ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಒಂದೇ ದಿನ 1,267 ಜನರಿಗೆ ಸೋಂಕು; 56 ಮಂದಿ ಸಾವು

317 ರೋಗಿಗಳ ಸ್ಥಿತಿ ಗಂಭೀರ
Last Updated 14 ಜುಲೈ 2020, 21:25 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಮಂಗಳವಾರ ಒಂದೇ ದಿನ 1,267 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕಿನಿಂದ ಬಳಲುತ್ತಿರುವವರಲ್ಲಿ ಮತ್ತೆ 56 ಮಂದಿ ಮೃತಪಟ್ಟಿದ್ದಾರೆ.

ನಗರದ ಎಲ್ಲೆಡೆ ಕೋವಿಡ್ ಪ್ರಕರಣಗಳು ವರದಿಯಾಗುತ್ತಿದ್ದು, ಎರಡು ವಾರಗಳಲ್ಲೇ 16,414 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಈ ಅವಧಿಯಲ್ಲಿ 282 ಮಂದಿ ಮೃತಪಟ್ಟಿದ್ದಾರೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 20,969 ಹಾಗೂ ಸಾವಿಗೀಡಾದವರ ಸಂಖ್ಯೆ 377ಕ್ಕೆ ತಲುಪಿದೆ. ನಗರದಲ್ಲಿ ಕೋವಿಡ್‌ ಪರೀಕ್ಷೆಯನ್ನು ಹೆಚ್ಚಿಸಿದ ಪರಿಣಾಮ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಕಳೆದ ಕೆಲದಿನಗಳಿಂದ ಸರಾಸರಿ ಸಾವಿರ ಪ್ರಕರಣಗಳು ವರದಿಯಾಗುತ್ತಿವೆ. ಇದರಿಂದಾಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಮಸ್ಯೆ ಇನ್ನಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ. ಇದರಿಂದಾಗಿ ರೋಗಿಗಳ ಪರದಾಟ ಮುಂದುವರೆದಿದೆ.

ಹೊಸದಾಗಿ ದೃಢಪಟ್ಟ ಕೋವಿಡ್ ಮರಣ ಪ್ರಕರಣಗಳಲ್ಲಿ 22 ಮಂದಿ 50 ವರ್ಷದೊಳಗಿನವರು. ಇದರಲ್ಲಿ 23 ವರ್ಷದ ಯುವತಿ ಕೂಡ ಸೇರಿದ್ದಾಳೆ. ಬೇರೆ ಯಾವುದೇ ಕಾಯಿಲೆ ಇಲ್ಲದಿದ್ದರೂ ಕೆಲವರು ಜ್ವರದ ತೀವ್ರತೆಗೆ ಮೃತಪಟ್ಟಿದ್ದಾರೆ. 50 ವರ್ಷ ಮೇಲ್ಪಟ್ಟವರಲ್ಲಿ ಬಹುತೇಕರು ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಮಸ್ಯೆ ಸೇರಿದಂತೆ ವಿವಿಧ ಕಾಯಿಲೆಗಳಿಂದ ಕೂಡ ಬಳಲುತ್ತಿದ್ದವರು.

ಮಂಗಳವಾರ 664 ಮಂದಿ ಚೇತರಿಸಿಕೊಂಡು ವಿವಿಧ ಆಸ್ಪತ್ರೆಗಳಿಂದ ಮನೆಗೆ ತೆರಳಿದ್ದಾರೆ. ಪ್ರಕರಣಗಳ ಸಂಖ್ಯೆ ಹೆಚ್ಚಳವಾದಂತೆ ಗುಣಮುಖರಾಗುವವರ ಸಂಖ್ಯೆ ಕೂಡ ಏರಿಕೆಯಾಗುತ್ತಿದೆ. ಈವರೆಗೆ 4,992 ಮಂದಿ ಚೇತರಿಸಿಕೊಂಡಿದ್ದಾರೆ. ಸೋಂಕಿತರಲ್ಲಿ 317 ರೋಗಿಗಳ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ.

ಆಸ್ಪತ್ರೆಗಳಲ್ಲಿನ ಹಾಸಿಗೆಗಳ ಮಾಹಿತಿ ಒದಗಿಸಲು ಬಿಬಿಎಂಪಿ ಡಿಜಿಟಲ್ ಡ್ಯಾಶ್ ಬೋರ್ಡ್ ಅಭಿವೃದ್ಧಿಪಡಿಸಿದ್ದು, ನಿಗದಿತ ಸಮಯದಲ್ಲಿ ಲಭ್ಯ ಇರುವ ಹಾಸಿಗೆಗಳ ವಿವರ ಒದಗಿಸಲಾಗುತ್ತಿದೆ.

ದಿನಕ್ಕೆ 8 ಗಂಟೆಗಳ ಕೆಲಸ
ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಕೋವಿಡ್ ಆರೈಕೆ ಕೇಂದ್ರಗಳ ವೈದ್ಯರು, ಶುಶ್ರೂಷಕರು ಹಾಗೂ ಆರೋಗ್ಯ ಸಿಬ್ಬಂದಿ ನಿರಂತರ 10 ದಿನಗಳು ತಲಾ 8 ಗಂಟೆ ಕರ್ತವ್ಯ ನಿರ್ವಹಿಸಬೇಕು ಎಂದು ಆರೋಗ್ಯ ಇಲಾಖೆಯ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.

ಆರೋಗ್ಯ ಸೇವೆಯು ನಿರಂತರವಾಗಿ ಲಭ್ಯ ಇರುವಂತೆ ನೋಡಿಕೊಳ್ಳಬೇಕು. 10 ದಿನಗಳ ಬಳಿಕ 4 ದಿನಗಳು ಕರ್ತವ್ಯೇತರ ಅವಧಿ ಇರಲಿದೆ. ಕರ್ತವ್ಯದ ಅಂತ್ಯದಲ್ಲಿ ರ್‍ಯಾಪಿಡ್‌ ಕೋವಿಡ್ ಪರೀಕ್ಷೆಗೆ ಒಳಗಾಗಬೇಕು ಎಂದು ಸೂಚಿಸಿದ್ದಾರೆ.

ಅಂಕಿ–ಅಂಶಗಳು
5,859:
ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಮೀಸಲಿಟ್ಟಿರುವ ಹಾಸಿಗೆಗಳು
2,458:ಆಸ್ಪತ್ರೆಗಳಲ್ಲಿ ಈಗಾಗಲೇ ಭರ್ತಿಯಾಗಿರುವ ಹಾಸಿಗೆಗಳು
3,401:ಆಸ್ಪತ್ರೆಗಳಲ್ಲಿ ಸದ್ಯ ಖಾಲಿ ಇರುವ ಹಾಸಿಗೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT