ಭಾನುವಾರ, ಏಪ್ರಿಲ್ 2, 2023
31 °C
ಕೋವಿಡ್ ಮೂರನೇ ಅಲೆ ಕಾರಣ ಮಕ್ಕಳ ಐಸಿಯು ಹಾಸಿಗೆಗಳ ಸಂಖ್ಯೆ ದ್ವಿಗುಣ

ಐಜಿಐಸಿಎಚ್: ಮಕ್ಕಳ ರಕ್ಷಣೆಗೆ ಸಿದ್ಧತೆ

ವರುಣ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್ ಮೂರನೇ ಅಲೆ ಎದುರಿಸಲು ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯು (ಐಜಿಐಸಿಎಚ್) ಈಗಿನಿಂದಲೇ ಸಿದ್ಧತೆ ಪ್ರಾರಂಭಿಸಿದ್ದು, ಕೊರೊನಾ ಸೋಂಕಿತ ಮಕ್ಕಳ ಚಿಕಿತ್ಸೆಗೆ ತೀವ್ರ ನಿಗಾ ಘಟಕ (ಐಸಿಯು) ಹಾಸಿಗೆಗಳ ಸಂಖ್ಯೆಯನ್ನು ದ್ವಿಗುಣಗೊಳಿಸಲಾಗುತ್ತಿದೆ.

ರಾಜ್ಯದಲ್ಲಿ ಈವರೆಗೆ ಪತ್ತೆಯಾದ ಕೋವಿಡ್ ಪ್ರಕರಣಗಳಲ್ಲಿ ಶೇ 42.64ರಷ್ಟು ಪ್ರಕರಣಗಳು ಬೆಂಗಳೂರಿನಲ್ಲಿಯೇ ವರದಿಯಾಗಿವೆ. ಅದೇ ರೀತಿ, ಮೃತಪಟ್ಟವರಲ್ಲಿ ಶೇ 44.52ರಷ್ಟು ಮಂದಿ ಇಲ್ಲಿಯವರೇ ಆಗಿದ್ದಾರೆ. ಮಾರ್ಚ್‌ ಮೂರನೇ ವಾರದ ಬಳಿಕ ಸೋಂಕಿತರ ಸಂಖ್ಯೆ ಏರಿಕೆ ಕಂಡಿದ್ದರಿಂದ ನಗರದ ಆಸ್ಪತ್ರೆಗಳಲ್ಲಿ ಐಸಿಯು ಹಾಸಿಗೆಗಳ ಕೊರತೆ ಎದುರಾಗಿ, ಸೋಂಕಿತರು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಮರಣ ಪ್ರಮಾಣ ದರ ಏರಿಕೆಯಾಗಿತ್ತು.

ನಗರದಲ್ಲಿ ಒಟ್ಟು 25 ಲಕ್ಷ ಮಕ್ಕಳಿದ್ದಾರೆ. ಡಾ. ದೇವಿಪ್ರಸಾದ್ ಶೆಟ್ಟಿ ನೇತೃತ್ವದ 18 ಮಂದಿ ತಜ್ಞ ವೈದ್ಯರ ಸಮಿತಿಯು ಸರ್ಕಾರಕ್ಕೆ ಈಗಾಗಲೇ ಪ್ರಾಥಮಿಕ ವರದಿ ಸಲ್ಲಿಸಿದೆ. ಬೆಂಗಳೂರಿನಲ್ಲಿಯೇ 45,958 ಮಕ್ಕಳು ಸೋಂಕಿತರಾಗುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿಯೇ ಅತಿ ದೊಡ್ಡ ಮಕ್ಕಳ ಆಸ್ಪತ್ರೆಯಾದ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯು ವೈದ್ಯಕೀಯ ವ್ಯವಸ್ಥೆಯನ್ನು ಮೇಲ್ದರ್ಜೆಗೆ ಏರಿಕೆ ಮಾಡಿಕೊಳ್ಳಲಾರಂಭಿಸಿದೆ.

ಐಸಿಯು ಹಾಸಿಗೆಗೆ ಆದ್ಯತೆ: ಸಂಸ್ಥೆಯಲ್ಲಿ 500 ಹಾಸಿಗೆಗಳಿವೆ. ಇದರಲ್ಲಿ 300 ಹಾಸಿಗೆಗಳನ್ನು ಮಕ್ಕಳ ಚಿಕಿತ್ಸೆಗೆ, 150 ಹಾಸಿಗೆಗಳನ್ನು ಶಸ್ತ್ರಚಿಕಿತ್ಸೆಗೆ ಹಾಗೂ ಉಳಿದ ಹಾಸಿಗೆಗಳನ್ನು ತಾಯಂದಿರ ಚಿಕಿತ್ಸೆಗೆ ಬಳಸಲಾಗುತ್ತಿದೆ. ಸದ್ಯ 50 ಐಸಿಯು ಹಾಗೂ ವೆಂಟಿಲೇಟರ್ ಸಹಿತ ಐಸಿಯು ಹಾಸಿಗೆಗಳು ಇವೆ. ಈ ಸಂಖ್ಯೆಯನ್ನು ನೂರಕ್ಕೆ ಏರಿಸಲಾಗುತ್ತಿದೆ. ಎಚ್‌ಡಿಯು, ಎನ್‌ಐಸಿಯು ಹಾಸಿಗೆಗಳ ಸಂಖ್ಯೆಯನ್ನೂ ಹೆಚ್ಚಳ ಮಾಡಲಾಗುತ್ತಿದೆ.

ಈ ಕಾರ್ಯಕ್ಕೆ ಸಿಐಐ ಸಂಸ್ಥೆ ಕೂಡ ಕೈಜೋಡಿಸಿದ್ದು, ಕಾರ್ಪೊರೇಟ್‌ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್‌) ಅಡಿಯಲ್ಲಿ 40 ಐಸಿಯು ಹಾಸಿಗೆಗಳನ್ನು ರೂಪಿಸಲು ನೆರವು ನೀಡುತ್ತಿದೆ. ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿರುವ ಬಹು ಅಂಗಾಂಗ ಉರಿಯೂತ ಸಮಸ್ಯೆಗೆ (ಮಲ್ಟಿಸಿಸ್ಟಮ್ ಇನ್‌ಫ್ಲಮೇಟರಿ ಸಿಂಡ್ರೋಮ್) ಸಂಸ್ಥೆಯನ್ನು ನೋಡಲ್ ಕೇಂದ್ರವನ್ನಾಗಿ ಗುರುತಿಸಲಾಗಿದೆ.

‘ಕೋವಿಡ್‌ನ ಸೌಮ್ಯ ಮತ್ತು ಮಧ್ಯಮ ಸ್ವರೂಪದ ಲಕ್ಷಣಗಳು ಕಾಣಿಸಿಕೊಳ್ಳುತ್ತಿರುವುದರಿಂದ ಮಕ್ಕಳು ಬೇಗ ಚೇತರಿಸಿಕೊಳ್ಳುತ್ತಿದ್ದಾರೆ. ಮೂರನೇ ಅಲೆಯಲ್ಲಿ ವೈರಾಣು ಯಾವ ರೀತಿ ರೂಪಾಂತರಗೊಂಡು, ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ನಿಖರವಾಗಿ ಈಗಲೇ ಹೇಳಲು ಸಾಧ್ಯವಿಲ್ಲ. ಆದರೂ ಈಗಿನಿಂದಲೇ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ’ ಎಂದು ಸಂಸ್ಥೆಯ ನಿರ್ದೇಶಕ ಡಾ. ಸಂಜಯ್ ಕೆ.ಎಸ್. ತಿಳಿಸಿದರು.

ಆರೈಕೆ– ವೈದ್ಯರಿಗೆ ತರಬೇತಿ
ಕೋವಿಡ್ ಪೀಡಿತ ನವಜಾತ ಶಿಶುಗಳು, ಮಕ್ಕಳ ಆರೈಕೆ ಬಗ್ಗೆ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಗೆ ತರಬೇತಿ ನೀಡಲು ಸಂಸ್ಥೆ ಯೋಜನೆ ರೂಪಿಸಿದೆ. ನಗರದಲ್ಲಿ ಮಕ್ಕಳ ತಜ್ಞರ ಕೊರತೆ ಇರುವ ಕಾರಣ ಇತರ ವೈದ್ಯರಿಗೆ ಕೂಡ ತರಬೇತಿ ನೀಡಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ತಜ್ಞ ವೈದ್ಯರ ತಂಡ ರಚಿಸಲಾಗುತ್ತಿದೆ. ಮಕ್ಕಳನ್ನು ಯಾವ ರೀತಿ ನಿರ್ವಹಣೆ ಮಾಡಬೇಕು, ಅವರಿಗೆ ನೀಡುವ ಔಷಧದ ಪ್ರಮಾಣ, ಆರೈಕೆ ವಿಧಾನ, ವೈದ್ಯಕೀಯ ಆಮ್ಲಜನಕ ಒದಗಿಸುವಿಕೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಪ್ರಾಯೋಗಿಕ ತರಬೇತಿ ನೀಡಲು ಸಂಸ್ಥೆ ಸಿದ್ಧತೆ ನಡೆಸಿದೆ.

***

ಒಂದು ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಗಂಭೀರವಾಗಿ ಅಸ್ವಸ್ಥರಾಗುವ ಸೂಚನೆ ಸಿಕ್ಕರೆ ಐಸಿಯು ಹಾಸಿಗೆಗಳ ಸಂಖ್ಯೆಯನ್ನು ಮತ್ತಷ್ಟು ವಿಸ್ತರಿಸಲಾಗುತ್ತದೆ.
-ಡಾ. ಸಂಜಯ್ ಕೆ.ಎಸ್., ಐಜಿಐಸಿಎಚ್ ನಿರ್ದೇಶಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು