ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ಯ ರೋಗಗಳ ಚಿಕಿತ್ಸೆಗೆ ಅಡ್ಡಿಯಾದ ಕೋವಿಡ್ ಪರೀಕ್ಷೆ

ವರದಿಗಾಗಿ ಹಲವು ದಿನ ಕಾಯಬೇಕಾದ ಪರಿಸ್ಥಿತಿ l ಆಸ್ಪತ್ರೆಗಳಲ್ಲಿ ರೋಗಿಗಳ ಪರದಾಟ
Last Updated 13 ಫೆಬ್ರುವರಿ 2021, 19:33 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಆಸ್ಪತ್ರೆಗಳಲ್ಲಿ ಎಲ್ಲ ರೀತಿಯ ಕೋವಿಡೇತರ ಚಿಕಿತ್ಸೆಗಳು ಪುನರಾರಂಭವಾದರೂ ರೋಗಿಗಳು ಪರದಾಟ ನಡೆಸುವುದು ಮಾತ್ರ ತಪ್ಪಿಲ್ಲ. ದಾಖಲಿಸಿಕೊಳ್ಳುವ ಮೊದಲು ನಡೆಸುವ ಆರ್‌ಟಿ–ಪಿಸಿಆರ್ ಪರೀಕ್ಷೆ ವರದಿಯು ತಡವಾಗುತ್ತಿರುವ ಪರಿಣಾಮ ಚಿಕಿತ್ಸೆ ಯನ್ನು ಮುಂದೂಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ನಗರದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಏರುಗತಿ ಪಡೆಯುತ್ತಿ ದ್ದಂತೆ ಸರ್ಕಾರವು ವಿಕ್ಟೋರಿಯಾ, ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯನ್ನು ಪೂರ್ಣ ಪ್ರಮಾಣದ ಕೋವಿಡ್‌ ಆಸ್ಪತ್ರೆಯನ್ನಾಗಿ ಪರಿವರ್ತಿಸಿತ್ತು. ಅದೇ ರೀತಿ, ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆ, ಕೆ.ಸಿ. ಜನರಲ್ ಆಸ್ಪತ್ರೆ, ಜಯನಗರ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಬಹುತೇಕ ಹಾಸಿಗೆಗಳನ್ನು ಕೋವಿಡ್‌ ಪೀಡಿತರಿಗೆ ಮೀಸಲಿಡಲಾಗಿತ್ತು. ಇದರಿಂದ ಕೋವಿಡೇತರ ಕಾಯಿಲೆ ಎದುರಿಸುತ್ತಿರುವವರು ಸಮಸ್ಯೆ ಎದುರಿಸಿದ್ದರು.

ಆ ವೇಳೆ ಆಸ್ಪತ್ರೆಗಳು ತುರ್ತಾಗಿ ಅಗತ್ಯವಿಲ್ಲದ ಚಿಕಿತ್ಸೆಗಳನ್ನು ಮುಂದೂ ಡುವಂತೆ ಸೂಚಿಸಲಾಗಿತ್ತು. ಹಾಗಾಗಿ, ಹೃದಯ, ಮೂತ್ರಪಿಂಡ, ಶ್ವಾಸಕೋಶ, ಅಧಿಕ ರಕ್ತದೊತ್ತಡ, ಕ್ಯಾನ್ಸರ್ ಸೇರಿ ದಂತೆ ವಿವಿಧ ಕಾಯಿಲೆಗಳು ಹಾಗೂ ಮನೋರೋಗದಿಂದ ಬಳಲುತ್ತಿರುವ ವರು ಚಿಕಿತ್ಸೆ ಮುಂದೂಡಿದ್ದರು. ಜಯದೇವ ಹೃದ್ರೋಗ ಸಂಸ್ಥೆ, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ, ಸಂಜಯ ಗಾಂಧಿ ಟ್ರಾಮಾ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆ, ನಿಮ್ಹಾನ್ಸ್ ಒಳಗೊಂಡಂತೆ ನಗರದ ಪ್ರಮುಖ ಆಸ್ಪತ್ರೆಗಳು ತಾತ್ಕಾಲಿಕವಾಗಿ ಹೊರರೋಗಿ ವಿಭಾಗಗಳನ್ನು ಸ್ಥಗಿತ
ಗೊಳಿಸಿದ್ದವು.

ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಕೆ ಕಂಡ ಬಳಿಕ ಆಸ್ಪತ್ರೆಗಳು ಮೊದಲಿನಂತೆ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಿಸುತ್ತಿವೆ.

ಇದರಿಂದಾಗಿ ರೋಗಿಗಳ ಸಂಖ್ಯೆ ಗಣನೀಯ ಏರಿಕೆ ಯಾಗಿದೆ. ನಿಮ್ಹಾನ್ಸ್, ಕಿದ್ವಾಯಿ, ರಾಜೀವ್‌ ಗಾಂಧಿ ಸೇರಿದಂತೆ ನಗರದ ಪ್ರಮುಖ ಆಸ್ಪತ್ರೆಗಳಲ್ಲಿಮುನ್ನೆಚ್ಚರಿಕೆ ಕ್ರಮವಾಗಿ ಕೋವಿಡ್‌ ಆರ್‌ಟಿ–ಪಿಸಿಆರ್ ಪರೀಕ್ಷೆಗಳನ್ನು ನಡೆಸಿ, ಪರೀಕ್ಷೆಯ ವರದಿ ಬಂದ ಬಳಿಕ ಚಿಕಿತ್ಸೆ ಒದಗಿಸಲಾಗುತ್ತಿದೆ. ಆದರೆ, ವರದಿ ಬರುವುದು ಎರಡು ಮೂರು ದಿನಗಳಾಗುತ್ತಿರುವ ಪರಿಣಾಮ ರೋಗಿಗಳು ಕಾಯಬೇಕಾಗಿದೆ.

ಈ ಮೊದಲು ರ್‍ಯಾಪಿಡ್‌ ಆ್ಯಂಟಿಜೆನ್ ಪರೀಕ್ಷೆ ನಡೆಸಲಾಗುತ್ತಿತ್ತು. ಅದು ಅರ್ಧಗಂಟೆ ಯೊಳಗೆ ಫಲಿತಾಂಶ ನೀಡುತ್ತಿತ್ತು. ಆದರೆ, ಆ ಮಾದರಿಯ ಪರೀಕ್ಷೆಯು ನಿಖರ ಫಲಿತಾಂಶ ನೀಡದು ಎಂಬ ಕಾರಣಕ್ಕೆ ಅದನ್ನು ಕೈಬಿಡಲಾಗಿದೆ.

ಇಡೀ ದಿನ ಕಾಯಬೇಕಾದ ಸ್ಥಿತಿ: ವಿವಿಧ ಕಾಯಿಲೆಗಳನ್ನು ಎದುರಿಸುತ್ತಿರುವವರು ಕೋವಿಡ್‌ ಪರೀಕ್ಷೆ ಸಬಂಧ ಗಂಟಲ ದ್ರವದ ಮಾದರಿ ನೀಡಲು ಆಸ್ಪತ್ರೆಗಳ ಮುಂದೆ ಬೆಳಿಗ್ಗೆಯಿಂದ ಸಂಜೆಯವರೆಗೆ ಕಾಯಬೇಕಾದ ಪರಿ ಸ್ಥಿತಿ ನಿರ್ಮಾಣವಾಗಿದೆ.

ಪ್ರತಿನಿತ್ಯ ಸೀಮಿತ ಮಂದಿಯ ಗಂಟಲ ದ್ರವದ ಮಾದರಿಗಳನ್ನು ಮಾತ್ರ ಸಂಗ್ರಹಿಸಿ, ಪರೀಕ್ಷೆ ನಡೆಸುತ್ತಿರುವ ಪರಿಣಾಮ ಕೆಲವರು ಮರುದಿನ
ಮತ್ತೆ ಬರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ತುರ್ತು ಚಿಕಿತ್ಸೆ ಅಗತ್ಯವಿದ್ದಲ್ಲಿ ಮಾತ್ರ ಪ್ರತ್ಯೇಕ ನಿಗಾ ಕೊಠಡಿ ಯಲ್ಲಿ ದಾಖಲಿಸಿಕೊಂಡು, ಕೋವಿಡ್ ಪರೀಕ್ಷೆಯ ವರದಿ
ಬರುವ ಮೊದಲೇ ಚಿಕಿತ್ಸೆ ಒದಗಿಸಲಾಗುತ್ತಿದೆ.

‘ತಾಯಿಗೆ ಚಿಕಿತ್ಸೆ ಕೊಡಿಸಲು ಎರಡು ವಾರಗಳ ಕಾಲ ನಿಮ್ಹಾನ್ಸ್‌ಗೆ ಅಲೆದಾಟ ನಡೆಸಿದ್ದೇನೆ. ಕೋವಿಡ್‌ ಪರೀಕ್ಷೆಗಾಗಿ ದಿನವಿಡಿ ಕಾಯಬೇಕಾಯಿತು. ಪರೀಕ್ಷೆಗೆ ವಿವಿಧೆಡೆ ವ್ಯವಸ್ಥೆ ಮಾಡಿ, ಶೀಘ್ರ ವರದಿ ಒದಗಿಸಬೇಕು. ರೋಗಿಗಳು ಆಸ್ಪತ್ರೆಯ ಆವರಣದಲ್ಲಿಯೇ ಚಿಕಿತ್ಸೆಗಾಗಿ ಎದುರು ನೋಡಬೇಕಾದ ಪರಿಸ್ಥಿತಿಯಿದೆ’ ಎಂದು ರಾಮನಗರದ ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದರು.

ರೋಗಿಗಳ ಸಂಖ್ಯೆ ಶೇ 25ರಷ್ಟು ಹೆಚ್ಚಳ

ವಿವಿಧ ಮಾನಸಿಕ ಕಾಯಿಲೆಗಳ ಚಿಕಿತ್ಸೆಗೆ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಗೆ (ನಿಮ್ಹಾನ್ಸ್) ಬರುವ ಹೊರರೋಗಿಗಳ ಸಂಖ್ಯೆಯಲ್ಲಿ ಶೇ 25ರಷ್ಟು ಹೆಚ್ಚಳವಾಗಿದೆ. ಲಾಕ್‌ಡೌನ್ ಅವಧಿಯಲ್ಲಿ ಹೊರರೋಗಿ ವಿಭಾಗವನ್ನು ತಾತ್ಕಾಲಿಕವಾಗಿ ಬಂದ್ ಮಾಡಿದ್ದ ಸಂಸ್ಥೆಯು, ತುರ್ತು ಚಿಕಿತ್ಸೆಗಳನ್ನು ಮಾತ್ರ ಒದಗಿಸಿತ್ತು. ಕೋವಿಡ್‌ ಕಾರಣ ದೂರವಾಣಿ ಸಮಾಲೋಚನೆಗೆ ಅವಕಾಶ ಕಲ್ಪಿಸಿತ್ತು. ಈಗ ಅಲ್ಲಿ ಹೊರರೋಗಿಗಳ ಸಂಖ್ಯೆ ದಿಢೀರ್ ಏರಿಕೆಕಂಡಿದೆ.

‘ಕೋವಿಡ್‌ ಕಾಯಿಲೆ ಕಾಣಿಸಿಕೊಂಡ ಬಳಿಕ ಮಾನಸಿಕ ಸಮಸ್ಯೆ ಎದುರಿ ಸುವವರ ಸಂಖ್ಯೆ ಸ್ವಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಉದ್ಯೋಗ ನಷ್ಟ, ಆರ್ಥಿಕ ಸಮಸ್ಯೆ, ಉದ್ಯೋಗದಲ್ಲಿನ ವಾತಾವರಣ ಬದಲಾವಣೆ, ಅತಿಯಾದ ಕೆಲಸದ ಒತ್ತಡ ಸೇರಿದಂತೆ ನಾನಾ ಕಾರಣಗಳಿಂದ ಮನೋರೋಗಿಗಳ ಸಂಖ್ಯೆ ಹೆಚ್ಚಳವಾಗಿದೆ. ಕೋವಿಡ್‌ಗೂ ಮೊದಲು ಪ್ರತಿನಿತ್ಯ ಸರಾಸರಿ 1,400 ಹೊರರೋಗಿಗಳು ಬರುತ್ತಿದ್ದರು. ಈಗ ಅದು 1,700ಕ್ಕೆ ಏರಿಕೆಯಾಗಿದೆ’ ಎಂದು ನಿಮ್ಹಾನ್ಸ್‌ನಸ್ಥಾನಿಕ ವೈದ್ಯಾಧಿಕಾರಿ (ಆರ್‌ಎಂಒ) ಡಾ. ಶಶಿಧರ್
ಎಚ್.ಎನ್. ತಿಳಿಸಿದರು.

***

ವಿವಿಧ ಕಾಯಿಲೆಗಳ ಚಿಕಿತ್ಸೆಗೆ ಆಸ್ಪತ್ರೆಗಳಿಗೆ ದಾಖ ಲಾಗುವವರಿಗೆ ಕೋವಿಡ್‌ ಪರೀಕ್ಷೆ ಕಡ್ಡಾಯಗೊಳಿಸಿಲ್ಲ. ಸೋಂಕಿನ ಲಕ್ಷಣ ವುಳ್ಳವರಿಗೆ ಪರೀಕ್ಷೆ ನಡೆಸಬೇಕು.

- ಡಾ. ಓಂಪ್ರಕಾಶ್ ಪಾಟೀಲ , ಆರೋಗ್ಯ ಇಲಾಖೆ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT