ಗುರುವಾರ , ಜೂಲೈ 9, 2020
21 °C

ಬೆಂಗಳೂರು | ಕೋವಿಡ್‌ ಆರೈಕೆ ಕೇಂದ್ರಗಳ ಎಲ್ಲ ಹಾಸಿಗೆ ಭರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಸೇವೆಗೆ ಸಜ್ಜಾಗಿದ್ದ ಎರಡು ಕೋವಿಡ್‌ ಆರೈಕೆ ಕೇಂದ್ರಗಳ ಎಲ್ಲ ಹಾಸಿಗೆಗಳು ಸೋಮವಾರ ಭರ್ತಿಯಾಗಿವೆ. ಮತ್ತೆ 738 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಸೋಂಕಿನ ಲಕ್ಷಣ ಇಲ್ಲದ ರೋಗಿಗಳನ್ನು ಆರೈಕೆ ಕೇಂದ್ರಗಳಿಗೆ ಕಳುಹಿಸಲು ಸಾಧ್ಯವಾಗದೆ ಬಿಬಿಎಂಪಿ ಅಧಿಕಾರಿಗಳು ಪಡಿಪಾಟಲು ಅನುಭವಿಸಿದರು.

ಸೋಮವಾರ ಸೋಂಕು ದೃಢಪಟ್ಟವರು ಹಾಸಿಗೆಗಳ ಕೊರತೆಯಿಂದಾಗಿ ಸಮಸ್ಯೆ ಎದುರಿಸಬೇಕಾಗಿ ಬಂತು. ಸೋಂಕಿತರನ್ನು 12 ಗಂಟೆ ಒಳಗೆ ಆರೈಕೆ ಕೇಂದ್ರಕ್ಕೆ ಅಥವಾ ಆಸ್ಪತ್ರೆಗೆ ದಾಖಲಿಸುವ ಭರವಸೆಯನ್ನು ಉಳಿಸಿಕೊಳ್ಳಲು ಬಿಬಿಎಂಪಿಗೆ ಸಾಧ್ಯವಾಗಲಿಲ್ಲ.

‘ಹಜ್‌ ಭವನದ 432 ಹಾಸಿಗೆಗಳು ಹಾಗೂ ಶ್ರೀ ಶ್ರೀ ರವಿಶಂಕರ್‌ ಗುರೂಜಿ ಆಯುರ್ವೇದ ಆಸ್ಪತ್ರೆಯಲ್ಲಿ ಸಜ್ಜುಗೊಳಿಸಲಾದ 176 ಹಾಸಿಗೆಗಳು ಸದ್ಯಕ್ಕೆ ಭರ್ತಿಯಾಗಿವೆ’ ಎಂದು ಆರೈಕೆ ಕೇಂದ್ರಗಳ ಉಸ್ತುವಾರಿ ವಹಿಸಿರುವ ರಾಜೇಂದರ್‌ ಕುಮಾರ್‌ ಕಟಾರಿಯಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಕೆವಿಕೆ ಪ್ರಾಂಗಣದಲ್ಲಿರುವ ಕೃಷಿ ವಿಶ್ವವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲಿ 620 ಹಾಸಿಗೆಗಳು ಸಜ್ಜಾಗಿವೆ. ಅಲ್ಲಿ ವೈದ್ಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಿ ಅವರಿಗೆ ಸೋಮವಾರ ತರಬೇತಿ ನೀಡಲಾಗಿದೆ. ಸೋಂಕಿನ ಲಕ್ಷಣ ಇಲ್ಲದ ರೋಗಿಗಳನ್ನು ಮಂಗಳವಾರದಿಂದ ಇಲ್ಲಿಗೆ ಸ್ಥಳಾಂತರ ಮಾಡಲಿದ್ದೇವೆ’ ಎಂದರು.

‘ಜಿಕೆವಿಕೆ ಬಳಿಯ ತೋಟಗಾರಿಕಾ ಕಾಲೇಜಿನ ಹಾಸ್ಟೆಲ್‌ಗಳಲ್ಲಿ 400 ಹಾಸಿಗೆಗಳು ಮಂಗಳವಾರ ಸಂಜೆ ಒಳಗೆ ಸಜ್ಜಾಗಲಿವೆ. ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) 5ಸಾವಿರದ ಬದಲು 7 ಸಾವಿರ ಹಾಸಿಗೆಗಳನ್ನು ಅಳವಡಿಸಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಅಲ್ಲಿಗೂ ಸೋಂಕಿತರನ್ನು ಕಳುಹಿಸಿಕೊಡಬಹುದು’ ಎಂದರು.

‘ಬೆಂಗಳೂರು ವಿಶ್ವವಿದ್ಯಾಲಯದ ಹಾಸ್ಟೆಲ್‌ಗಳಲ್ಲಿ 750 ಹಾಸಿಗೆಗಳು, ಸರ್ಕಾರಿ ಆಯುರ್ವೇದ ಕಾಲೇಜಿನಲ್ಲಿ 200, ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ 250 ಹಾಸಿಗೆಗಳು ನಾಳೆ ಸಜ್ಜಾಗಲಿವೆ’ ಎಂದರು.

‘ಆಸ್ಪತ್ರೆಗಳಲ್ಲಿ ಹಾಸಿಗೆ ಲಭ್ಯತೆ ಹೆಚ್ಚಳ’
ನಗರದಲ್ಲಿ ಖಾಸಗಿ ಆಸ್ಪತ್ರೆಗಳ ಶೇ 50ರಷ್ಟು ಹಾಸಿಗೆಗಳನ್ನು ಕೋವಿಡ್‌ಗೆ ಚಿಕಿತ್ಸೆಗೆ ಕಾಯ್ದಿರಿಸಲಾಗಿದೆ. ಹಾಗಾಗಿ ಕೋವಿಡ್‌ಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳ ಹಾಸಿಗೆಗಳ ಲಭ್ಯತೆ ಹೆಚ್ಚಳವಾಗಿದೆ.

‘ಸದ್ಯ 3819 ಆಸ್ಪತ್ರೆಗಳನ್ನು ಕೊರೊನಾ ಸೋಂಕಿತರಿಗಾಗಿ ಹಂಚಿಕೆ ಮಾಡಲಾಗಿದ್ದು, ಅವುಗಳಲ್ಲಿ 1522 ಹಾಸಿಗೆಗಳು ಭರ್ತಿ ಆಗಿವೆ. ಇನ್ನೂ 2,297 ಹಾಸಿಗೆಗಳು ತೀವ್ರ ಸಮಸ್ಯೆ ಎದುರಿಸುವ ರೋಗಿಗಳ ಚಿಕಿತ್ಸೆಗಾಗಿ ಲಭ್ಯ ಇವೆ’ ಎಂದು ಬಿಬಿಎಂಪಿ ಹೆಚ್ಚುವರಿ ಆಯುಕ್ತ ಡಿ.ರಂದೀಪ್‌ ‘ಪ್ರಜಾವಾಣಿ’ಗೆ ತಿಳಿಸಿದರು.

50 ವರ್ಷ ಮೇಲ್ಪಟ್ಟ ಬಿಎಂಟಿಸಿ ಸಿಬ್ಬಂದಿಗೆ ರಜೆ
ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಎಲ್ಲಾ ಸಿಬ್ಬಂದಿ ಮತ್ತು 50 ವರ್ಷ ಮೇಲ್ಪಟ್ಟ ನೌಕರರಿಗೆ ರಜೆ ನೀಡಲು ಬಿಎಂಟಿಸಿ ನಿರ್ಧರಿಸಿದೆ.

ಚಾಲಕ ನಿರ್ವಾಹಕ ಮಾತ್ರವಲ್ಲದೆ 50 ವರ್ಷ ಮೇಲ್ಪಟ್ಟ 3 ಮತ್ತು 4ನೇ ದರ್ಜೆಯ ಎಲ್ಲಾ ವಿಭಾಗದ ಸಿಬ್ಬಂದಿಗೂ ಈ ನಿಯಮ ಅನ್ವಯವಾಗಲಿದ್ದು, ರಜೆಗಳನ್ನು ಪಡೆಯಬಹುದು.

‘ಉಸಿರಾಟದ ತೊಂದರೆ, ಹೃದಯ ಸಮಸ್ಯೆ, ಮಧುಮೇಹ, ಮೂತ್ರಪಿಂಡ ಸಮಸ್ಯೆಗಳಿಂದ ಬಳಲುತ್ತಿರುವ ಯಾವುದೇ ವಯಸ್ಸಿನ ಸಿಬ್ಬಂದಿ ರಜೆ ಪಡೆಯಬಹುದು. ಒಂದು ವೇಳೆ ಹಂಚಿಕೆಯಾಗಿರುವ ರಜೆ ಇಲ್ಲದಿದ್ದರೆ, ಗಂಭೀರತೆ ಪರಿಶೀಲಿಸಿ ಮುಂಗಡ ರಜೆ ಮಂಜೂರು ಮಾಡಲಾಗುವುದು’ ಎಂದು ಬಿಎಂಟಿಸಿ ತಿಳಿಸಿದೆ.

ತರಬೇತಿ ನೌಕರರು ಸಹ ಆರೋಗ್ಯ ಸಮಸ್ಯೆ ಇದ್ದರೆ ರಜೆ ಪಡೆಯಬಹುದು. ರಜೆ ಇಲ್ಲದಿದ್ದರೆ ವೇತನ ರಹಿತ ರಜೆ ಸಿಗಲಿದೆ ಎಂದು ಸ್ಪಷ್ಟಪಡಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.