ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ: ಖಿನ್ನತೆ ಎದುರಿಸಲು ಬೇಕು ಸಮುದಾಯ ಸನ್ನದ್ಧತೆ

Last Updated 27 ಜೂನ್ 2020, 18:48 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಸೋಂಕಿನಂತಹ ಆರೋಗ್ಯ ಬಿಕ್ಕಟ್ಟು, ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳು ಭವಿಷ್ಯದಲ್ಲಿಯೂ ಕಾಣಿಸಿಕೊಳ್ಳುತ್ತವೆ. ಇವುಗಳನ್ನು ಎದುರಿಸಲು ಶಾಶ್ವತವಾದ ‘ಸಮುದಾಯ ಸನ್ನದ್ಧತೆ’ ರೂಪುಗೊಳ್ಳಬೇಕಾಗಿದೆ...

ಆತ್ಮಹತ್ಯೆ ತಡೆಗಟ್ಟುವಿಕೆ: ಈಗಿನ ಸವಾಲುಗಳು ಮತ್ತು ಸಂಶೋಧನೆಗಳು’ ಕುರಿತು ನಿಮ್ಹಾನ್ಸ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಆನ್‌ಲೈನ್‌ ಸಮಾವೇಶದಲ್ಲಿ ಮನೋವೈದ್ಯರು ವ್ಯಕ್ತಪಡಿಸಿದ ಅಭಿಪ್ರಾಯವಿದು.

ಕೋವಿಡ್‌–19 ಹಿನ್ನೆಲೆಯಲ್ಲಿ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗುತ್ತಿರುವ ಬಗ್ಗೆ ಮನೋವೈದ್ಯರು ಕಳವಳ ವ್ಯಕ್ತಪಡಿಸಿದರು. ‘ನಿರಂತರವಾಗಿ ಮಾನಸಿಕ ಸಮತೋಲನ ಕಾಪಾಡಿಕೊಳ್ಳುವ ರೀತಿಯಲ್ಲಿ ಸಮಾಜವನ್ನು ರೂಪಿಸಬೇಕಾಗಿದೆ’ ಎಂದು ಸಲಹೆ ನೀಡಿದರು.

ಗಮನಿಸಬೇಕು ಒಡನಾಡಿಗಳ ಗುಂಪು‌

‘ಸಮುದಾಯ ಎಂದರೆ ಒಡನಾಡಿಗಳ ಗುಂಪು. ಮನೆಯಲ್ಲಿ ಕುಟುಂಬ ಸದಸ್ಯರು, ಶಾಲೆಯಲ್ಲಿ ಗೆಳೆಯರು–ಶಿಕ್ಷಕರು, ಕಚೇರಿಯಲ್ಲಿ ಸಹೋದ್ಯೋಗಿಗಳು ಒಡನಾಡಿಗಳ ಗುಂಪು ಎನಿಸಿಕೊಳ್ಳುತ್ತಾರೆ. ಒಡನಾಡಿಗಳು ಯಾರಾದರೂ ಮೌನಕ್ಕೆ ಜಾರಿದ್ದರೆ, ಊಟಕ್ಕೆ ಜೊತೆಯಲ್ಲಿ ಬಾರದಿದ್ದರೆ, ಶಾಲೆಗೆ ಗೈರು ಹಾಜರಾಗುತ್ತಿದ್ದರೆ ಅಥವಾ ಅವರ ವರ್ತನೆಯಲ್ಲಿ ಗಮನಾರ್ಹ ಬದಲಾವಣೆಯಾಗಿದ್ದರೆ ತಕ್ಷಣ ಈ ಗುಂಪು ಜಾಗರೂಕವಾಗಬೇಕು. ಆ ವರ್ತನೆಗೆ ಕಾರಣಗಳೇನು ಎಂದು ವಿಚಾರಿಸುವುದರಿಂದ ಖಿನ್ನತೆಯ ಸಮಸ್ಯೆಗಳನ್ನು ಬೇಗ ಪತ್ತೆ ಮಾಡಬಹುದು’ ಎಂದು ತಜ್ಞರು ಹೇಳಿದರು.

ಪೋಸ್ಟ್‌ಗಳ ಮೇಲಿರಲಿ ಗಮನ

‘ಯಾರು, ಏನೇ ಕೇಳಿದರೂ ಕೆಲವರು ಬಾಯಿ ಬಿಡುವುದಿಲ್ಲ. ಬದಲಾಗಿ, ಸಾಮಾಜಿಕ ಮಾಧ್ಯಮಗಳಲ್ಲಿಸಾವು ಅಥವಾ ಆತ್ಮಹತ್ಯೆ ಸೂಚಿಸುವಂತಹ ಸಾಲುಗಳನ್ನು ಬರೆಯುತ್ತಾರೆ. ಇದನ್ನು ನಿರ್ಲಕ್ಷ್ಯ ಮಾಡಬಾರದು. ಈ ವಿಚಾರ ಗಮನಕ್ಕೆ ಬಂದ ತಕ್ಷಣ ಒಡನಾಡಿಗಳ ಗುಂಪು ಅಂತಹವರ ಜೊತೆ ಮಾತನಾಡಬೇಕು’ ಎಂದು ತಜ್ಞರು ಸಲಹೆ ನೀಡಿದರು.

ಸಮಾವೇಶವನ್ನು ಉದ್ಘಾಟಿಸಿದ ನಿಮ್ಹಾನ್ಸ್‌ ನಿರ್ದೇಶಕ ಡಾ. ಬಿ.ಎನ್. ಗಂಗಾಧರ್, ‘ಆತ್ಮಹತ್ಯೆ ಕುರಿತ ಸುದ್ದಿಗಳ ಕುರಿತು ಮಾಧ್ಯಮಗಳೂ ಸಂವೇದನಾಶೀಲವಾಗಿರಬೇಕು. ಕೊರೊನಾದಿಂದ ಯಾವುದೇ ವ್ಯಕ್ತಿ ಮೃತಪಟ್ಟರೆ, ಚಿತ್ರನಟ, ಕ್ರಿಕೆಟ್‌ ಆಟಗಾರ ಅಥವಾ ಯಾವುದೇ ಸೆಲೆಬ್ರಿಟಿ ಆತ್ಮಹತ್ಯೆ ಮಾಡಿಕೊಂಡರೆ ಅದನ್ನು ಸಾರ್ವತ್ರೀಕರಣಗೊಳಿಸಬಾರದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT