ಶನಿವಾರ, 30 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ 19 ಚಿಕಿತ್ಸೆ: ಪ್ರತಿ ರೋಗಿಗೆ ₹ 2.8 ಲಕ್ಷ ಖರ್ಚು

ಸರ್ಕಾರಕ್ಕೆಹೆಚ್ಚುತ್ತಿದೆ ಆರ್ಥಿಕ ಹೊರೆ
Last Updated 2 ಮೇ 2020, 21:10 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಚಿಕಿತ್ಸೆ ಕೆಲವರಿಗೆ ದುಬಾರಿಯಾಗುತ್ತಿದ್ದು, ಪ್ರತಿ ರೋಗಿಯ ಮೇಲೆ ಸರ್ಕಾರ ₹ 1.40 ಲಕ್ಷದಿಂದ ₹ 2.8 ಲಕ್ಷದವರೆಗೂ ಖರ್ಚು ಮಾಡುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ. ‌

ರೋಗಿಯ ಸ್ಥಿತಿಗತಿಯ ಆಧಾರದ ಮೇಲೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಇದರಿಂದಾಗಿ ಚಿಕಿತ್ಸಾ ವೆಚ್ಚದಲ್ಲಿಯೂ ವ್ಯತ್ಯಯವಾಗುತ್ತಿದೆ.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಾರ ರಾಜ್ಯದಲ್ಲಿ ಈವರೆಗೆ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ271 ಮಂದಿಯಲ್ಲಿ 46 ಜನರು 22 ದಿನಗಳು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಸರ್ಕಾರಿ ಆಸ್ಪತ್ರೆಗಳ ಸಾಮಾನ್ಯ ವಾರ್ಡ್‌ಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವವರಿಗೆ ದಿನಕ್ಕೆ ₹ 10 ಸಾವಿರದಿಂದ ₹ 20 ಸಾವಿರ ವೆಚ್ಚವಾಗಲಿದೆ. ತೀವ್ರ ನಿಗಾ ಘಟಕದಲ್ಲಿ (ಐಸಿಯು) ದಾಖಲಾದಲ್ಲಿ ಚಿಕಿತ್ಸಾ ವೆಚ್ಚ ಶೇ 55 ರಷ್ಟು ಹೆಚ್ಚಳವಾಗಲಿದೆ. ಸದ್ಯಐಸಿಯುಗಳಲ್ಲಿ ಏಳು ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

‘ಪ್ರತಿ ರೋಗಿಗಿಗೆ ಚಿಕಿತ್ಸೆಗೆ ಇಷ್ಠೇ ಹಣ ಖರ್ಚು ಮಾಡಲಾಗುತ್ತಿದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಚಿಕಿತ್ಸೆ ವೇಳೆ ಹಲವು ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ತೀವ್ರ ನಿಗಾ ಘಟಕದಲ್ಲಿಯೂ ಕೆಲವರಿಗೆ ಚಿಕಿತ್ಸೆ ಅಗತ್ಯ ಇರುತ್ತದೆ. ಅದೇ ರೀತಿ, ಆಸ್ಪತ್ರೆಗಳಲ್ಲಿ ಇರುವ ಅವಧಿಯ ಮೇಲೆಯೂ ವೆಚ್ಚದಲ್ಲಿ ವ್ಯತ್ಯಯವನ್ನು ಕಾಣಬಹುದಾಗಿದೆ’ ಎಂದು ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆಯ ನಿರ್ದೇಶಕ ಡಾ.ಸಿ. ನಾಗರಾಜ್ ತಿಳಿಸಿದರು.

‘ಹೆಚ್ಚಿನ ಆಸ್ಪತ್ರೆಗಳಲ್ಲಿ ದಿನಕ್ಕೆ ₹ 8 ಸಾವಿರ ಶುಲ್ಕ ನಿಗದಿಪಡಿಸಲಾಗಿದೆ. ಆದಾಗ್ಯೂ, ಪ್ರಸ್ತುತ ನಗರದಲ್ಲಿ 67 ಕ್ರಿಯಾಶೀಲ ಕೋವಿಡ್ -19 ಪ್ರಕರಣಗಳಲ್ಲಿ 58 ಮಂದಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಪ್ರತಿ ರೋಗಿಗೆ ಸುಮಾರು ₹ 3 ಸಾವಿರ ಮತ್ತು ಐಸಿಯುನಲ್ಲಿರುವ ರೋಗಿಗೆ ₹ 8 ಸಾವಿರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಔಷಧಿಯ ವೆಚ್ಚ ದಿನಕ್ಕೆ ₹ 500ರಿಂದ ₹ 4 ಸಾವಿರ ಆಗುತ್ತದೆ’ ಎಂದು ವೈದ್ಯರೊಬ್ಬರು ತಿಳಿಸಿದರು.

ಆಂಬ್ಯುಲೆನ್ಸ್ ವೆಚ್ಚವೂ ಏರಿಕೆ
ಗುಣಮುಖರಾದ ವ್ಯಕ್ತಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವ ಮೊದಲು ಎರಡು ಬಾರಿ ಕೋವಿಡ್‌ ಪರೀಕ್ಷೆ ಮಾಡಲಾಗುತ್ತದೆ. ಇದಕ್ಕೆ ಪ್ರತ್ಯೇಕ ಶುಲ್ಕ ಇರಲಿದೆ. ಆಂಬ್ಯುಲೆನ್ಸ್ ವೆಚ್ಚವೂ ಹೆಚ್ಚಳವಾಗಿದೆ. ಸಾಮಾನ್ಯ ರೋಗಿಗಳನ್ನು ಒಯ್ಯುವಾಗ ₹ 1,400 ವೆಚ್ಚವಾಗುತ್ತಿತ್ತು. ಈಗ ಸಿಬ್ಬಂದಿಗೆ ವೈಯಕ್ತಿಕ ಸುರಕ್ಷತಾ ಸಾಧನಗಳನ್ನು (ಪಿಪಿಇ) ಕೊಡಲಾಗುತ್ತಿದೆ. ಅದೇ ರೀತಿ, ಅಪಾಯದ ನಡುವೆಯೂ ಕಾರ್ಯನಿರ್ವಹಿಸುತ್ತಿರುವ ಅವರಿಗೆ ₹ 500 ಹೆಚ್ಚುವರಿಯಾಗಿ ನೀಡಲಾಗುತ್ತಿದೆ.

ವೈದ್ಯಕೀಯ ಶಿಕ್ಷಣ ಸಚಿವಡಾ. ಕೆ. ಸುಧಾಕರ್, ‘ಕೋವಿಡ್ ರೋಗಿಗೆ ಎಷ್ಟು ಖರ್ಚಾಗುತ್ತದೆ ಎಂಬುದರ ಬಗ್ಗೆ ಸರ್ಕಾರವು ಸಮಗ್ರವಾಗಿ ಲೆಕ್ಕಹಾಕಿಲ್ಲ. ರೋಗಿಗಳ ಜೀವ ಉಳಿಸುವಲ್ಲಿ ನಾವು ಹೆಚ್ಚಿನ ಗಮನಹರಿಸಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT