ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್–19: ಶವದ ಬಟ್ಟೆ ಸಿಗದೆ ಪರದಾಟ

ಖಫನ್ ಸಿಗುತ್ತಿಲ್ಲ– ಪಿಪಿಇ ಕಿಟ್‌ಗಳ ಬೆಲೆ ಭರಿಸಲಾಗಲ್ಲ !
Last Updated 17 ಮೇ 2021, 11:37 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕೋವಿಡ್‌ನಿಂದ ಸಾವಿಗೀಡಾಗುವವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಶವಸಂಸ್ಕಾರಕ್ಕೆ ಬೇಕಾದ ಅಗತ್ಯ ವಸ್ತುಗಳು ಸಿಗದೆ ಮೃತರ ಸಂಬಂಧಿಕರು ಪರದಾಡುತ್ತಿದ್ದಾರೆ.

‘ಖಫನ್‌ (ಬಿಳಿಯ ಬಟ್ಟೆ) ಹಾಕದೆ ದಫನ್‌ (ಅಂತ್ಯಕ್ರಿಯೆ) ಮಾಡಲಾಗುವುದೇ ಇಲ್ಲ. ಆದರೆ, ಇದಕ್ಕೆ ಬೇಕಾದ ಬಟ್ಟೆ ಸಿಗುತ್ತಿಲ್ಲ. ಈ ಬಟ್ಟೆಗಾಗಿಯೇ ದಿನಗಟ್ಟಲೇ ಕಾಯಬೇಕಾಗಿದೆ. ಲಾಕ್‌ಡೌನ್‌ ಇರುವುದರಿಂದ ಬಟ್ಟೆ ಅಂಗಡಿಗಳು ತೆರೆಯುತ್ತಿಲ್ಲ’ ಎಂದು ಮುಸ್ಲಿಂ ಮುಖಂಡರೊಬ್ಬರು ಹೇಳಿದರು.

‘ಮೊದಲು ಮಸೀದಿಯಲ್ಲಿಯೇ ಈ ಬಟ್ಟೆಗಳು ಸಿಗುತ್ತಿದ್ದವು. ಈಗ ಅಲ್ಲಿಯೂ ಖಾಲಿ ಆಗಿದೆ. ಹುಬ್ಬಳ್ಳಿ, ವಿಜಯಪುರದಂತಹ ಪ್ರದೇಶಗಳಲ್ಲಿಯೂ ಈ ಬಟ್ಟೆಗಳು ಸಿಗುತ್ತಿಲ್ಲ’ ಎಂದು ಅಂಜುಮನ್ ಸಂಸ್ಥೆಯ ಶಿರಾಜ್ ಅಹ್ಮದ್ ಕುಡಚಿವಾಲೆ ಹೇಳಿದರು.

‘ರಾಜಧಾನಿ ಮಾತ್ರವಲ್ಲದೆ, ರಾಜ್ಯದ ಬಹುತೇಕ ನಗರಗಳಲ್ಲಿ ಈ ಸಮಸ್ಯೆ ಉಂಟಾಗಿದೆ. ಶವಸಂಸ್ಕಾರಕ್ಕೆ ಬೇಕಾದ ಎಲ್ಲ ಸಾಮಗ್ರಿ ಒಂದು ಕಡೆ ಸಿಗುವಂತೆ ವ್ಯವಸ್ಥೆ ಮಾಡಬೇಕು. ಮುಖ್ಯಮಂತ್ರಿಗಳು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಈ ಕುರಿತು ಸೂಚನೆ ನೀಡಬೇಕು’ ಎಂದು ಅವರು ಮನವಿ ಮಾಡಿದರು.

‘ಟ್ಯಾನರಿ ರಸ್ತೆಯಲ್ಲಿ ಶನಿವಾರ 56 ಶವಗಳಿಗೆ ಬಟ್ಟೆ ತೆಗೆದುಕೊಂಡು ಹೋಗಿದ್ದರೆ, ಮೈಸೂರು ರಸ್ತೆ ರಸ್ತೆಯಲ್ಲಿ 34 ಶವಗಳಿಗೆ ಒಯ್ದಿದ್ದಾರೆ. ಶವದ ಬಟ್ಟೆಗಳಿಗೆ ಕೊರತೆ ಇಲ್ಲ. ಆದರೆ, ಕೆಲವರು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದರಿಂದ ತೊಂದರೆಯಾಗಿದೆ’ ಎಂದು ವರ್ತಕರೊಬ್ಬರು ಹೇಳಿದರು.

ಒಂದು ಶವಕ್ಕೆ 5 ಮೀಟರ್‌ ಬಟ್ಟೆ ಬೇಕಾಗುತ್ತದೆ. ಒಂದು ಮೀಟರ್‌ಗೆ ₹100ರಂತೆ ಮಾರಾಟ ಮಾಡುತ್ತಿದ್ದಾರೆ. ಕೆಲವರು ₹200 ದರವನ್ನೂ ಇಟ್ಟಿದ್ದಾರೆ.

ಪಿಪಿಇ ಕಿಟ್‌ ದುಬಾರಿ:‘ಕೋವಿಡ್‌ನಿಂದ ಮೃತಪಟ್ಟವರ ಶವಸಂಸ್ಕಾರದಲ್ಲಿ ಪಾಲ್ಗೊಳ್ಳಬೇಕು ಎಂದರೆ ಪಿಪಿಇ ಕಿಟ್‌ ಧರಿಸಲೇಬೇಕು. ಆದರೆ, ಖಾಸಗಿ ಆಸ್ಪತ್ರೆ ಮತ್ತು ಅಂಗಡಿಗಳಲ್ಲಿ ₹2000 ಹೇಳುತ್ತಾರೆ. ನಾಲ್ಕೇ ಜನ ಸಂಸ್ಕಾರದಲ್ಲಿ ಪಾಲ್ಗೊಳ್ಳಬೇಕೆಂದರೂ ₹8000 ಖರ್ಚು ಮಾಡಬೇಕು. ಈ ಸಂಕಷ್ಟದ ಸಮಯದಲ್ಲಿ ಇಷ್ಟು ದುಡ್ಡು ವ್ಯಯಿಸುವುದು ಕಷ್ಟವಾಗುತ್ತದೆ. ಶವಸಂಸ್ಕಾರದಲ್ಲಿ ಪಾಲ್ಗೊಳ್ಳದೇ ಇರುವುದಕ್ಕೂ ಆಗುತ್ತಿಲ್ಲ’ ಎಂದು ಮೃತರ ಸಂಬಂಧಿಕರೊಬ್ಬರು ಅಳಲು ತೋಡಿಕೊಂಡರು.

‘ಪಿಪಿಇ ಕಿಟ್‌ ಒಂದರ ಮೂಲಬೆಲೆ ₹300. ಅಂಗಡಿಗಳಲ್ಲಿ ನಮ್ಮ ಲಾಭದ ಪ್ರಮಾಣ ಸೇರಿಸಿ ₹400ರಂತೆ ಮಾರಾಟ ಮಾಡುತ್ತೇವೆ. ಆದರೆ, ಶೇ 12ರಷ್ಟು ಜಿಎಸ್‌ಟಿ ಸೇರಿಸಿ ಗರಿಷ್ಠ ₹1000ಗೆ ಮಾರಾಟ ಮಾಡುತ್ತಾರೆ. ಅದರಲ್ಲಿಯೂ ಕೆಲವರು ₹2000ವರೆಗೆ ಕೊಡುತ್ತಿರುವುದರಿಂದ ಸಾರ್ವಜನಿಕರಿಗೆ ಕಷ್ಟವಾಗುತ್ತಿದೆ’ ಎಂದು ಮಾಸ್ಕ್ ಮತ್ತು ಪಿಪಿಇ ಕಿಟ್‌ ತಯಾರಕರಾದ ಫವಾಜ್ ಯು.ಟಿ. ಹೇಳಿದರು.

‘ಮಾಸ್ಕ್‌ನ ಮೂಲಬೆಲೆ ಕೂಡ ₹4. ಆದರೆ, ಶೇ 150ರಂತೆ ಹೆಚ್ಚಿನ ಬೆಲೆಗೆ ಅಂದರೆ ಸಗಟು ವರ್ತಕರಿಗೆ ₹10 ಆಗುತ್ತಿದೆ. ಬೇಡಿಕೆ ಹೆಚ್ಚುತ್ತಿರುವುದರಿಂದ ಬೆಲೆಯೂ ಹೆಚ್ಚಾಗುತ್ತಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT