ಗುರುವಾರ , ಅಕ್ಟೋಬರ್ 1, 2020
28 °C
ಖಾಸಗಿ ಆಸ್ಪತ್ರೆಗಳ ವಿರುದ್ಧ ದೂರುಗಳ ಸುರಿಮಳೆ * ಸುಳ್ಳು ಲೆಕ್ಕ ನೀಡುವ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ: ಆಯುಕ್ತ ಎಚ್ಚರಿಕೆ

ಚಿಕಿತ್ಸೆಗೆ ಆಸ್ಪತ್ರೆಗಳ ಹಿಂದೇಟು; ದುಬಾರಿ ಶುಲ್ಕ ವಸೂಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರೋಗಿಗಳ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು ಹಿಂದೇಟು ಹಾಕುತ್ತಿವೆ. ಸರ್ಕಾರ ಆದೇಶಕ್ಕೆ ಆಸ್ಪತ್ರೆಗಳಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಈಗಲೂ ಕೋವಿಡ್ ಚಿಕಿತ್ಸೆಗೆ ಸರ್ಕಾರ ನಿಗದಿಪಡಿಸಿದಕ್ಕಿಂತ ಹೆಚ್ಚು ಶುಲ್ಕ ವಿಧಿಸುತ್ತಿವೆ....

ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ಮಂಗಳವಾರ ಖಾಸಗಿ ಆಸ್ಪತ್ರೆಗಳ ಕಾರ್ಯವೈಖರಿ ವಿರುದ್ಧ ಪಾಲಿಕೆ ಸದಸ್ಯರು ದೂರುಗಳ ಸುರಿ ಮಳೆಗೈದರು.

ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ‘ಆಸ್ಪತ್ರೆಗಳು ಕೋವಿಡ್‌ ರೋಗಿಗಳನ್ನು ದಾಖಲಿಸಿಕೊಳ್ಳಲು ನಿರಾಕರಿಸಿದರೆ, ಲಭ್ಯ ಇರುವ ಹಾಸಿಗೆಗಳ ಬಗ್ಗೆ ಸುಳ್ಳು ಲೆಕ್ಕ ನೀಡಿ ಕಳ್ಳಾಟ ನಡೆಸಿದರೆ ಕಠಿಣ ಕ್ರಮ ಕೈಗೊಳ್ಳಲಿದ್ದೇವೆ. ಸರ್ಕಾರ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಹಣ ವಸೂಲಿ ಮಾಡಿದರೆ ಆ ಮೊತ್ತವನ್ನು ವಾಪಾಸ್‌ ಕೊಡಿಸಲಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

‘ಆಸ್ಪತ್ರೆಗಳ ಪರವಾನಗಿ ರದ್ದುಪಡಿಸುವ ಅಧಿಕಾರ ಈ ಹಿಂದೆ ನಗರ ಜಿಲ್ಲಾಧಿಕಾರಿಗೆ ಮಾತ್ರ ಇತ್ತು. ಈಗ ಕಾನೂನು ತಿದ್ದುಪಡಿ ತಂದು ಪಾಲಿಕೆ ಆಯುಕ್ತರಿಗೂ ಈ ಅಧಿಕಾರ ನೀಡಲಾಗಿದೆ. ಹಾಗಾಗಿ ಬಿಬಿಎಂಪಿ ಜೊತೆ ಸಹಕರಿಸದ ಆಸ್ಪತ್ರೆಗಳ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಿದ್ದೇವೆ. ಖಾಸಗಿ ಆಸ್ಪತ್ರೆಗಳ ಪರವಾನಗಿ ರದ್ದುಪಡಿಸಲೂ ಹಿಂದೇಟು ಹಾಕುವುದಿಲ್ಲ. ವಿಪತ್ತು ನಿರ್ವಹಣಾ ಕಾಯ್ದೆಯಡಿ ಅವರಿಗ 1 ವರ್ಷ ಜೈಲು ಶಿಕ್ಷೆಯನ್ನೂ ವಿಧಿಸಬಹುದು’ ಎಂದು ಎಚ್ಚರಿಕೆ ನೀಡಿದರು.

‘ವೈದ್ಯರು ಹಾಗೂ ಸಿಬ್ಬಂದಿ ಆಸ್ಪತ್ರೆಗೆ ಬರಲು ನಿರಾಕರಿಸುತ್ತಿದ್ದಾರೆ. ಹಾಗಾಗಿ ಹಾಸಿಗೆಗಳಿದ್ದರೂ ಅವುಗಳನ್ನು ನಿರ್ವಹಿಸುವಷ್ಟು ಸಿಬ್ಬಂದಿ ನಮ್ಮಲ್ಲಿಲ್ಲ ಎಂದು ಖಾಸಗಿ ಆಸ್ಪತ್ರೆಯವರು ಸಬೂಬು ಹೇಳುತ್ತಿದ್ದಾರೆ. ಎಷ್ಟು ಆಸ್ಪತ್ರೆಗಳನ್ನು ಚಿಕಿತ್ಸೆಗೆ ನೀಡಲು ಬಳಸಲಾಗುತ್ತಿದೆ ಎಂಬುದನ್ನು ಘೋಷಿಸಿ ಅದರಲ್ಲಿ ಅರ್ಧದಷ್ಟು ಹಾಸಿಗೆಯನ್ನು ಬಿಬಿಎಂಪಿ ಶಿಫಾರಸು ಮಾಡಿದವರ ಚಿಕಿತ್ಸೆಗೆ ಕಾಯ್ದಿರಿಸಿ ಎಂದು ಸೂಚನೆ ನೀಡಿದ್ದೇವೆ’ ಎಂದು ತಿಳಿಸಿದರು.

‘ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದೇ ಸಮಸ್ಯೆ ಆಗುತ್ತಿರುವುದನ್ನು ತಪ್ಪಿಸಲು ಹಂಚಿಕೆ ವಿಧಾನದಲ್ಲಿ ಮಾರ್ಪಾಡು ಮಾಡಲಾಗುತ್ತಿದೆ. ಚಿಕಿತ್ಸೆಗೆ ದಾಖಲಿಸಲು ಆಂಬುಲೆನ್ಸ್‌ ಕೊರತೆ ಇಲ್ಲ. ದಾಖಲಾಗಲು ಬಿ.ಯು.ನಂಬರ್‌ ಬೇಕೇಬೇಕೆಂದೇನಿಲ್ಲ. ಕ್ಷಿಪ್ರ ಪರೀಕ್ಷೆ ವೇಳೆ ಕೋವಿಡ್‌ ದೃಢಪಟ್ಟರೆ ವಿಶೇಷ ರೆಫರಲ್‌ ಸಂಖ್ಯೆ (ಎಸ್‌ಆರ್‌ಎಫ್‌) ನೀಡಲಾಗುತ್ತದೆ. ಅದರ ಆಧಾರದಲ್ಲೂ ರೋಗಿಗಳು 108 ಆಂಬುಲೆನ್ಸ್‌ ಮೂಲಕ ಖಾಸಗಿ ಆಸ್ಪತ್ರೆಗೆ ದಾಖಲಾಗಬಹುದು. ಎಸ್‌ಆರ್‌ಎಫ್‌ ಸಂಖ್ಯೆಯ ಆಧಾರದಲ್ಲಿ ರೋಗಿಗಳನ್ನು ವಲಯ ಮಟ್ಟದ ನಿಯಂತ್ರಣ ಕೊಠಡಿಗಳ ಮೂಲಕವೇ ಆಸ್ಪತ್ರೆಗೆ ದಾಖಲಿಸಲು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಆಯುಕ್ತರು ವಿವರಿಸಿದರು. 

‘ಬಿಬಿಎಂಪಿಯ ವಾರ್‌ರೂಂ ನೀಡುತ್ತಿರುವ ಮಾಹಿತಿಯಲ್ಲಿ ವ್ಯತ್ಯಾಸ ಇದೆ. ಇದನ್ನು ಸರಿಪಡಿಸಲು ಕ್ರಮಕೈಗೊಳ್ಳುತ್ತೇವೆ’ ಎಂದರು.

ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್‌, ‘ಕೋವಿಡ್‌ ದೃಢಪಟ್ಟ ಕೆಲವರು ಆತಂಕದಿಂದ ಬಿ.ಯು.ಸಂಖ್ಯೆ ಬರುವವರೆಗೆ ಕಾಯದೆಯೇ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ಅವರ ಬಿ.ಯು.ಸಂಖ್ಯೆ ಒದಗಿಸಿದ ಬಳಿಕವೂ ಅವರಿಂದ ಶುಲ್ಕ ವಸೂಲಿ ಮಾಡುತ್ತಿವೆ. ₹ 9 ಲಕ್ಷ ಶುಲ್ಕ ಪಾವತಿಸಿಲ್ಲ ಎಂಬ ಕಾರಣಕ್ಕೆ ಖಾಸಗಿ ಆಸ್ಪತ್ರೆಯೊಂದು ರೋಗಿಯ ಮೃತದೇಹವನ್ನು ಬಂಧುಗಳಿಗೆ ಹಸ್ತಾಂತರಿಸಿಲ್ಲ’ ಎಂದು ಆರೋಪಿಸಿದರು.

ಕೊಳೆಗೇರಿ ನಿವಾಸಿಗಳ ಚಿಕಿತ್ಸೆಗೂ ಆರೇಳು ಲಕ್ಷ ರೂಪಾಯಿ ಶುಲ್ಕ ಕೇಳಿದರೆ ಅವರು ಎಲ್ಲಿಂದ ಕಟ್ಟಬೇಕು ಎಂದು ಕಾಂಗ್ರೆಸ್‌ ಸದಸ್ಯ ಆರ್‌.ಸಂಪತ್‌ರಾಜ್ ಪ್ರಶ್ನಿಸಿದರು. ಜೀವರಕ್ಷಕ ಔಷಧಿಗಳೂ ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ. ಇವುಗಳ ಪೂರೈಕೆ ಬಗ್ಗೆಯೂ ಪಾಲಿಕೆ ಗಮನಹರಿಸಬೇಕು ಎಂದರು.

‘ಬಿಬಿಎಂಪಿಯ ವೆಬ್‌ಸೈಟ್‌ನಲ್ಲಿ ಖಾಸಗಿ ಆಸ್ಪತ್ರೆಯ ಐಸಿಯು ಖಾಲಿ ಇದೆ ಎಂದು ತೋರಿಸಿದರೂ, ಅಲ್ಲಿಗೆ ಸೋಂಕಿತರನ್ನು ಕಳುಹಿಸಿದರೆ ದಾಖಲಿಸಿ ಕೊಳ್ಳುತ್ತಿಲ್ಲ. ಖಾಸಗಿ ಆಸ್ಪತ್ರೆಗಳಿ ಬಿಬಿಎಂಪಿ ಮೂಲಕ ಕಳುಹಿಸಿದ ರೋಗಿಗಳನ್ನು ಕೀಳಾಗಿ ಕಾಣುತ್ತಿವೆ. ಜನ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿ ಜೀವ ಬಿಡಬೇಕಾ’ ಎಂದು ಎಂ.ಶಿವರಾಜು ಆಕ್ರೋಶ  ವ್ಯಕ್ತಪಡಿಸಿದರು.

ಪರೀಕ್ಷೆಯ ಗೊಂದಲ: ‘ಕೋವಿಡ್ ಪರೀಕ್ಷಾ ಫಲಿತಾಂಶಗಳೂ ಒಂದೊಂದು ರೀತಿ ಬರುತ್ತಿವೆ. ಕ್ಷಿಪ್ರ ಆ್ಯಂಟಿಜೆನ್‌ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟ ವ್ಯಕ್ತಿಗೆ ಆರ್‌ಟಿಪಿಸಿಆರ್‌ ಪರೀಕ್ಷೆಯಲ್ಲಿ ಸೋಂಕು ಇಲ್ಲ ಎಂದು ವರದಿ ಬಂದಿದೆ. ಒಂದೇ ದಿನ ಮಾದರಿ ಪಡೆದು ಪರೀಕ್ಷೆ ನಡೆಸಿದರೂ ಈ ರೀತಿ ವ್ಯತ್ಯಾಸವಾಗಲು ಹೇಗೆ ಸಾಧ್ಯ’ ಎಂದು ಅವರು ಪ್ರಶ್ನಿಸಿದರು.

‘ಕ್ಷಿಪ್ರ ಆ್ಯಂಟಿಜೆನ್‌ ಪರೀಕ್ಷೆಯಲ್ಲಿ ಸೋಂಕು ಇಲ್ಲ ಎಂದು ವರದಿ ಬಂದರೂ, ಅವರಿಗೆ ಕೋವಿಡ್‌ ಲಕ್ಷಣಗಳಿದ್ದರೆ ಆರ್‌ಟಿಪಿಸಿಆರ್‌ ಪರೀಕ್ಷೆ ನಡೆಸಬೇಕಾಗುತ್ತದೆ’ ಎಂದು ಆಯುಕ್ತರು ತಿಳಿಸಿದರು.

 ಕೋವಿಡ್‌ ಸೋಂಕಿತರೆಲ್ಲರಿಗೂ ಸರ್ಕಾರ ಉಚಿತ ಚಿಕಿತ್ಸೆ ಒದಗಿಸಲಿ ಎಂದು ಮಂಜುನಾಥ ರೆಡ್ಡಿ ಒತ್ತಾಯಿಸಿದರು.

‘ಕೊರೊನಾ ಯೋಧರಿಗೆ ಶೇ 50ರಷ್ಟು ಹಾಸಿಗೆ ಮೀಸಲು’
‘ಪಾಲಿಕೆಯು ಇನ್ಫೊಸಿಸ್‌ ನೆರವನಿನಿಂದ ನಿರ್ಮಿಸುತ್ತಿರುವ ಕೋವಿಡ್‌ ಆಸ್ಪತ್ರೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಪೌರಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಕಿರಿಯ ಆರೋಗ್ಯ ಸಹಾಯಕಿರ ಚಿಕಿತ್ಸೆಗೆ ಶೇ 50ರಷ್ಟು ಹಾಸಿಗೆಗಳನ್ನು ಮೀಸಲಿಡಲಾಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೂ ಸೂಚನೆ ನೀಡಿದ್ದಾರೆ’ ಎಂದು ಪಾಲಿಕೆ ಆಯುಕ್ತರು ತಿಳಿಸಿದರು

‘ಕೋವಿಡ್‌ ನಿಯಂತ್ರಣಕ್ಕಾಗಿ ಬಿಬಿಎಂಪಿಯಲ್ಲಿ ಕೆಲಸ ಮಾಡುವವರಿಗೆ ಹಾಗೂ ಬೂತ್‌ ಮಟ್ಟದ ತಂಡಗಳಲ್ಲಿ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುವವರಿಗೂ ವೈಯಕ್ತಿಕ ಸುರಕ್ಷತಾ ಸಾಧನವನ್ನು ನೀಡುವುದು ಹಾಗೂ ಅವರ ಆರೋಗ್ಯ ರಕ್ಷಣೆ ಪಾಲಿಕೆಯ ಜವಾಬ್ದಾರಿ’ ಎಂದರು.

156 ಪೌರಕಾರ್ಮಿಕರಿಗೆ ಸೋಂಕು: ಪೌರಕಾರ್ಮಿಕರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಮೂರು ದಿನಗಳ ಹಿಂದ 4464 ಪೌರ ಕಾರ್ಮಿಕರನ್ನು, 359 ಮೇಲ್ವಿಚಾರಕರನ್ನು ಹಾಗೂ 15 ವಾಹನ ಚಾಲಕರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ 156 ಮಂದಿ ಸೋಂಕು ಹೊಂದಿರುವುದು ದೃಢಪಟ್ಟಿದೆ’ ಎಂದು ತಿಳಿಸಿದರು.

‘ಪಿಎಚ್‌ಸಿ ಬಲಪಡಿಸಿ’
‘ಪಾಲಿಕೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬಲಪಡಿಸಬೇಕು. ಕೇಂದ್ರ ಮತ್ತು ರಾಜ್ಯದ ವಿಪತ್ತು ಪರಿಹಾರ ನಿಧಿಯಲ್ಲಿ ₹ 200 ಕೋಟಿ ಲಭ್ಯ ಇದ್ದು, ಈ ಮೊತ್ತವನ್ನ ಪಿಎಚ್‌ಸಿಗಳ ಮೂಲಸೌಕರ್ಯ ಕೊರತೆ ನೀಗಿಸಲು ಬಳಸಬಹುದು ಎಂದು ಮಂಜುನಾಥ ಪ್ರಸಾದ್ ಸಲಹೆ ನೀಡಿದರು.

‘ಚಾಮರಾಜಪೇಟೆ ಕ್ಷೇತ್ರದ ಜಗಜೀವನರಾಂ ಆಸ್ಪತ್ರೆ ಉದ್ಘಾಟನೆಯಾಗಿ ವರ್ಷ ಕಳೆದರೂ ಅದನ್ನು ಬಳಸಿಕೊಂಡಿಲ್ಲ. ಮೊದಲು ನಮ್ಮ ಸೌಕರ್ಯಗಳನ್ನು ಪೂರ್ಣ ‍ಪ್ರಮಾಣದಲ್ಲಿ ಬಳಸಬೇಕು. 40 ಹಾಸಿಗೆಗಳ ಸಾಮರ್ಥ್ಯದ ಈ ಆಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆ ಕೊಳವೆ ಅಳವಡಿಸಲು ಪ್ರೆಸ್ಟೀಜ್‌ ಗ್ರೂಪ್‌ ಮುಂದೆ ಬಂದಿದೆ’ ಎಂದರು.

‘ಸ್ವಯಂಸೇವಕರ ಬಳಕೆಗೆ 6 ಸಾವಿರ ಪಲ್ಸ್‌ ಮೀಟರ್‌ ನೀಡಲು ಅಜೀಮ್‌ ಪ್ರೇಮ್‌ಜಿ ಪ್ರತಿಷ್ಠಾನದವರು ಮುಂದೆ ಬಂದಿದ್ದಾರೆ. ಮನೆಯಲ್ಲೇ ಚಿಕಿತ್ಸೆಗೆ ಒಳಗಾಗುವವರಿಗೆ ಅಗತ್ಯವಿರುವ ಆರೋಗ್ಯ ಕಿಟ್‌ ಒದಗಿಸುವುದಾಗಿ ಟಾಟಾ ಟ್ರಸ್ಟ್‌ನವರು ಭರವಸೆ ನೀಡಿದ್ದಾರೆ. ಪ್ರತಿಯೊಂದು ಪರಿಕರ ಖರೀದಿಸುವಾಗಲೂ ಪಾರದರ್ಶಕವಾಗಿ ನಡೆದುಕೊಳ್ಳಿ. ಎಲ್ಲ ದರ ಪಟ್ಟಿಯನ್ನು ಪಾಲಿಕೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದು ಆಯುಕ್ತರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು