ಬುಧವಾರ, ಮೇ 27, 2020
27 °C
ಕೊರೊನಾ ಸೋಂಕು ಭೀತಿ: ಎಪಿಎಂಸಿ ತರಕಾರಿ, ಹಣ್ಣು ವಹಿವಾಟು ಸ್ಥಳಾಂತರ ತಂದ ಅವಾಂತರ

ರೈತರಿಗೆ ಬೆಲೆ ಇಲ್ಲ, ಗ್ರಾಹಕರ ಕೈಗೂ ಸಿಗುತ್ತಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೊರೊನಾ ಸೋಂಕು ಹರಡುವ ಭೀತಿಯಿಂದ ಮಾರುಕಟ್ಟೆಗಳನ್ನು ಸ್ಥಳಾಂತರ ಮಾಡಿದ ಪರಿಣಾಮ ಹಣ್ಣು, ತರಕಾರಿ ಬೆಳೆದ ರೈತರು ಮತ್ತು ಖರೀದಿ ಮಾಡುವ ಗ್ರಾಹಕರ ನಡುವಿನ ಅಂತರವನ್ನು ಮತ್ತಷ್ಟು ಹಿಗ್ಗಿಸಿದೆ. ಒಂದೆಡೆ ರೈತರಿಗೆ ಬೆಲೆ ಸಿಗುತ್ತಿಲ್ಲ, ಮತ್ತೊಂದೆಡೆ ಅವು ಗ್ರಾಹಕರ ಕೈಗೂ ಎಟಕುತ್ತಿಲ್ಲ. ಇದರ ಲಾಭವನ್ನು ಚಿಲ್ಲರೆ ವ್ಯಾಪಾರಿಗಳು ಪಡೆದುಕೊಳ್ಳುತ್ತಿದ್ದಾರೆ.

ರೈತರು ತರಕಾರಿ ಮತ್ತು ಹಣ್ಣನ್ನು ಎಪಿಎಂಸಿಗಳಿಗೆ ತಂದು ಅಲ್ಲಿನ ಸಗಟು ವ್ಯಾಪಾರಿಗಳಿಗೆ ಮಾರಾಟ ಮಾಡಿ ಹೋಗುತ್ತಾರೆ. ಅಲ್ಲಿಂದ ಖರೀದಿ ಮಾಡುವ ಚಿಲ್ಲರೆ ವ್ಯಾಪಾರಿಗಳ ಸಂಖ್ಯೆ ಕಡಿಮೆಯಾಗಿದೆ. ಇದರ ಪರಿಣಾಮ ಎಪಿಎಂಸಿಯಲ್ಲೇ ತರಕಾರಿ ಮತ್ತು ಹಣ್ಣು ಕೊಳೆಯಲಾರಂಭಿಸಿದೆ.

ಯಶವಂತಪುರದಲ್ಲಿದ್ದ ಆಲೂಗಡ್ಡೆ, ಈರುಳ್ಳಿ ಮತ್ತು ತರಕಾರಿ ಮಾರುಕಟ್ಟೆಯನ್ನು ದಾಸನಪುರ ಉಪಕೃಷಿ ಮಾರುಕಟ್ಟೆಗೂ, ಕಲಾಸಿಪಾಳ್ಯದ ಮಾರುಕಟ್ಟೆಯನ್ನು ಸಿಂಗೇನ ಅಗ್ರಹಾರಕ್ಕೂ ತಾತ್ಕಾಲಿಕವಾಗಿ ಸ್ಥಳಾಂತರ ಮಾಡಲಾಯಿತು. ಕೊರೊನಾ ಸೋಂಕು ಹರಡುವುದನ್ನು ತಡೆ
ಗಟ್ಟುವ ನಿಟ್ಟಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಈ ಕ್ರಮವನ್ನು ಸರ್ಕಾರ ಕೈಗೊಂಡಿತು. ಸರ್ಕಾರದ ಜತೆ ಸಹಕರಿಸುವ ನಿಟ್ಟಿನಲ್ಲಿ ವರ್ತಕರು ಕೂಡ ಅದಕ್ಕೆ ಒಪ್ಪಿಗೆ ಸೂಚಿಸಿದರು.

ದಾಸನಪುರ ಮತ್ತು ಸಿಂಗೇನ ಅಗ್ರಹಾರದಲ್ಲಿ ತರಕಾರಿ ಮತ್ತು ಹಣ್ಣು ಕೊಳೆಯುತ್ತಿದ್ದು, ಶೇ 25ರಷ್ಟೂ ಖರೀದಿ ಆಗುತ್ತಿಲ್ಲ ಎಂದು ತರಕಾರಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಎಂ.ಗೋವಿಂದಪ್ಪ ಬೇಸರ ವ್ಯಕ್ತಪಡಿಸುತ್ತಾರೆ.

ಪೊಲೀಸರ ಭಯ ಮತ್ತು ದೂರ ಎಂಬ ಕಾರಣಕ್ಕೆ ಚಿಲ್ಲರೆ ವ್ಯಾಪಾರಿಗಳ ಸಂಖ್ಯೆ ಕಡಿಮೆಯಾಗಿದೆ. ಇದರ ನಡುವೆಯೂ ಮಾರುಕಟ್ಟೆಗೆ ಬಂದು ಖರೀದಿ ಮಾಡಿಕೊಂಡು ಹೋಗುವ ಚಿಲ್ಲರೆ ವ್ಯಾಪಾರಿಗಳು ಲಾಭ ಪಡೆದುಕೊಳ್ಳುತ್ತಿದ್ದಾರೆ. ಎರಡು–ಮೂರು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ಸಗಟು ವ್ಯಾಪಾರಿಗಳು ದೂರುತ್ತಾರೆ. 

‘ಮಹಾರಾಷ್ಟ್ರದಿಂದ ಕಿತ್ತಳೆ, ನಾಸಿಕ್, ಮೀರಜ್, ಸಾಂಗ್ಲಿಯಿಂದ ದ್ರಾಕ್ಷಿ ಬರುತ್ತಿದೆ. ಕಾಶ್ಮೀರದಿಂದ ಸೇಬು ಕೂಡ ಬೆಂಗಳೂರಿಗೆ ಬರುತ್ತಿದೆ. ಚಿಲ್ಲರೆ ವ್ಯಾಪಾರಿಗಳು ಖರೀದಿ ಮಾಡಲು ಬರುತ್ತಿಲ್ಲ. ತಮಿಳುನಾಡು, ಆಂಧ್ರ ಮತ್ತು ಕೇರಳದಿಂದ ವರ್ತಕರು ಬರಲು ಹೆದರು
ತ್ತಿದ್ದಾರೆ. ಪರಿಣಾಮ ವ್ಯಾಪಾರ ಸಂಪೂರ್ಣ ಕುಸಿದಿದೆ’ ಎಂದು ಹಣ್ಣು ವ್ಯಾಪಾರಿಗಳ ಸಂಘದ ಅಧ್ಯಕ್ಷ ಮದೀನ್ ಹೇಳುತ್ತಾರೆ.

ಈ ಬಗ್ಗೆ ಚಿಲ್ಲರೆ ವ್ಯಾಪಾರಿಗಳು ತಮ್ಮ ವಿಭಿನ್ನ ಸಮಸ್ಯೆ ಹೇಳಿಕೊಳ್ಳುತ್ತಾರೆ. ‘ಯಶವಂತಪುರದಿಂದ ತರಕಾರಿ ಸಾಗಣೆ ವೆಚ್ಚ ₹200 ಇತ್ತು, ಈಗ ದಾಸನಪುರದಿಂದ ₹1,500 ಕೊಟ್ಟರೂ ವಾಹನಗಳು ಸಿಗುತ್ತಿಲ್ಲ. ಪೊಲೀಸರ ಕಾಟ ಬೇರೆ ಇದೆ. ದುಪ್ಪಟ್ಟು ಬೆಲೆಗೆ ಮಾರಾಟ ಮಾಡದೇ ನಮ್ಮ ಜೇಬಿನ ಹಣ ಕಳೆದುಕೊಳ್ಳಬೇಕೇ’ ಎನ್ನುತ್ತಾರೆ. 

ಆಲೂಗಡ್ಡೆ–ಈರುಳ್ಳಿ ರಾಶಿ
ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಬಂದ ಆಲೂಗಡ್ಡೆ ಮತ್ತು ಈರುಳ್ಳಿ ಚೀಲಗಳು ದಾಸನಪುರ ಮಾರುಕಟ್ಟೆಯಲ್ಲಿ ರಾಶಿ ಬಿದ್ದಿವೆ.

‘12 ಸಾವಿರ ಚೀಲ ಆಲೂಗಡ್ಡೆ, 42 ಸಾವಿರ ಚೀಲ ಈರುಳ್ಳಿ ಗುರುವಾರ ದಾಸನಪುರ ಮಾರುಕಟ್ಟೆಗೆ ಬಂದಿದೆ. ಇದರಲ್ಲಿ ಶೇ 50ರಷ್ಟು  ವ್ಯಾಪಾರವಾಗದೆ ಉಳಿದಿದೆ’ ಎಂದು ಎಪಿಎಂಸಿ ಆಲೂಗಡ್ಡೆ ಮತ್ತು ಈರುಳ್ಳಿ ವರ್ತಕರ ಸಂಘದ ಕಾರ್ಯದರ್ಶಿ ಉದಯಶಂಕರ್ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು