ಬುಧವಾರ, ಜುಲೈ 28, 2021
28 °C
ಜನರಿಂದ ಬೈಗುಳ: ಪಾಲಿಕೆ ಲಸಿಕಾ ಕೇಂದ್ರದ ಸಿಬ್ಬಂದಿ ಅಳಲು

18–44 ವರ್ಷ: ಸಿಗುತ್ತಿಲ್ಲ ಉಚಿತ ಲಸಿಕೆ

ಪ್ರವೀಣ್‌ ಕುಮಾರ್‌ ಪಿ.ವಿ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್‌ ಲಸಿಕೆ ಉಚಿತ ಎಂದು ಜಾಹೀರಾತು ನೀಡಿವೆ. ಆದರೆ, ಬಿಬಿಎಂಪಿ ಲಸಿಕಾ ಶಿಬಿರಗಳಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ಸಿಗುತ್ತಿಲ್ಲ. ಜಾಹೀರಾತು ನೋಡಿಕೊಂಡು ಲಸಿಕಾ ಕೇಂದ್ರಗಳಿಗೆ ಭೇಟಿ ನೀಡುತ್ತಿರುವ ಜನ ಅಲ್ಲಿನ ಸಿಬ್ಬಂದಿ ಜೊತೆ ತಗಾದೆ ತೆಗೆಯುತ್ತಿದ್ದಾರೆ.

‘18ರಿಂದ 44 ವರ್ಷಗಳ ಒಳಗಿನವರಲ್ಲಿ ಆದ್ಯತಾ ವಲಯವನ್ನು ಸರ್ಕಾರ ಗುರುತಿಸಿದೆ. ಹೋಟೆಲ್‌ ಕಾರ್ಮಿಕರು, ಗಾರ್ಮೆಂಟ್ಸ್‌ ಕಾರ್ಖಾನೆಗಳ ಕಾರ್ಮಿಕರು, ಆಟೊರಿಕ್ಷಾ ಚಾಲಕರು ಮುಂತಾದ 20 ವರ್ಗದವರು ಆದ್ಯತಾ ವಲಯದಲ್ಲಿ ಬರುತ್ತಾರೆ. ಅಂತಹವರು 18ರಿಂದ 44 ವರ್ಷದೊಳಗಿನವರಾಗಿದ್ದರೂ ಲಸಿಕೆ ನೀಡುತ್ತೇವೆ. ಉಳಿದವರನ್ನು ವಾಪಸ್‌ ಕಳುಹಿಸುತ್ತಿದ್ದೇವೆ’ ಎಂದು ಬಿಬಿಎಂಪಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘18ರಿಂದ 44 ವರ್ಷದೊಳಗಿನವರಿಗೆ ಲಸಿಕೆ ಲಭ್ಯ ಇಲ್ಲ ಎಂದಾಗ ಕೆಲವರು ಸಿಬ್ಬಂದಿ ಜೊತೆ ಜಗಳಕ್ಕೆ ನಿಲ್ಲುತ್ತಾರೆ. ಸರ್ಕಾರದಿಂದ ನಮಗೆ ಇನ್ನೂ ನಿರ್ದೇಶನ ಬಂದಿಲ್ಲ ಎಂದು ಅವರಿಗೆ ಮನವರಿಕೆ ಮಾಡಲು ಕಷ್ಟವಾಗುತ್ತಿದೆ’ ಎಂದು ಬೇರೆ ಬೇರೆ ಪಿಎಚ್‌ಸಿಗಳ ವೈದ್ಯರು ಅಳಲು ತೋಡಿಕೊಂಡರು.

‘ಲಸಿಕೆ ನೀಡುವಂತೆ 18ರಿಂದ 44 ವರ್ಷದೊಳಗಿನವರು ಒತ್ತಡ ತರುತ್ತಿರುವುದು ನಿಜ. ಆದರೆ, ಸರ್ಕಾರದಿಂದ ಈ ಬಗ್ಗೆ ಇನ್ನೂ ನಿರ್ದೇಶನ ಬಂದಿಲ್ಲ. ಹಾಗಾಗಿ ಇವರಿಗೆ ಲಸಿಕೆ ನೀಡಲು ಸಾಧ್ಯವಾಗುತ್ತಿಲ್ಲ. ಸರ್ಕಾರ ನಿರ್ದೇಶನ ನೀಡಿದ ದಿನದಿಂದಲೇ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲು ಸಿದ್ಧರಿದ್ದೇವೆ’ ಎಂದು ಬಿಬಿಎಂಪಿಯ ವಿಶೇಷ ಆಯುಕ್ತ (ಆರೋಗ್ಯ) ಡಿ.ರಂದೀಪ್‌ ತಿಳಿಸಿದರು.

ಪೂರೈಕೆ ಆಗುತ್ತಿಲ್ಲ ಬೇಡಿಕೆ ಇರುವಷ್ಟು ಲಸಿಕೆ:

ಕೇಂದ್ರ ಸರ್ಕಾರ 18 ವರ್ಷದ ಮೇಲಿನವರಿಗೂ ಸರ್ಕಾರದಿಂದ ಉಚಿತವಾಗಿ ಲಸಿಕೆ ನೀಡುವುದಾಗಿ ಪ್ರಕಟಿಸಿದಂದಿನಿಂದಲೇ ಬಿಬಿಎಂಪಿ ನಿತ್ಯ 1.5 ಲಕ್ಷ ಮಂದಿವರೆಗೂ ಲಸಿಕೆ ನೀಡುವಷ್ಟು ಸೌಲಭ್ಯವನ್ನು ಸಿದ್ಧಪಡಿಸಿಕೊಂಡಿತ್ತು. ಪ್ರಸ್ತುತ ಬಿಬಿಎಂಪಿ ಲಸಿಕಾ ಕೇಂದ್ರಗಳಲ್ಲಿ ಹೆಚ್ಚೂ ಕಡಿಮೆ 50 ಸಾವಿರ ಮಂದಿಗಷ್ಟೇ ಲಸಿಕೆ ನೀಡಲಾಗುತ್ತಿದೆ.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ, ’ಬೇಡಿಕೆ ಇರುವಷ್ಟು ಲಸಿಕೆ ಸರ್ಕಾರದಿಂದ ಪೂರೈಕೆ ಆಗುತ್ತಿಲ್ಲ. ನಮಗೆ ನಿತ್ಯ 50 ಸಾವಿರ ಲಸಿಕೆ ಮಾತ್ರ ಪೂರೈಕೆ ಆಗುತ್ತಿದೆ. ಹಾಗಾಗಿ 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ಪಿಎಚ್‌ಸಿಗಳಲ್ಲಿ ಉಚಿತವಾಗಿ ಲಸಿಕೆ ನೀಡುತ್ತಿದ್ದೇವೆ. ಮೊದಲ ಡೋಸ್‌ ಹಾಗೂ ಎರಡನೇ ಡೋಸ್‌ಗಳೆರಡನ್ನೂ 198 ವಾರ್ಡ್‌ಗಳಲ್ಲೂ ನೀಡಲಾಗುತ್ತಿದೆ. ಆದ್ಯತಾ ವಲಯಗಳಲ್ಲಿ ಬರುವ 18ರಿಂದ 44 ವರ್ಷದೊಳಗಿನವರಿಗೆ ಒಂದೂವರೆ ತಿಂಗಳಿನಿಂದ ವಿಶೇಷ ಶಿಬಿರ ಏರ್ಪಡಿಸಿ ಲಸಿಕೆ ನೀಡಿದ್ದೆವು. ಇತ್ತೀಚೆಗೆ ಕಾಲೇಜು ವಿದ್ಯಾರ್ಥಿಗಳಿಗೆ ಆದ್ಯತೆ ಮೇರೆಗೆ ಲಸಿಕೆ ನೀಡುತ್ತಿದ್ದೇವೆ. ಇದುವರೆಗೆ 1.80 ಲಕ್ಷ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗಿದೆ’ ಎಂದರು. 

‘ಹೋಟೆಲ್‌ ಹಾಗೂ ಕೆಲವು ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಕೋವಿಡ್‌ ಲಸಿಕೆ ಹಾಕಿಸಿಕೊಳ್ಳುವುದನ್ನು ಕಡ್ಡಾಯ ಮಾಡಲಾಗಿದೆ. ಲಸಿಕೆ ಕಾರ್ಯಕ್ರಮವನ್ನು ಇನ್ನಷ್ಟು ವ್ಯಾಪಕವಾಗಿ ನಡೆಸಬೇಕು. ಎಲ್ಲ ಸಿಬ್ಬಂದಿ ಕಡ್ಡಾಯವಾಗಿ ಲಸಿಕೆ ಹೊಂದಬೇಕು ಎಂಬುದನ್ನು ಆ ಬಳಿಕವಷ್ಟೇ ಕಡ್ಡಾಯ ಮಾಡಬಹುದು’ ಎಂದರು.

‘ಲಸಿಕೆ ಲಭ್ಯವಿಲ್ಲದೆ, ಜನರನ್ನು ಹುರಿದುಂಬಿಸಲಾಗದು’

‘ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಷ್ಟು ಲಸಿಕೆ ಲಭ್ಯ ಇರುತ್ತದೆ ಎಂಬುದು ಅಲ್ಲಿನ ವೈದ್ಯರಿಗೆ ಖಚಿತವಾಗಿ ತಿಳಿದಿರುವುದಿಲ್ಲ. ಲಸಿಕೆ ಪೂರೈಕೆ ಬಗ್ಗೆ ಖಾತರಿ ಇದ್ದರೆ ಲಸಿಕೆ ಹಾಕಿಸಿಕೊಳ್ಳುವಂತೆ ಜನರನ್ನು ಮತ್ತಷ್ಟು ಹುರಿದುಂಬಿಸಬಹುದು. ಪೂರೈಕೆ ಕೊರತೆಯಿಂದಲೇ ಲಸಿಕಾ ಕಾರ್ಯಕ್ರಮಕ್ಕೆ ಹಿನ್ನಡೆ ಆಗಿರುವುದು ನಿಜ’ ಎಂದು ಬಿಬಿಎಂಪಿಯ ಆರೋಗ್ಯ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಪಿಎಚ್‌ಸಿಯಲ್ಲಿ ಲಸಿಕೆ ಲಭ್ಯವಿರುತ್ತದೆ ಎಂದು ಖಾತರಿಯಾದರೆ ನಾಳೆ ಬನ್ನಿ ಎಂದಾದರೂ ಜನರಿಗೆ ಹೇಳಿ ಕಳುಹಿಸಬಹುದು. ವೈದ್ಯರಿಗೆ ಈ ಬಗ್ಗೆ ಖಾತರಿಯೇ ಇರುವುದಿಲ್ಲ. ಹಾಗಾಗಿ ಲಸಿಕೆ ಹಾಕಿಸಿಕೊಳ್ಳುವಂತೆ ನಮ್ಮ ಸಿಬ್ಬಂದಿ ಜನರನ್ನು ಉತ್ತೇಜಿಸುತ್ತಿಲ್ಲ. ಲಸಿಕೆ ಲಭ್ಯ ಇಲ್ಲ ಎಂದು ಗೊತ್ತಾದಾಗ ಜನರು ಸಿಬ್ಬಂದಿಗೆ ಹಿಗ್ಗಾ ಮುಗ್ಗಾ ಬೈದು ಹೋಗುತ್ತಾರೆ. 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆ ಹಾಕಲಾಗುವುದು ಎಂದು ಸರ್ಕಾರ ಜಾಹೀರಾತು ನೀಡಿರುವುದರಿಂದಲೇ ಈ ಸಮಸ್ಯೆ ಸೃಷ್ಟಿಯಾಗಿದೆ’ ಎಂದು ಅವರು ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು