಡುಕುವುದು ಒಂದು ಸಮಸ್ಯೆಯಾದರೆ, ಕಟಾವಿನ ನಂತರ ಅದನ್ನು ಮಾರುಕಟ್ಟೆಗಳಿಗೆ ಸಾಗಿಸುವುದು ದೊಡ್ಡ ಸವಾಲು
-ಪ್ರವೀಣ್, ದ್ರಾಕ್ಷಿ ಬೆಳೆಗಾರ, ಚೌಡಸಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT