ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಸೋಂಕಿತರ ಮನೆ ಮುಂದೆ ಭಿತ್ತಿಪತ್ರ ಅಂಟಿಸಲ್ಲ: ಬಿಬಿಎಂಪಿ ಆಯುಕ್ತ

ಸಾವಿನ ಪ್ರಮಾಣ ಇಳಿಕೆ * ಪರೀಕ್ಷೆ ಹೆಚ್ಚಳದಿಂದ ಸೋಂಕಿತರ ಪ್ರಮಾಣ ಏರಿಕೆ
Last Updated 2 ಸೆಪ್ಟೆಂಬರ್ 2020, 11:41 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ದೃಢಪಟ್ಟ ವ್ಯಕ್ತಿಯ ಮನೆ ಮುಂದೆ ಭಿತ್ತಿಪತ್ರ ಅಂಟಿಸುವುದರಿಂದ ಮತ್ತು ಆ ಪ್ರದೇಶಗಳನ್ನು ಬ್ಯಾರಿಕೇಡ್ ಅಳವಡಿಸಿ ಸೀಲ್‌ಡೌನ್‌ ಮಾಡುವುದರಿಂದ ಆಸುಪಾಸಿನವರು ಸೋಂಕಿತರ ಮನೆಯವರನ್ನು ಕೆಟ್ಟದಾಗಿ ನೋಡುವ ಪರಿಸ್ಥಿತಿ ಇತ್ತು. ಇದನ್ನು ತಪ್ಪಿಸಲು, ಸೋಂಕಿತರ ಮನೆ ಮುಂದೆ ಭಿತ್ತಿಪತ್ರ ಅಂಟಿಸುವುದನ್ನು ಕೈಬಿಡಲಾಗುತ್ತದೆ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಭಿತ್ತಿಪತ್ರ ಅಂಟಿಸುವ ಬದಲು, ವ್ಯಕ್ತಿಗೆ ಸೋಂಕು ದೃಢಪಟ್ಟ ಬಗ್ಗೆ ಸುತ್ತ-ಮುತ್ತಲಿನ ಮನೆಯವರಿಗೆ ಮಾಹಿತಿ ನೀಡಲಾಗುವುದು. ಈ ಬಗ್ಗೆ ಆದೇಶ ಹೊರಡಿಸುವಂತೆ ರಾಜ್ಯ ಸರ್ಕಾರವನ್ನು ಕೋರಿದ್ದೇವೆ’ ಎಂದು ತಿಳಿಸಿದರು.

‘ಪಾಲಿಕೆ ವ್ಯಾಪ್ತಿಯ ಕಂಟೈನ್ಮೆಂಟ್ ಪ್ರದೇಶಗಳಲ್ಲಿ 100 ಮೀಟರ್ ವ್ಯಾಪ್ತಿಯಲ್ಲಿ ಒಂದೆರಡು ಪ್ರಕರಣಗಳು ಪತ್ತೆಯಾದರೆ ಅಂತಹ ಕಡೆ ಬ್ಯಾರಿಕೇಡ್ ಅಳವಡಿಸಿ ಸೀಲ್‌ಡೌನ್‌ ಮಾಡುವುದಿಲ್ಲ. 3ಕ್ಕಿಂತ ಹೆಚ್ಚು ಪ್ರಕರಣಗಳು ಕಂಡುಬರುವ ಪ್ರದೇಶದಲ್ಲಿ ಮಾತ್ರ ಬ್ಯಾರಿಕೇಡ್ ಅಳವಡಿಸಲಾಗುತ್ತಿದೆ. ನಗರದಲ್ಲಿ ಕೇವಲ ಒಂದೆರಡು ಸಕ್ರಿಯ ಕೋವಿಡ್‌ ಪ್ರಕರಣಗಳಿರುವ 17,159 ಕಡೆ ಬ್ಯಾರಿಕೇಡ್ ಅಳವಡಿಸಿಲ್ಲ. ಮೂರಕ್ಕಿಂತ ಹೆಚ್ಚು ಪ್ರಕರಣಗಳಿರುವ1,018 ಕಡೆ ಬ್ಯಾರಿಕೇಡ್ ಅಳವಡಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಸೋಂಕು ಹೆಚ್ಚಳ– ಆತಂಕ ಸಲ್ಲ: ಜುಲೈ ತಿಂಗಳಿಗೆ ಹೋಲಿಸಿದರೆ ಆಗಸ್ಟ್ ತಿಂಗಳಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಹೆಚ್ಚುಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಇದಕ್ಕೆ ಭಯಪಡುವ ಅಗತ್ಯವಿಲ್ಲ. ನಿತ್ಯ ನಡೆಸುವ ಕೋವಿಡ್‌ ಪರೀಕ್ಷೆಗಳ ಸಂಖ್ಯೆ ಹೆಚ್ಚಿಸಿರುವುದೇ ಇದಕ್ಕೆ ಕಾರಣ. ಹೆಚ್ಚು ಪರೀಕ್ಷೆ ಮಾಡುವುದರಿಂದ ಸೋಂಕು ದೃಢಪಟ್ಟವರನ್ನು ಪ್ರತ್ಯೇಕಿಸಿ ಚಿಕಿತ್ಸೆ ನೀಡುವುದು ಸುಲಭ. ಸೋಂಕು ಹರಡುವಿಕೆ ಇದರಿಂದ ಕಡಿಮೆಯಾಗಲಿದೆ’ ಎಂದರು.

‘ಜುಲೈನಲ್ಲಿ ದಿನದಲ್ಲಿ ಸರಾಸರಿ 3 ಸಾವಿರ ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು. ಈಗ ನಿತ್ಯ 30 ಸಾವಿರ ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇವರಲ್ಲಿ ಶೇ 10 ರಷ್ಟು ಮಂದಿಯಲ್ಲಿ ಸೋಂಕು ಪತ್ತೆಯಾಗುತ್ತಿದೆ. ಆ.16 ರಂದು 16 ಸಾವಿರ, ಆ.17 ರಂದು 21ಸಾವಿರ, ಆ. 18 ರಂದು 23ಸಾವಿರ, ಆ.28 ರಂದು 28ಸಾವಿರ, ಆ.31 ರಂದು 31,961 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ’ ಎಂದು ವಿವರ ನೀಡಿದರು.

‘ಕೋವಿಡ್‌ ಪರೀಕ್ಷೆಗೆ ಗುರಿ ನಿಗದಿಪಡಿಸಿ ಪಡಿಸಲಾಗುತ್ತಿದೆ. ಪ್ರತಿಯೊಬ್ಬರನ್ನೂ ಪರೀಕ್ಷೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದು ನಿಜವಲ್ಲ. 50 ವರ್ಷ ಮೇಲ್ಪಟ್ಟವರು, ಅನ್ಯ ಕಾಯಿಲೆಯಿಂದ ಬಳಲುವವರು, ಕೆಮ್ಮು ಶೀತ ಜ್ವರದ ಲಕ್ಷಣ ಇರುವರು, ತೀವ್ರ ಉಸಿರಾಟದ ತೊಂದರೆ ಅನುಭವಿಸವರು ಹಾಗೂ ಸೋಂಕು ದೃಢಪಟ್ಟವರ ಜೊತೆ ನೇರ ಸಂಪರ್ಕ ಹೊಂದಿದವರು ಮತ್ತು ಕಂಟೈನ್ಮೆಂಟ್ ಪ್ರದೇಶದ ನಿವಾಸಿಗಳನ್ನು ಮಾತ್ರ ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗುತ್ತದೆ’ ಎಂದು ಆಯುಕ್ತರು ಸ್ಪಷ್ಟಪಡಿಸಿದರು.

‘ಇಂತಹವರಿಗೆ ಸೋಂಕು ತಗಲುವ ಸಾಧ್ಯತೆ ಹೆಚ್ಚು. ಸೋಂಕಿತರನ್ನು ಪ್ರತ್ಯೇಕಿಸಿ ರೋಗ ಹರಡುವುದನ್ನು ಹಾಗೂ ಸಾವುಗಳನ್ನು ತಡೆಯಲು ಇದುಸಹಕಾರಿ. ಹಾಗಾಗಿ ಸಾರ್ವಜನಿಕರೂ ಇದಕ್ಕೆ ಸಹಕರಿಸಬೇಕು’ ಎಂದು ಕೋರಿದರು.

ಕೆಲ ಕೋವಿಡ್ ಆರೈಕೆ ಕೇಂದ್ರ ಸ್ಥಗಿತ: ರೋಗ ಲಕ್ಷಣವಿಲ್ಲದ ಸೋಂಕಿತರ ಚಿಕಿತ್ಸೆಗಾಗಿ 12 ಕಡೆ ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆಯಲಾಗಿತ್ತು. ಇತ್ತೀಚೆಗೆ ಸೋಂಕಿತರು ಮನೆಯಲ್ಲೇ ಆರೈಕೆಗೆ ಒಳಗಾಗಲು ಒಲವು ತೋರುತ್ತಿದ್ದಾರೆ. ಹಾಗಾಗಿ ಕೆಲವು ಕೋವಿಡ್ ಆರೈಕೆ ಕೇಂದ್ರಗಳನ್ನು ಮುಚ್ಚಲಾಗುವುದು. ಸೋಂಕು ಪ್ರಕರಣಗಳು ಹೆಚ್ಚಾಗಿ ಈ ಕೇಂದ್ರಗಳ ಅವಶ್ಯಕತೆ ತಲೆದೋರಿದರೆ ಮತ್ತೆ ತೆರೆಯಲಾಗುವುದು ಎಂದು ಆಯುಕ್ತರು ತಿಳಿಸಿದರು.

ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) 6,500 ಹಾಸಿಗೆಗಳ ವ್ಯವಸ್ಥೆ ಕಲ್ಪಿಸಿ 1,500 ಮಂದಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿತ್ತು. ಇನ್ನು 1,500 ಹಾಸಿಗೆಗಳನ್ನು ವೈದ್ಯರು ಹಾಗೂ ಇತರ ಸಿಬ್ಬಂದಿ ಸಲುವಾಗಿ ಮೀಸಲಿಡಲಾಗಿತ್ತು. ಇಲ್ಲಿ ಬಳಸುವ ಸಲುವಾಗಿ ಖರೀದಿಸಿರುವ 3,500 ಹಾಸಿಗೆಗಳನ್ನು ಆಸ್ಪತ್ರೆಗಳಿಗೆ ಅಥವಾ ಹಾಸ್ಟೆಲ್‌ಗಳಿಗೆ ವರ್ಗಾಯಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಜೊತೆಗೆ ಬಾಡಿಗೆಗೆ ಪಡೆದ ಪರಿಕರಗಳನ್ನು ಮರಳಿಸಲಾಗುವುದು ಎಂದು ತಿಳಿಸಿದರು.

19 ಆಸ್ಪತ್ರೆಗಳಲ್ಲಿ ಹೆಚ್ಚು ಸಾವು: ‘ಪಾಲಿಕೆ ವ್ಯಾಪ್ತಿಯಲ್ಲಿ 19 ಆಸ್ಪತ್ರೆಗಳಲ್ಲಿ ಸಾವಿನ ಪ್ರಮಾಣ ಹೆಚ್ಚು ಇದೆ. ಈ ಆಸ್ಪತ್ರೆಗಳಲ್ಲಿ ಪಾಲಿಕೆ ಶಿಫಾರಸಿನ ಮೇರೆಗೆ ದಾಖಲಾಗಿದ್ದ 24,368 ಮಂದಿಯಲ್ಲಿ 1,598 ಮಂದಿ ಕೊನೆಯುಸಿರೆಳೆದಿದ್ದಾರೆ. ಈ ಕುರಿತ ಸಮಗ್ರ ತನಿಖೆಗೆ (ಡೆತ್‌ ಆಡಿಟ್‌) ತಜ್ಞರ ತಂಡವನ್ನು ರಚಿಸಲಾಗಿದೆ. ಈ ತಂಡವು ಆಸ್ಪತ್ರೆಗೆ ಭೇಟಿ ನೀಡಿ ರೋಗಿ ದಾಖಲಾದಂದಿನಿಂದ ಕೊನೆಯುಸಿರೆಳೆದವರೆಗಿನ ಎಲ್ಲ ಬೆಳವಣಿಗೆಗಳ ವಿವರ ಪಡೆಯಲಿದೆ. ರೋಗಿಗಳ ಸಾವಿನ ಪ್ರಮಾಣ ಕಡಿಮೆ ಮಾಡುವುದಕ್ಕೆ ಇದು ಸಹಕಾರಿಯಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT