ಸೋಮವಾರ, ಮಾರ್ಚ್ 8, 2021
31 °C
ರಾಜಧಾನಿಯಲ್ಲಿ ಸೋಂಕಿತರ ಸಂಖ್ಯೆ 167ಕ್ಕೆ ಏರಿಕೆ

ರ್‍ಯಾಂಡಮ್ ಪರೀಕ್ಷೆ: ಪಾದರಾಯನಪುರದಲ್ಲಿ ಮತ್ತೆ ಮೂವರಿಗೆ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೊನಾ ಸೋಂಕು ಪತ್ತೆ ಸಂಬಂಧ ನಗರದ ಪಾದರಾಯನಪುರದಲ್ಲಿ ನಡೆಸಿದ ರ್‍ಯಾಂಡಮ್ ಪರೀಕ್ಷೆಯಲ್ಲಿ ಹೊಸದಾಗಿ ಮೂವರಿಗೆ ಸೋಂಕು ಕಾಣಿಸಿಕೊಂಡಿದೆ. ಇದರಿಂದಾಗಿ ಅಲ್ಲಿ ಸೋಂಕಿತರ ಸಂಖ್ಯೆ 40ಕ್ಕೆ ಏರಿಕೆಯಾಗಿದೆ. 

ನಗರದ ಹಾಟ್‌ ಸ್ಪಾಟ್ ಪ್ರದೇಶದಲ್ಲಿ ಒಂದಾದ ಪಾದರಾಯನಪುರದಲ್ಲಿ ಅತೀ ಹೆಚ್ಚು ಕೋವಿಡ್‌ ಪ್ರಕರಣಗಳು ವರದಿಯಾಗಿವೆ. ನಗರದಲ್ಲಿ ಶುಕ್ರವಾರ ಒಂದೇ ದಿನ 5 ಕೋವಿಡ್‌ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 167ಕ್ಕೆ ಏರಿಕೆಯಾಗಿದೆ. ಬಿಹಾರದ ಕಾರ್ಮಿಕನ ಸಂಪರ್ಕದಿಂದ ಹೊಂಗಸಂದ್ರದಲ್ಲಿ ಹೊಸದಾಗಿ ಎರಡು ಪ್ರಕರಣಗಳು ಬೆಳಕಿಗೆ ಬಂದಿವೆ. ಪಾದರಾಯನಪುರದಲ್ಲಿ 35 ವರ್ಷದ ಮಹಿಳೆ, 23 ವರ್ಷದ ಯುವಕ ಹಾಗೂ 34 ವರ್ಷದ ಮಹಿಳೆ ಸೋಂಕಿತರಾಗಿದ್ದಾರೆ. 

ಗಲಭೆಯಲ್ಲಿ ಬಂಧನಕ್ಕೊಳಗಾಗಿದ್ದ ಪಾದರಾಯನಪುರದ ವ್ಯಕ್ತಿಯೊಬ್ಬರ ಪತ್ನಿ ಗರ್ಭಿಣಿಯಾಗಿದ್ದು (ರೋಗಿ 707), ಅವರಿಗೆ ಸೋಂಕು ತಗುಲಿರುವುದು ರ್‍ಯಾಂಡಮ್ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಅವರು ಚಾಮರಾಜಪೇಟೆಯ ಬಿಬಿಎಂಪಿ ಆಸ್ಪತ್ರೆಯಲ್ಲಿ ನಿಯಮಿತವಾಗಿ ಪರೀಕ್ಷೆ ಮಾಡಿಸಿಕೊಂಡಿದ್ದರು. ಆ ಆಸ್ಪತ್ರೆಗೆ ಬೀಗ ಹಾಕಿ, ಅಲ್ಲಿನ ರೋಗಿಗಳನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಆಸ್ಪತ್ರೆಗೆ ಸೋಂಕು ನಿವಾರಕವನ್ನು ಸಿಂಪಡಿಸಿ, 24 ಗಂಟೆಗಳ ಬಳಿಕ ಬಾಗಿಲು ತೆಗೆಯಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಗರ್ಭಿಣಿಯ ಪತಿಗೆ ಕೂಡ ಪರೀಕ್ಷೆ ಮಾಡಿದ್ದು, ಅವರಲ್ಲಿ ಸೋಂಕು ಪತ್ತೆಯಾಗಿಲ್ಲ.

ಕಾರ್ಮಿಕನ ಸಂಪರ್ಕ: ಹೊಂಗಸಂದ್ರದಲ್ಲಿ 14 ದಿನಗಳ ಕ್ವಾರಂಟೈನ್‌ ಪೂರ್ಣಗೊಳಿಸಿದ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಬಿಹಾರದ ಕಾರ್ಮಿಕನ (ರೋಗಿ 419) ಸಂಪರ್ಕ ಹೊಂದಿದ್ದ 184 ಮಂದಿಯನ್ನು ಹೋಟೆಲ್‌ಗಳಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.

12ನೇ ದಿನ ಪೂರೈಸಿದ ಬಳಿಕ ಅವರ ಗಂಟಲು ದ್ರವದ ಮಾದರಿಗಳನ್ನು ಸಂಗ್ರಹಿಸಿ, ಪ್ರಯೋಗಾಲಯಗಳಿಗೆ ಕಳುಹಿಸಲಾಗಿತ್ತು. ಅದರ ವರದಿ ಎರಡು ದಿನಗಳ ಬಳಿಕ ಅಂದರೆ ಶುಕ್ರವಾರ ಬಂದಿದ್ದು, ಇಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವರು ಕೂಡ ಕಾರ್ಮಿಕರಾಗಿದ್ದು, ವಿದ್ಯಾಜ್ಯೋತಿನಗರದಲ್ಲಿ 419ನೇ ರೋಗಿಯೊಂದಿಗೆ ವಾಸವಿದ್ದವರಾಗಿದ್ದಾರೆ. ಹೊಂಗಸಂದ್ರದಲ್ಲಿ ಸೋಂಕಿತರ ಸಂಖ್ಯೆ 33ಕ್ಕೆ ಏರಿಕೆಯಾಗಿದೆ.

ಕಾರ್ಮಿಕನ ಪ್ರವೇಶಕ್ಕೆ ವಿರೋಧ
ಹೊಂಗಸಂದ್ರದ ವಿದ್ಯಾಜ್ಯೋತಿ ನಗರದಲ್ಲಿ ವಾಸವಿದ್ದ ಬಿಹಾರದ ಕಾರ್ಮಿಕ (ರೋಗಿ 419) ಗುಣಮುಖರಾಗಿದ್ದಾರೆ. ಅವರು ಗುರುವಾರ ರಾತ್ರಿ ತಮ್ಮ ನಿವಾಸಕ್ಕೆ ಬರುತ್ತಿದ್ದಂತೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿ, ವಾಪಸ್ ಕಳುಹಿಸಿದ್ದಾರೆ. ಈ ಕಾರ್ಮಿಕನಿಂದ ಆ ಪ್ರದೇಶದಲ್ಲಿ ಈವರೆಗೆ 32 ಮಂದಿಗೆ ಸೋಂಕು ಹರಡಿದೆ. ಸ್ಥಳೀಯರ ವಿರೋಧದಿಂದಾಗಿ ಪಾಲಿಕೆ ಸದಸ್ಯೆ ಭಾರತಿ ರಾಮಚಂದ್ರ ಅವರ ಜತೆಗೆ ಚರ್ಚಿಸಿದ ಬಿಬಿಎಂಪಿ ಅಧಿಕಾರಿಗಳು, ಕಾರ್ಮಿಕನನ್ನು ಹೋಟೆಲ್‌ಗೆ ಕರೆದೊಯ್ದು ಕ್ವಾರಂಟೈನ್‌ಗೆ ಒಳಪಡಿಸಿದ್ದಾರೆ. 

ಶಿವಾಜಿನಗರದ ಹೋಟೆಲ್‌ ಹೌಸ್ ಕೀಪಿಂಗ್ ಸಿಬ್ಬಂದಿಯ ಸಂಪರ್ಕದಿಂದ ಸೋಂಕಿತರಾಗಿರುವ ನಾಲ್ವರು ಕಾರ್ಮಿಕರು ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿದ್ದಾರೆ ಎಂದು ಗೊತ್ತಾಗಿದೆ. ಅವರಿಗೆ ಸೋಂಕು ತಗುಲಿರುವುದು ಗುರುವಾರ ಸಂಜೆ ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿತ್ತು. ಅವರು ಮಧ್ಯಾಹ್ನ ಮತ್ತು ರಾತ್ರಿ ಇಂದಿರಾ ಕ್ಯಾಂಟೀನ್‌ನಲ್ಲಿ ಊಟವನ್ನು ಪಾರ್ಸಲ್ ಪಡೆದುಕೊಳ್ಳುತ್ತಿದ್ದರು. ಕೇವಲ ಪಾರ್ಸಲ್ ಪಡೆಯುತ್ತಿದ್ದರಿಂದ ಕ್ಯಾಂಟೀನ್ ಮುಚ್ಚುವ ಅಗತ್ಯವಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು