ಭಾನುವಾರ, ಜೂನ್ 13, 2021
25 °C
ಮಾರ್ಗಸೂಚಿ ಆದೇಶ ಹೊರಡಿಸಿದ ಬಿಬಿಎಂಪಿ ಮುಖ್ಯ ಆಯುಕ್ತ

ಕೋವಿಡ್‌: ಚಿಕಿತ್ಸೆ ನಿರ್ಧಾರಕ್ಕೆ ಮೂರು ಹಂತಗಳ ವ್ಯವಸ್ಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ ಚಿಕಿತ್ಸಾ ನಿರ್ಧಾರ ಕೇಂದ್ರಗಳನ್ನು (ಟ್ರಯಾಜ್ ಸೆಂಟರ್) ಆರಂಭಿಸುವಾಗ ಹಾಗೂ ಅವುಗಳಲ್ಲಿ  ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಬಿಬಿಎಂಪಿ ಪ್ರಕಟಿಸಿದೆ.

ಈ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತಾ ಸೋಮವಾರ ಆದೇಶ ಹೊರಡಿಸಿದ್ದಾರೆ. ಒಟ್ಟು ಮೂರು ಹಂತಗಳಲ್ಲಿ ಚಿಕಿತ್ಸಾ ನಿರ್ಧಾರ ಕೇಂದ್ರಗಳನ್ನು (ಪಿಟಿಸಿ) ಆರಂಭಿಸುವಂತೆ ಸೂಚಿಸಿದ್ದಾರೆ. ಸೋಂಕಿತರ ದೇಹಸ್ಥಿತಿ ಅವಲೋಕಿಸಿ ಆದ್ಯತೆ ಮೇರೆಗೆ ಮನೆಯಲ್ಲೇ ಆರೈಕೆ, ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ಅಥವಾ ಕೋವಿಡ್ ಆಸ್ಪತ್ರೆಗಳಲ್ಲಿ‌ ಹೆಚ್ಚಿನ ಚಿಕಿತ್ಸೆಗಳಲ್ಲಿ ಯಾವುದರ ಅಗತ್ಯ ಇದೆ ಎಂಬುದನ್ನು ವೈದ್ಯರು ಭೌತಿಕ ತಪಾಸಣೆ ಬಳಿಕವೇ ಶಿಫಾರಸು ಮಾಡಲಿದ್ದಾರೆ.

ಇದುವರೆಗೆ ಎಂಟು ವಲಯಗಳ ನಿಯಂತ್ರಣ ಕೊಠಡಿಗಳ ಮೂಲಕ ಹಾಗೂ 1912 ಸಹಾಯವಾಣಿಗೆ ಬರುವ ಕರೆಗಳ ಮೂಲಕ ಕೋವಿಡ್ ಸೋಂಕಿತರ ಆರೋಗ್ಯ ಸ್ಥಿತಿ ತಿಳಿದು ಅವರಿಗೆ ಸೂಕ್ತ ಹಾಸಿಗೆ ಸೌಕರ್ಯ ಹೊಂದಿಸಲು ಬಿಬಿಎಂಪಿ ನೆರವಾಗುತ್ತಿತ್ತು. ನಗರದ 8 ವಲಯಗಳಲ್ಲಿ ಇತ್ತೀಚೆಗೆ ಒಟ್ಟು 32 ಚಿಕಿತ್ಸಾ ನಿರ್ಧಾರ ಕೇಂದ್ರಗಳನ್ನು (ಪಿಟಿಸಿ) ತೆರೆಯಲಾಗಿದೆ. ರೋಗದ ಸೌಮ್ಯ ಲಕ್ಷಣಗಳಿರುವವರಿಗೆ ಹಾಗೂ ರಕ್ತದಲ್ಲಿ ಆಮ್ಲಜನಕದ ಮಟ್ಟ 90ಕ್ಕಿಂತ ಹೆಚ್ಚು ಇರುವವರಿಗೆ ಔಷಧೋಪಚಾರ ಒದಗಿಸುವ ಸೌಲಭ್ಯಗಳನ್ನು ಇವು ಹೊಂದಿವೆ. 

ಒಂದನೇ ಹಂತದ ಪಿಟಿಸಿಗಳನ್ನು ವಾರ್ಡ್‌ ಮಟ್ಟದಲ್ಲಿ ನಿರ್ಮಿಸಲಾಗುತ್ತದೆ. ಇಲ್ಲಿ ಕೇವಲ ಕೋವಿಡ್ ಸೋಂಕಿತರಿಗೆ ಯಾವ ರೀತಿಯ ಚಿಕಿತ್ಸೆ ಅಗತ್ಯವಿದೆ ಎಂಬುದನ್ನು ಭೌತಿಕವಾಗಿ ನಿರ್ಧರಿಸುವ ಸೌಕರ್ಯಗಳು ಮಾತ್ರ ಇರಲಿವೆ. ಇವುಗಳಲ್ಲಿ ತಲಾ ಒಬ್ಬ ವೈದ್ಯ, ಅರೆವೈದ್ಯಕೀಯ ಸಿಬ್ಬಂದಿ ಹಾಗೂ ದತ್ತಾಂಶ ನೋಂದಣಿ ಸಿಬ್ಬಂದಿಯ ತಂಡ ಎರಡು ಪಾಳಿಗಳಲ್ಲಿ ಕಾರ್ಯನಿರ್ವಹಿಸಲಿದೆ. ಬೆಳಿಗ್ಗೆ 8 ರಿಂದ ಮಧ್ಯಾಹ್ನ 2ರವರೆಗೆ ಬೆಳಗ್ಗಿನ ಪಾಳಿ ಹಾಗೂ ಮಧ್ಯಾಹ್ನ 2ರಿಂದ ರಾತ್ರಿ 8 ಗಂಟೆವರೆಗೆ ಕೊನೆಯ ಪಾಳಿ ಇರಲಿದೆ. ಇಲ್ಲಿಗೆ ಬರುವ ರೋಗಿಗಳಿಗೆ ವೈದ್ಯರು ಮನೆಯಲ್ಲೇ ಆರೈಕೆಗೆ ಒಳಗಾಗುವುದಕ್ಕೆ ಅಥವಾ ಇತರ ಹೆಚ್ಚುವರಿ ಆರೈಕೆಯ ಅಗತ್ಯದ ಬಗ್ಗೆ ಶಿಫಾರಸು ಮಾಡಲಿದ್ದಾರೆ. ಹೆಚ್ಚುವರಿ ಚಿಕಿತ್ಸೆಯ ಅಗತ್ಯವಿದ್ದರೆ ವಲಯದ ಮಟ್ಟದ ಕಮಾಂಡ್‌ ಸೆಂಟರ್‌ಗೆ ಕರೆ ಮಾಡಿ ಹಾಸಿಗೆ ಕಾಯ್ದಿರಿಸಲು ಸಹಕರಿಸಲಿದ್ದಾರೆ.

ಎರಡನೇ ಹಂತದ ಪಿಟಿಸಿಗಳಲ್ಲಿ ಚಿಕಿತ್ಸೆ ನಿರ್ಧಾರ ವ್ಯವಸ್ಥೆಯ ಜೊತೆ ಕೋವಿಡ್‌ ರೋಗಿಗಳ ಅರೈಕೆ ಕೇಂದ್ರವೂ ಇರಲಿದೆ. ಸೋಂಕಿತರು ನೇರವಾಗಿ ಬಂದು ಸೌಲಭ್ಯ ಬಳಸಿಕೊಳ್ಳಬಹುದು. ಎರಡನೇ ಹಂತದ ಕೆಲವು ಕೇಂದ್ರಗಳಲ್ಲಿ ಕೋವಿಡ್‌ ರೋಗಿಗಳಿಗೆ ತೀವ್ರ ಅವಲಂಬನೆ ಘಟಕ (ಎಚ್‌ಡಿಯು) ಅಥವಾ ತೀವ್ರ ನಿಗಾ ಘಟಕದ (ಐಸಿಯು) ಅಗತ್ಯ ಬಿದ್ದರೆ, ಅಂತಹ ಹಾಸಿಗೆಗಳು ಲಭಿಸುವವರೆಗೆ ಅವರ ರಕ್ತದ ಆಮ್ಲಜನಕ ಮಟ್ಟವನ್ನು ಸ್ಥಿರೀಕರಿಸುವ ಸೌಕರ್ಯವೂ ಇರಲಿದೆ. 

ಎರಡನೇ ಹಂತದ ಪಿಟಿಸಿಗಳಲ್ಲಿ ತಲಾ ಇಬ್ಬರು ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ ಹಾಗೂ ದತ್ತಾಂಶ ನೋಂದಣಿ ಸಿಬ್ಬಂದಿ ಮತ್ತು ಸಹಾಯಕ ಸಿಬ್ಬಂದಿ ಇರಲಿದ್ದಾರೆ. ಮೂರು ಪಾಳಿಗಳಲ್ಲಿ ಈ ತಂಡಗಳು ಕಾರ್ಯನಿರ್ವಹಿಸಲಿವೆ. ಇಲ್ಲಿ ರೋಗಿಯ ಆರೋಗ್ಯ ಸ್ಥಿತಿ ಆಧರಿಸಿ ಮನೆಯಲ್ಲೇ ಆರೈಕೆಗೆ ಅಥವಾ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಶಿಫಾರಸು ಮಾಡಲಾಗುತ್ತದೆ. ರೋಗಿಗೆ ಹಾಸಿಗೆ ಕಾಯ್ದಿರಿಸಲು ಇಲ್ಲಿನ ಸಿಬ್ಬಂದಿ ಸದ್ಯಕ್ಕೆ ವಲಯ ಮಟ್ಟದ ಕಮಾಂಡ್‌ ಸೆಂಟರ್‌ ಸಂಪರ್ಕಿಸಬೇಕು. ಹಾಸಿಗೆ ಕಾಯ್ದಿರಿಸುವ ಸೌಕರ್ಯವನ್ನು ಕ್ರಮೇಣ ಎರಡನೇ ಹಂತದ ಪಿಟಿಸಿಗೂ ವಿಸ್ತರಿಸಲಾಗುತ್ತದೆ. ಬಿಬಿಎಂಪಿ ಇಂತಹ 60 ಕೇಂದ್ರಗಳನ್ನು ಅರಂಭಿಸಲು ಸಿದ್ಧತೆ ಮಾಡಿಕೊಂಡಿದೆ.

ಸಂಚಾರ ಚಿಕಿತ್ಸೆ ನಿರ್ಧಾರ ಘಟಕಗಳನ್ನು (ಎಂಟಿಯು) ಕೂಡಾ ಬಿಬಿಎಂಪಿ ಆರಂಭಿಸಲಿದೆ. ಇವುಗಳ ನಿರ್ವಹಣೆಗೆ ಪ್ರತಿ ವಾರ್ಡ್‌ಗೆ ತಲಾ ಒಬ್ಬ ವೈದ್ಯ, ಅರೆ ವೈದ್ಯಕೀಯ ಸಿಬ್ಬಂದಿ ಹಾಗೂ ವೈದ್ಯಕೀಯ ವಿದ್ಯಾರ್ಥಿಯ ತಂಡವನ್ನು ಒದಗಿಸಲಾಗುತ್ತದೆ. ತುರ್ತಾಗಿ ಆಸ್ಪತ್ರೆಗೆ ದಾಖಲಾಗಬೇಕಾದ ರೋಗಿಗಳನ್ನು ತಕ್ಷಣ ಪಿಟಿಸಿಗಳಿಗೆ ಕರೆದೊಯ್ಯಲು ಸಾಧ್ಯವಾಗದೇ ಅವರ ಕಡೆಯವರು ಸಹಾಯವಾಣಿಗೆ ಕರೆ ಮಾಡಿದರೆ, ಅಂತಹವರ ಮನೆಗಳಿಗೇ ತೆರಳಿ ನೆರವಾಗುವ ಸಲುವಾಗಿ ಸಂಚಾರ  ಘಟಕಗಳನ್ನು ಆರಂಭಿಸಲಾಗುತ್ತಿದೆ. ಇಲ್ಲಿ ಚಿಕಿತ್ಸೆ ಕುರಿತು ನೀಡುವ ಟಿಪ್ಪಣಿ ಆಧರಿಸಿ ವಲಯ ಮಟ್ಟದ ಕಮಂಡ್‌ ಸೆಂಟರ್‌ಗಳು ಅಥವಾ ಎರಡನೇ ಹಂತದ ಪಿಟಿಸಿಗಳ ಮೂಲಕ ಸೂಕ್ತ ಹಾಸಿಗೆ ಕಾಯ್ದಿರಿಸಲಾಗುತ್ತದೆ.   

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು