ಶನಿವಾರ, ಮೇ 15, 2021
23 °C
ಎನ್‌ಎಚ್‌ಎ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ರಾಮ್ ಸೇವಕ್ ಶರ್ಮಾ ಅಭಿಮತ

‘ಲಸಿಕೆ ಕೊರತೆ ನಿವಾರಣೆಗೆ ಪೋಲು ತಡೆ ಅಗತ್ಯ’-ಡಾ. ರಾಮ್ ಸೇವಕ್ ಶರ್ಮಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘60 ವರ್ಷ ಮೇಲ್ಪಟ್ಟವರು ಸೇರಿದಂತೆ ಅರ್ಹ ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಲಸಿಕೆ ಪಡೆದುಕೊಳ್ಳಲು ಮುಂದೆ ಬರುತ್ತಿದ್ದಾರೆ. ಈ ಸಂದರ್ಭದಲ್ಲಿ ಪ್ರತಿ ಡೋಸ್ ಕೂಡ ಮುಖ್ಯವಾಗುತ್ತದೆ. ಹಾಗಾಗಿ, ಲಸಿಕೆ ವ್ಯರ್ಥವಾಗುವಿಕೆಯನ್ನು ತಡೆಯಬೇಕು’ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ (ಎನ್‌ಎಚ್‌ಎ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ರಾಮ್ ಸೇವಕ್ ಶರ್ಮಾ ತಿಳಿಸಿದರು.

ಪಬ್ಲಿಕ್ ಅಫೇರ್ಸ್ ಫೋರಮ್ ಆಫ್ ಇಂಡಿಯಾ ಆಯೋಜಿಸಿದ ‘ಕೋವಿಡ್–19 ಲಸಿಕಾ ಕಾರ್ಯಕ್ರಮ ಮತ್ತು ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್’ ಕುರಿತ ಆನ್‌ಲೈನ್ ಸಂವಾದದಲ್ಲಿ ಮಾತನಾಡಿದರು.

‘ಒಮ್ಮೆಲೆಯೇ ಎಲ್ಲರಿಗೂ ಲಸಿಕೆ ನೀಡಲು ಸಾಧ್ಯವಿಲ್ಲ. ಅಷ್ಟು ಪ್ರಮಾಣದಲ್ಲಿ ಲಸಿಕೆ ಕೂಡ ತಯಾರಾಗುವುದಿಲ್ಲ. ಹಾಗಾಗಿಯೇ ಆದ್ಯತೆಯ ಮೇರೆಗೆ ಮೊದಲು ಆರೋಗ್ಯ ಕಾರ್ಯಕರ್ತರು ಮತ್ತು ಕೋವಿಡ್ ಮುಂಚೂಣಿ ಯೋಧರ ಮಾಹಿತಿಯನ್ನು ಕಲೆಹಾಕಿ, ಲಸಿಕೆ ನೀಡಲಾಯಿತು. ಪ್ರಾರಂಭಿಕ ದಿನಗಳಲ್ಲಿ ಲಸಿಕೆ ಪಡೆಯಲು ಫಲಾನುಭವಿಗಳು ಅಷ್ಟಾಗಿ ಉತ್ಸಾಹ ತೋರಲಿಲ್ಲ. ಈಗ ಹಿರಿಯ ನಾಗರಿಕರು ಹಾಗೂ 45 ವರ್ಷ ಮೇಲ್ಪಟ್ಟವರು ಹೆಚ್ಚಿನ ಸಂಖ್ಯೆಯಲ್ಲಿ ಆರೋಗ್ಯ ಕೇಂದ್ರಗಳಿಗೆ ಬರುತ್ತಿದ್ದಾರೆ. ಆದಷ್ಟು ಬೇಗ ಎಲ್ಲರಿಗೂ ಲಸಿಕೆ ಒದಗಿಸಬೇಕಿದೆ. ಹಾಗಾಗಿ, ಲಸಿಕೆ ವ್ಯರ್ಥವಾಗುವುದನ್ನು ತಡೆಯುವ ಮೂಲಕ ಕೊರತೆ ಆಗದಂತೆ ಸ್ಥಳೀಯ ವೈದ್ಯಕೀಯ ಸಿಬ್ಬಂದಿ ನೋಡಿಕೊಳ್ಳಬೇಕು’ ಎಂದು ಹೇಳಿದರು. 

‘ಸದ್ಯ ನೀಡಲಾಗುತ್ತಿರುವ ‘ಕೋವಿಶೀಲ್ಡ್‌’ ಲಸಿಕೆಯು ಒಂದು ಶೀಶೆಯಲ್ಲಿ 10 ಡೋಸ್ ಹಾಗೂ ‘ಕೋವ್ಯಾಕ್ಸಿನ್’ ಲಸಿಕೆಯು 20 ಡೋಸ್ ಇರುತ್ತದೆ. ಒಮ್ಮೆ ಶೀಶೆಯನ್ನು ತೆರೆದಲ್ಲಿ 4 ಗಂಟೆ ಕಾಲಾವಧಿಯಲ್ಲಿ ಅಷ್ಟೂ ಡೋಸ್ ನೀಡಬೇಕಾಗುತ್ತದೆ. ಅವಧಿ ಮೀರಿದ ಬಳಿಕ ವ್ಯರ್ಥ ಎಂದು ಪರಿಗಣಿಸಲಾಗುತ್ತದೆ. ನಿಗದಿತ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳು ಬರದಿದ್ದಲ್ಲಿ, ಆನ್‌ಲೈನ್‌ನಲ್ಲಿ ಹೆಸರು ನೋಂದಾಯಿಸಿದವರು ಗೈರಾದಲ್ಲಿ ಹಾಗೂ ದಿನದ ಅಂತ್ಯಕ್ಕೆ ಶೀಶೆ ತೆರೆದರೆ ವ್ಯರ್ಥವಾಗುವ ಸಾಧ್ಯತೆ ಇರುತ್ತದೆ. ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕು’ ಎಂದು ತಿಳಿಸಿದರು. 

ನಿರ್ವಹಣೆಗೆ ತಂತ್ರಜ್ಞಾನ ಸಹಾಯಕ: ‘ಲಸಿಕೆ ವಿತರಣೆಗೆ ತಂತ್ರಜ್ಞಾನವನ್ನು ಉಪಯೋಗಿಸಿಕೊಳ್ಳುವ ಜತೆಗೆ ಡಿಜಿಟಲ್ ದಾಖಲಾತಿ ರೂಪಿಸಲಾಗಿದೆ. ಇದರಿಂದ ಲಸಿಕೆಯ ಬೇಡಿಕೆ ಮತ್ತು ಪೂರೈಕೆ ನಡುವಿನ ಅಂತರ ತಿಳಿಯಲು ಸಾಧ್ಯವಾಗುತ್ತದೆ. ಫಲಾನುಭವಿಗಳನ್ನು ಗುರುತಿಸುವಿಕೆ, ಎರಡು ಡೋಸ್‌ಗಳ ನಡುವೆ ನಿಗದಿತ ಅಂತರ ಕಾಯ್ದುಕೊಳ್ಳುವಿಕೆ ಸೇರಿದಂತೆ ವಿವಿಧ ಪ್ರಕ್ರಿಯೆ ನಡೆಸಲು ‘ಕೋವಿನ್’ ಪೋರ್ಟಲ್ ಹಾಗೂ ಆ್ಯಪ್ ಸಹಕಾರಿಯಾಗಿದೆ. ಲಸಿಕೆ ಪಡೆದ ಬಳಿಕ ಅದರ ಪರಿಣಾಮದ ಬಗ್ಗೆ ಅಧ್ಯಯನ ನಡೆಸಲು ಕೂಡ ದಾಖಲಾತಿ ಬೇಕಾಗುತ್ತದೆ’ ಎಂದು ಹೇಳಿದರು.

‘ಲಸಿಕೆ ಪಡೆದವರಿಗೆ ನೀಡಲಾಗುವ ಡಿಜಿಟಲ್ ಪ್ರಮಾಣ ಪತ್ರ ಕೂಡ ಮಹತ್ವ ಹೊಂದಿದೆ. ವಿದೇಶಗಳಿಗೆ ಪ್ರಯಾಣ ಸೇರಿದಂತೆ ವಿವಿಧ ಸಂದರ್ಭದಲ್ಲಿ ಪ್ರಮಾಣ ಪತ್ರ ತೋರಿಸಬೇಕಾಗುತ್ತದೆ. ಅದು ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾನ್ಯತೆ ಹೊಂದಿರುತ್ತದೆ. ಕೋವಿಡ್‌ನಿಂದಾಗಿ ಡಿಜಿಟಲ್ ಆರೋಗ್ಯ ಸೇವೆಗಳು ಮುಂಚೂಣಿಗೆ ಬಂದಿವೆ. ಟೆಲಿ ಮೆಡಿಸಿನ್, ಟೆಲಿ ಸಮಾಲೋಚನೆಯಂತಹ ಸೇವೆ ವೈದ್ಯಕೀಯ ವ್ಯವಸ್ಥೆಯನ್ನು ಸರಳೀಕರಣ ಮಾಡಿದೆ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು