ಬುಧವಾರ, ಜುಲೈ 28, 2021
21 °C

ಕೋವಿಡ್: ರಾಜ್ಯದಲ್ಲಿ ಮತ್ತೆ 12 ಮಂದಿ ಸಾವು, 8 ಸಾವಿರದತ್ತ ಸೋಂಕಿತರ ಸಂಖ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಕೋವಿಡ್‌ನಿಂದಾಗಿ ಮೃತಪಡುವವರ ಸಂಖ್ಯೆ ಏರಿಕೆಯಾಗುತ್ತಿದ್ದು, ಗುರುವಾರ 
ಮತ್ತೆ 12 ಮಂದಿ ಸಾವಿಗೀಡಾಗಿದ್ದಾರೆ. ಇದರಿಂದಾಗಿ ಮೃತರ ಸಂಖ್ಯೆ 114ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ 8 ಮಂದಿ ಹಾಗೂ ಕೊಪ್ಪಳ, ಬೀದರ್, ವಿಜಯಪುರ, ಕಲಬುರ್ಗಿಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಹೊಸದಾಗಿ 210 ಕೋವಿಡ್‌ ಪ್ರಕರಣಗಳು ವರದಿಯಾಗಿವೆ.  ಸೋಂಕಿತರ ಸಂಖ್ಯೆ 7,944ಕ್ಕೆ ತಲುಪಿದೆ.

ಕಳೆದ ಕೆಲ ದಿನಗಳಿಂದ ಪ್ರಕರಣಗಳ ಸಂಖ್ಯೆ ತಕ್ಕಮಟ್ಟಿಗೆ ನಿಯಂತ್ರಣಕ್ಕೆ ಬಂದಿದ್ದರೂ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿದೆ. ಕಳೆದ 18 ದಿನಗಳಲ್ಲಿ 63 ಮಂದಿ ನಿಧನರಾಗಿದ್ದಾರೆ. ಬೆಂಗಳೂರಿನಲ್ಲಿ ಮೃತರ ಸಂಖ್ಯೆ ಒಂದೇ ಸಮನೆ ಏರಿಕೆಯಾಗುತ್ತಿದ್ದು, ಸಾವಿಗೀಡಾದವರ ಸಂಖ್ಯೆ ಅರ್ಧಶತಕದ ಗಡಿ (51) ದಾಟಿದೆ. ಸದ್ಯ 73 ರೋಗಿಗಳು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಉಡುಪಿಯಲ್ಲಿ 38 ಮಂದಿ ಸೇರಿದಂತೆ ಗುರುವಾರ ಒಂದೇ ದಿನ ರಾಜ್ಯದಲ್ಲಿ 179 ಮಂದಿ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಮನೆಗೆ ತೆರಳಿದ್ದಾರೆ. ಹೊಸದಾಗಿ ವರದಿಯಾದ ಪ್ರಕರಣಗಳಲ್ಲಿ 58 ಮಂದಿ ಅನ್ಯ ರಾಜ್ಯಗಳಿಂದ ಬಂದವರಾಗಿದ್ದಾರೆ. 21 ಮಂದಿ ವಿದೇಶ ಪ್ರಯಾಣ ಮಾಡಿದ ಇತಿಹಾಸ ಹೊಂದಿದ್ದಾರೆ. 

ಬಳ್ಳಾರಿಯಲ್ಲಿ 48, ಕಲಬುರ್ಗಿಯಲ್ಲಿ 48, ದಕ್ಷಿಣ ಕನ್ನಡದಲ್ಲಿ 23, ರಾಮನಗರದಲ್ಲಿ 21, ಬೆಂಗಳೂರಿನಲ್ಲಿ 17, ಯಾದಗಿರಿಯಲ್ಲಿ 8, ಮಂಡ್ಯದಲ್ಲಿ 7, ಬೀದರ್‌ನಲ್ಲಿ 6, ಗದಗದಲ್ಲಿ 5, ರಾಯಚೂರಿನಲ್ಲಿ 4, ಹಾಸನದಲ್ಲಿ 4, ಧಾರವಾಡದಲ್ಲಿ 4, ದಾವಣಗೆರೆಯಲ್ಲಿ 3,ಚಿಕ್ಕಮಗಳೂರಿನಲ್ಲಿ 3, ವಿಜಯಪುರದಲ್ಲಿ2, ಉತ್ತರ ಕನ್ನಡದಲ್ಲಿ 2, ಮೈಸೂರಿನಲ್ಲಿ 2 ಹಾಗೂ ಬಾಗಲಕೋಟೆ, ಶಿವಮೊಗ್ಗ, ಕೊಪ್ಪಳದಲ್ಲಿ ತಲಾ ಒಂದು ಪ್ರಕರಣ ಹೊಸದಾಗಿ ವರದಿಯಾಗಿದೆ. 

ಬೆಂಗಳೂರಿನಲ್ಲಿ ಕೊರೊನಾ ಸೋಂಕಿತ 57 ವರ್ಷದ ಪುರುಷ,  58 ವರ್ಷದ ಪುರುಷ, 39 ವರ್ಷದ ‍ಪುರುಷ, 40 ವರ್ಷದ ಮಹಿಳೆ, 68 ವರ್ಷದ ಪುರುಷ,  74 ವರ್ಷದ ವೃದ್ಧೆ, 65 ವರ್ಷದ ಮಹಿಳೆ ಹಾಗೂ 35 ವರ್ಷದ ವ್ಯಕ್ತಿಮೃತಪಟ್ಟಿದ್ದಾರೆ. 

ಬೀದರ್‌ನಲ್ಲಿ 55 ವರ್ಷದ ಪುರುಷ, ಕೊಪ್ಪಳದಲ್ಲಿ 50 ವರ್ಷದ ಮಹಿಳೆ, ವಿಜಯಪುರದಲ್ಲಿ 66 ವರ್ಷದ ಮಹಿಳೆ, ಕಲಬುರ್ಗಿಯಲ್ಲಿ 50 ಪುರುಷ ನಿಧನರಾಗಿದ್ದಾರೆ. ಮೃತಪಟ್ಟವರು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದವರೇ ಆಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು