ಶುಕ್ರವಾರ, ಜುಲೈ 1, 2022
23 °C
ನೂತನ ವ್ಯವಸ್ಥೆಗೆ ಚಾಲನೆ ನೀಡಿದ ಸಚಿವ ಅರವಿಂದ ಲಿಂಬಾವಳಿ

ಕೋವಿಡ್: ಹಾಸಿಗೆ ಕಾಯ್ದಿರಿಸಲು ಸರದಿ ವ್ಯವಸ್ಥೆ ಜಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್ ಆಸ್ಪತ್ರೆಗಳಲ್ಲಿ ಹಾಸಿಗೆ ಹಂಚಿಕೆಯ ಕೇಂದ್ರೀಕೃತ ವ್ಯವಸ್ಥೆ (ಸಿಎಚ್‌ಬಿಎಂಎಸ್‌) ತಂತ್ರಾಂಶದ ಮೂಲಕ  ಬಿಬಿಎಂಪಿ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಸರ್ಕಾರಿ ಕೋಟಾದ ಹಾಸಿಗೆಯನ್ನು ಸರದಿ ಆಧಾರದಲ್ಲಿ ಕಾಯ್ದಿರಿಸುವ ಪದ್ಧತಿ ಗುರುವಾರದಿಂದ ಜಾರಿಗೆ ಬಂದಿದೆ.

ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಾರ್ ರೂಂ, ಕಾಲ್ ಸೆಂಟರ್ ನಿರ್ವಹಣೆ ಮತ್ತು ಸೋಂಕಿತರಿಗೆ ವೈದ್ಯಕೀಯ ಸಲಹೆ ವ್ಯವಸ್ಥೆ ಮೇಲ್ವಿಚಾರಣೆಯ ನೋಡಲ್ ಸಚಿವ ಅರವಿಂದ ಲಿಂಬಾವಳಿ ಅವರು ನೂತನ ವ್ಯವಸ್ಥೆಯನ್ನು ಲೋಕಾರ್ಪಣೆ ಮಾಡಿದರು.

‘ಸಿಎಚ್‌ಬಿಎಂಎಸ್‌ ತಂತ್ರಾಂಶದಡಿ ಸರದಿ ವ್ಯವಸ್ಥೆಯನ್ನು ಸದ್ಯ ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾತ್ರ ಜಾರಿಗೆ ತರಲಾಗಿದೆ. ಕ್ರಮೇಣ ಇಡೀ ರಾಜ್ಯಕ್ಕೆ ವಿಸ್ತರಿಸಲಾಗುತ್ತದೆ. ಹಾಸಿಗೆ ಕಾಯ್ದಿರಿಸುವಿಕೆ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ಮತ್ತು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲು ಇದು ನೆರವಾಗುತ್ತದೆ. ಇದು ಸಂಯೋಜಿತ ವ್ಯವಸ್ಥೆಯನ್ನು ಹೊಂದಿದ್ದು, ಆಸ್ಪತ್ರೆ ದಾಖಲಾತಿ ಪಡೆಯುವ ಎಲ್ಲ ರೋಗಿಗಳಿಗೆ ಸುಲಭವಾಗಿ ಲಭ್ಯವಾಗಲಿದೆ’ ಎಂದು ಲಿಂಬಾವಳಿ ತಿಳಿಸಿದರು.

ಡಿಜಿಟಲ್ ರೂಪದಲ್ಲಿ ದಾಖಲು: ‘ಚಿಕಿತ್ಸೆ ನಿರ್ಧಾರ ಕೇಂದ್ರಗಳಲ್ಲಿ (ಟ್ರಯಾಜಿಂಗ್ ಸೆಂಟರ್‌) ಸೋಂಕಿತರ ದೈಹಿಕ ತಪಾಸಣೆ ನಡೆಸಿ, ಹಾಸಿಗೆಗಳನ್ನು ಹಂಚಿಕೆ ಮಾಡಲಾಗುತ್ತದೆ. ತಪಾಸಣೆಯ ವಿವರವನ್ನು ಡಿಜಿಟಲ್ ರೂಪದಲ್ಲಿ ದಾಖಲು ಮಾಡಲಾಗುತ್ತದೆ. ವ್ಯಕ್ತಿಯ ಆರೋಗ್ಯ ಸ್ಥಿತಿಯ ಆಧಾರದ ಮೇಲೆ ಆಸ್ಪತ್ರೆ ಅಥವಾ ಕೋವಿಡ್ ಆರೈಕೆ ಕೇಂದ್ರಗಳ ಚಿಕಿತ್ಸೆಗೆ ಶಿಫಾರಸು ಮಾಡಲಾಗುತ್ತದೆ. ಬಳಿಕ ಸೋಂಕಿತರಿಗೆ ನಿರ್ದಿಷ್ಟ ಹಾಸಿಗೆ ಮತ್ತು ವಲಯದ ಪ್ರಕಾರ ಸರದಿ ಸಂಖ್ಯೆಯನ್ನು ನಿಗದಿ ಮಾಡಲಾಗುತ್ತದೆ. ಬಿ.ಯು ಸಂಖ್ಯೆ ಇಲ್ಲದವರು ನೇರವಾಗಿ ಚಿಕಿತ್ಸೆ ನಿರ್ಧಾರ ಕೇಂದ್ರಗಳಿಗೆ ತೆರಳಿ, ಈ ವ್ಯವಸ್ಥೆಯ ಪ್ರಯೋಜನ ಪಡೆಯಬಹುದು’ ಎಂದು ಅವರು ಹೇಳಿದರು.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ, ‘ಈಗ ಕೋವಿಡ್‌ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಸುಲಭವಾಗಿ ಸಿಗುತ್ತಿವೆ. ಐಸಿಯು ಹಾಸಿಗೆಗಳ ಕೊರತೆಯೂ ಇಲ್ಲ. ಮೂರನೇ ಅಲೆ ನಿಯಂತ್ರಣಕ್ಕೆ ಈ ವ್ಯವಸ್ಥೆ ಹೆಚ್ಚು ಪ್ರಯೋಜನಕಾರಿಯಗಲಿದೆ’ ಎಂದರು.

ಸಂಸದ ತೇಜಸ್ವಿ ಸೂರ್ಯ, ‘ಹಾಸಿಗೆ ಕಾಯ್ದಿರಿಸುವಿಕೆ ವ್ಯವಸ್ಥೆಯಲ್ಲಿದ್ದ ಲೋಪಗಳನ್ನು ಸರಿಪಡಿಸಲಾಗಿದೆ. ಹಾಸಿಗೆ ಹಂಚಿಕೆಯಲ್ಲಿ ಪಾರದರ್ಶಕತೆ ತರಲಾಗಿದೆ’ ಎಂದು ತಿಳಿಸಿದರು.

‘ಮಕ್ಕಳು, ಗರ್ಭಿಣಿಯರಿಗೆ ಆದ್ಯತೆ’

‘ನೂತನ ತಂತ್ರಾಂಶದಡಿ ಸರದಿ ವ್ಯವಸ್ಥೆಯಲ್ಲಿ ಹಾಸಿಗೆ ಕಾಯ್ದಿರಿಸುವಾಗ ಸೋಂಕಿತ ಮಕ್ಕಳು ಮತ್ತು ಗರ್ಭಿಣಿಯರಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ. ವಿಶೇಷ ಪ್ರಕರಣಗಳಲ್ಲಿ ಸೆಂಟರ್ ಕಮಾಂಡ್ ಕೊಠಡಿಯ ಮೂಲಕ ತುರ್ತುಚಿಕಿತ್ಸೆ ಕೋಟಾದಡಿ ಹಾಸಿಗೆ ಒದಗಿಸಲಾಗುತ್ತದೆ. ಗಂಭೀರವಾಗಿ ಅಸ್ವಸ್ಥರಾಗಿದ್ದವರು, ಅಂಗವಿಕಲರು, ಕ್ಯಾನ್ಸರ್ ಮತ್ತಿತರ ಆರೋಗ್ಯ ಸಮಸ್ಯೆ ಇರುವವರಿಗೆ ತಕ್ಷಣ ಚಿಕಿತ್ಸೆ ಒದಗಿಸಲು ಸರದಿ ವ್ಯವಸ್ಥೆಯಲ್ಲಿ ಅವಕಾಶವಿದೆ’ ಎಂದು ಅರವಿಂದ ಲಿಂಬಾವಳಿ ತಿಳಿಸಿದರು. 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು