ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾರ್ಮೆಂಟ್ಸ್‌ ಉದ್ಯಮದ ಮೇಲೆ ಮತ್ತೆ ಕಾರ್ಮೋಡ

ಚೇತರಿಕೆ ಹಾದಿಯಲ್ಲಿದ್ದ ಉದ್ಯಮಕ್ಕೆ ಮರ್ಮಾಘಾತ
Last Updated 26 ಏಪ್ರಿಲ್ 2021, 20:50 IST
ಅಕ್ಷರ ಗಾತ್ರ

ಬೆಂಗಳೂರು: ಕಳೆದ ವರ್ಷದ ಲಾಕ್‌ಡೌನ್‌ನಿಂದ ತತ್ತರಿಸಿ ಹೋಗಿದ್ದ ಗಾರ್ಮೆಂಟ್ (ಸಿದ್ಧ ಉಡುಪು) ಕಾರ್ಖಾನೆಗಳ ಉದ್ಯಮಕ್ಕೆ 14 ದಿನಗಳ ಕರ್ಫ್ಯೂ ಮರ್ಮಾಘಾತ ನೀಡಿದೆ. ಪುಟಿದೇಳುವ ಹಂತದಲ್ಲಿದ್ದ ಇಡೀ ಉದ್ಯಮದ ಮೇಲೆ ಈಗ ಕಾರ್ಮೋಡವೇ ಚಾಚಿಕೊಂಡಂತಾಗಿದೆ.

ಲಾಕ್‌ಡೌನ್‌ ಸಂದರ್ಭದಲ್ಲಿ ಬಂದ್ ಆಗಿದ್ದ ಗಾರ್ಮೆಂಟ್ಸ್‌ ಕಾರ್ಖಾನೆಗಳಲ್ಲಿ ಶೇ 30ರಷ್ಟು ಕಾರ್ಖಾನೆಗಳು ಬಾಗಿಲನ್ನೇ ತೆರೆಯದೆ ಮುಚ್ಚಿಕೊಂಡಿದ್ದವು. ಅದರಲ್ಲೂ ಸಣ್ಣ ಮತ್ತು ಅತೀ ಸಣ್ಣ ಗಾರ್ಮೆಂಟ್ಸ್‌ ಕಾರ್ಖಾನೆಗಳು ಚೇತರಿಸಿಕೊಳ್ಳಲು ಸಾಧ್ಯವಾಗದೆ ನಿರ್ನಾಮವೇ ಆಗಿದ್ದವು.

ಹಲವು ಸಾಹಸ ಮತ್ತು ಸವಾಲುಗಳ್ನು ಎದುರಿಸಿಕೊಂಡು ಉದ್ಯಮ ಕಳೆದ ಮೂರ್ನಾಲ್ಕು ತಿಂಗಳಿಂದ ಚೇತರಿಕೆಯ ಕನವರಿಕೆಯಲ್ಲಿತ್ತು. ಸಿದ್ಧ ಉಡುಪು ತಯಾರಿಕೆಗೆ ಬೇಡಿಕೆ ಬರಲಾರಂಭಿಸಿತ್ತು. ರಾಜ್ಯದಲ್ಲಿ 950 ಗಾರ್ಮೆಂಟ್‌ ಕಾರ್ಖಾನೆಗಳಿದ್ದು, ಎಲ್ಲ ಕಾರ್ಖಾನೆಗಳಲ್ಲೂ ಉಡುಪು ಸಿದ್ಧಪಡಿಸಲು ಕಚ್ಚಾವಸ್ತು ಟನ್‌ಗಟ್ಟಲೆ ದಾಸ್ತಾನು ಬಿದ್ದಿವೆ.

ಈಗ ಪಡೆದಿರುವ ಆರ್ಡರ್(ಬೇಡಿಕೆ) ಮುಗಿಸಲು ಕನಿಷ್ಠ ನಾಲ್ಕರಿಂದ ಐದು ತಿಂಗಳು ಬೇಕಾಗುತ್ತದೆ. ಎಲ್ಲ ಕೈಗಾರಿಕೆಗಳಿಗೂ ಕಾರ್ಯನಿರ್ವಹಿಸಲು ಅವಕಾಶ ನೀಡಿ ಗಾರ್ಮೆಂಟ್ಸ್‌ ಕಾರ್ಖಾನೆಗಳನ್ನು ಮಾತ್ರ ಮುಚ್ಚಲು ಸರ್ಕಾರ ಮುಂದಾಗಿರುವುದು ಇಡೀ ಉದ್ಯಮದ ಮೇಲೆ ಕಾರ್ಗತ್ತಲು ಆವರಿಸಿದಂತೆ ಆಗಿದೆ ಎಂದು ಉದ್ಯಮಿಗಳ ಹೇಳುತ್ತಾರೆ.

‘ಗಾರ್ಮೆಂಟ್ಸ್‌ಗಳಲ್ಲಿ ಸೋಂಕು ಹರಡದಂತೆ ತಡೆಗಟ್ಟಲು ನಿಯಮಗಳನ್ನು ಈಗಾಗಲೇ ಪಾಲಿಸಲಾಗುತ್ತಿದೆ. ನಿಗಮಗಳನ್ನು ಇನ್ನಷ್ಟು ಕಠಿಣಗೊಳಿಸಿ ಕನಿಷ್ಠ ಶೇ 50ರಷ್ಟು ಕಾರ್ಮಿಕರೊಂದಿಗೆ ಕಾರ್ಖಾನೆ ನಡೆಸಲು ಅವಕಾಶ ನೀಡಿದರೂ ಉದ್ಯಮ ಉಳಿಯುತ್ತಿತ್ತು. ಸರ್ಕಾರ ಏಕಾಏಕಿ ಗಾರ್ಮೆಂಟ್ಸ್‌ ಕಾರ್ಖಾನೆಗಳನ್ನು ಮಾತ್ರ ಮುಚ್ಚಿಸಲು ಹೊರಟಿರುವುದು ಅನ್ಯಾಯ. ಸಣ್ಣ ಸಣ್ಣ ಕಾರ್ಖಾನೆಗಳು ಸರ್ವನಾಶ ಆಗಲಿವೆ’ ಎಂದು ಅವರು ಆತಂಕ ವ್ಯಕ್ತಪಡಿಸುತ್ತಾರೆ.

‘14 ದಿನಗಳ ಕರ್ಫ್ಯೂ ಸುದ್ಧಿ ಕೇಳಿ ಮಧ್ಯಾಹ್ನದಿಂದ ತಲೆ ಮೇಲೆ ಚಪ್ಪಡಿ ಬಿದ್ದ ಅನುಭವ ಆಗುತ್ತಿದೆ. ಕೆಲಸ ಅರ್ಧಕ್ಕೆ ನಿಲ್ಲಿಸಿ ಕಾರ್ಮಿಕರು ಊರಿನ ಬಸ್ ಹತ್ತುತ್ತಿದ್ದಾರೆ.ಲಕ್ಷಗಟ್ಟಲೆ ಸಾಲ ಮಾಡಿ ಮತ್ತೊಮ್ಮೆ ಕಾರ್ಖಾನೆಗೆ ಆರಂಭಿಸಿದ್ದೇವೆ. ಉಡುಪು ಸಿದ್ಧಪಡಿಸಿಕೊಡಲು ಬರುತ್ತಿರುವ ಬೇಡಿಕೆ ನೋಡಿ ಖುಷಿ ಆಗಿತ್ತು. ಸರ್ಕಾರದ ಈ ನಿರ್ಧಾರ ನಮ್ಮನ್ನು ಮತ್ತೊಮ್ಮೆ ಬೀದಿಗೆ ತಂದು ನಿಲ್ಲಿಸಲಿದೆ’ ಎಂದು ಗಾರ್ಮೆಂಟ್ಸ್‌ ಕಾರ್ಖಾನೆ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಗುರುಲಿಂಗಪ್ಪ(ರಾಜು) ಹೇಳಿದರು.

‘ಸರ್ಕಾರ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು. ಕನಿಷ್ಠ ಶೇ 50ರಷ್ಟು ಕಾರ್ಮಿಕರನ್ನಾದರೂ ಉಳಿಸಿಕೊಂಡು ಕೆಲಸ ಮಾಡಲು ಅನುಮತಿ ನೀಡಬೇಕು’ ಎಂದು ಅವರು ಒತ್ತಾಯಿಸಿದರು.

‘ಕೆಲಸ ಕೊಡಿ, ಇಲ್ಲವೇ ವೇತನ ಕೊಡಿ’
ಸರ್ಕಾರದ ನಿರ್ಧಾರ ಕಾರ್ಮಿಕರಲ್ಲೂ ಆತಂಕಕ್ಕೆ ಕಾರಣವಾಗಿದೆ.

‘ಮತ್ತೆ ಬೆಂಗಳೂರಿಗೆ ಬಂದು ಮನೆಗಳನ್ನು ಬಾಡಿಗೆಗೆ ಪಡೆದು ಹೊಸ ಬದುಕು ಆರಂಭಿಸಿದ್ದೇವೆ. 14 ದಿನ ಮನೆಯಲ್ಲೇ ಇರಬೇಕೆಂದರೆ ಅದಕ್ಕೆ ಸಂಬಳ ಕೊಡುವವರು ಯಾರು’ ಎಂದು ಗಾರ್ಮೆಂಟ್ಸ್‌ ನೌಕರರು ಪ್ರಶ್ನಿಸಿದ್ದಾರೆ.

‘ಗಾರ್ಮೆಂಟ್ಸ್‌ ಕಾರ್ಖಾನೆಗಳಲ್ಲಿ ಒಟ್ಟಿಗೇ ಕುಳಿತು ಯಾರೂ ಕೆಲಸ ಮಾಡುವುದಿಲ್ಲ. ಅಂತರ ಕಾಪಾಡಿಕೊಂಡು ಕೆಲಸ ಮಾಡಿಸಲು ಕಾರ್ಮಿಕರ ನಡುವೆ ಪ್ಲಾಸ್ಟಿಕ್‌ ತಡೆಗಳನ್ನು ಕೆಲ ಕಾರ್ಖಾನೆಗಳಲ್ಲಿ ಹಾಕಲಾಗಿದೆ. ಈ ಉದ್ಯಮ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಅರಿವಿಲ್ಲದವರು ಈ ನಿರ್ಧಾರ ಕೈಗೊಂಡಿದ್ದಾರೆ’ ಎಂದು ಗಾರ್ಮೆಂಟ್ಸ್‌ ಆ್ಯಂಡ್ ಟೆಕ್ಸ್‌ಟೈಲ್ ವರ್ಕರ್ಸ್ ಯೂನಿಯನ್‌ ಅಧ್ಯಕ್ಷೆ ಆರ್.ಪ್ರತಿಭಾ ಹೇಳಿದರು.

‘ಗಾರ್ಮೆಂಟ್ಸ್‌ಗಳ ಮಾಲೀಕರು ಕೂಡ ಸಂಕಷ್ಟದಿಂದ ಈಗ ಮೇಲೆ ಬರುತ್ತಿದ್ದಾರೆ. ಕಾರ್ಮಿಕರನ್ನು ಮನೆಯಲ್ಲಿರಿಸಿ ವೇತನ ಕೊಡುವ ಸ್ಥಿತಿಯಲ್ಲೂ ಉದ್ಯಮ ಇಲ್ಲ. ಕಾರ್ಮಿಕರಿಗೆ ವೇತನ ಕೊಡುವ ಜವಾಬ್ದಾರಿಯನ್ನು ಸರ್ಕಾರವೇ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ನೌಕರರೊಂದಿಗೆ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ’ ಎಂದು ಅವರು ಎಚ್ಚರಿಸಿದರು.

ಅಂಕಿ–ಅಂಶ
950:
ರಾಜ್ಯದಲ್ಲಿರುವ ಗಾರ್ಮೆಂಟ್ಸ್‌ ಕಾರ್ಖಾನೆಗಳ ಸಂಖ್ಯೆ
776:ಬೆಂಗಳೂರಿನಲ್ಲಿ ಇರುವ ಗಾರ್ಮೆಂಟ್ಸ್‌ ಕಾರ್ಖಾನೆಗಳು
4 ಲಕ್ಷ:ರಾಜ್ಯದ ಗಾರ್ಮೆಂಟ್ಸ್‌ ಕಾರ್ಖಾನೆಗಳಲ್ಲಿ ಇರುವ ಒಟ್ಟು ಕಾರ್ಮಿಕರ ಸಂಖ್ಯೆ
3 ಲಕ್ಷ:ಬೆಂಗಳೂರಿನ ಗಾರ್ಮೆಂಟ್ಸ್‌ ಕಾರ್ಖಾನೆಗಳಲ್ಲಿರುವ ನೌಕರರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT