ಸೋಮವಾರ, ಜೂನ್ 1, 2020
27 °C
ಕೋವಿಡ್‌ 19– ಡ್ಯಾಶ್‌ಬೋರ್ಡ್‌ ಉದ್ಘಾಟನೆ

100 ಮೀ. ಆಚೆ ಹೋದರೂ ಮಾಹಿತಿ: ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದಾದ್ಯಂತ ಕೋವಿಡ್ 19 ಸೋಂಕಿತರು, ಶಂಕಿತರು ಹಾಗೂ ಚಿಕಿತ್ಸೆ ಕುರಿತ ಸಂಪೂರ್ಣ ವಿವರಗಳನ್ನು ನೀಡುವ ಡ್ಯಾಶ್‌ಬೋರ್ಡನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಬಿಬಿಎಂಪಿಯ ವಾರ್ ರೂಮ್‌ನಲ್ಲಿ ಮಂಗಳವಾರ ಉದ್ಘಾಟಿಸಿದರು.

‘ಕೊರೊನಾ ಸೋಂಕಿನ ಶಂಕೆಯಿಂದ ಪ್ರತ್ಯೇಕ ವಾಸಕ್ಕೆ (ಕ್ವಾರಂಟೈನ್‌) ಶಿಫಾರಸು ಮಾಡಿದವರು 100 ಮೀ.ನಷ್ಟು ಆಚೀಚೆ ಹೋದರೂ ಡ್ಯಾಶ್ ಬೋರ್ಡ್ ಮೂಲಕ ತಿಳಿದುಕೊಳ್ಳಬಹುದು. ಜೈವಿಕ ಬೇಲಿ ವ್ಯವಸ್ಥೆಯನ್ನು (ಜಿಯೋ ಫೆನ್ಸಿಂಗ್‌) ಅಳವಡಿಸಿಕೊಳ್ಳಲಾಗಿದೆ’ ಎಂದು ಸುಧಾಕರ್ ತಿಳಿಸಿದರು.

‘ಸೋಂಕಿತರ ಸಂಖ್ಯೆ ಎಷ್ಟು, ಯಾವ ಪ್ರದೇಶದಲ್ಲಿ ಎಷ್ಟು ಮಂದಿಗೆ ಪ್ರತ್ಯೇಕ ವಾಸಕ್ಕೆ ಶಿಫಾರಸು ಮಾಡಲಾಗಿದೆ. ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ಯಾವೆಲ್ಲ ಆಸ್ಪತ್ರೆಗಳು ಚಿಕಿತ್ಸೆಗೆ ಸಜ್ಜಾಗಿವೆ, ಎಷ್ಟು ವೈದ್ಯರು ಲಭ್ಯ ಇದ್ದಾರೆ ಎಂಬೆಲ್ಲ ಅಂಶಗಳ ಕ್ಷಣ ಕ್ಷಣದ ವಿವರಗಳನ್ನೂ ಮೊಬೈಲ್, ಡೆಸ್ಕ್ ಟಾಪ್ ಮೂಲಕ ಪಡೆಯಬಹುದು. ಈ ಮಾಹಿತಿ ಗ್ರಾಮೀಣ ಪ್ರದೇಶಗಳ ಜನರಿಗೂ ಸಿಗುವಂತೆ ಮಾಡಲು ಶೀಘ್ರವೇ ವ್ಯವಸ್ಥೆ ಕಲ್ಪಿಸಲಿದ್ದೇವೆ’ ಎಂದರು.

‘ಯಾವ ವಲಯದಲ್ಲಿ ಎಷ್ಟು ಮಂದಿ ಸೋಂಕಿತರಿದ್ದಾರೆ ಎಂಬ ಮಾಹಿತಿ ಪಡೆದುಕೊಳ್ಳುವ ಮೂಲಕ ಜನ ಇನ್ನಷ್ಟು ಸುರಕ್ಷತಾ ಕ್ರಮಗಳನ್ನು ಪಾಲಿಸಲು ನೆರವಾಗುವುದೇ ಡ್ಯಾಶ್‌ಬೋರ್ಡ್‌ನ ಉದ್ದೇಶ’ ಎಂದರು. 

‘ಸೋಂಕಿತರ ಚಲನವಲನಗಳ ಮೇಲೆ ನಿಗಾ ಇಟ್ಟು ಸೋಂಕು ಹಬ್ಬುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟಿದ್ದೇವೆ. ಈ ಕಾಯಿಲೆ ದೃಢಪಟ್ಟವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದ ಕರ್ನಾಟಕ ಈಗ 11ನೇ ಸ್ಥಾನಕ್ಕೆ ಇಳಿದಿದೆ. ತಬ್ಲೀಗ್‌ ಸಮಾವೇಶನಲ್ಲಿ ಭಾಗವಹಿಸಿದವರು ಹಾಗೂ ನಂಜನಗೂಡಿನಲ್ಲಿ ಸೋಂಕು ಹರಡಿದ ಪ್ರಕರಣಗಳು ಇಲ್ಲದಿದ್ದರೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಎರಡಂಕಿ ದಾಟುತ್ತಿರಲಿಲ್ಲ’ ಎಂದರು.

 ‘ಕೋವಿಡ್-19 ಹಬ್ಬದಂತೆ ತಡೆಯುವ ವಿಚಾರದಲ್ಲಿ ರಾಜ್ಯ ಸರ್ಕಾರ ಪಾರದರ್ಶಕವಾಗಿ ನಡೆದುಕೊಂಡಿದೆ. ಇದುವರೆಗೆ ರಾಜ್ಯದ ಜನರು ಲಾಕ್‌ಡೌನ್ ವೇಳೆ ಉತ್ತಮ ರೀತಿಯಲ್ಲಿ ಸಹಕರಿಸಿದ್ದಾರೆ. ಏಪ್ರಿಲ್ 14ರವರೆಗೂ ಇದೇ ರೀತಿ ಸಹಕಾರ ನೀಡಬೇಕು’ ಎಂದು ಸಚಿವರು ಕೋರಿದರು.

ಆನ್‌ಲೈನ್ ತರಬೇತಿ

‘ದೇಶದಲ್ಲೇ ಮೊದಲ ಬಾರಿಗೆ ಕೊರೊನಾ ಚಿಕಿತ್ಸಾ ವಿಧಾನದ ಬಗ್ಗೆ ವೈದ್ಯರಿಗೆ ಹಾಗೂ ಶುಶ್ರೂಷಕಿಯರಿಗೆ ಆನ್ ಲೈನ್ ತರಬೇತಿ ನೀಡುವ ವ್ಯವಸ್ಥೆಯನ್ನು ರಾಜ್ಯ ಸರ್ಕಾರವು ನಿಮ್ಹಾನ್ಸ್‌ ಹಾಗೂ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ನೆರವಿನಿಂದ ಜಾರಿಗೆ ತಂದಿದೆ. ರಾಜ್ಯದಲ್ಲಿ 4.5 ಲಕ್ಷ ಶುಶ್ರೂಷಕರು ಇದ್ದು, ಇದುವರೆಗೆ 1,008 ಮಂದಿ ತರಬೇತಿ ಪಡೆದಿದ್ದಾರೆ. ಈ ರೋಗ ಹತ್ತಿಕ್ಕಲು ತಂತ್ರಜ್ಞಾನದ ನೆರವನ್ನೂ ಸಮರ್ಥವಾಗಿ ಬಳಸಿಕೊಳ್ಳುತ್ತೇವೆ’ ಎಂದು ಸುಧಾಕರ್‌ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು